ಬೆಂಗಳೂರು ಮೆಟ್ರೋ ದರ ಏರಿಕೆ ವಿಚಾರ ಸಂಸತ್‌ನಲ್ಲೂ ಪ್ರಸ್ತಾಪ, ಮಧ್ಯಮ ವರ್ಗದ ಸಂಕಷ್ಟದ ಕಡೆಗೆ ಗಮನಸೆಳೆದ ಸಂಸದ ತೇಜಸ್ವಿ ಸೂರ್ಯ
Bengaluru Metro Price Hike: ಬೆಂಗಳೂರು ಮಟ್ರೋ ಟಿಕೆಟ್ ದರ ಏರಿಕೆ ಬಗ್ಗೆ ವ್ಯಾಪಕ ಜನಾಕ್ರೋಶ ಎದುರಾಗಿರುವ ಹಿನ್ನೆಲೆಯಲ್ಲಿ, ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಈ ವಿಚಾರವನ್ನು ಸಂಸತ್‌ನಲ್ಲೂ ಪ್ರಸ್ತಾಪಿಸಿದ್ದಾರೆ. ಅವರೇನು ಹೇಳಿದರು ಎಂಬ ವಿವರ ಇಲ್ಲಿದೆ.

Bengaluru Metro Price Hike: ಬೆಂಗಳೂರು ಮೆಟ್ರೋ ಟಿಕೆಟ್ ದರ ಸದ್ಯ ಹಾಟ್ ಟಾಪಿಕ್. ಬಡ ಮಧ್ಯಮ ವರ್ಗದ ಜನರಿಗೆ ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ನುಂಗಲಾಗದ ಬಿಸಿತುಪ್ಪವಾಗಿದೆ. ಟ್ಯಾಕ್ಸಿ ದರಕ್ಕೆ ಸನಿಹ ತಲುಪಿರುವ ಮೆಟ್ರೋ ದರದ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದೆ. ಈ ನಡುವೆ, ಕರ್ನಾಟಕ ಸರ್ಕಾರದ ಬಗ್ಗೆ ಟೀಕೆಗಳು ಕೇಳಿ ಬಂದ ಕಾರಣ, ರಾಜಕೀಯ ವಾಕ್ಸಮರಕ್ಕೂ ಈ ದರ ಏರಿಕೆ ಕಾರಣವಾಗಿದೆ. ಬೆಂಗಳೂರು ಮೆಟ್ರೋ ಟಿಕೆಟ್ ದರ ಏರಿಕೆ ಆದ ಕೂಡಲೇ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಪ್ರತಿಕ್ರಿಯಿಸಿದ್ದು, ಬಡ - ಮಧ್ಯಮ ವರ್ಗಕ್ಕೆ ಇದು ಹೊರೆ ಎಂದು ಹೇಳಿದ್ದರು. ಇದೇ ವಿಚಾರವನ್ನು ತೇಜಸ್ವಿ ಸೂರ್ಯ ಅವರು ಒಂದು ಸಂಸತ್‌ನಲ್ಲೂ ಪ್ರಸ್ತಾಪಿಸಿದ್ದು, ಮಧ್ಯಮ ವರ್ಗದ ಸಂಕಷ್ಟಗಳ ಕಡೆಗೆ ಗಮನಸೆಳೆದರು.
ಬೆಂಗಳೂರು ಮೆಟ್ರೋ ದರ ಏರಿಕೆ; ಮಧ್ಯಮ ವರ್ಗದ ಸಂಕಷ್ಟದ ಕಡೆಗೆ ಗಮನಸೆಳೆದ ಸಂಸದ ತೇಜಸ್ವಿ ಸೂರ್ಯ
ಸಂಸದ ತೇಜಸ್ವಿ ಸೂರ್ಯ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು, ಸಂಸತ್‌ನ ಶೂನ್ಯವೇಳೆಯಲ್ಲಿ ತಾನು ಮಾತನಾಡಿದ್ದೇನು ಎಂಬುದನ್ನು ವಿವರಿಸಿದ್ದಾರೆ. “ಸಂಸತ್ ಅಧಿವೇಶನದಲ್ಲಿ ಶೂನ್ಯ ವೇಳೆಯಲ್ಲಿ ಇಂದು, ಬೆಂಗಳೂರು ಮೆಟ್ರೋ ದರ ಏರಿಕೆಯಿಂದಾಗಿ ಮಧ್ಯಮ ವರ್ಗದ ಮೇಲೆ ಹೇಗೆ ಪರಿಣಾಮ ಬೀರಿದೆ ಎಂಬುದನ್ನು ವಿವರಿಸಿದೆ. ಈ ಶುಲ್ಕ ಹೆಚ್ಚಳದ ಕಾರಣ ಅಲ್ಪ ದೂರದ ಬೆಂಗಳೂರು ಮೆಟ್ರೋ ಸಂಚಾರ ಕೂಡ ಎಷ್ಟು ದುಬಾರಿಯಾಗಿದೆ ಎಂಬುದನ್ನು ಎತ್ತಿತೋರಿಸಿದೆ. ಬೆಂಗಳೂರು ಮಹಾನಗರಕ್ಕೆ ಸುಸ್ಥಿರ ಸಾರ್ವಜನಿಕ ಸಾರಿಗೆ ಪರಿಹಾರವಾಗಿರಬೇಕಾಗಿದ್ದ ಬೆಂಗಳೂರು ಮೆಟ್ರೋ ಈಗ ಆ ಉದ್ದೇಶವನ್ನು ವಿಫಲವಾಗಿಸಿದೆ” ಎಂದು ತೇಜಸ್ವಿ ಸೂರ್ಯ ಸಂಸತ್‌ನಲ್ಲಿ ಹೇಳಿದರು.
ಈ ಶುಲ್ಕ ರಚನೆಯಲ್ಲಿನ ವೈಪರೀತ್ಯಗಳನ್ನು ಪರಿಶೀಲಿಸಲು ಮತ್ತು ಟಿಕೆಟ್ ದರವನ್ನು ಸಾಮಾನ್ಯ ಜನರಿಗೆ ಹೆಚ್ಚು ಕೈಗೆಟುಕುವಂತೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕು ಎಂದು ತೇಜಸ್ವಿ ಸೂರ್ಯ ಒತ್ತಾಯಿಸಿದರು.
ನಗರಾಭಿವೃದ್ಧಿ ಸಚಿವರಿಗೂ ಮನವಿ ಸಲ್ಲಿಸಿದ ತೇಜಸ್ವಿ ಸೂರ್ಯ
ಬೆಂಗಳೂರು ಮೆಟ್ರೋ ಟಿಕೆಟ್ ದರ ಏರಿಕೆ ಪ್ರಮಾಣವನ್ನು ಮರುಪರಿಶೀಲಿಸಬೇಕು ಎಂದು ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವರಿಗೂ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಮನವಿ ಸಲ್ಲಿಸಿದರು.
ಬೆಂಗಳೂರು ಮೆಟ್ರೋ ಟಿಕೆಟ್ ದರ ಏರಿಕೆ; ಕೇಂದ್ರ ಸರ್ಕಾರದತ್ತ ಬೆಟ್ಟುಮಾಡಿದ ಸಿಎಂ ಸಿದ್ದರಾಮಯ್ಯ
ಮೆಟ್ರೋ ಪ್ರಯಾಣ ದರ ಹೆಚ್ಚಳವನ್ನು ವಿರೋಧಿಸುತ್ತಿರುವ ವಿರೋಧ ಪಕ್ಷ ಬಿಜೆಪಿಯ ನಾಯಕರು ಯಥಾಪ್ರಕಾರ ಸುಳ್ಳು ಮತ್ತು ತಿರುಚಿದ ಮಾಹಿತಿಯನ್ನು ಬಳಸಿಕೊಂಡು ರಾಜ್ಯ ಸರ್ಕಾರದ ವಿರುದ್ಧ ಮಿಥ್ಯಾರೋಪ ಮಾಡಿ ಸಾರ್ವಜನಿಕರ ಹಾದಿ ತಪ್ಪಿಸುತ್ತಿದ್ದಾರೆ. ಸರ್ಕಾರದ ಯಾವುದೇ ನೀತಿ-ನಿರ್ಧಾರಗಳನ್ನು ವಿರೋಧಿಸುವ ಅಧಿಕಾರ ಸಾರ್ವಜನಿಕರಿಗೆ ಇದೆ. ಅವರ ಸಂವಿಧಾನಬದ್ಧ ಹಕ್ಕನ್ನು ಗೌರವಿಸುತ್ತೇನೆ. ಆದರೆ, ವಿರೋಧ ಪಕ್ಷದ ಸ‍್ಥಾನದಲ್ಲಿ ಜನ ಕೂರಿಸಿರುವ ರಾಜ್ಯದ ಬಿಜೆಪಿ ರಾಜಕೀಯ ದುರುದ್ದೇಶದಿಂದ ಸುಳ್ಳು ಮಾಹಿತಿಗಳನ್ನು ನೀಡಿ ಸಾರ್ವಜನಿಕರ ಪ್ರತಿಭಟನೆಗೆ ಕುಮ್ಮಕ್ಕು ನೀಡುತ್ತಿರುವುದು ಅಕ್ಷಮ್ಯ. ಒಂದೆಡೆ ನಮ್ಮ ಮೆಟ್ರೋ ರೈಲು ನಿರ್ಮಾಣದ ಸಾಧನೆ ಕೇಂದ್ರದ ಬಿಜೆಪಿ ಸರ್ಕಾರದ್ದು ಎಂದು ಡಂಗುರ ಬಾರಿಸುತ್ತಿರುವ ಬಿಜೆಪಿ ನಾಯಕರು ದರ ಪರಿಷ್ಕರಣೆ ವಿರುದ್ದ ಜನಾಕ್ರೋಶ ವ್ಯಕ್ತವಾಗುತ್ತಿರುವುದನ್ನು ಕಂಡು ಅದನ್ನು ರಾಜ್ಯ ಸರ್ಕಾರದ ಮೇಲೆ ಹೊರಿಸುತ್ತಿರುವುದು ಆತ್ಮವಂಚನೆಯ ನಡವಳಿಕೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
