C T Ravi: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ; ಸಿಐಡಿ ತನಿಖೆಗೆ ಸಹಕರಿಸಲು ಸಿಟಿ ರವಿಗೆ ಕೋರ್ಟ್ ತಾಕೀತು
C T Ravi: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ಪ್ರಕರಣಕ್ಕೆ ಸಂಬಂಧಿಸಿ ಎಫ್‌ಎಸ್‌ಎಲ್ ವರದಿಯಲ್ಲಿ ಸಿಟಿ ರವಿ ಅವಾಚ್ಯ ಪದ ಬಳಸಿರುವುದು ದೃಢಪಟ್ಟಿದೆ ಎಂದು ಮೂಲಗಳು ತಿಳಿಸಿವೆ. ಇನ್ನೊಂದೆಡೆ, ಧ್ವನಿ ಪರೀಕ್ಷೆ ಸೇರಿ ಸಿಐಡಿ ತನಿಖೆಗೆ ಸಹಕರಿಸುವಂತೆ ಸಿಟಿ ರವಿಗೆ ಕೋರ್ಟ್ ತಾಕೀತು ಮಾಡಿದೆ. (ವರದಿ- ಎಚ್.ಮಾರುತಿ, ಬೆಂಗಳೂರು)

C T Ravi: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಅವಾಚ್ಯ ಪದ ಬಳಸಿ ನಿಂದನೆ ಮಾಡಿರುವ ಪ್ರಕರಣದಲ್ಲಿ ಧ್ವನಿ ಮಾದರಿಯನ್ನು ನೀಡುವಂತೆ ಹೈಕೋರ್ಟ್ ಬಿಜೆಪಿ ಮುಖಂಡ, ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರಿಗೆ ತಾಕೀತು ಮಾಡಿದೆ. ಈ ಪ್ರಕರಣದ ವಿಚಾರಣೆ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ನಡೆಯಿತು.
ಸಿಟಿ ರವಿಗೆ ಧ್ವನಿ ಮಾದರಿ ನೀಡಲು ತಾಕೀತು; ಜ 22ಕ್ಕೆ ವಿಚಾರಣೆ ಮುಂದೂಡಿಕೆ
ಮತ್ತೊಂದು ಕಡೆ ಸದನದ ವಿಡಿಯೋವನ್ನು ಪರೀಕ್ಷೆಗೆ ಒಳಪಡಿಸಿದಾಗ ಸಿಟಿ ರವಿ ಅವಾಚ್ಯ ಪದ ಬಳಸಿರುವುದು ದೃಢವಾಗಿದೆ ಎಂದು ತಿಳಿದುಬಂದಿದೆ. ಪರೀಕ್ಷೆಗಾಗಿ ಸಿ.ಟಿ.ರವಿ ಧ್ವನಿ ಮಾದರಿ ನೀಡಲು ನಿರಾಕರಿಸಿದ್ದರು. ಆದ್ದರಿಂದ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಸಿ.ಟಿ.ರವಿ ತನಿಖೆಗೆ ಸಹಕರಿಸುತ್ತಿಲ್ಲ ಎಂದು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಇಂದು ಹೈಕೋರ್ಟ್ ವಿಚಾರಣೆ ನಡೆಸಿತು. ಸಿ ಟಿ ರವಿ ಪರ ಹಾಜರಾಗಿದ್ದ ವಕೀಲರು ಒಂದೇ ದಿನ ಎರಡು ನೋಟಿಸ್ ನೀಡಿದ್ದಾರೆ ಎಂದು ಕೋರ್ಟ್‌ಗೆ ಮಾಹಿತಿ ನೀಡಿದರು.
ಈ ವಿಷಯದಲ್ಲಿ ನಿಮಗೆ ಅಕ್ಷೇಪಣೆ ಇದ್ದರೆ ಸಲ್ಲಿಸಿ ಇಲ್ಲವೇ ತನಿಖಾಧಿಕಾರಿಗಳ ಮುಂದೆ ಹೋಗಿ ವಾಯ್ಸ್ ಸ್ಯಾಂಪಲ್ ನೀಡಿ ಎಂದು ನ್ಯಾಯಾಧೀಶರು ಖಡಕ್ ಮಾತುಗಳಲ್ಲಿ ರವಿ ಅವರಿಗೆ ಹೇಳಿತು. ಒಂದು ವೇಳೆ ತನಿಖೆಗೆ ಸಹಕಾರ ನೀಡದಿದ್ದರೆ ಸುಮ್ಮನಿರಲು ಆಗುವುದಿಲ್ಲ ಎಂದೂ ನ್ಯಾಯಾಲಯ ಗರಂ ಆಯಿತು. ಷರತ್ತು ವಿಧಿಸಿಯೇ ನಿಮಗೆ ಜಾಮೀನು ನೀಡಲಾಗಿದೆ. ತನಿಖೆಗೆ ಸಹಕಾರ ನೀಡದಿದ್ದರೆ ಸುಮ್ಮನಿರಲು ಆಗುವುದಿಲ್ಲ ಎಂದೂ ಹೇಳಿತು.
ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೇಳಿದ ರವಿ ಪರ ವಕೀಲರು ವಿಚಾರಣೆ ಮುಂದೂಡಲು ಮನವಿ ಮಾಡಿಕೊಂಡರು. ಮನವಿಗೆ ಸ್ಪಂದಿಸಿದ ನ್ಯಾಯಾಲಯ ಜನವರಿ 22ಕ್ಕೆ ವಿಚಾರಣೆಯನ್ನು ಮುಂದೂಡಿದೆ.
ನಾಲ್ಕು ಗಂಟೆಯ ವಿಡಿಯೋ ದಾಖಲೆಯಲ್ಲಿ ಒಟ್ಟು ಏಳು ಬಾರಿ ಅವಾಚ್ಯ ಪದ ಬಳಕೆ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ. ಆದರೆ ತಾನು ಅವಾಚ್ಯ ಪದ ಬಳಸಿಲ್ಲ ಎಂದು ಸಿಟಿ ರವಿ ವಾದಿಸುತ್ತಿದ್ದಾರೆ. ಇಂದಿನ ಬೆಳವಣಿಗೆಯಿಂದ ಬಿಜೆಪಿ ನಾಯಕ ಸಿಟಿ ರವಿಗೆ ದೊಡ್ಡ ಸಂಕಷ್ಟ ಎದುರಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಅವಾಚ್ಯ ಪದ ಬಳಸಿರುವುದು ತನಿಖೆಯಲ್ಲಿ ದೃಢ
ಮತ್ತೊಂದೆಡೆ ಪರಿಷತ್ ಸದಸ್ಯ ಸಿಟಿ ರವಿ ಒಮ್ಮೆ ಅವಾಚ್ಯ ಶಬ್ದ ಬಳಸಿರುವುದು ವಿಡಿಯೋದಲ್ಲಿ ದೃಢವಾಗಿದೆ ಎಂದು ಸಿಐಡಿಯ ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿದೆ. ಆದರೆ, ಈ ಧ್ವನಿ ಸಿಟಿ ರವಿ ಅವರದ್ದೇ, ಅಲ್ಲವೇ ಎಂಬುವುದು ವಿಧಿ ವಿಜ್ಞಾನ ಪ್ರಯೋಗಾಲಯ ಖಚಿತಪಡಿಸಬೇಕಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆ (ಡಿಎಪಿಆರ್) ನೀಡಿದ್ದ ಸದನದ ವಿಡಿಯೋವನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.
ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದ ಕೊನೆಯ ದಿನ ಡಿಸೆಂಬರ್ 19 ರಂದು ಪರಿಷತ್‌ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಆ ಸಂದರ್ಭದಲ್ಲಿ ಸಿಟಿ ರವಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅವಾಚ್ಯ ಪದ ಬಳಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.
(ವರದಿ- ಎಚ್.ಮಾರುತಿ, ಬೆಂಗಳೂರು)
