BPL Card; ಅನರ್ಹ ಕಾರಣ 12 ಲಕ್ಷ ಬಿಪಿಎಲ್ ಕಾರ್ಡ್ ರದ್ದಾಗುವ ಸಾಧ್ಯತೆ, ಈ ಕುಟುಂಬದವರಿಗೆ ಅನ್ನಭಾಗ್ಯ ಸಿಗೋದು ಡೌಟ್
BPL Cards at Risk; ಕರ್ನಾಟಕದಲ್ಲಿ ರೇಷನ್ ಕಾರ್ಡ್ ಕೆವೈಸಿ ಮೂಲಕ ಆಧಾರ್ ಮತ್ತು ರೇಷನ್ ಕಾರ್ಡ್ ಲಿಂಕ್ ಆದಾಗ, ತೆರಿಗೆ ಪಾವತಿಸುತ್ತಿದ್ದವರು, ಸರ್ಕಾರಿ ಉದ್ಯೋಗಿಗಳು ಯಾರೆಂಬುದು ಬಹಿರಂಗವಾಗಿದೆ. ಹೀಗಾಗಿ, ಅನರ್ಹ ಕಾರಣ 12 ಲಕ್ಷ ಬಿಪಿಎಲ್ ಕಾರ್ಡ್ ರದ್ದಾಗುವ ಸಾಧ್ಯತೆ, ಈ ಕುಟುಂಬದವರಿಗೆ ಅನ್ನಭಾಗ್ಯ ಸಿಗೋದು ಡೌಟ್. ಇದರ ವಿವರ ಇಲ್ಲಿದೆ.
ಬೆಂಗಳೂರು: ಕರ್ನಾಟಕ ಸರ್ಕಾರದ ಮೇಲೆ ಗ್ಯಾರೆಂಟಿ ಹೊರೆ ಹೆಚ್ಚಾಗುತ್ತಿರುವ ಕಾರಣ, ಈ ಯೋಜನೆಗಳ ಮಾನದಂಡವನ್ನು ಪರಿಷ್ಕರಿಸುವುದರ ಕಡೆಗೆ ಸರ್ಕಾರ ಗಮನಹರಿಸಿತ್ತು. ಅಲ್ಲದೆ, ಫಲಾನುಭವಿಗಳ ಪಟ್ಟಿಯನ್ನೂ ಕೂಲಂಕಷವಾಗಿ ಪರಿಶೀಲಿಸಿ ಅನರ್ಹರನ್ನು ಯೋಜನೆಯಿಂದ ಹೊರಗಿಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ತಿಂಗಳು ಅಧಿಕಾರಿಗಳಿಗೆ ಸೂಚಿಸಿದ್ದರು.
ಇದರಂತೆ, ಈಗ “ಅನರ್ಹತೆ”ಯ ಕಾರಣ ಕರ್ನಾಟಕದ 12 ಲಕ್ಷ ಕುಟುಂಬಗಳಿಗೆ ನೀಡಲಾಗಿರುವ ಬಿಪಿಎಲ್ ಕಾರ್ಡ್ ರದ್ದುಗೊಳ್ಳುವ ಅಪಾಯದಲ್ಲಿದೆ. ಈ ಕುಟುಂಬಗಳಿಗೆ ಸಂದಾಯವಾಗುತ್ತಿದ್ದ ಗ್ಯಾರೆಂಟಿ ಸೌಲಭ್ಯ ಸ್ಥಗಿತಗೊಂಡರೆ ಸರ್ಕಾರಕ್ಕೆ 1,500 ಕೋಟಿ ರೂಪಾಯಿ ಉಳಿತಾಯವಾಗಲಿದೆ ಎಂಬ ಲೆಕ್ಕಾಚಾರ ಸರಕಾರದ್ದು.
ಕರ್ನಾಟಕ ಸರ್ಕಾರದ ಐದು ಗ್ಯಾರಂಟಿಗಳ ವೆಚ್ಚವು ಹಣಕಾಸಿನ ಹೊರೆ ಉಂಟುಮಾಡುತ್ತಿರುವುದನ್ನು ಗಮನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜುಲೈ 8 ರಂದು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ರಾಜ್ಯದ ಎಲ್ಲ ಅನರ್ಹ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಗೊಳಿಸುವಂತೆ ಆದೇಶಿಸಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ಮೇರೆಗೆ ಶುರುವಾದ ಕಾರ್ಯಾಚರಣೆ
ಜಿಲ್ಲಾಧಿಕಾರಿಗಳು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜ್ಯದ ಜನಸಂಖ್ಯೆಯ 80 ಪ್ರತಿಶತದಷ್ಟು ಜನರಲ್ಲಿ ಬಿಪಿಎಲ್ ಕಾರ್ಡ್ ಇದೆ. ತಮಿಳುನಾಡಿನಲ್ಲಿ ಕೇವಲ 40 ಪ್ರತಿಶತ ಬಿಪಿಎಲ್ ಕಾರ್ಡ್ ಇರುವಂಥದ್ದು. ಇಷ್ಟೊಂದು ವ್ಯತ್ಯಾಸ ಬರಲಾರದು. ಹೀಗಾಗಿ ಕೂಲಂಕಷವಾಗಿ ಪರಿಶೀಲಿಸಿ ಅಕ್ರಮ ಕಾರ್ಡ್‌ಗಳನ್ನು ರದ್ದುಗೊಳಿಸಿ ಎಂದು ಹೇಳಿದ್ದರು.
ಇದರಂತೆ, ಸದ್ದಿಲ್ಲದೆ ನಡೆಯುತ್ತಿರುವ ಈ ಕಾರ್ಯಾಚರಣೆಯಲ್ಲಿ ಈಗ 12 ಲಕ್ಷ ಬಿಪಿಎಲ್ ಕಾರ್ಡುಗಳು ಅನರ್ಹತೆ ಪಟ್ಟಿ ಸೇರಿವುದು ಬಹುತೇಕ ಖಚಿತವಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಅನಾಯಾಸವಾಗಿ 1,500 ಕೋಟಿ ರೂಪಾಯಿ ಸರ್ಕಾರದ ಬೊಕ್ಕಸದಲ್ಲಿ ಉಳಿಯಲಿದೆ ಎಂದು ಅಧಿಕಾರಿಗಳು ಹೇಳುತ್ತಿರುವುದಾಗಿ ಉದಯವಾಣಿ ವರದಿ ಮಾಡಿದೆ.
ಕರ್ನಾಟಕದಲ್ಲಿ ಅನರ್ಹತೆ ಮಾನದಂಡದಲ್ಲಿ ಗುರುತಿಸಲಾದ 12 ಲಕ್ಷ ಕಾರ್ಡುದಾರರ ಬಳಿ ಅಂತ್ಯೋದಯ, ಆದ್ಯತಾ ಪಡಿತರ ಚೀಟಿ (ಬಿಪಿಎಲ್)ಗಳಿರುವುದು ಖಚಿತವಾಗಿದೆ. ಹೀಗಾಗಿ ಈಗ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳ ಸಂಖ್ಯೆ ಗಣನೀಯವಾಗಿ ಕುಸಿಯಲಿದೆ.
ತೆರಿಗೆ ಪಾವತಿಸುವವರ ಬಳಿ ಬಿಪಿಎಲ್ ಕಾರ್ಡ್
ಇತ್ತೀಚೆಗೆ ಆಧಾರ್ ಮತ್ತು ರೇಷನ್ ಕಾರ್ಡ್ ಜೋಡಣೆ ಮಾಡಿಸಿ ಕೆವೈಸಿ ಮಾಡುತ್ತಿರುವಾಗ ಅನರ್ಹರು ಯೋಜನೆಯ ಫಲಾನುಭವಿಗಳಾಗಿರುವುದು ಖಚಿತವಾಗಿದೆ. ಆದಾಯ ತೆರಿಗೆ ಪಾವತಿಸುತ್ತಿರುವವರು ಕೂಡ ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆಯ ಪ್ರಯೋಜನ ಪಡೆಯುತ್ತಿರುವುದು ಕಂಡುಬಂದಿದೆ. ಹೀಗಾಗಿ, ಬಿಪಿಎಲ್, ಅಂತ್ಯೋದಯ ಕಾರ್ಡ್ ಪಡೆದುಕೊಂಡಿರುವ ಆದಾಯ ತೆರಿಗೆ ಪಾವತಿಸುವವರನ್ನೂ ಗುರುತಿಸಲಾಗುತ್ತಿದೆ. ಅವರ ಬಿಪಿಎಲ್, ಅಂತ್ಯೋದಯ ಕಾರ್ಡ್‌ಗಳು ರದ್ದಾಗಲಿವೆ. ಆ ವಿವರ ಹೀಗಿದೆ -
1) ಅನರ್ಹಗೊಳ್ಳಲಿರುವ ಒಟ್ಟು ಬಿಪಿಎಲ್ ಕಾರ್ಡುಗಳ ಸಂಖ್ಯೆ 12 ಲಕ್ಷ
2) ವರ್ಷಕ್ಕೆ 1.20 ಲಕ್ಷ ರೂಪಾಯಿಗೂ ಅಧಿಕ ವಾರ್ಷಿಕ ಆದಾಯದವರ ಬಳಿ ಇರುವ ಬಿಪಿಎಲ್ ಕಾರ್ಡ್ ಸಂಖ್ಯೆ 10.54 ಲಕ್ಷ
3) ಸರ್ಕಾರಿ ನೌಕರರ ಬಳಿ ಇದ್ದ ಬಿಪಿಎಲ್ ಕಾರ್ಡುಗಳ ಸಂಖ್ಯೆ 4,722
ಕರ್ನಾಟಕದಲ್ಲಿ 10.84 ಲಕ್ಷ ಅಂತ್ಯೋದಯ ಕಾರ್ಡುದಾರರು ಸೇರಿ ಒಟ್ಟು 1.27 ಕೋಟಿ ಬಿಪಿಎಲ್ ಕಾರ್ಡ್‌ದಾರರಿದ್ದು, ಈಗ ಇವರಲ್ಲಿ 12 ಲಕ್ಷ ಕಾರ್ಡುಗಳು ಅನರ್ಹಗೊಳ್ಳಲಿವೆ. ಇದುವರೆಗೆ ಈ ಕಾರ್ಡುದಾರರಿಗೆ ಪ್ರತಿ ಸದಸ್ಯರಿಗೆ ತಿಂಗಳಿಗೆ 5 ಕಿಲೋ ಅಕ್ಕಿ (ಅಂತ್ಯೋದಯ ಕುಟುಂಬಕ್ಕೆ 35 ಕಿಲೋ ಅಕ್ಕಿ) ನೀಡಲಾಗುತ್ತಿದೆ. ಇದಲ್ಲದೆ, ಬಿಪಿಎಲ್ ಕಾರ್ಡ್‌ದಾರರಿಗೆ 3 ರೂಪಾಯಿಗೆ ಒಂದು ಕಿಲೋ ಅಕ್ಕಿ ವಿತರಿಸುತ್ತಿದೆ. ಹೀಗೆ ವಾರ್ಷಿಕವಾಗಿ 90 ಕೋಟಿ ರೂಪಾಯಿ ತನಕ ಖರ್ಚು ಇದರಲ್ಲಾದರೆ, ಇನ್ನು ಅನ್ನಭಾಗ್ಯ ಯೋಜನೆಯಲ್ಲಿ 5 ಕಿಲೋ ಅಕ್ಕಿ ಬದಲು 170 ರೂಪಾಯಿ ನೀಡಲಾಗುತ್ತಿತ್ತು. ಇದರ ಮೂಲಕ ಅನರ್ಹರಿಗೆ ವಾರ್ಷಿಕ 980 ಕೋಟಿ ರೂಪಾಯಿ ಪಾವತಿಯಾಗುತ್ತಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ವರದಿ ವಿವರಿಸಿದೆ.
ಈ ಬಿಪಿಎಲ್ ಕಾರ್ಡ್ ತೋರಿಸಿಯೇ ಸರ್ಕಾರದ ಮತ್ತೊಂದು ಗ್ಯಾರಂಟಿ ಯೋಜನೆಯಾದ ‘ಗೃಹಲಕ್ಷ್ಮೀ’ ಪಡೆದುಕೊಂಡವರಿಗೆ ಇನ್ನು ಮುಂದೆ 2000 ರೂಪಾಯಿ ಸಿಗಲ್ಲ. ಈಗಾಗಲೇ ಇದರ ಮೂಲಕ ಸರ್ಕಾರ ಈ ಕುಟುಂಬಗಳ ಯಜಮಾನಿಗೆ 250 ರಿಂದ 300 ಕೋಟಿ ರೂಪಾಯಿ ಸಹಾಯಧನ ನೀಡಿದೆ. ಇದು ಉಳಿತಾಯವಾಗಲಿದೆ.