ಜ 27ರಂದು ಬೆಂಗಳೂರು ವಿಧಾನಸೌಧದ ಆವರಣದಲ್ಲಿ 25 ಅಡಿ ಎತ್ತರದ ನಾಡದೇವತೆ ಭುವನೇಶ್ವರಿ ಪ್ರತಿಮೆ ಅನಾವರಣ
ಬೆಂಗಳೂರು ವಿಧಾನಸೌಧದ ಆವರಣದಲ್ಲಿ ನಾಡದೇವತೆ ಭುವನೇಶ್ವರಿ ಪ್ರತಿಮೆ ಅನಾವರಣಕ್ಕೆ ಸಮಯ ನಿಗದಿಯಾಗಿದೆ. ಜ. 27ರಂದು ಸಂಜೆ 4ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಮೆ ಅನಾವರಣ ಮಾಡಲಿದ್ದಾರೆ. ಬೆಂಗಳೂರಿನಲ್ಲಿ ಮತ್ತೊಂದು ಪ್ರವಾಸಿ ತಾಣ ಸಿದ್ಧವಾಗುತ್ತಿದ್ದು ಪಾಸ್ ಇಲ್ಲದೆಯೂ ನೋಡುವ ಅವಕಾಶ ಇರಲಿದೆ. (ವರದಿ- ಎಚ್.ಮಾರುತಿ, ಬೆಂಗಳೂರು)

ಬೆಂಗಳೂರು: ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ವಿಧಾನಸೌಧದ ಆವರಣದಲ್ಲಿ ನಾಡದೇವಿ ಭುವನೇಶ್ವರಿ ದೇವಿ ಕಂಚಿನ ಪ್ರತಿಮೆ ಅನಾವರಣಕ್ಕೆ ಮುಹೂರ್ತ ನಿಗದಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜ. 27ರಂದು ಸಂಜೆ 4ಗಂಟೆಗೆ ಭುವನೇಶ್ವರಿಯ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ.
23 ಕೋಟಿ ರೂ. ವೆಚ್ಚದಲ್ಲಿ 25 ಅಡಿ ಎತ್ತರದ ನಾಡದೇವಿ ಪ್ರತಿಮೆ
ಕರ್ನಾಟಕ ಎಂಬ ಹೆಸರು ನಾಮಕರಣಗೊಂಡು 50 ವರ್ಷಗಳಾದ ಸಂದರ್ಭದಲ್ಲಿ ಕನ್ನಡದ ಪ್ರತೀಕದ ಗುರುತು ಸರ್ಕಾರದ ಆವರಣದಲ್ಲಿರಬೇಕೆಂಬ ಉದ್ದೇಶದಿಂದ ಭುವನೇಶ್ವರಿ ಪ್ರತಿಮೆ ಸ್ಥಾಪನೆಗೆ ನಿರ್ಧಾರ ಕೈಗೊಳ್ಳಲಾಗಿತ್ತು. 23 ಕೋಟಿ ರೂ. ವೆಚ್ಚದಲ್ಲಿ ವಿಧಾನಸೌಧದ ಪಶ್ಚಿಮ ದಿಕ್ಕಿನಲ್ಲಿ 25 ಅಡಿ ಎತ್ತರದ ಕಂಚಿನ ಪ್ರತಿಮೆ ನಿರ್ಮಾಣಗೊಂಡಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಕನ್ನಡ ರಾಜ್ಯೋತ್ಸವದಂದು ನಾಡದೇವತೆ ಭುವನೇಶ್ವರಿ ದೇವಿ ಪ್ರತಿಮೆ ಅನಾವರಣಗೊಳ್ಳಬೇಕಿತ್ತು. ಆದರೆ ಪ್ರತಿಮೆ ನಿರ್ಮಾಣ ಕಾರ್ಯ ವಿಳಂಬವಾಗಿದ್ದರಿಂದ ಸಾಧ್ಯವಾಗಿರಲಿಲ್ಲ. ಕನ್ನಡ ಪರ ಚಿಂತಕರೂ ಸಹ ಶೀಘ್ರ ಅನಾವರಣಗೊಳ್ಳಲಿ ಎಂದು ಆಗ್ರಹಪಡಿಸುತ್ತಲೇ ಬಂದಿದ್ದರು.
ಭುವನೇಶ್ವರಿ ಪ್ರತಿಮೆ ಸ್ಥಾಪನೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಸರಣಿ ಸಭೆಗಳು ನಡೆದಿದ್ದವು. ವಿವಿಧ ಸ್ಥಳಗಳ ಪರಿಶೀಲನೆ ಮಾಡಲಾಗಿತ್ತಾದರೂ ಅಂತಿಮವಾಗಿ ವಿಧಾನಸೌಧದ ಆವರಣದಲ್ಲಿಯೇ 25 ಅಡಿ ಎತ್ತರದ ಕನ್ನಡಾಂಬೆಯ ಕಂಚಿನ ಪ್ರತಿಮೆ ಸ್ಥಾಪನೆ ಮಾಡಲು ತೀರ್ಮಾನಿಸಲಾಗಿತ್ತು. ವಿಧಾನಸೌಧ ಮತ್ತು ವಿಕಾಸಸೌಧದ ಮಧ್ಯೆ ಇರುವ ಮಹಾತ್ಮಾ ಗಾಂಧಿ ಪ್ರತಿಮೆ ಮತ್ತು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಕೆಂಪೇಗೌಡ ಪ್ರತಿಮೆಯನ್ನೂ ಸ್ಥಾಪಿಸಿದ್ದ ದೆಹಲಿಯ ಖ್ಯಾತ ಶಿಲ್ಪಿ ರಾಮ್ ಸುತಾರ್ ಅವರು ನಾಡದೇವಿ ಭುವನೇಶ್ವರಿ ಪ್ರತಿಮೆಯನ್ನು ನಿರ್ಮಿಸಿದ್ದಾರೆ.
ಕೆಂಗಲ್ ಹನುಮಂತಯ್ಯ ದ್ವಾರದ ಬಳಿ ನಾಡದೇವಿ ಭುವನೇಶ್ವರಿ ಪ್ರತಿಮೆ ಸ್ಥಾಪನೆ
ಈ ಹಿಂದೆ ವಿಧಾನಸೌಧದ ಮುಂಭಾಗ, ಜೆ.ಸಿ. ರಸ್ತೆಯಲ್ಲಿರುವ ಕನ್ನಡ ಭವನದ ಆವರಣ ಮಲ್ಲತ್ತಹಳ್ಳಿಯ ಕಲಾಗ್ರಾಮ ಅಥವಾ ವಿಶ್ವವಿದ್ಯಾಲಯದ ಆವರಣದಲ್ಲಿ ಸ್ಥಾಪಿಸಲುವ ಸಂಬಂಧ ಚರ್ಚೆಗಳು ನಡೆದಿದ್ದವು. ಅಂತಿಮವಾಗಿ ವಿಧಾನಸೌಧದ ಪಶ್ಚಿಮ ದ್ವಾರ ಅಂದರೆ ಕೆಂಗಲ್ ಹನುಮಂತಯ್ಯ ದ್ವಾರದ ಬಳಿ 25 ಅಡಿ ಎತ್ತರದ ಕನ್ನಡಾಂಬೆಯ ಕಂಚಿನ ಪ್ರತಿಮೆ ಸ್ಥಾಪನೆಯಾಗುತ್ತಿದೆ.
2024ರ ಜನವರಿಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಕನ್ನಡ ನಾಡು, ನುಡಿ ಸಂಸ್ಕೃತಿಯ ಸಂಕೇತವಾದ ತಾಯಿ ಭುವನೇಶ್ವರಿ ಪ್ರತಿಮೆಯನ್ನು ವಿಧಾನಸೌಧದ ಆವರಣದಲ್ಲಿ ಸುಮಾರು 25 ಕೋಟಿ ರೂ. ವೆಚ್ಚದಲ್ಲಿ ಸ್ಥಾಪನೆ ಮಾಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಕನ್ನಡ ನಾಡು ಏಕೀಕರಣಗೊಂಡು, ಕರ್ನಾಟಕ ಎಂಬ ಹೆಸರು ನಾಮಕರಣವಾಗಿ 50 ವರ್ಷ ಸಂದಿರುವ ಸಂದರ್ಭದಲ್ಲಿ ಕನ್ನಡದ ಪ್ರತೀಕದ ಗುರುತು ಸರ್ಕಾರದ ಆವರಣದಲ್ಲಿರಬೇಕೆಂಬ ಉದ್ದೇಶದಿಂದ ಈ ನಿರ್ಣಯ ಕೈಗೊಳ್ಳಾಗಿತ್ತು.
ಸಾರ್ವಜನಿಕರ ಪ್ರವೇಶಕ್ಕೆ ಪ್ರತ್ಯೇಕ ದ್ವಾರ ನಿರ್ಮಾಣ
ಈ ಪ್ರತಿಮೆ ವಿಧಾನಸೌಧದ ಒಳಗೆ ನಿರ್ಮಾಣವಾದರೂ ಸಾರ್ವಜನಿಕರ ಪ್ರವೇಶಕ್ಕೆ ಪ್ರತ್ಯೇಕ ದ್ವಾರ ನಿರ್ಮಾಣ ಮಾಡಲಾಗುತ್ತಿದೆ. ಕನ್ನಡಿಗರು ಅಥವಾ ಪ್ರವಾಸಿಗರು ಯಾವುದೇ ಪಾಸ್ ಇಲ್ಲದೆ ನಾಡದೇವಿ ಭುವನೇಶ್ವರಿಯ ಪ್ರತಿಮೆಯನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಅದಕ್ಕಾಗಿ ಪ್ರತಿಮೆ ಸ್ಥಾಪಿಸುವ ಸ್ಥಳದ ಸುತ್ತಮುತ್ತ ಕಾಮಗಾರಿ ಪೂರ್ಣಗೊಂಡಿದ್ದು, ಪ್ರತಿಮೆಯ ಹಿಂದೆ ಬೃಹತ್ ಕರ್ನಾಟಕದ ಭೂಪಟ, ಉದ್ಯಾನವನ, ಕುಳಿತುಕೊಳ್ಳಲು ಸ್ಥಳಾವಕಾಶ ಮೊದಲಾದ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
ಹಿರಿಯ ಕಲಾವಿದ ಕೆ.ಸೋಮಶೇಖರ್ ಸಿದ್ಧಪಡಿಸಿರುವ ನಾಡದೇವಿಯ ಚಿತ್ರವನ್ನು ಸರ್ಕಾರ ಅಧಿಕೃತಗೊಳಿಸಿತ್ತು. ಸೋಮಶೇಖರ್ ರಚಿಸಿರುವ ಕಲಾಕೃತಿಯಲ್ಲಿ ನಾಡದೇವತೆಯು ಕುಳಿತಿರುವ ಭಂಗಿಯಲ್ಲಿದೆ. ಭಾವಚಿತ್ರದ ಹಿನ್ನೆಲೆಯಲ್ಲಿ ರಾಜ್ಯದ ಭೂಪಟ, ಬಲಗೈಯಲ್ಲಿ ಅಭಯ ಮುದ್ರೆ ಮತ್ತು ಎಡಗೈಯಲ್ಲಿ ತಾಳೆಗರಿ ಇರುವಂತೆ ಚಿತ್ರಿಸಲಾಗಿದೆ. ದೇವಿಯ ಎಡ ಭುಜದ ಮೇಲೆ ಕನ್ನಡ ಧ್ವಜವಿದೆ. ಜ.27ರಿಂದ ಎಲ್ಲರೂ ನಾಡದೇವತೆ ಭುವನೇಶ್ವರಿ ಪ್ರತಿಮೆಯನ್ನು ಕಣ್ತುಂಬಿಕೊಳ್ಳಬಹುದಾಗಿದೆ.
(ವರದಿ- ಎಚ್.ಮಾರುತಿ, ಬೆಂಗಳೂರು)
