ಕನ್ನಡ ಸುದ್ದಿ  /  ಕರ್ನಾಟಕ  /  ಗೃಹಜ್ಯೋತಿ ಯೋಜನೆಗೆ 1 ವರ್ಷ; 1.6 ಕೋಟಿ ಗ್ರಾಹಕರಿಗೆ ಅನುಕೂಲ, ಗುಣಮಟ್ಟದ ವಿದ್ಯುತ್ ಸರಬರಾಜಾಗುತ್ತಿಲ್ಲ ಎಂಬ ಗೊಣಗಾಟ ನಿಂತಿಲ್ಲ

ಗೃಹಜ್ಯೋತಿ ಯೋಜನೆಗೆ 1 ವರ್ಷ; 1.6 ಕೋಟಿ ಗ್ರಾಹಕರಿಗೆ ಅನುಕೂಲ, ಗುಣಮಟ್ಟದ ವಿದ್ಯುತ್ ಸರಬರಾಜಾಗುತ್ತಿಲ್ಲ ಎಂಬ ಗೊಣಗಾಟ ನಿಂತಿಲ್ಲ

ಕರ್ನಾಟಕ ಗೃಹಜ್ಯೋತಿ ಯೋಜನೆಗೆ 1 ವರ್ಷ ಪೂರ್ಣವಾಗಿದೆ. ಈ ಅವಧಿಯಲ್ಲಿ ರಾಜ್ಯದ 1.6 ಕೋಟಿ ಗ್ರಾಹಕರಿಗೆ ಅನುಕೂಲವಾಗಿದೆ. ಆದರೂ, ಗುಣಮಟ್ಟದ ವಿದ್ಯುತ್ ಸರಬರಾಜಾಗುತ್ತಿಲ್ಲ ಎಂಬ ಗೊಣಗಾಟ ನಿಂತಿಲ್ಲ. (ವರದಿ- ಎಚ್. ಮಾರುತಿ, ಬೆಂಗಳೂರು).

ಗೃಹಜ್ಯೋತಿ ಯೋಜನೆಗೆ 1 ವರ್ಷ; 1.6 ಕೋಟಿ ಗ್ರಾಹಕರಿಗೆ ಅನುಕೂಲ, ಗುಣಮಟ್ಟದ ವಿದ್ಯುತ್ ಸರಬರಾಜಾಗುತ್ತಿಲ್ಲ ಎಂಬ ನಿಲ್ಲದ ಗೊಣಗಾಟ (ಸಾಂಕೇತಿಕ ಚಿತ್ರ)
ಗೃಹಜ್ಯೋತಿ ಯೋಜನೆಗೆ 1 ವರ್ಷ; 1.6 ಕೋಟಿ ಗ್ರಾಹಕರಿಗೆ ಅನುಕೂಲ, ಗುಣಮಟ್ಟದ ವಿದ್ಯುತ್ ಸರಬರಾಜಾಗುತ್ತಿಲ್ಲ ಎಂಬ ನಿಲ್ಲದ ಗೊಣಗಾಟ (ಸಾಂಕೇತಿಕ ಚಿತ್ರ)

ಬೆಂಗಳೂರು: ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಗೆ ಜುಲೈ 1 ಕ್ಕೆ ಒಂದು ವರ್ಷ. ಈ ಯೋಜನೆಯಡಿಯಲ್ಲಿ ರಾಜ್ಯದ ಪ್ರತಿ ಗ್ರಾಹಕರಿಗೆ ಮಾಸಿಕ ಗರಿಷ್ಠ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುತ್ತದೆ. 2023 ರ ಜುಲೈ 1ರಿಂದ ಉಚಿತ ವಿದ್ಯುತ್ ನೀಡಲು ಆರಂಭಿಸಿದ್ದು, ಮೊದಲ ಉಚಿತ ಬಿಲ್ ಆಗಸ್ಟ್ ತಿಂಗಳಲ್ಲಿ ಗ್ರಾಹಕರಿಗೆ ನೀಡಲಾಗಿದೆ.

ಜೂನ್ 16 ರಿಂದ ಸೇವಾಸಿಂಧು ಪೋರ್ಟಲ್ ನಲ್ಲಿ ನೋಂದಣಿ ಆರಂಭವಾಗಿದ್ದು ರಾಜ್ಯದ 2 ಕೋಟಿ ಗ್ರಾಹಕರ ಪೈಕಿ 26, ಮೇ 2024 ರವರೆಗೆ 1.6 ಕೋಟಿ ಕೋಟಿ ಗ್ರಾಹಕರು ನೋಂದಣಿ ಮಾಡಿಕೊಂಡಿದ್ದಾರೆ. ಇಂಧನ ಇಲಾಖೆಯ ಮಾಹಿತಿ ಪ್ರಕಾರ 200 ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಬಳಸಿದ 2 ಲಕ್ಷ ಗ್ರಾಹಕರನ್ನು ಈ ಯೋಜನೆಯಿಂದ ಹೊರಗಿಡಲಾಗಿದೆ.

ಗೃಹಜ್ಯೋತಿ ಯೋಜನೆ; ಎಲ್ಲಿ ಎಷ್ಟು ಫಲಾನುಭವಿಗಳು

2023-24 ರ ಆರ್ಥಿಕ ವರ್ಷದಲ್ಲಿ ಬೆಸ್ಕಾಂ ವ್ಯಾಪ್ತಿಯಲ್ಲಿ 69 ಲಕ್ಷ, ಮೆಸ್ಕಾಂ ವ್ಯಾಪ್ತಿಯಲ್ಲಿ 16 ಲಕ್ಷ, ಹೆಸ್ಕಾಂ ವ್ಯಾಪ್ತಿಯಲ್ಲಿ 33 ಲಕ್ಷ, ಜೆಸ್ಕಾಂ ವ್ಯಾಪ್ತಿಯಲ್ಲಿ 21 ಲಕ್ಷ, ಸೆಸ್ಕ್ ವ್ಯಾಪ್ತಿಯಲ್ಲಿ 23 ಲಕ್ಷ ಗ್ರಾಹಕರು ನೋಂದಣಿ ಮಾಡಿಕೊಂಡಿದ್ದಾರೆ. ಹೆಚ್ಚು ಕಡಿಮೆ ರಾಜ್ಯಾದ್ಯಂತ ಪ್ರತಿ ತಿಂಗಳು 1.57 ಕೋಟಿ ಬಿಲ್ ಗಳನ್ನು ವಿತರಿಸಲಾಗುತ್ತಿದೆ. ಇದರಲ್ಲಿ 1.09 ಕೋಟಿ ಶೂನ್ಯ ಬಿಲ್ ಗಳಾಗಿವೆ. ಕೇವಲ 48.8 ಲಕ್ಷ ಗ್ರಾಹಕರು ಬಳಸಿದ ವಿದ್ಯುತ್ ಗೆ ಬಿಲ್ ಕಟ್ಟುತ್ತಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಬೆಸ್ಕಾಂ ವ್ಯಾಪ್ತಿಯಲ್ಲಿ 69,22,078 ಗ್ರಾಹಕರು ನೋಂದಣಿ ಮಾಡಿಕೊಂಡಿದ್ದು, 65,31,089 ಬಿಲ್ ವಿತರಿಸಲಾಗಿದೆ. ಮೆಸ್ಕಾಂ ವ್ಯಾಪ್ತಿಯಲ್ಲಿ 16,89,535 ಗ್ರಾಹಕರು ನೋಂದಣಿ ಮಾಡಿಕೊಂಡಿದ್ದು, 15,83,406 ಬಿಲ್ ವಿತರಿಸಲಾಗಿದೆ. ಹೆಸ್ಕಾಂ ವ್ಯಾಪ್ತಿಯಲ್ಲಿ 32,91,724 ಗ್ರಾಹಕರು ನೋಂದಣಿ ಮಾಡಿಕೊಂಡಿದ್ದು, 32,76,127 ಬಿಲ್ ವಿತರಿಸಲಾಗಿದೆ. ಜೆಸ್ಕಾಂ ವ್ಯಾಪ್ತಿಯಲ್ಲಿ 21,54,179 ಗ್ರಾಹಕರು ನೋಂದಣಿ ಮಾಡಿಕೊಂಡಿದ್ದು, 20,69,821 ಬಿಲ್ ವಿತರಿಸಲಾಗಿದೆ. ಸೆಸ್ಕ್ ವ್ಯಾಪ್ತಿಯಲ್ಲಿ 23,77,071 ಗ್ರಾಹಕರು ನೋಂದಣಿ ಮಾಡಿಕೊಂಡಿದ್ದು, 22,46,388 ಬಿಲ್ ವಿತರಿಸಲಾಗಿದೆ.

ಗುಣಮಟ್ಟದ ವಿದ್ಯುತ್ ಸರಬರಾಜು ಕೊರತೆ

ಸರಕಾರವೇನೋ ಉಚಿತ ವಿದ್ಯುತ್ ಸರಬರಾಜು ಮಾಡುತ್ತಿದೆ. ಆದರೆ ಗುಣಮಟ್ಟದ ವಿದ್ಯುತ್ ಸರಬರಾಜಾಗುತ್ತಿಲ್ಲ ಎಂಬ ದೂರು ಇದ್ದೇ ಇದೆ. ಸಿಂಗಲ್ ಫೇಸ್ ವಿದ್ಯುತ್ ದೂರು ಕುರಿತು ವ್ಯಾಪಕವಾಗಿದ್ದು ಪರಿಹಾರ ಇಲ್ಲ ಎಂಬಂತಾಗಿದೆ.

ರಾಜ್ಯದ ಒಟ್ಟು ವಿದ್ಯುತ್ ವಿತರಣೆಯಲ್ಲಿ ಶೇ.50 ರಷ್ಟು ವಿದ್ಯುತ್ ಅನ್ನು ಬೆಂಗಳೂರು ಸೇರಿದಂತೆ ಬೆಸ್ಕಾಂ ವ್ಯಾಪ್ತಿಯಲ್ಲಿ ಸರಬರಾಜಾಗುತ್ತಿದೆ. ಅತ್ತ್ಯುತ್ತಮ ಸಾಫ್ಟ್ ವೇರ್ ಅಳವಡಿಸಿಕೊಂಡು ಗೃಹಜ್ಯೋತಿ ಯೋಜನೆಯನ್ನು ಅಳವಡಿಸಿಕೊಂಡ ವಿದ್ಯುತ್ ಸರಬರಾಜು ಕಂಪನಿ ಎಂದರೆ ಬೆಸ್ಕಾಂ ಮಾತ್ರ.

ಬೆಂಗಳೂರು ನಗರದಲ್ಲಿ ಅನೇಕ ಪ್ರಜ್ಞಾವಂತರು ಉಚಿತ ವಿದ್ಯುತ್ ಯೋಜನೆಯನ್ನು ಬಿಟ್ಟು ಕೊಟ್ಟಿದ್ದಾರೆ. ಇದರಿಂದ ಇಲಾಖೆಗೆ ಉಳಿತಾಯವೂ ಆಗಿದೆ.

ಗೃಹಜ್ಯೋತಿ ಯೋಜನೆಗೆ ಸೇರಿಕೊಳ್ಳಲು ಈಗಲೂ ಅವಕಾಶವಿದ್ದು ಸೇವಾ ಸಿಂಧು ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಆದರೆ ಬಾಡಿಗೆದಾರರ ಗೊಂದಲ ಇನ್ನೂ ಮುಂದುವರೆದಿದೆ. ಮನೆ ಬದಲಾಯಿಸಿದಾಗ ಕೆಲವರಿಗೆ ಕಷ್ಟವಾಗುತ್ತಿದೆ. ಹಿಂದಿನ ಬಾಡಿಗೆದಾರರು ಬಳಸುತ್ತಿದ್ದ ಯೂನಿಟ್ ಗಳ ಆಧಾರದ ಉಚಿತ ವಿದ್ಯುತ್ ನಿಗದಿಯಾಗುತ್ತಿದ್ದು, ತೊಂದರೆ ಉಂಟಾಗುತ್ತಿದೆ ಎಂದು ಬಾಡಿಗೆ ಮನೆಯವರು ಅಭಿಪ್ರಾಯಪಡುತ್ತಾರೆ.

ಒಂದು ಆರ್. ಆರ್. ನಂಬರ್ ಗೆ ಒಂದು ಮನೆಗೆ ಮಾತ್ರ ಗೃಹಜ್ಯೋತಿ ಸೌಲಭ್ಯ ಎಂದು ನಿಯಮ ರೂಪಿಸಿರುವುದೂ ಬಾಡಿಗೆದಾರರಿಗೆ ಸ್ವಲ್ಪ ಕಷ್ಟವಾಗುತ್ತಿದೆ. ಹಳೆಯ ಮೀಟರ್ ನಿಂದ ಡಿಲಿಂಕ್ ಮಾಡಿಕೊಂಡು ಹೊಸದಾಗಿ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಈ ಸಾಫ್ಟ್ ವೇರ್ ಅನ್ನು ಇ- ಆಡಳಿತಕ್ಕೆ ನೀಡಲಾಗಿದ್ದು ಪರಿಶೀಲನೆ ನಡೆಯುತ್ತಿದೆ. ಶೀಘ್ರದಲ್ಲೇ ಗ್ರಾಹಕರಿಗೆ ಈ ಸಾಫ್ಟ್ ವೇರ್ ಬಳಕೆಗೆ ಲಭ್ಯವಾಗಲಿದೆ ಎಂದು ಇಂಧನ ಇಲಾಖೆ ಮೂಲಗಳು ತಿಳಿಸಿವೆ.

ನಗರ ಪ್ರದೇಶಗಳಿಗಿಂತ ಗ್ರಾಮೀಣ ಭಾಗದ ಜನರಿಗೆ ಈ ಯೋಜನೆಯಿಂದ ಹೆಚ್ಚಿನ ಅನುಕೂಲವಾಗಿದೆ. ವಿದ್ಯುತ್ ಬಿಲ್ ನಿಂದ ಉಳಿತಾಯವಾಗುವ ಹಣ ಮಕ್ಕಳ ಶಿಕ್ಷಣ, ಆಸ್ಪತ್ರೆ ದಿನಸಿ ಖರ್ಚಿಗೆ ಬಳಸುತ್ತಿದ್ದೇವೆ ಎಂದು ಹೇಳುತ್ತಾರೆ. ಬಹುತೇಕ ಕುಟುಂಬಗಳಿಗೆ 150-250 ರೂ. ಮತ್ತು ಬೆಂಗಳೂರಿನ ನಾಗರಿಕರಿಗೆ 700-800 ರೂಪಾಯಿವರೆಗೆ ಉಳಿತಾಯವಾಗುತ್ತಿದೆ. ಈ ಯೋಜನೆ ಉಳ್ಳವರಿಗೆ ತಲುಪಬೇಕು ಮತ್ತು ಸರ್ಕಾರದ ಬೊಕ್ಕಸಕ್ಕೆ ನಷ್ಟ ಆಗಬಾರದು ಎಂದರೆ ಆರ್ಥಿಕವಾಗಿ ಬಲಿಷ್ಠವಾದ ಕುಟುಂಬಗಳು ಗೃಹಜ್ಯೋತಿ ಸೇರಿದಂತೆ ಐದು ಗ್ಯಾರಂಟಿ ಯೋಜನೆಗಳಿಂದ ಹೊರ ಬರಬೇಕು. ಆಗ ಮಾತ್ರ ಸರ್ಕಾರದ ಯೋಜನೆಗಳು ಸಾಫಲ್ಯ ಕಾಣುತ್ತವೆ.

(ವರದಿ- ಎಚ್. ಮಾರುತಿ, ಬೆಂಗಳೂರು).