Bengaluru Metro: ಪ್ರಯಾಣ ದರ ಏರಿಕೆ ನಂತರ ನಷ್ಟದ ಭೀತಿಯಲ್ಲಿರುವ ನಮ್ಮ ಮೆಟ್ರೊ; ಸರಕು ಸಾಗಣೆಯತ್ತ ಬಿಎಂಆರ್‌ಸಿಎಲ್ ಚಿತ್ತ
Bengaluru Metro: ಪ್ರಯಾಣ ದರ ಏರಿಕೆ ನಂತರ ನಷ್ಟದ ಭೀತಿಯಲ್ಲಿರುವ ನಮ್ಮ ಮೆಟ್ರೊವನ್ನು ಲಾಭದಾಯಕ ಉದ್ಯಮವನ್ನಾಗಿಸುವುದಕ್ಕಾಗಿ ಸರಕು ಸಾಗಣೆ, ಕೊರಿಯರ್, ಇ ಲಾಜಿಸ್ಟಿಕ್ಸ್ ಸೇವೆಗೆ ಬಳಸಲು ಬಿಎಂಆರ್‌ಸಿಎಲ್ ಚಿತ್ತ ಹರಿಸಿದೆ. (ವರದಿ- ಎಚ್.ಮಾರುತಿ, ಬೆಂಗಳೂರು)

Bengaluru Metro: ನಮ್ಮ ಮೆಟ್ರೊ ಪ್ರಯಾಣ ದರ ಹೆಚ್ಚಳ ನಂತರ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿದ್ದು, ಬಿಎಂಆರ್ ಸಿಎಲ್ ಗೆ ನಷ್ಟದ ಭೀತಿ ಎದುರಾಗಿದೆ. ಈ ನಷ್ಟವನ್ನು ಸರಿದೂಗಿಸಿಕೊಳ್ಳಲು ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್, ದೆಹಲಿ ಮೆಟ್ರೋ ಮಾದರಿಯಲ್ಲಿ ಸರಕು ಸಾಗಣೆ, ಇ ಲಾಜಿಸ್ಟಿಕ್ಸ್, ಕೊರೊಯರ್ ಸೇವೆ ಆರಂಭಿಸಲು ಚಿಂತನೆ ನಡೆಸಿದೆ. ಇಂತಹ ಸಾಧ್ಯತೆಗಳನ್ನು ನಮ್ಮ ಮೆಟ್ರೊದಲ್ಲೂ ಜಾರಿಗೊಳಿಸಲು ಸಾಧಕಭಾದಕಗಳನ್ನು ಪರಿಶೀಲಿಸಲಾಗುತ್ತಿದೆ. ಇದುವರೆಗೂ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ. ಮಹೇಶ್ವರ್ ರಾವ್ ತಿಳಿಸಿದ್ದಾರೆ.
ಸರಕು ಸಾಗಣೆಯತ್ತ ಬಿಎಂಆರ್‌ಸಿಎಲ್ ಚಿತ್ತ
ಮೆಟ್ರೋ ಸರಕು ಸಾಗಣೆ ಆರಂಭಿಸಿದಲ್ಲಿ ಬಿಎಂಆರ್‌ಸಿಎಲ್ ಕಾರ್ಯವ್ಯಾಪ್ತಿ ವಿಸ್ತಾರ ಆಗಲಿದೆ. ಎಷ್ಟು ಪ್ರಮಾಣದ ಸರಕು ಸಾಗಿಸಬಹುದು, ಸರಕಿನ ಸ್ವರೂಪ ಹೇಗಿರಬೇಕು? ಯಾವ ಸಮಯದಲ್ಲಿ ಸಾಗಣೆ ಮಾಡಲು ಸಾಧ್ಯ ಎಂಬ ವಿಷಯಗಳನ್ನು ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದಿದ್ದಾರೆ.
ಕಚೇರಿಗಳು ಆರಂಭವಾಗುವ ಮತ್ತು ಮುಚ್ಚುವ ಸಮಯ ಹೊರತುಪಡಿಸಿ (ಪೀಕ್ ಅವರ್) ಬೇರೆ ಸಮಯಗಳಲ್ಲಿ ನಿರ್ದಿಷ್ಟ ವಿಭಾಗಗಳಲ್ಲಿ ಪಾರ್ಸೆಲ್ ಗಳು ಮತ್ತು ಕೊರಿಯರ್‌ಗಳನ್ನು ಸಾಗಿಸುವ ಆಯ್ಕೆಯನ್ನು ಪರಿಶೀಲಿಸುತ್ತಿದೆ. ದೆಹಲಿ ಮೆಟ್ರೋ ಇತ್ತೀಚೆಗೆ ಲಾಜಿಸ್ಟಿಕ್ಸ್ ಸೇವಾ ಪೂರೈಕೆದಾರರಿಗೆ ಪಾರ್ಸೆಲ್ ಗಳನ್ನು ಸಾಗಿಸಲು ಕಡಿಮೆ ಪ್ರಯಾಣಿಕರಿರುವ ಕೆಲವು ರೈಲುಗಳಲ್ಲಿ ಕೊನೆಯ ಕೋಚ್ ಅನ್ನು ಬಳಸಲು ಬ್ಲೂ ಡಾರ್ಟ್ ಜೊತೆ ಒಡಂಬಡಿಕೆ ಮಾಡಿಕೊಂಡಿರುವುದು ವರದಿಯಾಗಿತ್ತು. ಇದೇ ಮಾದರಿಯನ್ನು ಅನುಸರಿಸಲು ನಮ್ಮ ಮೆಟ್ರೊ ಮುಂದಾಗಿದೆ.
ಈ ಆಯ್ಕೆಯನ್ನು ಅನ್ವೇಷಿಸಲು ಮತ್ತು ಖಾಸಗಿ ಸರಕು ಸಾಗಣೆ ಮತ್ತು ಇ-ಕಾಮರ್ಸ್ ಕಂಪನಿಗಳೊಂದಿಗೆ ಮಾತುಕತೆ ನಡೆಸಲು ಸೂಚಿಸಲಾಗಿದೆ. ಇದು ಯಶಸ್ವಿಯಾದರೆ, ಮುಂದಿನ ಎರಡು ತಿಂಗಳೊಳಗೆ ಅಂತಹ ಸೇವೆಯನ್ನು ಪ್ರಾರಂಭಿಸಲು ಉದ್ದೇಶಿಸಿದ್ದೇವೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪ್ರಯಾಣದರ ಏರಿಕೆ ಬಳಿಕ ನಮ್ಮ ಮೆಟ್ರೊಗೆ ನಷ್ಟದ ಭೀತಿ
ಪ್ರಯಾಣಿಕರ ದಟ್ಟಣೆ ಇಲ್ಲದ ಸಮಯದಲ್ಲಿ ಸರಕು ಸಾಗಣೆ ಮಾಡುವ ಆಲೋಚನೆ ಇದೆ. ಬೈಯಪ್ಪನಹಳ್ಳಿಯನ್ನು ಕೇಂದ್ರವಾಗಿಟ್ಟುಕೊಂಡು ಈ ಸೇವೆ ಆರಂಭಿಸಬಹುದಾಗಿದೆ. ಸದ್ಯ ನಾವು ಎಲ್ಲ ಅವಕಾಶಗಳನ್ನು ಕುರಿತು ಪರಿಶೀಲನೆ ನಡೆಸುತ್ತಿದೆ. ಸದ್ಯ 76 ಕಿಮೀ ವ್ಯಾಪ್ತಿಯ ನಮ್ಮ ಮೆಟ್ರೋ ಬಳಿ ಕೇವಲ 57 ರೈಲುಗಳಿವೆ. ಫೆಬ್ರವರಿಯಲ್ಲಿ ಪ್ರಯಾಣಿಕ ದರ ಹೆಚ್ಚಾದ ಬಳಿಕ ದಿನಂಪ್ರತಿ ಒಂದು ಲಕ್ಷದಷ್ಟು ಪ್ರಯಾಣಿಕರು ಕಡಿಮೆಯಾಗಿದ್ದಾರೆ.
ಬೆಳಗ್ಗೆ 8ಗಂಟೆವರೆಗೆ ನಂತರ ಮಧ್ಯಾಹ್ನ 12ರಿಂದ 4ಗಂಟೆ ಹಾಗೂ ರಾತ್ರಿ 9 ರಿಂದ ಕೊನೆಯ ರೈಲು ಹೊರಡುವ 11.30 ರವರೆಗಿನ ಅವಧಿಯಲ್ಲಿ ಈ ಸೇವೆ ಒದಗಿಸಬಹುದಾಗಿದೆ. ಈ ಸಂದರ್ಭದಲ್ಲಿ ಸರಕು ಸಾಗಣೆ ಮಾಡುವ ಮೂಲಕ ಆದಾಯ ಗಳಿಸಿಕೊಳ್ಳಬಹುದು ಎಂದು ಮೆಟ್ರೋ ಉದ್ಧೇಶಿಸಿದೆ. ಜತೆಗೆ ಹಸಿರು, ನೇರಳೆ ಮಾರ್ಗದ ತಲಾ ಹತ್ತು ಮೆಟ್ರೋ ರೈಲಿನ ಹೊರಭಾಗದಲ್ಲಿ ಜಾಹೀರಾತು ಅಳವಡಿಸಲು, ಮೆಟ್ರೊ ನಿಲ್ದಾಣಗಳಲ್ಲಿ ಜಾಹೀರಾತುಗಳನ್ನು ಅಳವಡಿಸುವ ಮೂಲಕ, ನಿಲ್ದಾಣಗಳ ಕೆಲವು ನಿಲ್ದಾಣಗಳಿಗೆ ಕಂಪನಿಗಳ ನಾಮಕರಣ ಮಾಡುವ ಮೂಲಕ ಆದಾಯ ಗಳಿಸುವ ಗಳಿಸುವ ಗುರಿ ಹೊಂದಿದೆ.
8 ತಿಂಗಳ ಹಿಂದೆಯೇ ನಾವು ಮೆಟ್ರೋದಲ್ಲಿ ಕೊರಿಯರ್ ಸೇವೆ ಆರಂಭಿಸುವಂತೆ ಮನವಿ ಮಾಡಿದ್ದೆವು. ಬಿಎಂಆರ್‌ಸಿಎಲ್ ಸಂಸ್ಥೆಗೆ ಇದು ಹೆಚ್ಚಿನ ಆದಾಯ ತರುವ ಜೊತೆಗೆ ನಗರದಲ್ಲಿ ಸರಕು ಸಾಗಣೆಗೆ ಅನುಕೂಲವಾಗಲಿದೆ ಎಂದು ಸಬ್ ಅರ್ಬನ್ ರೈಲ್ವೆ ಪ್ರಯಾಣಿಕರ ಸಮಿತಿ ಅಧ್ಯಕ್ಷ ಪ್ರಕಾಶ್ ಮಂಡೊತ್ ತಿಳಿಸಿದ್ದಾರೆ.
ಇದರಿಂದ ನಮ್ಮ ಮೆಟ್ರೊಗೆ ಆದಾಯ ಮೂಲವಾಗುವುದರ ಜತೆಗೆ ಬೆಂಗಳೂರಿನಲ್ಲಿ ವಾಣಿಜ್ಯ ಚಟುವಟಿಕೆಗಳಿಗೂ ಉತ್ತೇಜನ ನೀಡಿದಂತಾಗುತ್ತದೆ. ಇದರಿಂದ ಬೆಂಗಳೂರಿನ ನಾಗರೀಕರಿಗೂ ಹಲವು ರೀತಿಯಲ್ಲಿ ಪ್ರಯೋಜನವಾಗಲಿದೆ. ಕೊನೆಯ ಹಂತದವರೆಗೂ ಸರಕು ಸಾಗಣೆಮಾಡಬಹುದು. ವಾಹನ ದಟ್ಟಣೆ ಕಡಿಮೆಯಾಗಲಿದೆ ಮತ್ತು ವಾಯು ಮಾಲಿನ್ಯ ಮತ್ತು ಶಬ್ಧ ಮಾಲಿನ್ಯ ಕಡಿಮೆಯಾಲಿದೆ ಎಂದೂ ಬಿಎಂಆರ್ ಸಿಎಲ್ ಪ್ರತಿಪಾದಿಸುತ್ತಿದೆ.
(ವರದಿ- ಎಚ್.ಮಾರುತಿ, ಬೆಂಗಳೂರು)
