ಕನ್ನಡ ಸುದ್ದಿ  /  Karnataka  /  Bengaluru News 12 Arrested For Killing Rowdy Sheeter Dinesh In Bengaluru Hotel Karnataka Crime News Mrt

ಬೆಂಗಳೂರು ರೌಡಿ ಕೇರಂ ದಿನೇಶ್‌ ಕೊಲೆ ಪ್ರಕರಣ; ಜತೆಯಲ್ಲಿದ್ದ ಸಹಚರರಿಂದಲೇ ಹತ್ಯೆ, 12 ಆರೋಪಿಗಳ ಬಂಧನ

ಬೆಂಗಳೂರು ರೌಡಿ ಕೇರಂ ದಿನೇಶ್‌ ಕೊಲೆ ಪ್ರಕರಣ ಭೇದಿಸಿದ ಪೊಲೀಸರು, 12 ಆರೋಪಿಗಳನ್ನು ಬಂಧಿಸಿದ್ದಾರೆ. ಜೊತೆಯಲ್ಲಿದ್ದ ಸಹಚರರಿಂದಲೇ ಹತ್ಯೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದು, ವಿವರ ವರದಿ ಇಲ್ಲಿದೆ. (ವರದಿ - ಎಚ್. ಮಾರುತಿ, ಬೆಂಗಳೂರು)

ಬೆಂಗಳೂರು ಅಪರಾಧ ಸುದ್ದಿ (ಸಾಂಕೇತಿಕ ಚಿತ್ರ)
ಬೆಂಗಳೂರು ಅಪರಾಧ ಸುದ್ದಿ (ಸಾಂಕೇತಿಕ ಚಿತ್ರ)

ಬೆಂಗಳೂರು: ಬಾಣಸವಾಡಿ ಠಾಣೆ ವ್ಯಾಪ್ತಿಯಲ್ಲಿ ನಡೆದ ರೌಡಿ ದಿನೇಶ್‌ಕುಮಾರ್ ಅಲಿಯಾಸ್ ಕೇರಂ ದಿನೇಶ್‌ ಕೊಲೆ ಪ್ರಕರಣದಲ್ಲಿ 12 ಆರೋಪಿಗಳನ್ನು ಬಂಧಿಸಲಾಗಿದೆ. ಕೊತ್ತನೂರು ನಿವಾಸಿ ದಿನೇಶ್‌ (35) ನನ್ನು ಕಮ್ಮನಹಳ್ಳಿ ಬಳಿಯ ಸರ್ವೀಸ್ ಅಪಾರ್ಟ್‌ಮೆಂಟ್‌ವೊಂದರಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಕೆಲವು ರೌಡಿಗಳು ಸೇರಿ 12 ಆರೋಪಿಗಳನ್ನು ಡಿಜಿ ಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ರೌಡಿಗಳಾದ ಅಜಯ್ ಕ್ರಿಸ್ಟೊಫರ್, ದಿಲೀಪ್‌ ಸಾಗರ್ ಅಲಿಯಾಸ್ ಸ್ಪೀಡ್, ಗೌತಮ್, ದರ್ಶನ್, ಅರವಿಂದ್, ದಿವಾಕರ್, ನಿಖಿಲ್ ಅಲಿಯಾಸ್ ವಿಕ್ಕಿ, ಮೆಲ್ವಿನ್, ಕಾರ್ತಿಕ್, ಶೇಖರ್ ಸತೀಶ್ ಹಾಗೂ ಕಿಶೋರ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾರ್ಚ್ 27ರಂದು ಈ ಕೊಲೆ ನಡೆದಿತ್ತು. ಕಮರ್ಷಿಯಲ್ ಸ್ಟ್ರೀಟ್ ಹಾಗೂ ಜೆ.ಸಿ.ನಗರ ಠಾಣೆಗಳ ರೌಡಿ ಪಟ್ಟಿಯಲ್ಲಿ ದಿನೇಶ್‌ಕುಮಾರ್ ಹೆಸರಿತ್ತು. ಈತ ದರೋಡೆ, ಸುಲಿಗೆ, ಜೀವ ಬೆದರಿಕೆ ಸೇರಿ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದ.

ಬಂಧಿತ ರೌಡಿ ದಿಲೀಪ್‌ ಸಾಗರ್ ವಿರುದ್ಧವೂ ವಿವಿಧ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದವು. ಸಾಗರ್ ಮತ್ತು ಅಜಯ್ ಅವರೂ ರೌಡಿ ಪಟ್ಟಿಯಲ್ಲಿದ್ದು, ಇವರ ವಿರುದ್ಧ ಕೊತ್ತನೂರು, ರಾಮಮೂರ್ತಿ ನಗರ ಮತ್ತು ಬಾಣಸವಾಡಿ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು ಎಂದು ಪೊಲೀಸರು ಹೇಳಿದರು.

ಎರಡು ಗುಂಪುಗಳ ನಡುವಿನ ದ್ವೇಷ ಕೊಲೆಗೆ ಕಾರಣ ಶಂಕೆ

ದಿನೇಶ್ ಹಾಗೂ ದಿಲೀಪ್‌ ಸಾಗರ್ ನಡುವೆ ಹಲವು ವರ್ಷಗಳಿಂದ ದ್ವೇಷವಿತ್ತು. ಎರಡು ಗುಂಪುಗಳ ನಡುವೆ ಮಾರಾಮಾರಿಯೂ ನಡೆದಿತ್ತು. ಇದೇ ಕಾರಣಕ್ಕೆ ದಿಲೀಪ್‌ ಸಾಗರ್ ತಂಡ ದಿನೇಶ್ ನನ್ನು ಹತ್ಯೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ದಿಲೀಪ್‌ ಸಾಗರ್‌ನನ್ನೇ ಹತ್ಯೆ ಮಾಡಲು ದಿನೇಶ್ ಸಂಚು ರೂಪಿಸಿದ್ದ. ತನ್ನ ಸಹಚರರಿಗೆ ಕೊಲೆಯ ರೂಪುರೇಖೆಯ ಮಾಹಿತಿ ಹಂಚಿಕೊಂಡಿದ್ದ. ಈ ವಿಷಯವನ್ನು ದಿಲೀಪ್‌ ತಿಳಿದುಕೊಂಡಿದ್ದ. ಕೊಲೆಗೆ ಸಂಚು ರೂಪಿಸಿದವನನ್ನೇ ದಿಲೀಪ್‌ ಬಲಿ ತೆಗೆದುಕೊಂಡಿದ್ದ. ದಿನೇಶ್‌ ಆಪ್ತರನ್ನು ತನ್ನತ್ತ ಸೆಳೆದುಕೊಂಡಿದ್ದ ದಿಲೀಪ್‌ ಹಣದ ಆಮಿಷವೊಡ್ಡಿದ್ದ. ಸಮಯ ನೋಡಿ ದಿನೇಶ್‌ನನ್ನು ಹತ್ಯೆ ಮಾಡುವಂತೆ ಸೂಚಿಸಿದ್ದ.

ಯೋಜಿತ ರೀತಿಯಲ್ಲೇ ದಿನೇಶ್ ಹತ್ಯೆ

ರೌಡಿ ಕೇರಂ ದಿನೇಶ್ ಹತ್ಯೆ ಬಹಳ ಯೋಜಿತವಾಗಿ ನಡೆದಿತ್ತು. ದಿನೇಶ್‌ ತನ್ನ ಸಹಚರರೊಂದಿಗೆ ಒಂದು ದಿನದ ಮಟ್ಟಿಗೆ ಬಾಡಿಗೆ ಪಡೆಯಲು ಸರ್ವೀಸ್ ಅಪಾರ್ಟ್‌ಮೆಂಟ್‌ಗೆ ಬಂದಿದ್ದ. ಸೋಫಾ ಮೇಲೆ ದಿನೇಶ್ ಕುಳಿತಿದ್ದ. ಸಹಚರರ ಪೈಕಿ ಇಬ್ಬರು, ಹಣ ಪಾವತಿಸಲು ಕೌಂಟರ್ ಬಳಿ ಹೋಗಿದ್ದರು. ನಗದು ಮಾತ್ರ ಸ್ವೀಕರಿಸುವುದಾಗಿ ಹೋಟೆಲ್ ಸಿಬ್ಬಂದಿ ಹೇಳಿದ್ದರಿಂದ ಅವರು ಹಣ ತರುವುದಕ್ಕಾಗಿ ಅಲ್ಲಿಂದ ಸಮೀಪದ ಎಟಿಎಂಗೆ ಹೋಗಿದ್ದರು. ಇದೇ ಸಂದರ್ಭದಲ್ಲಿ ಸರ್ವೀಸ್ ಅಪಾರ್ಟ್‌ಮೆಂಟ್‌ಗೆ ನುಗ್ಗಿದ ದಿಲೀಪ್ ಸಹಚರರು ಮತ್ತು ದಿನೇಶ್ ಜೊತೆಗಿದ್ದವರು ದಿನೇಶ್‌ನನ್ನು ಕೊಂದು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಮಾರಕಾಸ್ತ್ರಗಳನ್ನು ಜೊತೆಯಲ್ಲೇ ಇಟ್ಟುಕೊಂಡಿದ್ದರು ಎಂದು ಗೊತ್ತಾಗಿದೆ. ಈ ಹತ್ಯೆ ಬಳಿಕ ಆರೋಪಿಗಳು ಎಲ್ಲರೂ ಸ್ಥಳದಿಂದ ಪರಾರಿಯಾಗಿದ್ದರು. ಪೊಲೀಸ್ ತನಿಖೆಯ ಬಳಿಕ ಹತ್ಯೆ ನಡೆದ ಸ್ಥಳದಲ್ಲಿದ್ದವರನ್ನು ಗುರುತಿಸಲಾಗಿದೆ. ಆನಂತರ ತನಿಖೆ ತೀವ್ರಗೊಳಿಸಿದ ಪೊಲೀಸರು, ಶಂಕಿತ ಆರೋಪಿಗಳನ್ನು ಬಂಧಿಸಲು ನಾಲ್ಕು ತಂಡಗಳನ್ನು ರಚಿಸಿದ್ದರು. ಸದ್ಯ 12 ಶಂಕಿತ ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

(ವರದಿ - ಎಚ್. ಮಾರುತಿ, ಬೆಂಗಳೂರು)

IPL_Entry_Point