Breaking News: ಬೆಂಗಳೂರು ಮೆಟ್ರೋ ಪ್ರಯಾಣ ದರ ಶೇ 46 ರಷ್ಟು ಏರಿಕೆ, ನಾಳೆಯಿಂದಲೇ ಪರಿಷ್ಕೃತ ದರ ಜಾರಿ
ಬೆಂಗಳೂರು ಮೆಟ್ರೋ ಪ್ರಯಾಣ ದರ ಶೇ 46 ರಷ್ಟು ಏರಿಕೆಯಾಗಿದೆ. ನಾಳೆಯಿಂದಲೇ (ಭಾನುವಾರ, ಫೆ 9) ಪರಿಷ್ಕೃತ ದರ ಜಾರಿಗೆ ಬರಲಿವೆ. ಪ್ರವಾಸಿ ಕಾರ್ಡ್‌ಗಳ ದರವನ್ನೂ ಪರಿಷ್ಕರಿಸಲಾಗಿದೆ.

ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL Price Hike) ಪ್ರಯಾಣ ದರ ಏರಿಕೆ ಮಾಡಿ ಆದೇಶ ಹೊರಡಿಸಿದೆ. ಭಾನುವಾರದಿಂದಲೇ (ಫೆ 9) ಹೊಸ ದರಗಳು ಜಾರಿಗೆ ಬರಲಿವೆ. ಹೊಸ ದರದ ಅನ್ವಯ ಪ್ರತಿ ಬಾರಿ ಪ್ರಯಾಣಿಸುವಾಗಲೂ ಸರಾಸರಿ 10 ರಿಂದ 90 ರೂಪಾಯಿಯವರೆಗೆ ಟಿಕೆಟ್ ದರ ತೆರಬೇಕಾಗುತ್ತದೆ. ಮೊದಲ 2 ಕಿಮೀ ವರೆಗೆ 10 ರೂ, 2 ರಿಂದ 4 ಕಿಮೀಗೆ 20 ರೂ, 4 ರಿಂದ 6 ಕಿಮೀಗೆ 30 ರೂ, 6 ರಿಂದ 8 ಕಿಮೀಗೆ 40 ರೂ, 8 ರಿಂದ 10 ಕಿಮೀಗೆ 50 ರೂ, 10 ರಿಂದ 15 ಕಿಮೀಗೆ 60 ರೂ, 15 ರಿಂದ 20 ಕಿಮೀಗೆ 70 ರೂ, 20 ರಿಂದ 25 ಕಿಮೀಗೆ 80 ರೂ, 25 ರಿಂದ 30 ಕಿಮೀಗೆ 90 ರೂ, 30 ಕಿಮೀ ನಂತರದ ಅಂತರಕ್ಕೆ 90 ರೂಪಾಯಿ ಟಿಕೆಟ್ ದರ ನಿಗದಿಪಡಿಸಲಾಗಿದೆ.
ಸ್ಮಾರ್ಟ್ ಕಾರ್ಡ್‌ಗಳ ರಿಯಾಯ್ತಿ ಮುಂದುವರಿಕೆ
ಸ್ಮಾರ್ಟ್ ಕಾರ್ಡ್‌ಗಳ ಮೇಲೆ ಹಾಲಿ ಅಸ್ತಿತ್ವದಲ್ಲಿರುವ ಶೇ 5 ರ ರಿಯಾಯ್ತಿಯನ್ನು ಮೆಟ್ರೋ ನಿಗಮ ಮುಂದುವರಿಸಲಿದೆ. ಆಫ್ ಪೀಕ್ ಸಮಯದಲ್ಲಿ ಪ್ರಯಾಣ ದರಕ್ಕೆ ಶೇ 10 ರ ರಿಯಾಯ್ತಿ ನೀಡಲಾಗುತ್ತದೆ. ವಾರದ ದಿನಗಳಲ್ಲಿ ಸೇವೆಯ ಆರಂಭದಿಂದ 8 ಗಂಟೆಯವರೆಗೆ, ಮಧ್ಯಾಹ್ನ 12 ರಿಂದ 4 ಮತ್ತು ರಾತ್ರಿ 9 ರಿಂದ ಮುಕ್ತಾಯದವರೆಗೆ ಈ ಶೇ 10 ರ ರಿಯಾಯ್ತಿ ಅನ್ವಯವಾಗಲಿದೆ.
ಎಲ್ಲ ಭಾನುವಾರ ಮತ್ತು ರಾಷ್ಟ್ರೀಯ ರಜಾದಿನಗಳಲ್ಲಿ (ಜನವರಿ 26, ಆಗಸ್ಟ್ 15, ಅಕ್ಟೋಬರ್ 2) ಏಕರೂಪವಾಗಿ ಸ್ಮಾರ್ಟ್ ಕಾರ್ಡ್‌ಗಳ ಮೇಲೆ ಶೇ 10 ರ ರಿಯಾಯ್ತಿ ಇರುತ್ತದೆ. ಸ್ಮಾರ್ಟ್ ಕಾರ್ಡ್‌ಗಳಲ್ಲಿ ಇರಿಸಬೇಕಾದ ಕನಿಷ್ಠ ಮೊತ್ತವನ್ನು 90 ರೂಪಾಯಿಗೆ ಹೆಚ್ಚಿಸಲಾಗಿದೆ.
ಪ್ರವಾಸಿ ಕಾರ್ಡ್, ಗ್ರೂಪ್ ಟಿಕೆಟ್ ದರ ಪರಿಷ್ಕರಣೆ
ಪ್ರವಾಸಿ ಕಾರ್ಡ್‌ಗಳ ದರವನ್ನೂ ಪರಿಷ್ಕರಿಸಲಾಗಿದೆ. 1 ದಿನದ ಕಾರ್ಡ್‌ಗೆ 300 ರೂ, 3 ದಿನಗಳ ಕಾರ್ಡ್‌ಗೆ 600 ರೂ, 5 ದಿನಗಳ ಕಾರ್ಡ್‌ಗೆ 800 ರೂ ನಿಗದಿಪಡಿಸಲಾಗಿದೆ. ಗ್ರೂಪ್ ಟಿಕೆಟ್ ದರದಲ್ಲಿ ಶೇ 15, ಶೇ 20, ಶೇ 25 ರಷ್ಟು ರಿಯಾಯ್ತಿ ನೀಡಲಾಗುವುದು ಎಂದು ಮೆಟ್ರೋ ನಿಗಮ ತಿಳಿಸಿದೆ.
ನಮ್ಮ ಮೆಟ್ರೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
