ಕನ್ನಡ ಸುದ್ದಿ  /  Karnataka  /  Bengaluru Mysuru Expressway Credit War In Karnataka, Jds Says Former Pm Hd Devegowda Reason For Expressway

Bengaluru Mysuru Expressway: ಬೆಂಗಳೂರು-ಮೈಸೂರು ದಶಪಥದ ರೂವಾರಿ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರಂತೆ!

ಜೆಡಿಎಸ್‌ ಈ ದಶಪಥದ ರೂವಾರಿ ದೇವೇಗೌಡರೆಂದು ತಿಳಿಸಿದೆ. ಇತ್ತ ಕಾಂಗ್ರೆಸ್‌ ಕೂಡ ದಶಪಥದ ಕ್ರೆಡಿಟ್‌ ತನ್ನದೆಂದು ಹೇಳಿಕೊಳ್ಳುತ್ತಿದೆ. ಇದೇ ಸಮಯದಲ್ಲಿ ನಾಳೆ ಮೋದಿಯವರು ಕರ್ನಾಟಕಕ್ಕೆ ಆಗಮಿಸುತ್ತಿದ್ದು, ಈ ದಶಪಥವನ್ನು ಲೋಕಾರ್ಪಣೆಗೊಳಿಸಲಿದ್ದಾರೆ.

Bengaluru Mysuru Expressway: ಬೆಂಗಳೂರು-ಮೈಸೂರು ದಶಪಥ ರಸ್ತೆಗೆ ಅಡಿಪಾಯ ಹಾಕಿದ್ದು  ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರಂತೆ!  (ANI Photo)
Bengaluru Mysuru Expressway: ಬೆಂಗಳೂರು-ಮೈಸೂರು ದಶಪಥ ರಸ್ತೆಗೆ ಅಡಿಪಾಯ ಹಾಕಿದ್ದು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರಂತೆ! (ANI Photo) (ANI)

ಬೆಂಗಳೂರು: ನಾಳೆ ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕಕ್ಕೆ ಆಗಮಿಸುತ್ತಿದ್ದು, ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಉದ್ಘಾಟಿಸಲಿದ್ದಾರೆ. ಇದೇ ಸಮಯದಲ್ಲಿ ಜೆಡಿಎಸ್‌ "ಈ ದಶಪಥವು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಕನಸಿನ ಕೂಸುʼʼ ಎಂದು ಕರ್ನಾಟಕದ ಪ್ರಮುಖ ಪತ್ರಿಕೆಗಳಲ್ಲಿ ಜಾಹೀರಾತು ನೀಡಿದೆ. ಈ ಮೂಲಕ ರಾಜ್ಯದಲ್ಲಿ ಎಕ್ಸ್‌ಪ್ರೆಸ್‌ವೇಯ ಕ್ರೆಡಿಟ್‌ ವಾರ್‌ ಮುಂದುವರೆದಿದೆ.

ಜೆಡಿಎಸ್‌ ವಾದವೇನು? ಎಚ್‌ಡಿ ದೇವೇಗೌಡರು ಈ ದಶಪಥದ ರೂವಾರಿ ಹೇಗೆ?

ಒಂದು ಪುಟದ ಜಾಹೀರಾತಿನಲ್ಲಿ ಜೆಡಿಎಸ್‌ ಈ ದಶಪಥದ ರೂವಾರಿ ದೇವೇಗೌಡರೆಂದು ತಿಳಿಸಿದೆ. ಇತ್ತ ಕಾಂಗ್ರೆಸ್‌ ಕೂಡ ದಶಪಥದ ಕ್ರೆಡಿಟ್‌ ತನ್ನದೆಂದು ಹೇಳಿಕೊಳ್ಳುತ್ತಿದೆ. ಇದೇ ಸಮಯದಲ್ಲಿ ನಾಳೆ ಮೋದಿಯವರು ಕರ್ನಾಟಕಕ್ಕೆ ಆಗಮಿಸುತ್ತಿದ್ದು, ಈ ದಶಪಥವನ್ನು ಲೋಕಾರ್ಪಣೆಗೊಳಿಸಲಿದ್ದಾರೆ.

ಹೇಗಿತ್ತು ಈ ರಸ್ತೆ?

ಜೆಡಿಎಸ್‌ ಪ್ರಕಾರ, ಬೆಂಗಳೂರು-ಮೈಸೂರು ನಗರವನ್ನು ಸಂಪರ್ಕಿಸುತ್ತಿದ್ದ ಅಂದಿನ ರಾಜ್ಯ ಹೆದ್ದಾರಿ 17 (SH-17) ಒಟ್ಟು ಉದ್ದ 111,6 ಕಿ.ಮೀ. ಉದ್ದ ಇತ್ತು. ಈ ರಾಜ್ಯ ಹೆದ್ದಾರಿ ಬಹುತೇಕ ಅಂದಿನ ಬೆಂಗಳೂರು, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿನ ತಾಲೂಕುಗಳು ಮತ್ತು ದಾರಿ ಉದ್ದಕ್ಕೂ ಬರುವ ಹಳ್ಳಿಗಳನ್ನು ಸಂಪರ್ಕಿಸುವ ಜಿಲ್ಲಾ ಮುಖ್ಯರಸ್ತೆಯಾಗಿತ್ತು. ಅಂದಿನ ಮೈಸೂರು ಮಹಾರಾಜರು ಮೈಸೂರಿನಿಂದ ಬೆಂಗಳೂರಿನ ಅರಮನೆಗೆ ಕುದುರೆ ಸವಾರಿ, ಸಾರೋಟು ಮತ್ತು ಎತ್ತಿನ ಬಂಡಿಗಳಲ್ಲಿ ಸಂಚರಿಸುವ ರಸ್ತೆಯಾಗಿತ್ತು. ಪ್ರವಾಸ ವೇಳೆ ಮೈಸೂರು ಮಹಾರಾಜರು ಹಾಗೂ ಸಿಬ್ಬಂದಿ ವಿಶ್ರಾಂತಿಗಾಗಿ ಮತ್ತು ತಂಗುವಿಕೆಗೆ ಬಿಡದಿಯನ್ನು ಆಯ್ಕೆ ಮಾಡಿ ಸದರಿ ಪ್ರದೇಶವನ್ನು ಅಭಿವೃದ್ಧಿ ಪಡಿಸಿದರು. ತುಮಕೂರು ಜಿಲ್ಲೆ ತುರುವೇಕೆರೆಯಲ್ಲಿನ ಅಮ್ಮಸಂದ್ರ ಸಿಮೆಂಟ್‌ ಕಾರ್ಖಾನೆ ಸ್ಥಾಪನೆಯಾದ ನಂತರ ಆ ಕಾರ್ಖಾನೆಯಿಂದ ಸಿಮೆಂಟ್ ತರಿಸಿ, ಸಿಮೆಂಟ್ ರಸ್ತೆ ತಯಾರಿಸಿದರು ಎಂದು ಜೆಡಿಎಸ್‌ ಮಾಹಿತಿ ನೀಡಿದೆ.

ಅಪಘಾತ ತಡೆಗೆ ಯತ್ನ

ಮೈಸೂರು ಪ್ರವಾಸಿಗರ ಆಕರ್ಷಣಿ ಬೀಡಾಗಿದ್ದರೂ, ಸ್ವಾತಂತ್ರ್ಯ ಬಂದು ಹಲವಾರು ವರ್ಷ ಕಳೆದರೂ ಅಭಿವೃದ್ಧಿಯಾಗಿರಲಿಲ್ಲ. ಈ ಹಳೇ ರಾಜ್ಯ ಹೆದ್ದಾರಿಯಲ್ಲಿ ಹಲವಾರು ಅಪಘಾತವಾಗುವ ತೀವ್ರತೆರವಾದ ರಸ್ತೆ ತಿರುವುಗಳಿದ್ದವು. 1983ನೇ ಇಸವಿಯಲ್ಲಿ ಬೆಂಗಳೂರು - ಮೈಸೂರು ರಾಜ್ಯ ಹೆದ್ದಾರಿಯಲ್ಲಿ ತಮಿಳುನಾಡಿಂದ ಮೈಸೂರಿಗೆ ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದ ಶಾಲಾ ಮಕ್ಕಳಿದ್ದ ಬಸ್‌ ಬಿಡದಿ ಬಳಿ ಇರುವ ಮಾಯಗಾನಹಳ್ಳಿ ಹತ್ತಿರವಿದ್ದ ಅಪಾಯಕಾರಿ ತಿರುವಿನಲ್ಲಿ ಅಪಘಾತಕ್ಕೆ ಒಳಗಾಯಿತು. ಬಸ್‌ನಲ್ಲಿ ಇದ್ದ 23 ವಿದ್ಯಾರ್ಥಿಗಳು ಸಾವನ್ನಪ್ಪಿದರು, ಹಲವಾರು ವಿದ್ಯಾರ್ಥಿಗಳು ಗಾಯಗೊಂಡಿದ್ದರು.

ಈ ಅವಧಿಯಲ್ಲಿ ರಾಜ್ಯ ಲೋಕೋಪಯೋಗಿ ಮತ್ತು ನೀರಾವರಿ ಖಾತೆ ಸಚಿವರಾಗಿದ್ದ ಎಚ್.ಡಿ. ದೇವೇಗೌಡರು ಅಂದಿನ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಶ್ರೀ ಕೆ.ಸಿ ರೆಡ್ಡಿ ಮತ್ತು ಮುಖ್ಯ ಇಂಜಿನಿಯರ್ ಶ್ರೀ ಸಿದ್ದಪ್ಪ ಅವರೊಂದಿಗೆ ಘಟನಾ ಸ್ಥಳವನ್ನು ಪರಿಶೀಲಿಸಿ, 15 ದಿನಗಳಲ್ಲಿ ಪದೇಪದೆ ಅಪಘಾತಕ್ಕೆ ಒಳಪಡುತ್ತಿದ್ದ ಈ ಸ್ಥಳವನ್ನು ನಾಲ್ಕು ಪಥದ ರಸ್ತೆಯಾಗಿ ಮತ್ತು ಮಧ್ಯದಲ್ಲಿ ಮಿಷಿಯನ್ ಅಳವಡಿಸಿ, ದೀಪಗಳನ್ನು ಅಳವಡಿಸಲಾಯಿತು. ಇದರಿಂದ ಅಪಘಾತಗಳನ್ನು ತಡೆಯಲಾಯಿತು.

ಬೆಂಗಳೂರು-ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಬೆಂಗಳೂರು-ಬಿಡದಿ, ಬಿಡದಿ ರಾಮನಗರ, ರಾಮನಗರ ಚನ್ನಪಟ್ಟಣ ಮತ್ತು ಚನ್ನಪಟ್ಟಣ-ಮದ್ದೂರು ಮಾರ್ಗದಲ್ಲಿ ಪದೇಪದೆ ಅಪಘಾತಕ್ಕೆ ಒಳಗಾಗುತ್ತಿರುವ ಹಲವಾರು ರಸ್ತೆಗಳನ್ನು ಗುರುತಿಸಿ, ರಸ್ತೆ ಸುರಕ್ಷತಾ ಕಾಮಗಾರಿಗಳನ್ನು ಕೈಗೊಂಡು ಅಪಘಾತಗಳನ್ನು ತಡೆಯಲಾಯಿತು.

ಹೆದ್ದಾರಿ ಕನಸು

ಈ ರಾಜ್ಯ ಹೆದ್ದಾರಿಯಲ್ಲಿ ವೇಗವಾಗಿ ಬೆಳೆಯುತ್ತಿರುವ ವಾಹನ ದಟ್ಟನೆಯನ್ನು ಮನಗಂಡು ಎಚ್‌.ಡಿ. ದೇವೇಗೌಡರು, ಲೋಕೋಪಯೋಗಿ ಖಾತೆ ಸಚಿವರಾಗಿ ರಾಜ್ಯ ಹೆದ್ದಾರಿ ಸುಧಾರಣೆ ಮತ್ತು ಬೆಂಗಳೂರು- ಮೈಸೂರು ನಡುವೆ ಎಕ್ಸ್‌ಪ್ರೆಸ್ ವೇ ನಿರ್ಮಾಣಕ್ಕೆ ಕಾರ್ಯತಂತ್ರ ಆಯ್ಕೆ ಅಧ್ಯಯನ ಕೈಗೊಳ್ಳಲು ಒಂದು ನುರಿತ ಸಂಸ್ಥೆ ನೇಮಕ ಮಾಡಲಾಯಿತು. ಈ ಸಂಸ್ಥೆ ವರದಿ ಹಿನ್ನೆಲೆಯಲ್ಲಿ ಈಗಿನ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇಗೆ ಪರ್ಯಾಯವಾಗಿ ನೈಸ್ ಸಂಸ್ಥೆಯಿಂದ ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ವೇ ನಿರ್ಮಾಣಕ್ಕೆ ಸಂಬಂಧಿಸಿದಂತೆ ಯೋಜನಾ ವರದಿ ತಯಾರಿಕೆಗೆ ಅನುಮತಿ ನೀಡಲಾಯಿತು.

2003-2004ರ ಅವಧಿಯಲ್ಲಿ ಈ ದ್ವಿಪಥ ರಾಜ್ಯ ಹೆದ್ದಾರಿಯನ್ನು ಚತುಷ್ಪಥ ಹೆದ್ದಾರಿಯನ್ನಾಗಿ ಕೆ.ಆರ್.ಡಿ.ಸಿ.ಎಲ್. ಸಂಸ್ಥೆಯಿಂದ MWs NCC ಹಾಗೂ Maytas ಮತ್ತು MWs Soma ಗುತ್ತಿಗೆದಾರರ ಮುಖೇನ ಅಭಿವೃದ್ಧಿ ಕೈಗೊಳ್ಳಲಾಯಿತು. ಆದರೆ, ಅಗತ್ಯವಿರುವ ಭೂಮಿಯ ಭೂ-ಸ್ವಾಧೀನಗೊಳ್ಳದೆ, ಹಲವು ಕಡೆ ಹೆದ್ದಾರಿಯ ಆಗಲೀಕರಣ ಕೈಗೊಳ್ಳಲು ಸಾಧ್ಯವಾಗಲಿಲ್ಲ. 2004-06ರಲ್ಲಿನ ಧರ್ಮಸಿಂಗ್‌ ನೇತೃತ್ವದಲ್ಲಿದ್ದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಹಾಗೂ 2006-08 ರಲ್ಲಿನ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿನ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಈ ಹೆದ್ದಾರಿ ಅಗಲೀಕರಣ ಮತ್ತು ಉನ್ನತೀಕರಣವನ್ನು ಪೂರ್ಣ ಗೊಳಿಸಲಾಯಿತು.

ತದನಂತರ, 2014ರಲ್ಲಿ ಅಂದಿನ ಕೇಂದ್ರ ಸರ್ಕಾರ ಬೆಂಗಳೂರು ಮೈಸೂರು ನಡುವಿನ ರಾಜ್ಯ ಹೆದ್ದಾರಿ 17 ನ್ನು ರಾಷ್ಟ್ರೀಯ ಹೆದ್ದಾರಿ 275 ಮೇಲ್ದರ್ಜೆಗೇರಿಸಿದೆ. ಈ ಮಧ್ಯೆ ಮೈಸೂರು ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್ ಯೋಜನೆಯನ್ನು ಯೋಜನಾ ಕರಾರಿನಂತೆ ಅನುಷ್ಠಾನಗೊಳಿಸಲು ವಿಫಲವಾದ ನೈಸ್ ಸಂಸ್ಥೆ ಕೋರ್ಟ್ ಮೆಟ್ಟಿಲು ಹತ್ತಿದ ಹಿನ್ನೆಲೆಯಲ್ಲಿ, ಪರ್ಯಾಯವಾಗಿ ಪ್ರಸ್ತುತದಲ್ಲಿರುವ ಬೆಂಗಳೂರು-ಮೈಸೂರು ನಡುವಿನ ರಾಜ್ಯ ಹೆದ್ದಾರಿಯನ್ನು ಉನ್ನತೀಕರಿಸುವುದು ಅನಿವಾರ್ಯವಾಯಿತು.

ಬೆಂಗಳೂರು- ಮೈಸೂರು ದಳಪಥ ರಸ್ತೆಯನ್ನಾಗಿ ಮಾಡಲು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕಾಮಗಾರಿ ಕೈಗೊಳ್ಳಲಾಗಿದೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಉನ್ನತೀಕರಿಸುವ ಈ ರಾಷ್ಟ್ರೀಯ ಹೆದ್ದಾರಿಯ ಒಟ್ಟು 116 ಕಿ.ಮೀ.ನಲ್ಲಿ ಹಾಲಿ ಇರುವ ಸುಮಾರು 60 ಕಿ.ಮೀ. ಗಳಲ್ಲಿ Elevated ರಸ್ತೆಯನ್ನು ಮತ್ತು ಐದು ಬೈಪಾಸ್‌ಗಳನ್ನು ಮಾತ್ರ ನಿರ್ಮಿಸಲಾಗಿದೆ. ಉಳಿದಿರುವ 57 ಕಿ.ಮೀ. ಹೆದ್ದಾರಿಯನ್ನು ಈಗಾಗಲೆ, ಕೆ.ಆರ್.ಡಿ.ಸಿ.ಎಲ್. ಮುಖೇನ ಅಭಿವೃದ್ಧಿಗೊಳಿಸಿದ್ದ ರಸ್ತೆಯನ್ನು ಬಳಸಿ ಆಗಲೀಕರಣ ಹಾಗೂ ಉನ್ನತೀಕರಣ ಮಾಡಲಾಗಿದೆ. ಪ್ರಾಧಿಕಾರ ನಿರ್ಮಿಸಿರುವ ಎಲಿವೆಟೆಡ್ ರಸ್ತೆ, ಬೈಪಾಸ್‌ಗಳು ಸಾಂಪ್ರದಾಯಿಕವಾಗಿ ಸಂಪರ್ಕ ಕಲ್ಪಿಸುವ ಜಿಲ್ಲೆ ಮತ್ತು ತಾಲೂಕು ಕೇಂದ್ರಗಳು ಗ್ರಾಮ ಪಂಚಾಯಿತಿ ಕೇಂದ್ರಗಳು, ಕೈಗಾರಿಕಾ ಪ್ರದೇಶಗಳಾದ ರೇಷ್ಮೆ ವಲಯ ಮತ್ತು ಚಂದದ ಗೊಂಬೆಗಳ ಬೀಡುಗಳನ್ನು ವಂಚಿತಗೊಳಿಸಿವೆ.

ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಿತವಾಗಿರುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಕಾರಿಡಾರ್ ನೂತನವಾಗಿ ನಿರ್ಮಿತವಾಗಿರುವ ಗ್ರೀನ್ ಫೀಲ್ಡ್ ಕಾರಿಡಾರ್ ಆಗಿರುವುದಿಲ್ಲ. ಇದು ಕೇವಲ ಪ್ರಸ್ತುತದ ರಸ್ತೆ ಅಗಲೀಕರಣ ಮತ್ತು ಉನ್ನತೀಕರಣಕ್ಕೆ ಸೀಮಿತವಾಗಿದೆ. ಅಲ್ಲದೆ, ಈ ಕಾರಿಡಾರ್ ಸಾಂಪ್ರದಾಯಿಕವಾಗಿ ಸಂಪರ್ಕ ಕಲ್ಪಿಸಬೇಕಾಗಿದ್ದ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸವಲತ್ತುಗಳನ್ನು ವಂಚಿತಗೊಳಿಸಿದೆ. ಅಲ್ಲದೆ, ಇದು ಟೋಲ್ ರಸ್ತೆ ಆಗಿರುವುದರಿಂದ ಸರ್ಕಾರಕ್ಕೆ ಕಡಿಮೆ ಆರ್ಥಿಕ ಹೊರೆ ಆಗಿದ್ದು, ಪ್ರಯಾಣಿಕರಿಗೆ ಹೆಚ್ಚಿನ ಹೊರ ಆಗಿರುತ್ತದೆ ಎಂದು ಜೆಡಿಎಸ್‌ ತಿಳಿಸಿದೆ.

ಹೀಗೆ, ಬೆಂಗಳೂರು-ಮೈಸೂರು ದಶಪಥ ರಸ್ತೆ ನಿರ್ಮಾಣದ ಹಿಂದೆ ಇಂತಹ ಸತ್ಯಸಂಗತಿಗಳು ಇವೆ ಎಂದು ಜೆಡಿಎಸ್‌ ತಿಳಿಸಿದೆ. ವಿಧಾನಸಭೆ ಚುನಾವಣೆ ಹತ್ತಿರದಲ್ಲಿರುವುದರಿಂದ ಈ ಕಾರಿಡಾರ್‌ ಮತವಾಗಿ ಪರಿವರ್ತನೆಯಾಗಬಹುದು, ಜನರು ಬಿಜೆಪಿಯತ್ತ ಗಮನಹರಿಸಬಹುದೆಂದು ಜೆಡಿಎಸ್‌, ಕಾಂಗ್ರೆಸ್‌ಗಳು ಕ್ರೆಡಿಟ್‌ ವಾರ್‌ ಆರಂಭಿಸಿವೆ ಎನ್ನಲಾಗುತ್ತಿದೆ.