ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್; ಈ ಡಿಸೆಂಬರ್ ವೇಳೆಗೆ 22.29 ಕಿಮೀ ಸೇವೆಗೆ ಲಭ್ಯ, 2031 ರವರೆಗಿನ ಯೋಜನೆಗಳ ಮಾಹಿತಿ ಇಲ್ಲಿದೆ
ದಿನದಿಂದ ದಿನಕ್ಕೆ ನಮ್ಮ ಮೆಟ್ರೋಗೆ ಬೇಡಿಕೆ ಹೆಚ್ಚಾಗುತ್ತಲೇ ಇರುವುದರ ಪರಿಣಾಮವಾಗಿ ಬಿಎಂಆರ್‌ಸಿಎಲ್ ಮೆಟ್ರೋ ಸಂಚಾರ ಮಾರ್ಗವನ್ನು ವಿಸ್ತರಿಸುತ್ತಿದೆ. 2031 ರ ವೇಳೆ ಬೆಂಗಳೂರಿನಲ್ಲಿ ಒಟ್ಟು ಎಷ್ಟು ಕಿಲೋ ಮೀಟರ್ ಮೆಟ್ರೋ ಮಾರ್ಗ ಲಭ್ಯವಾಗಲಿದೆ ಅನ್ನೋದರ ಮಾಹಿತಿ ಇಲ್ಲಿದೆ. (ವರದಿ: ಎಚ್. ಮಾರುತಿ)
ಕಳೆದ ಮಂಗಳವಾರ ನಮ್ಮ ಮೆಟ್ರೋದಲ್ಲಿ 8.26 ಲಕ್ಷ ಪ್ರಯಾಣಿಕರು ಪ್ರಯಾಣಿಸುವ ಮೂಲ ಹೊಸ ದಾಖಲೆ ನಿರ್ಮಾಣವಾಗಿರುವುದು ಸರಿಯಷ್ಟೇ. 2022ರ ಆಗಸ್ಟ್ 15 ರಂದು 8.25 ಲಕ್ಷ ಪ್ರಯಾಣಿಕರು ನಮ್ಮ ಮೆಟ್ರೋದಲ್ಲಿ ಪ್ರಯಾಣಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಆದರೆ ಈ ದಾಖಲೆಯನ್ನು ಬ್ರೇಕ್ ಮಾಡಲಾಗಿದೆ. ಆಗಸ್ಟ್ 6 ರಂದು ಪಕ್ಷದ ಸಮಾವೇಶಕ್ಕೆ ಕಾಂಗ್ರೆಸ್ ನಮ್ಮ ಮೆಟ್ರೋ ಟಿಕೆಟ್‌ಗಳನ್ನು ಬುಕ್ ಮಾಡಿತ್ತು. ಹೀಗಾಗಿ ಅಂದು ಮೆಟ್ರೋ ಹೊಸ ದಾಖಲೆ ಬರೆದಿದೆ. ಬೆಂಗಳೂರಿನಲ್ಲಿ ಜನ ಸಂಚಾರ ಹೆಚ್ಚಾಗುತ್ತಿದ್ದು, ಮೆಟ್ರೋ ಮಾರ್ಗ ವಿಸ್ತರಣೆಗೆ ಬೇಡಿಕೆಗಳು ಹೆಚ್ಚುತ್ತಿವೆ.ಈ ವರ್ಷದ ಜೂನ್ 19 ರಂದು 8 ಲಕ್ಷ ಪ್ರಯಾಣಿಕರು ಪ್ರಯಾಣ ಮಾಡಿದ್ದರು. ಈ ಪ್ರತಿದಿನದ ಪ್ರಯಾಣಿಕರ ಸರಾಸರಿ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಾ ಬಂದಿತ್ತು. ಜನವರಿಯಲ್ಲಿ 7.01 ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದರೆ ಜೂನ್ ತಿಂಗಳಲ್ಲಿ 7.45 ಲಕ್ಷ ಪ್ರಯಾಣಿಕರು ನಮ್ಮ ಮೆಟ್ರೋದಲ್ಲಿ ಪ್ರಯಾಣ ಮಾಡಿದ್ದರು.
2023ರ ಅಕ್ಟೋಬರ್ ತಿಂಗಳಲ್ಲಿ ನೇರಳೆ ಮಾರ್ಗ ಸಂಪೂರ್ಣವಾಗಿ ಆರಂಭವಾದ ನಂತರ ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತ ಬಂದಿತ್ತು. ಪ್ರಸ್ತುತ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಮಾರ್ಗ 73.81 ಕಿಮೀಗಳಷ್ಟಿದ್ದು, ದೇಶದಲ್ಲೇ ಎರಡನೆಯ ಅತಿ ಉದ್ದದ ಮಾರ್ಗವಾಗಿದೆ. ಜೊತೆಗೆ ಮೆಟ್ರೋದ 101.74 ಕಿ.ಮೀ. ಮಾರ್ಗದ ಕಾಮಗಾರಿ ನಡೆಯುತ್ತಿದ್ದು, 2024ರ ಡಿಸೆಂಬರ್ ವೇಳೆಗೆ 22.29 ಕಿ.ಮೀ. ಪ್ರಯಾಣಕ್ಕೆ ಸಿದ್ದವಾಗುವ ಸಾಧ್ಯತೆಗಳಿವೆ.
2025ರ ಡಿಸೆಂಬರ್ ಅಂತ್ಯಕ್ಕೆ 21.26 ಕಿಮೀ. ಮತ್ತು ಜೂನ್ 2026ರ ವೇಳೆಗೆ 58.19 ಪ್ರಯಾಣಿಕರ ಸೇವೆಗೆ ಲಭ್ಯವಾಗಲಿದೆ. ಹೆಚ್ಚುವರಿಯಾಗಿ 81.24 ಕಿ.ಮೀ. ಮಾರ್ಗಕ್ಕೆ ವಿಸ್ತೃತ ಯೋಜನಾ ವರದಿ ಸಿದ್ದವಾಗುತ್ತಿದೆ. ಈ ಮಾರ್ಗವೂ ಸೇರ್ಪಡೆಯಾದರೆ 2031ರ ವೇಳೆಗೆ ಬೆಂಗಳೂರಿನ ನಮ್ಮ ಮೆಟ್ರೋ ಮಾರ್ಗ 256.79 ಕಿಮೀ. ಮಾರ್ಗ ರಚನೆಯಾಗಲಿದೆ. ಇದಲ್ಲದೆ 170.41 ಕಿ.ಮೀ. ಮಾರ್ಗಕ್ಕೆ ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ.
ನಮ್ಮ ಮೆಟ್ರೋದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾದ ಮಾತ್ರಕ್ಕೆ ಮೆಟ್ರೋದಲ್ಲಿ ಜನಜಂಗುಳಿ ಇರುವುದಿಲ್ಲ ಎಂದಲ್ಲ. ಕಚೇರಿ ಆರಂಭವಾಗುವ ಮತ್ತು ಮುಚ್ಚುವ ಸಮಯದಲ್ಲಿ ನಮ್ಮ ಮೆಟ್ರೋದಲ್ಲಿ ಜನಜಂಗುಳಿ ಇದ್ದೇ ಇರುತ್ತದೆ. ಮೆಟೋ ಹತ್ತಿಳಿಯಲು ಪ್ರಯಾಣಿಕರು ಹೈರಾಣಾಗಬೇಕಾಗುತ್ತದೆ.
ಪ್ರಸ್ತುತ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಬಿಎಂಆರ್ ಸಿಎಲ್ ಆರು ಕೋಚ್‌ಗಳ 57 ರೈಲುಗಳನ್ನು ಓಡಿಸುತ್ತಿದೆ. ನೇರಳೆ ಮಾರ್ಗದಲ್ಲಿ 34 ಮತ್ತು ಹಸಿರು ಮಾರ್ಗದಲ್ಲಿ 23 ರೈಲುಗಳು ಸಂಚಾರ ನಡೆಸುತ್ತಿವೆ. ನೇರಳೆ ಮಾರ್ಗದಲ್ಲಿ ಹೆಚ್ಚಿನ ಬೇಡಿಕೆ ಇರುವುದರಿಂದ ಹಸಿರು ಮಾರ್ಗದ ಕೆಲವು ರೈಲುಗಳನ್ನು ವರ್ಗಾಯಿಸಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಜನದಟ್ಟಣೆ ಇರುವ ಘಂಟೆಗಳಲ್ಲಿ ನಿರ್ವಹಣೆ ಮಾಡಲು ಪರಿಶೀಲನೆ ಮಾಡಲಾಗುತ್ತಿದೆ ಎಂದು ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ ರಾವ್ ತಿಳಿಸಿದ್ದಾರೆ. ಬೆಂಗಳೂರಿನ ಅತಿಹೆಚ್ಚು ಜನದಟ್ಟಣೆ ಇರುವ ನಿಲ್ದಾಣ ಎಂದರೆ ಮೆಜೆಸ್ಟಿಕ್ ನಿಲ್ದಾಣ.
ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಮಾರ್ಗಗಳನ್ನು ಬದಲಾಯಿಸಬಹುದಾಗಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಿದಂತೆ ಹೆಚ್ಚುವರಿಯಾಗಿ ಲಿಫ್ಟ್ ಗಳನ್ನು ಅಳವಡಿಸಲಾಗಿದೆ. ಇಲ್ಲಿ ಅವಘಡಗಳನ್ನು ತಪ್ಪಿಸಲು ಸ್ಕ್ರೀನ್ ಡೋರ್‌ಗಳನ್ನು ಅಳವಡಿಸಲು ಚಿಂತನೆ ನಡೆಸಲಾಗಿದೆ. ಬೇಡಿಕೆ ಹೆಚ್ಚಿದ್ದರೂ ಈ ವರ್ಷ ಹೊಸದಾಗಿ ಹೊಸ ರೈಲುಗಳನ್ನು ಸೇರ್ಪಡೆ ಮಾಡಲು ಸಾಧ್ಯವಾಗುತ್ತಿಲ್ಲ. ಮೆಟ್ರೋ ಕೋಚ್‌ಗಳನ್ನು ಒದಗಿಸಲು ಗುತ್ತಿಗೆ ಪಡೆದಿರುವ ಚೀನಾದ ಸಿಆರ್‌ಆರ್‌ಸಿ ನಂಜಾಗ್ ಪುಹೆನ್ ಕೋ. ಲಿ ಮತ್ತು ಭಾರತದ ತಿತಾಗಡ್ ರೈಲ್ ಸಿಸ್ಟಂ 2025ರ ವೇಳೆಗೆ ನೇರಳೆ ಮತ್ತು ಹಸಿರು ಮಾರ್ಗಗಳೆರಡಕ್ಕೂ 21 ರೈಲುಗಳನ್ನು ಒದಗಿಸಲಿದೆ.
ಈ ವರ್ಷದಲ್ಲಿ ಅತಿ ಹೆಚ್ಚು ಮಂದಿ ಪ್ರಯಾಣಿಸಿದ ದಿನಗಳನ್ನು ನೋಡುವುದಾದರೆ; ಆಗಸ್ಟ್ 6 ರಂದು 8.26 ಲಕ್ಷ ಪ್ರಯಾಣಿಕರು, ಜೂನ್ 19 ರಂದು 8,08,071 ಪ್ರಯಾಣಿಕರು, ಫೆಬ್ರವರಿ 24 ರಂದು 7,59,725 ಪ್ರಯಾಣಿಕರು ಹಾಗೂ ಜನವರಿ 25 ರಂದು 7,82,435 ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಸರಾಸರಿ ನೋಡುವುದಾದರೆ ಜೂನ್ ನಲ್ಲಿ 7,45,659 ಪ್ರಯಾಣಿಕರು, ಮೇ ನಲ್ಲಿ 7,18,170 ಪ್ರಯಾಣಿಕರು, ಫೆಬ್ರವರಿಯಲ್ಲಿ 7,05 ಲಕ್ಷ ಮತ್ತು ಜನವರಿಯಲ್ಲಿ 7,01 ಲಕ್ಷ ಪ್ರಯಾಣಿಕರು ನಮ್ಮ ಮೆಟ್ರೋದಲ್ಲಿ ಪ್ರಯಾಣ ಮಾಡಿದ್ದಾರೆ. (ವರದಿ: ಎಚ್. ಮಾರುತಿ)