ನಾಗಸಂದ್ರ ಮೆಟ್ರೋ ನಿಲ್ದಾಣದಲ್ಲಿ 1 ಕಿಮೀ ಸರತಿ ಸಾಲು; ಹೆಚ್ಚುವರಿ 6 ಸಾವಿರ ಪ್ರಯಾಣಿಕರು; ಮಾದಾವರ ಮಾರ್ಗ ಉದ್ಘಾಟನೆ ವಿಳಂಬ
ನಾಗಸಂದ್ರ ಮೆಟ್ರೋ ನಿಲ್ದಾಣದಲ್ಲಿ ಜನದಟ್ಟಣೆ ಹೆಚ್ಚಾಗಿದೆ. ನವೆಂಬರ್ 5ರಂದು ಮೆಟ್ರೋ ನಿಲ್ದಾಣದ ಹೊರಗಡೆ 1 ಕಿಮೀ ಸರತಿ ಸಾಲು ಕಂಡುಬಂದಿದೆ. ನಿತ್ಯ ಓಡಾಡುವ ಅಂದಾಜು ಪ್ರಯಾಣಿಕರಿಗಿಂತ ಹೆಚ್ಚುವರಿ 6 ಸಾವಿರ ಪ್ರಯಾಣಿಕರು ಕ್ಯೂನಲ್ಲಿ ನಿಂತಿದ್ದರು. ಅತ್ತ ನಾಗಸಂದ್ರ - ಮಾದಾವರ ಮಾರ್ಗ ಉದ್ಘಾಟನೆ ದಿನಾಂಕ ಇನ್ನೂ ನಿಗದಿಯಾಗಿಲ್ಲ. (ವರದಿ: ಎಚ್. ಮಾರುತಿ)
ಬೆಂಗಳೂರು: ಮೂರು ದಿನ ದೀಪಾವಳಿ, ಕನ್ನಡ ರಾಜ್ಯೋತ್ಸವ ಮತ್ತು ವಾರಾಂತ್ಯದ ರಜೆ ಅನುಭವಿಸಿ ಭಾನುವಾರ ಸಂಜೆ ಮತ್ತು ಸೋಮವಾರ ಬೆಳಗ್ಗೆ ಬೆಂಗಳೂರು ಪ್ರವೇಶಿಸಲು ನಾಗರಿಕರು ಹರಸಾಹಸಪಟ್ಟ ಸುದ್ದಿ ಓದಿರುತ್ತೀರಿ. 20 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ತುಮಕೂರು ರಸ್ತೆ, ಮೈಸೂರು ರಸ್ತೆ, ದೇವನಹಳ್ಳಿ ರಸ್ತೆಗಳ ಮೂಲಕ ಸಾಗಿ ಬರುತ್ತಿರುವ ವಾಹನಗಳು ಆಮೆ ವೇಗದಲ್ಲಿ ಚಲಿಸುತ್ತಿದ್ದವು. ಅದರಲ್ಲೂ ಉತ್ತರ ಕರ್ನಾಟಕ ಮತ್ತು ಕರಾವಳಿ ಕರ್ನಾಟಕದ ಜಿಲ್ಲೆಗಳ ಜನ ಬೆಂಗಳೂರು ಪ್ರವೇಶಿಸಲು ತುಮಕೂರು ಮಾರ್ಗವಾಗಿಯೇ ಬರಬೇಕು. ಹೀಗಾಗಿ ಟ್ರಾಫಿಕ್ ಜಾಮ್ ಮಿತಿ ಮೀರಿತ್ತು.
ಬಸ್ಸು, ಕಾರು, ಕ್ಯಾಬ್‌ಗಳಲ್ಲಿ ಹೋದರೆ ಮನೆ ಕಚೇರಿ ಎರಡೂ ತಲುಪಲು ಸಾಧ್ಯವಿಲ್ಲ ಎಂದು ಜನರು ತುಮಕೂರು ರಸ್ತೆಯ ಹಸಿರು ಮಾರ್ಗದ ನಾಗಸಂದ್ರ ಮೆಟ್ರೋ ನಿಲ್ದಾಣಕ್ಕೆ ದಾಂಗುಡಿ ಇಟ್ಟರು. ಆದರೆ ಅಲ್ಲಿಯೂ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ಅಲ್ಲಿಯೂ ಜನಜಾತ್ರೆಯೇ ಸೇರಿತ್ತು. ಮೆಟ್ರೋ ನಿಲ್ದಾಣದ ಒಳಗೆ ಬಿಟ್ಟು ಹೊರಗೆ 1 ಕಿಮೀಗಿಂತಲೂ ಹೆಚ್ಚು ಸರತಿ ಸಾಲು ಇತ್ತು. ಈ ದೃಶ್ಯದ ವಿಡಿಯೋ ಮತ್ತು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದ್ದು ಚರ್ಚೆಗೆ ಗ್ರಾಸವಾಗಿಸಿತ್ತು.
ಕೂಡಲೇ ನಾಗಸಂದ್ರ - ಮಾದಾವರ ಮೆಟ್ರೋ ಮಾರ್ಗವನ್ನು ಸಂಚಾರಕ್ಕೆ ಮುಕ್ತಗೊಳಿಸುವಂತೆ ಅಗ್ರಪಡಿಸಿ ರಾಜಕಾರಣಿಗಳ ಉದಾಸೀನ ಮನೋಭಾವವನ್ನು ತರಾಟೆಗೆ ತೆಗೆದುಕೊಂಡವರ ಸಂಖ್ಯೆಯೇ ಅಧಿಕವಾಗಿತ್ತು. ನಾಗಸಂದ್ರದಿಂದ ಕೆನ್ನ ಮೆಟಲ್‌ವರೆಗೆ ಉದ್ದನೆಯ ಸಾಲು. ಕೂಡಲೇ ಮಾದಾವರ ಮಾರ್ಗವನ್ನು ಆರಂಭಿಸಿದರೆ ಟ್ರಾಫಿಕ್ ನಿಯಂತ್ರಣಕ್ಕೆ ಬರುತ್ತದೆ. ಇದು ಆಳುವ ಮಂದಿಗೆ ಅರ್ಥವಾಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
15800 ಜನರು ಪ್ರಯಾಣ
ನಾಗಸಂದ್ರ ಮೆಟ್ರೋ ನಿಲ್ದಾಣದಿಂದ ಸಾಮಾನ್ಯ ದಿನಗಳಲ್ಲಿ ಬೆಳಗ್ಗೆ 6ರಿಂದ 11 ಗಂಟೆಯವರೆಗೆ ಸುಮಾರು 11000 ಜನರು ದಿನನಿತ್ಯ ಪ್ರಯಾಣಿಸುತ್ತಾರೆ. ಇಂದು, ನವೆಂಬರ್ 5ರಂದು ಈ ಸಮಯದಲ್ಲಿ 15800 ಜನರು ಪ್ರಯಾಣಿಸಿದ್ದಾರೆ. ದೀರ್ಘ ರಜೆಯ ನಂತರ ಬಂದ ಪ್ರಯಾಣಿಕರ ಸರಂಜಾಮುಗಳನ್ನು ತ್ವರಿತವಾಗಿ ಪರಿಶೀಲಿಸಿ ಜನದಟ್ಟಣೆಯನ್ನು ಕಡಿಮೆಮಾಡಿ ಪ್ರಯಾಣಕ್ಕೆ ಅನೂಕೂಲ ಮಾಡಲಾಯಿತು ಎಂದು ನಮ್ಮ ಮೆಟ್ರೋ ಎಕ್ಸ್‌ನಲ್ಲಿ ಮಾಹಿತಿ ನೀಡಿದೆ.
ಬೆಂಗಳೂರು ಟ್ರಾಫಿಕ್ ಕುರಿತಾಗಿ ಮತ್ತೊಬ್ಬರು ಆಟೋದಲ್ಲಿ ಕುಳಿತೇ ವಿಡಿಯೋ ಮಾಡಿದ್ದು, ಬೆಂಗಳೂರು ಟ್ರಾಫಿಕ್ ಜೋಕ್ ಅಲ್ಲವೇ ಅಲ್ಲ ಎಂದು ಬರೆದುಕೊಂಡಿದ್ದಾರೆ.
ನಾಗಸಂದ್ರ - ಮಾದಾವರ ಮೆಟ್ರೋ ಮಾರ್ಗ ಸಂಚಾರಕ್ಕೆ ಸಿದ್ಧವಾಗಿದೆ. ಎಲ್ಲ ರೀತಿಯ ತಪಾಸಣೆ ಮುಗಿದಿದ್ದು ಉದ್ಘಾಟನೆಗೆ ಕೇಂದ್ರ ಸಚಿವರ ಸಮಯವನ್ನು ಕಾಯಲಾಗುತ್ತಿದೆ.
ಉದ್ಘಾಟನೆ ನಿಗದಿಯಾಗದ ಮುಹೂರ್ತ
ಮೆಟ್ರೋ ರೈಲ್ವೇ ಸುರಕ್ಷತಾ ಆಯುಕ್ತರು ಅಕ್ಟೋಬರ್ ತಿಂಗಳಲ್ಲೇ 3.7ಕಿಮೀ ಉದ್ದದ ನಾಗಸಂದ್ರ - ಮಾದಾವರ ಮಾರ್ಗಕ್ಕೆ ಅನುಮತಿ ನೀಡಿದ್ದಾರೆ. ಅಕ್ಟೋಬರ್ ಎರಡು ಇಲ್ಲವೇ ಮೂರನೇ ವಾರದಲ್ಲೇ ಉದ್ಘಾಟನೆ ನೆರವೇರಬೇಕಿತ್ತು. ಈ ಮಾರ್ಗದಲ್ಲಿ ಮಂಜುನಾಥ ನಗರ, ಚಿಕ್ಕಬಿದಿರಕಲ್ಲು ಮತ್ತು ಮಾದಾವರ ಸೇರಿ ಮೂರು ನಿಲ್ದಾಣಗಳಿವೆ. ಒಮ್ಮೆ ಸಂಚಾರ ಆರಂಭಿಸಿದರೆ ಉತ್ತರ ಭಾಗದ ನೆಲಮಂಗಲ, ದಾಬಸ್ ಪೇಟೆ ಮತ್ತು ಸುತ್ತಮುತ್ತಲಿನ ಗ್ರಾಮಗಳ ನಾಗರಿಕರಿಗೆ ಅನುಕೂಲವಾಗುತ್ತದೆ.