ನೀರಿನ ಸಮಸ್ಯೆ ನಿವಾರಿಸಲು ಪಣ; ಬೆಂಗಳೂರು ಪೂರ್ವ ಭಾಗದಲ್ಲಿ ಹೊಸ ಕೊಳವೆ ಬಾವಿಗಳನ್ನು ಕೊರೆಸಲು ಜಲಮಂಡಳಿ ತೀರ್ಮಾನ-bengaluru new water crisis bwssb decided to drill new borewells in bangalore east mrt ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ನೀರಿನ ಸಮಸ್ಯೆ ನಿವಾರಿಸಲು ಪಣ; ಬೆಂಗಳೂರು ಪೂರ್ವ ಭಾಗದಲ್ಲಿ ಹೊಸ ಕೊಳವೆ ಬಾವಿಗಳನ್ನು ಕೊರೆಸಲು ಜಲಮಂಡಳಿ ತೀರ್ಮಾನ

ನೀರಿನ ಸಮಸ್ಯೆ ನಿವಾರಿಸಲು ಪಣ; ಬೆಂಗಳೂರು ಪೂರ್ವ ಭಾಗದಲ್ಲಿ ಹೊಸ ಕೊಳವೆ ಬಾವಿಗಳನ್ನು ಕೊರೆಸಲು ಜಲಮಂಡಳಿ ತೀರ್ಮಾನ

Bangalore Water Crisis: ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ನಿವಾರಣೆಗೆ ಮುಂದಾಗಿರುವ ಜಲಮಂಡಳಿ ನಗರದ ಪೂರ್ವ ಭಾಗದಲ್ಲಿ ಹೊಸದಾಗಿ ಬೋರ್‌ವೆಲ್‌ಗಳನ್ನು ಕೊರೆಸಲು ನಿರ್ಧರಿಸಿದೆ. (ವರದಿ: ಎಚ್. ಮಾರುತಿ)

ಬೆಂಗಳೂರು ಪೂರ್ವ ಭಾಗದಲ್ಲಿ ಹೊಸದಾಗಿ ಕೊಳವೆಬಾವಿಗಳನ್ನು ಕೊರೆಸಲು ಜಲಮಂಡಳಿ ಮುಂದಾಗಿದೆ.
ಬೆಂಗಳೂರು ಪೂರ್ವ ಭಾಗದಲ್ಲಿ ಹೊಸದಾಗಿ ಕೊಳವೆಬಾವಿಗಳನ್ನು ಕೊರೆಸಲು ಜಲಮಂಡಳಿ ಮುಂದಾಗಿದೆ.

ಬೆಂಗಳೂರು: ಕಳೆದ ಕೆಲ ದಿನಗಳಿಂದ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಉಂಟಾಗಿರುವ ನೀರಿನ ಸಮಸ್ಯೆಗೆ (Bangalore Water Crisis) ಪರಿಹಾರ ಕಂಡುಕೊಳ್ಳಲು ಜಲಮಂಡಳಿ ತನ್ನದೇ ಆದ ಯೋಜನೆಗಳನ್ನು ರೂಪಿಸುತ್ತಿದೆ. ಇದರ ಭಾಗವಾಗಿ ಬೆಂಗಳೂರು ಪೂರ್ವಭಾಗದಲ್ಲಿ ನೀರಿನ ಕೊರತೆಯನ್ನು ನಿಭಾಯಿಸಲು ಹೊಸ ಕೊಳವೆ ಬಾವಿಗಳನ್ನು ಕೊರೆಯಿಸಲು (Borewell) ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ನಿರ್ಧರಿಸಿದೆ. ಜೊತೆಗೆ ನಗರದಾದ್ಯಂತ ನೀರು ಕಡಿಮೆಯಾಗಿರುವ ಕೊಳವೆ ಬಾವಿಗಳ ಪುನಃಶ್ಚೇತನಕ್ಕೆ ಒತ್ತು ನೀಡಲು ತೀರ್ಮಾನ ಕೈಗೊಂಡಿದೆ.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಡಾ. ವಿ ರಾಮ್‌ ಪ್ರಸಾತ್‌ ಮನೋಹರ್‌ ನೇರ ಫೋನ್‌ಇನ್ ಕಾರ್ಯಕ್ರಮ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಸಾರ್ವಜನಿಕರು ನಿಷ್ಕ್ರಿಯಯಗೊಂಡಿರುವ ಹಾಗೂ ನೀರು ಕಡಿಮೆಯಾಗಿರುವ ಕೊಳವೆ ಬಾವಿಗಳನ್ನು ಪುನಃಶ್ಚೇತಗೊಳಿಸಲು ಒತ್ತಾಯಿಸಿದ್ದಾರೆ.

ಕಾವೇರಿ ನೀರಿನ ಸಂಪರ್ಕ ಇಲ್ಲದ ಪ್ರದೇಶಗಳಲ್ಲಿ ಕೊಳವೆ ಬಾವಿಗಳು ಪ್ರಮುಖ ಪಾತ್ರವಹಿಸುತ್ತಿವೆ. ಅಂತರ್ಜಲ ಕುಸಿತದಿಂದ ಕೊಳವೆ ಬಾವಿಗಳಲ್ಲಿ ನೀರು ಕಡಿಮೆಯಾಗುತ್ತಿದೆ. ಇವುಗಳನ್ನು ಪುನಃಶ್ಚೇತಗೊಳಿಸುವ ನಿಟ್ಟಿನಲ್ಲಿ ಜಲಮಂಡಳಿ ಈಗಾಗಲೇ ಕಾರ್ಯಪ್ರವೃತ್ತವಾಗಿದ್ದು, ಈ ಕಾರ್ಯವನ್ನು ಚುರುಕುಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಯೋಜನೆಯ ಸಮರ್ಪಕ ಅನುಷ್ಠಾನದ ಕುರಿತು ಥರ್ಡ್‌ ಪಾರ್ಟಿ ಇನ್‌ಸ್ಪೆಕ್ಷನ್‌ ಮಾಡಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಬೆಂಗಳೂರು ಪೂರ್ವ ಭಾಗದಲ್ಲಿನ ನೀರಿನ ಕೊರತೆಯನ್ನು ನಿಭಾಯಿಸುವ ನಿಟ್ಟಿನಲ್ಲಿ ಹೊಸ ಕೊಳವೆ ಬಾವಿಗಳನ್ನು ಕೊರೆಸಲು ಈಗಾಗಲೇ ಅನುಮತಿ ನೀಡಲಾಗಿದೆ. 30 ಕೊಳವೆ ಬಾವಿಗಳನ್ನು ಕೊರೆಸಲಾಗಿದ್ದು, ಇನ್ನೂ 20 ಕೊಳವೆ ಬಾವಿಗಳನ್ನು ಕೊರೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಂಸ್ಕರಿಸಿದ ನೀರಿನ ಬೇಡಿಕೆಯನ್ನು ಹೆಚ್ಚಿಸುವಲ್ಲಿ ಜಲಮಂಡಳಿ ಯಶಸ್ವಿ

ನಗರದಲ್ಲಿ ಸಂಸ್ಕರಿಸಿದ ನೀರಿನ ಬೇಡಿಕೆಯನ್ನು ಹೆಚ್ಚಿಸುವಲ್ಲಿ ಜಲಮಂಡಳಿ ಯಶಸ್ವಿಯಾಗಿದ್ದು, ಪ್ರತಿ ತಿಂಗಳು 10 ಲಕ್ಷ ಲೀಟರ್‌ಗೂ ಹೆಚ್ಚು ನೀರು ಬಳಸುವ 714 ಬಲ್ಕ್‌ ಬಳಕೆದಾರರಲ್ಲಿ, 127 ಬಲ್ಕ್‌ ಬಳಕೆದಾರರು ಸಂಸ್ಕರಿಸಿದ ನೀರಿಗೆ ಬೇಡಿಕೆ ಸಲ್ಲಿಸಿದ್ದಾರೆ. ಇವರಿಗೆ ಸಮೀಪದ ಜಲಮಂಡಳಿ ಎಸ್‌ ಟಿ ಪಿ ಹಾಗೂ ಖಾಸಗಿ ಎಸ್‌ ಟಿ ಪಿಗಳಿಂದ ಸಂಸ್ಕರಿಸಿದ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಅಧ್ಯಕ್ಷರು ಸೂಚಿಸಿದರು. ಸಂಸ್ಕರಿಸಿದ ನೀರು ಬಳಕೆಯನ್ನು ಪ್ರೋತ್ಸಾಹಿಸುವುದರಿಂದ ಕಾವೇರಿ ನೀರಿನ ಉಳಿತಾಯವಾಗಲಿದ್ದು, ಜಲಮಂಡಳಿ ಮೇಲಿನ ಒತ್ತಡ ಕಡಿಮೆಯಾಗಲಿದೆ. ಇವರಲ್ಲಿ 481 ಬಲ್ಕ್ ಗ್ರಾಹಕರು ಈಗಾಗಲೇ‌ ತಮ್ಮ ವ್ಯಾಪ್ತಿಯ ಪ್ರದೇಶದಲ್ಲಿ ಏರಿಯೇಟರ್‌ ಅಳವಡಿಸಿಕೊಂಡಿದ್ದಾರೆ.

ಸಂಸ್ಕರಿಸಿದ ನೀರಿಗೆ ಇನ್ನಷ್ಟು ರಿಯಾಯಿತಿ ನೀಡುವ ಬಗ್ಗೆ ಶೀಘ್ರ ತೀರ್ಮಾನಿಸಲಾಗುವುದು ಎಂದು ಅಧ್ಯಕ್ಷರು ಹೇಳಿದ್ದಾರೆ. ಬೆಂಗಳೂರು ನಗರದಲ್ಲಿ ಏರಿಯೇಟರ್‌ ಅಳವಡಿಸುವುದನ್ನು ಕಡ್ಡಾಯಗೊಳಿಸಿದ ನಂತರ ಈಗಾಗಲೇ ಸುಮಾರು 2,86,114 ನಲ್ಲಿಗಳಿಗೆ ಏರಿಯೇಟರ್‌ ಅಳವಡಿಸಲಾಗಿದೆ. ಜಲಮಂಡಳಿ ಅಧಿಕಾರಿಗಳು ಪ್ರತಿ ತಿಂಗಳೂ 10 ಲಕ್ಷಕ್ಕೂ ಹೆಚ್ಚು ಲೀಟರ್‌ ಬಳಕೆ ಮಾಡುವಂತಹ 714 ಬಲ್ಕ್ ಗ್ರಾಹಕರ ಸಮೀಕ್ಷೆ ನಡೆಸಿದ್ದಾರೆ. ಇವರು ಕಡ್ಡಾಯವಾಗಿ ಏರಿಯೇಟರ್‌ ಅಳವಡಿಸುವ ಬಗ್ಗೆ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ವರದಿ: ಎಚ್. ಮಾರುತಿ)

mysore-dasara_Entry_Point