ವಿಸ್ತೃತ ಹಸಿರು ಮಾರ್ಗದಲ್ಲಿ ಅಕ್ಟೋಬರ್‌ನಲ್ಲೇ ಮೆಟ್ರೋ ಓಡಾಟ; ಉದ್ಘಾಟನೆ ದಿನಾಂಕ ನಿಗದಿಗೆ ನಗರಾಭಿವೃದ್ಧಿ ಇಲಾಖೆಗೆ ಪತ್ರ
Namma Metro: ನಾಗಸಂದ್ರ ಮತ್ತು ಮಾದಾವರ ನಡುವಿನ ನಮ್ಮ ಮೆಟ್ರೋ ಹಸಿರು ಮಾರ್ಗ ವಿಸ್ತರಣೆಯಾಗಿದ್ದು, ರೈಲು ಓಡಾಟಕ್ಕೆ ರೈಲ್ವೆ ಸುರಕ್ಷತೆ ಆಯುಕ್ತರು ಅನುಮತಿ ನೀಡಿದ್ದಾರೆ. ಅದರ ಬೆನ್ನಲ್ಲೇ ಉದ್ಘಾಟನೆ ದಿನಾಂಕ ನಿಗದಿಪಡಿಸಲು ಬಿಎಂಆರ್‌ಸಿಎಲ್ ಮುಂದಾಗಿದ್ದು, ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದೆ.
ನಾಗಸಂದ್ರ ಮತ್ತು ಮಾದಾವರ ನಡುವಿನ ನಮ್ಮ ಮೆಟ್ರೋ ಹಸಿರು ಮಾರ್ಗದ ವಿಸ್ತರಣೆ ಕಾಮಗಾರಿ ಪೂರ್ಣಗೊಂಡಿದ್ದು, ರೈಲು ಓಡಾಟಕ್ಕೆ ದಿನಗಣನೆ ಶುರುವಾಗಿದೆ. ಈಗಾಗಲೇ ಮೆಟ್ರೋ ರೈಲ್ವೆ ಸುರಕ್ಷತೆ (CMRS) ಆಯುಕ್ತರು ಅನುಮತಿ ನೀಡಿದ್ದು, ಅಕ್ಟೋಬರ್ ತಿಂಗಳಲ್ಲೇ ವಿಸ್ತೃತ ಮಾರ್ಗದ ಉದ್ಘಾಟನೆಯಾಗುವ ಸಾಧ್ಯತೆ ಇದೆ. ಅಕ್ಟೋಬರ್ 3ರಂದು ಮೆಟ್ರೋ ರೈಲ್ವೆ ಸುರಕ್ಷತೆ ಆಯುಕ್ತರು ಪರಿಶೀಲನೆ ನಡೆಸಿ ಅನುಮೋದನೆ ನೀಡಿದ್ದರು. ಇದೀಗ ಈ ತಿಂಗಳ ಅಂತ್ಯದೊಳಗೆ ಮೆಟ್ರೊ ರೈಲು ಓಡಾಟ ಆರಂಭಿಸುವ ಗುರಿ ಇಟ್ಟುಕೊಂಡಿರುವ ಬಿಎಂಆರ್‌ಸಿಎಲ್, ದಿನಾಂಕ ನಿಗದಿಗಾಗಿ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದೆ.
ಕಾಮಗಾರಿ ಮಾತ್ರವಲ್ಲದೆ ಎಲ್ಲ ರೀತಿಯ ಪರೀಕ್ಷೆಗಳು ಕೂಡಾ ಮುಕ್ತಾಯಗೊಂಡಿವೆ. ಸುರಕ್ಷತಾ ಆಯುಕ್ತರು ಕೂಡಾ ವಾಣಿಜ್ಯ ಸಂಚಾರಕ್ಕೆ ಒಪ್ಪಿಗೆ ನೀಡಿದ್ದು ಉದ್ಘಾಟನೆಗೆ ದಿನ ನಿಗದಿಗಾಗಿ ಬಿಎಂಆರ್‌ಸಿಎಲ್ ಕಾಯುತ್ತಿದೆ.
ಈವರೆಗೆ ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ಸಿಲ್ಕ್ ಇನ್‌ಸ್ಟಿಟ್ಯೂಟ್‌ನಿಂದ ನಾಗಸಂದ್ರವರೆಗೆ ಮಾತ್ರವೇ ಮೆಟ್ರೋ ರೈಲು ಸೌಲಭ್ಯ ಅಸ್ತಿತ್ವದಲ್ಲಿತ್ತು. ಇದೀಗ ನಾಗಸಂದ್ರದಿಂದ ಮತ್ತು ಮಾದಾವರದವರೆಗೂ ಹಸಿರು ಮಾರ್ಗ ವಿಸ್ತರಣೆಗೊಂಡಿದ್ದು, ಉದ್ಘಾಟನೆಯೊಂದೇ ಬಾಕಿ ಉಳಿದಿದೆ. ಹಸಿರು ಮಾರ್ಗದಲ್ಲಿ ಬಹುನಿರೀಕ್ಷಿತ ವಿಸ್ತರಣೆಯ ಮಾರ್ಗ ಇದಾಗಿದೆ. ಜನನಿಬಿಡ ಪ್ರದೇಶದಲ್ಲಿ ರೈಲು ಓಡಾಟ ಆರಂಭವಾದ ನಂತರ ನಮ್ಮ ಮೆಟ್ರೋಗೆ ಆದಾಯ ಗಳಿಕೆಯೂ ಹೆಚ್ಚಾಗಲಿದೆ.
ಹಲವು ಕಾರಣಗಳಿಂದ 5 ವರ್ಷ ವಿಳಂಬ
ವಿಸ್ತರಣೆಗೊಂಡ ಮಾರ್ಗದಿಂದ ಹಸಿರು ಮಾರ್ಗಕ್ಕೆ 3.7 ಕಿಲೋಮೀಟರ್ ಹೆಚ್ಚುವರಿ ಮಾರ್ಗ ಸೇರ್ಪಡೆಯಾಗುತ್ತದೆ. ಈ ಹಿಂದೆಯೇ ಈ ಭಾಗದಲ್ಲಿ ರೈಲು ಓಡಾಡಬೇಕಿತ್ತು. ಆದರೆ ನೈಸ್ ರಸ್ತೆಯ ಬಳಿ ಭೂಸ್ವಾಧೀನ ಪ್ರಕ್ರಿಯೆ ದೊಡ್ಡ ಸವಾಲಾಗಿದ್ದ ಕಾರಣದಿಂದ ಐದು ವರ್ಷಗಳ ಕಾಲ ವಿಳಂಬವಾಯ್ತು. ಆ ಬಳಿಕ ಕೋವಿಡ್ 19 ಸಾಂಕ್ರಾಮಿಕ ರೋಗದಿಂದ ಮತ್ತೆ ಸಮಸ್ಯೆಗಳು ಎದುರಾಗಿದ್ದವು.
ಮೂರು ನಿಲ್ದಾಣಗಳು
ವಿಸ್ತೃತ ಮಾರ್ಗವು ಸಂಪೂರ್ಣ ಎಲಿವೇಟೆಡ್ ಮಾರ್ಗವಾಗಿದೆ. ಯಾವುದೇ ಅಂಡರ್‌ಗ್ರೌಂಡ್ ನಿಲ್ದಾಣಗಳು ಇಲ್ಲಿಲ್ಲ. ಇದರಲ್ಲಿ ಮೂರು ಹೊಸ ನಿಲ್ದಾಣಗಳು ಸೇರ್ಪಡೆಯಾಗಲಿವೆ. ಮಂಜುನಾಥ ನಗರ, ಚಿಕ್ಕಬಿದರಕಲ್ಲು ಹಾಗೂ ಮಾದಾವರಕ್ಕೆ ಹಸಿರು ಮಾರ್ಗ ಅಂತ್ಯವಾಗಲಿದೆ. ಈ ವಿಭಾಗದಲ್ಲಿ ಮೆಟ್ರೋ ಆರಂಭವಾದ ನಂತರ, ಪ್ರಮುಖ ಸ್ಥಳಗಳಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಸಂಪರ್ಕ ಸುಲಭವಾಗಲಿದೆ. ವಿಶೇಷವಾಗಿ ಪ್ರಮುಖ ಪ್ರದರ್ಶನಗಳು ಹಾಗೂ ಕಾರ್ಯಕ್ರಮಗಳನ್ನು ಆಯೋಜಿಸುವ ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರ (BIEC)ಕ್ಕೆ ಹತ್ತಿರವಾಗಲಿದೆ.
ಅಕ್ಟೋಬರ್ ತಿಂಗಳಲ್ಲೇ ಈ ಮಾರ್ಗದಲ್ಲಿ ವಾಣಿಜ್ಯ ಕಾರ್ಯಾಚರಣೆಯನ್ನು ಆರಂಭಿಸುವ ಬಿಎಂಆರ್‌ಸಿಎಲ್‌ನ ಯೋಜನೆಯಿಂದ ಪ್ರಯಾಣಿಕರಿಗೆ ಸುಧಾರಿತ ಮೆಟ್ರೋ ಪ್ರಯಾಣ ಸಿಗಲಿದೆ. ಮುಖ್ಯವಾಗಿ ತುಮಕೂರು ರಸ್ತೆಯಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಪ್ರಯಾಣ ಸುಲಭವಾಗಲಿದೆ. ಅಲ್ಲದೆ ಈ ಮಾರ್ಗದಲ್ಲಿ ಸಂಚಾರ ದಟ್ಟಣೆ ತುಸು ಸರಾಗವಾಗಲಿದೆ.