ಬೆಂಗಳೂರಲ್ಲಿ ಹೊಸ ವರ್ಷಾಚರಣೆ: ಎಂಜಿ ರಸ್ತೆ ಸುತ್ತಮುತ್ತ 15 ಮೆಟ್ರಿಕ್ ಟನ್ ತ್ಯಾಜ್ಯ ಸಂಗ್ರಹ; ನಮ್ಮ ಮೆಟ್ರೋಗೆ 2.07 ಕೋಟಿ ರೂ ಆದಾಯ
ಬೆಂಗಳೂರಲ್ಲಿ ಹೊಸ ವರ್ಷಾಚರಣೆ ಬಳಿಕ ವಿಶೇಷವಾಗಿ ಎಂಜಿ ರಸ್ತೆ ಸುತ್ತಮುತ್ತ 15 ಮೆಟ್ರಿಕ್ ಟನ್ ತ್ಯಾಜ್ಯ ಸಂಗ್ರಹವಾಗಿದೆ ಎಂದು ಸ್ಥಳೀಯಾಡಳಿತದ ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ, ನಮ್ಮ ಮೆಟ್ರೋಗೆ 2 ಕೋಟಿ 7 ಲಕ್ಷ ರೂ ಆದಾಯ ಬಂದಿದೆ. ಇನ್ನೊಂದೆಡೆ, ಮದ್ಯಪಾನ ಮಾಡಿ ವಾಹನ ಚಾಲನೆ, 513 ಪ್ರಕರಣ ದಾಖಲಾಗಿದೆ. (ವರದಿ- ಎಚ್. ಮಾರುತಿ, ಬೆಂಗಳೂರು)
![ಬೆಂಗಳೂರಲ್ಲಿ ಹೊಸ ವರ್ಷಾಚರಣೆ ಬಳಿಕ ವಿಶೇಷವಾಗಿ ಎಂಜಿ ರಸ್ತೆ ಸುತ್ತಮುತ್ತ 15 ಮೆಟ್ರಿಕ್ ಟನ್ ತ್ಯಾಜ್ಯ ಸಂಗ್ರಹವಾಗಿದೆ ಎಂದು ಸ್ಥಳೀಯಾಡಳಿತ ತಿಳಿಸಿದೆ. ಬೆಂಗಳೂರಲ್ಲಿ ಹೊಸ ವರ್ಷಾಚರಣೆ ಬಳಿಕ ವಿಶೇಷವಾಗಿ ಎಂಜಿ ರಸ್ತೆ ಸುತ್ತಮುತ್ತ 15 ಮೆಟ್ರಿಕ್ ಟನ್ ತ್ಯಾಜ್ಯ ಸಂಗ್ರಹವಾಗಿದೆ ಎಂದು ಸ್ಥಳೀಯಾಡಳಿತ ತಿಳಿಸಿದೆ.](https://images.hindustantimes.com/kannada/img/2025/01/02/550x309/BBMP_Waste_Mangement_Jan_2_2025_1735779099921_1735779110374.png)
ಬೆಂಗಳೂರು: ಹೊಸ ವರ್ಷಾಚರಣೆಯ ಕೇಂದ್ರ ಬಿಂದುವಾದ ಬೆಂಗಳೂರಿನ ಎಂ.ಜಿ ರಸ್ತೆಯ ಸುತ್ತಮುತ್ತಲಿನ ರಸ್ತೆಗಳು ಮತ್ತು ಪ್ರದೇಶಗಳಲ್ಲಿ ಹೊಸ ವರ್ಷಾಚರಣೆಯ ವೇಳೆ ರಸ್ತೆಗಳಲ್ಲಿ ಬಿದ್ದಿದ್ದ ಸುಮಾರು 15 ಮೆಟ್ರಿಕ್ ಟನ್ ತ್ಯಾಜ್ಯ ಹಾಗೂ ಅನುಪಯುಕ್ತ ವಸ್ತುಗಳನ್ನು ಸಂಗ್ರಹಿಸಲಾಗಿದೆ. ಪೂರ್ವ ವಲಯ ಆಯುಕ್ತ ಸ್ನೇಹಲ್, ಜಲ ಮಂಡಳಿ ಮುಖ್ಯ ಪ್ರಧಾನ ವ್ಯವಸ್ಥಾಪಕ ಬಸವರಾಜ್ ಕಬಾಡೆ ಅವರ ನೇತೃತ್ವದಲ್ಲಿ ನಗರದ ರಸ್ತೆಗಳಲ್ಲಿ ಬಿದ್ದಿದ್ದ ತ್ಯಾಜ್ಯವನ್ನು ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ ವಿಭಾಗದ ಮೇಲ್ವಿಚಾರಣೆಯಲ್ಲಿ ಬೆಳಗ್ಗೆಯೊಳಗಾಗಿ ಸಂಪೂರ್ಣ ಸ್ವಚ್ಛತಾ ಕಾರ್ಯವನ್ನು ನಡೆಸಲಾಗಿರುತ್ತದೆ.
ನಸುಕಿನ 3 ಗಂಟೆಯಿಂದ ಬೆಳಗ್ಗೆ 7 ಗಂಟೆ ತನಕ ಸ್ವಚ್ಛತಾ ಕಾರ್ಯ
ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ತ್ರೀಟ್, ರಿಸಿಡೆನ್ಸಿ ರಸ್ತೆ, ರಿಚ್‌ಮಂಡ್ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ, ಕಸ್ತೂರ್ ಬಾ ರಸ್ತೆ ಮುಂತಾದೆಡೆ ನಸುಕಿನ 3 ಗಂಟೆಯಿಂದ ಬೆಳಗ್ಗೆ 7 ಗಂಟೆಯವರೆಗೆ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲಾಗಿತ್ತು. ಈ ಮೂಲಕ ಸುಮಾರು 15 ಮೆಟ್ರಿಕ್ ಟನ್ ತ್ಯಾಜ್ಯವನ್ನು ತೆರವುಗೊಳಿಸಿ ರಸ್ತೆಗಳನ್ನು ಸ್ವಚ್ಛಗೊಳಿಸಿ ನಾಗರಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ಶಾಂತಿನಗರ ವಿಭಾಗದ ಘನತ್ಯಾಜ್ಯ ವಿಭಾಗದಿಂದ ಸ್ವಚ್ಛತಾ ಕಾರ್ಯವನ್ನು ಮಾಡಲಾಗಿದ್ದು, 70 ಕ್ಕೂ ಹೆಚ್ಚು ಪೌರಕಾರ್ಮಿಕರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಈ ವೇಳೆ ಕಿರಿಯ ಆರೋಗ್ಯ ಅಧಿಕಾರಿಗಳು, ಮಾರ್ಷಲ್ ಗಳು ಉಸ್ತುವಾರಿ ವಹಿಸಿದ್ದರು. 25 ಆಟೋ ಟಿಪ್ಪರ್‌ಗಳು ಮತ್ತು 3 ಕಾಂಪ್ಯಾಕ್ಟರ್‌ಗಳನ್ನು ಕಸ ಸಂಗ್ರಹಣೆಗೆ ಬಳಸಿಕೊಳ್ಳಲಾಗಿತ್ತು.
ಸಿಬಿಡಿ ರಸ್ತೆಗಳು ಹಾಗೂ ಪಾದಚಾರಿ ಮಾರ್ಗಗಳಲ್ಲಿ ಎಸೆದಿದ್ದ ಪ್ಲಾಸ್ಟಿಕ್ ಕವರ್, ಪ್ಲಾಸ್ಟಿಕ್ ತ್ಯಾಜ್ಯ, ಚಪ್ಪಲಿಗಳು, ಮಧ್ಯದ ಬಾಟಲಿಗಳು ಸೇರಿ ಇನ್ನಿತರೆ ಅನುಪಯುಕ್ತ ವಸ್ತುಗಳನ್ನು ಬೇರ್ಪಡಿಸಿ ಸಂಗ್ರಸಲಾಗಿದೆ. ಪುನರ್ ಬಳಕೆಯ ಸುಮಾರು 3 ಟನ್ ತ್ಯಾಜ್ಯವನ್ನು ಒಣ ತ್ಯಾಜ್ಯ ಸಂಗ್ರಹಣಾ ಘಟಕಕ್ಕೆ ಕಳುಹಿಸಲಾಗಿದೆ. ಹೊಸ ವರ್ಷಾಚರಣೆಯ ಅಂಗವಾಗಿ ಎಂಜಿ ರಸ್ತೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆ ಮಾಡಿರುವ ಕುರಿತಂತೆ, ಸುಮಾರು 25 ಸ್ಥಳೀಯ ವಾಯು ವಿಹಾರಿಗಳು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ವಚ್ಚತಾ ಕಾರ್ಯದ ವೇಳೆಸಹಾಯಕ ಪ್ರಧಾನ ವ್ಯವಸ್ಥಾಪಕರಾದ ರವಿಕುಮಾರ್, ಚೀಫ್ ಮಾರ್ಷಲ್ ರಜ್‌ಬಿರ್ ಸಿಂಗ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಅಪ್ಪುರಾಜ್, ಘನತ್ಯಾಜ್ಯ ವಿಭಾಗದ ಅಧಿಕಾರಿಗಳು ಉಪಸ್ಥಿತರಿದ್ದರು.
ನಿನ್ನೆ ಒಂದೇ ದಿನ ನಮ್ಮ ಮೆಟ್ರೋಗೆ 2.07 ಕೋಟಿ ರೂ ಆದಾಯ
2024ರ ಕೊನೆಯ ದಿನವಾದ ನಿನ್ನೆ ಮಂಗಳವಾರ ಬಿಎಂಆರ್ ಸಿಎಲ್ ನಮ್ಮ ಮೆಟ್ರೋ 2,07,52,000 ರೂಪಾಯಿ ಆದಾಯ ಗಳಿಸಿದೆ. ಮೆಟ್ರೋ ರೈಲು ಸೇವೆಯನ್ನು ತಡರಾತ್ರಿ ಎರಡು ಗಂಟೆವರೆಗೂ ವಿಸ್ತರಿಸಲಾಗಿತ್ತು. ಬೆಂಗಳೂರಿನ ವಿವಿಧ ಭಾಗಗಳಿಂದ ವಿವಿಧ ಪ್ರದೇಶಗಳಿಗೆ ಆಗಮಿಸಲು ಮತ್ತು ಮರಳಲು ಸಾರ್ವಜನಿಕರು ಮೆಟ್ರೋ ಆಯ್ಕೆ ಸಂಚಾರವನ್ನು ಆಯ್ಕೆ ಮಾಡಿಕೊಂಡಿದ್ದರು.
ಹೊಸ ವರ್ಷದ ಅಂಗವಾಗಿ ನಿನ್ನೆ ಬೆಳಗ್ಗೆ 5 ರಿಂದ ತಡರಾತ್ರಿ 2.45 ರವರೆಗೆ ಮೆಟ್ರೋ ರೈಲುಗಳು ಸಂಚಾರ ಮಾಡಿವೆ. ಪಿಂಕ್ ಲೈನ್ನಲ್ಲಿ ಒಟ್ಟು 4,00,583, ಗ್ರೀನ್ ಲೈನ್ನಲ್ಲಿ 2,90,530, ಪಿಂಕ್ ಮತ್ತು ಗ್ರೀನ್ ಮಾರ್ಗದಿಂದ ಒಟ್ಟು 8,59,467 ಪ್ರಯಾಣಕರು ಮೆಟ್ರೋ ರೈಲುಗಳಲ್ಲಿ ಪ್ರಯಾಣಿಸಿದ್ದಾರೆ. ಪಿಂಕ್ ಮತ್ತು ಗ್ರೀನ್ ಮಾರ್ಗದಿಂದ ಪೇಪರ್ ಟಿಕೆಟ್ ಮೂಲಕ 5,423 ಮತ್ತು ಕೆಂಪೇಗೌಡ ಮೆಟ್ರೋ ನಿಲ್ದಾಣದಿಂದ 1,62,931 ಜನರು ಪ್ರಯಾಣ ಮಾಡಿದ್ದಾರೆ. ಈ ಎಲ್ಲ ಅನುಕೂಲಗಳನ್ನು ಕಲ್ಪಿಸಿದ್ದರಿಂದ ನಮ್ಮ ಮೆಟ್ರೋಗೆ 2 ಕೋಟಿ 7 ಲಕ್ಷದ 52 ಸಾವಿರ ರೂ. ಆದಾಯ ಹರಿದುಬಂದಿದೆ.
ಎಂ.ಜಿ ರಸ್ತೆಯಲ್ಲಿ ಜನಸಂದಣಿ ಹೆಚ್ಚಾಗಿರುವುದರಿಂದ ಡಿಸೆಂಬರ್ 31, 2024 ರಂದು ರಾತ್ರಿ 11 ಗಂಟೆಯಿಂದ ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣದ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಬಂದ್ ಮಾಡಲಾಗಿತ್ತು. ಪ್ರಯಾಣಿಕರಿಗೆ ಸಮೀಪದ ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್ ನಿಲ್ದಾಣಗಳಲ್ಲಿ ಮೆಟ್ರೋ ರೈಲು ಹತ್ತಲು ಅವಕಾಶ ನೀಡಲಾಗಿತ್ತು. ಟ್ರಿನಿಟಿ ಅಥವಾ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳಿಂದ ಯಾವುದೇ ನಿಲ್ದಾಣಕ್ಕೆ ರಾತ್ರಿ 11 ಗಂಟೆಯ ನಂತರ ಪ್ರಯಾಣಿಸುವ ಪ್ರಯಾಣಿಕರು ರೂ. 50 ಬೆಲೆಯ ರಿಟರ್ನ್ ಜರ್ನಿ ಪೇಪರ್ ಟಿಕೆಟ್ ಅನ್ನು ವಿತರಿಸಲಾಗಿತ್ತು. ಈ ಕಾಗದದ ಟಿಕೆಟ್ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ 31ನೇ ಡಿಸೆಂಬರ್ 2024ರ ಬೆಳಗ್ಗೆ 8ಗಂಟಟೆಯಿಂದಲೇ ಮುಂಗಡವಾಗಿ ಖರೀದಿಸಲು ಅವಕಾಶ ಇತ್ತು. ಸಾಮಾನ್ಯ QR ಕೋಡ್ ಟಿಕೆಟ್ಗಳು ಮತ್ತು ಮಾಸಿಕ ಕಾರ್ಡ್‌ಗಳ ಮೂಲಕವೂ ಪ್ರಯಾಣಿಸಲು ಅವಕಾಶ ನೀಡಲಾಗಿತ್ತು.
ಮದ್ಯಪಾನ ಮಾಡಿ ವಾಹನ ಚಾಲನೆ; 513 ಪ್ರಕರಣ ದಾಖಲು
ಹೊಸ ವರ್ಷದ ಸಂಭ್ರಮಾಚರಣೆ ಆಚರಿಸಿ ಪಾನಮತ್ತರಾಗಿ ವಾಹನ ಚಲಾಯಿಸುತ್ತಿದ್ದವರ ವಿರುದ್ಧ ಕಾರ್ಯಾಚರಣೆ ಕೈಗೊಂಡ ಸಂಚಾರ ಪೊಲೀಸರು ಬೆಂಗಳೂರು ನಗರದಾದ್ಯಂತ 28,127 ಹೆಚ್ಚು ವಾಹನಗಳ ತಪಾಸಣೆ ಕೈಗೊಂಡು ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುತ್ತಿದ್ದವರ ವಿರುದ್ಧ 513 ಪ್ರಕರಣಗಳನ್ನು ದಾಖಲಿಸಿದ್ದಾರೆ. ಪಾನಮತ್ತರಾಗಿ ವಾಹನ ಚಲಾಯಿಸುವವರ ವಿರುದ್ಧ ಡಿಸೆಂಬರ್ ಕೊನೆಯ ವಾರದಲ್ಲಿ ನಗರದಾದ್ಯಂತ ಕಾರ್ಯಾಚರಣೆ ಆರಂಭಿಸಿದ್ದ ಸಂಚಾರ ಪೊಲೀಸರು, 95,179 ವಾಹನ ಚಾಲಕರನ್ನು ತಪಾಸಣೆಗೊಳಪಡಿಸಿ 1,187ಪ್ರಕರಣ ದಾಖಲಿಸಿಕೊಂಡಿದ್ದರು.
(ವರದಿ- ಎಚ್. ಮಾರುತಿ, ಬೆಂಗಳೂರು)
![Whats_app_banner Whats_app_banner](https://kannada.hindustantimes.com/static-content/1y/wBanner.png)