ಬೆಂಗಳೂರು ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ; ಮೆಜೆಸ್ಟಿಕ್ ನಿಲ್ದಾಣದಲ್ಲಿ ಮತ್ತೊಂದು ಪ್ರವೇಶ ದ್ವಾರ ಓಪನ್
ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಹೊಸ ಹೊಸ ವ್ಯವಸ್ಥೆಗಳನ್ನು ತರಲಾಗುತ್ತಿದೆ. ಸದಾ ಜನಜಂಗುಳಿಯಿದ್ದ ತುಂಬಿರುವ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಇದೀಗ ಹೊಸ ಪ್ರವೇಶ ದ್ವಾರವನ್ನು ತೆರೆಯಲಾಗಿದೆ.
ದೆಹಲಿ ನಂತರ ಭಾರತದ ಎರಡನೇ ಅತಿ ಉದ್ದದ ಮೆಟ್ರೋ ರೈಲು ನೆಟ್ವರ್ಕ್ ಹೊಂದಿರುವ ನಗರ ಬೆಂಗಳೂರು. ಉದ್ಯಾನ ನಗರಿಯ ನಮ್ಮ ಮೆಟ್ರೋ ದಿನದಿಂದ ದಿನಕ್ಕೆ ವಿಸ್ತರಣೆಯಾಗುತ್ತಿದೆ. ದಿನ ಕಳೆದಂತೆ ಮೆಟ್ರೋದಲ್ಲಿ ಜನದಟ್ಟಣೆ ಕೂಡಾ ಹೆಚ್ಚುತ್ತಿದ್ದು, ಪ್ರಯಾಣಿಕರ ಸುಗಮ ಸಂಚಾರಕ್ಕೆ ಬಿಎಂಆರ್‌ಸಿಎಲ್ ಹೊಸ ಹೊಸ ವ್ಯವಸ್ಥೆಗಳನ್ನು ಕೂಡಾ ಕಲ್ಪಿಸುತ್ತಿದೆ. ಇದೀಗ ನಗರದ ಅತ್ಯಂತ ಜನನಿಬಿಡ ಹಾಗೂ ದೊಡ್ಡ ಮೆಟ್ರೋ ನಿಲ್ದಾಣವಾದ ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್‌ನಲ್ಲಿ ಹೊಸ ವ್ಯವಸ್ಥೆಯನ್ನು ಪರಿಚಯಿಸಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮವು (ಬಿಎಂಆರ್‌ಸಿಎಲ್) ಮೆಟ್ರೋ ಪ್ರಯಾಣಿಕರ ಅನುಕೂಲಕ್ಕಾಗಿ ಸೆಪ್ಟೆಂಬರ್ 2ರ ಸೋಮವಾರದಂದು ಮೆಜೆಸ್ಟಿಕ್ ನಿಲ್ದಾಣಲ್ಲಿ ಹೊಸ ಪ್ರವೇಶ ದ್ವಾರವನ್ನು ತೆರೆದಿದೆ. ನಾಡಪ್ರಭು ಕೆಂಪೇಗೌಡ ನಿಲ್ದಾಣವು ಹೆಚ್ಚು ಪ್ರಯಾಣಿಕರನ್ನು ನಿರ್ವಹಿಸುವ ನಗರದ ಕೇಂದ್ರ ನಿಲ್ದಾಣವಾಗಿದ್ದು, ಜನರಿಗೆ ಸುಲಭವಾಗುವ ನಿಟ್ಟಿನಲ್ಲಿ ಹಸಿರು ಮಾರ್ಗದಿಂದ ನೇರಳೆ ಮಾರ್ಗಕ್ಕೆ ಬದಲಾಯಿಸುವ ಮತ್ತೊಂದು ಪ್ರವೇಶ ದ್ವಾರವನ್ನು ತೆರೆಯಲಾಗಿದೆ. ಈ ಸೌಲಭ್ಯವನ್ನು ಬಳಸಿಕೊಳ್ಳಲು ಬಿಎಂಆರ್‌ಸಿಎಲ್ ಪ್ರಯಾಣಿಕರನ್ನು ಕೋರಿದೆ.
ಹಸಿರು ಮಾರ್ಗದಿಂದ ನೇರಳೆ ಮಾರ್ಗಕ್ಕೆ ನಾಗಸಂದ್ರ ರೇಷ್ಮೆ ಸಂಸ್ಥೆ ಕಡೆಗೆ ಪ್ರಯಾಣಿಸುವ ಪ್ರಯಾಣಿಕರು ಈ ಪ್ರವೇಶ ದ್ವಾರವನ್ನು ಬಳಸಬಹುದು. ಮೆಜೆಸ್ಟಿಕ್ ನಿಲ್ದಾಣದಲ್ಲಿ ಹೆಚ್ಚಿನ ದಿನಗಳಲ್ಲಿ ಪ್ರಯಾಣಿಕರು ತುಂಬಿರುತ್ತಾರೆ. ಅದರಲ್ಲೂ ಬೆಳಗ್ಗೆ 8-10 ಹಾಗೂ ಸಂಜೆ 5ರಿಂದ 10 ಗಂಟೆಗಳವರೆಗೂ ಜನದಟ್ಟಣೆ ಹೆಚ್ಚಿರುತ್ತದೆ. ಹೀಗಾಗಿ ಹೆಚ್ಚುವರಿ ದ್ವಾರದ ವ್ಯವಸ್ಥೆ ಇಲ್ಲಿ ಅಗತ್ಯವಿದೆ.
ಬೆಂಗಳೂರು ಮೆಜೆಸ್ಟಿಕ್ ಮೆಟ್ರೋ ನಿಲ್ದಾಣವು ಪ್ರಮುಖ ಇಂಟರ್ಚೇಂಜ್ ನಿಲ್ದಾಣವಾಗಿದ್ದು, ದೊಡ್ಡ ಅಂಡರ್‌ಗ್ರೌಂಡ್ ಮೆಟ್ರೋ ನಿಲ್ದಾಣವೂ ಹೌದು. ಗ್ರೀನ್ ಹಾಗೂ ಪರ್ಪಲ್ ಲೈನ್ ರೈಲುಗಳು ಇಲ್ಲಿ ಇಂಟರ್ಚೇಂಜ್ ಆಗುತ್ತವೆ. ಹೀಗಾಗಿ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಪ್ರತಿನಿತ್ಯ ಈ ನಿಲ್ದಾಣಕ್ಕೆ ಬರುತ್ತಾರೆ. ಏಷ್ಯಾದ ಅತಿ ದೊಡ್ಡ ಅಂಡರ್‌ಗ್ರೌಂಡ್ ಮೆಟ್ರೋ ನಿಲ್ದಾಣ ಎಂಬ ಹೆಸರು ಪಡೆದರುವ ಮೆಜೆಸ್ಟಿಕ್, ಒಟ್ಟು 7 ಎಕರೆ ಜಾಗವನ್ನು ವ್ಯಾಪಿಸಿದೆ. ಇದರ ಪರ್ಪಲ್ ಲೈನ್ ಪ್ಲಾಟ್‌ಫಾರ್ಮ್ 365 ಕಿಮೀ ಉದ್ದವಿದೆ. ಇರುವ ಒಟ್ಟು ನಾಲ್ಕು ಮಹಡಿಗಳಲ್ಲಿ 24 ಎಸ್ಕಲೇಟರ್‌ಗಳಿವೆ.