ಬೆಂಗಳೂರಿಗೆ ಕುರಿ ಮಾಂಸದ ಹೆಸರಲ್ಲಿ ನಾಯಿ ಮಾಂಸ ಪೂರೈಕೆ; ಸಿಟಿ ರೈಲ್ವೆ ನಿಲ್ದಾಣದಲ್ಲಿ 90 ಕಾರ್ಟನ್ ಮಾಂಸ ಪೊಲೀಸ್‌ ವಶ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಿಗೆ ಕುರಿ ಮಾಂಸದ ಹೆಸರಲ್ಲಿ ನಾಯಿ ಮಾಂಸ ಪೂರೈಕೆ; ಸಿಟಿ ರೈಲ್ವೆ ನಿಲ್ದಾಣದಲ್ಲಿ 90 ಕಾರ್ಟನ್ ಮಾಂಸ ಪೊಲೀಸ್‌ ವಶ

ಬೆಂಗಳೂರಿಗೆ ಕುರಿ ಮಾಂಸದ ಹೆಸರಲ್ಲಿ ನಾಯಿ ಮಾಂಸ ಪೂರೈಕೆ; ಸಿಟಿ ರೈಲ್ವೆ ನಿಲ್ದಾಣದಲ್ಲಿ 90 ಕಾರ್ಟನ್ ಮಾಂಸ ಪೊಲೀಸ್‌ ವಶ

ಬೆಂಗಳೂರಿಗೆ ಕುರಿ ಮಾಂಸದ ಹೆಸರಿನಲ್ಲಿ ನಾಯಿ ಮಾಂಸ ಪೂರೈಕೆಯಾಗುತ್ತಿದೆ ಎಂದು ಆರೋಪಿಸಿ ಪುನೀತ್ ಕೆರೆಹಳ್ಳಿ ಮತ್ತು ಸಹಚರರು ಪ್ರತಿಭಟನೆ ನಡೆಸಿದರು. ಇದರಿಂದ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. 90 ಕಾರ್ಟನ್‌ ಬಾಕ್ಸ್‌ಗಳಲ್ಲಿ ಬಂದಿದ್ದ ಮಾಂಸದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವಿವರ ವರದಿ ಇಲ್ಲಿದೆ.

ಬೆಂಗಳೂರಿಗೆ ಕುರಿ ಮಾಂಸದ ಹೆಸರಲ್ಲಿ ನಾಯಿ ಮಾಂಸ ಪೂರೈಕೆ ಶಂಕೆ. ಪುನೀತ್ ಕೆರೆಹಳ್ಳಿ ತಂಡ ಪ್ರತಿಭಟನೆ ಕಾರಣ, ಸಿಟಿ ರೈಲ್ವೆ ನಿಲ್ದಾಣದಲ್ಲಿ 90 ಕಾರ್ಟನ್ ಮಾಂಸ ಪೊಲೀಸ್‌ ವಶ ಪಡಿಸಿಕೊಂಡರು.
ಬೆಂಗಳೂರಿಗೆ ಕುರಿ ಮಾಂಸದ ಹೆಸರಲ್ಲಿ ನಾಯಿ ಮಾಂಸ ಪೂರೈಕೆ ಶಂಕೆ. ಪುನೀತ್ ಕೆರೆಹಳ್ಳಿ ತಂಡ ಪ್ರತಿಭಟನೆ ಕಾರಣ, ಸಿಟಿ ರೈಲ್ವೆ ನಿಲ್ದಾಣದಲ್ಲಿ 90 ಕಾರ್ಟನ್ ಮಾಂಸ ಪೊಲೀಸ್‌ ವಶ ಪಡಿಸಿಕೊಂಡರು.

ಬೆಂಗಳೂರು: ರಾಜಸ್ಥಾನದಿಂದ ಬೆಂಗಳೂರಿಗೆ ಕುರಿ ಮಾಂಸದ ಬದಲು ನಾಯಿ ಮಾಂಸ ಸರಬರಾಜಾಗುತ್ತಿರುವ ವಿಚಾರದಲ್ಲಿ ಬೆಂಗಳೂರಿನ ಕೆಎಸ್‌ಆರ್ ರೈಲ್ವೆ ನಿಲ್ದಾಣದಲ್ಲಿ ಕೋಲಾಹಲ ಉಂಟಾಗಿತ್ತು. ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡ ಕಾರಣ ಮತ್ತು ಮಾಂಸದ ವ್ಯಾಪಾರಿಗಳು ಅನುಮಾನ ವ್ಯಕ್ತಪಡಿಸಿದ್ದರಿಂದ 90 ಕಾರ್ಟನ್‌ ಮಾಂಸವನ್ನು ಪೊಲೀಸರು ವಶಪಡಿಸಿಕೊಂಡರು.

ರಾಜಸ್ಥಾನದಿಂದ ತರಲಾಗಿದ್ದ ಮಾಂಸ ಕುರಿಗಳದ್ದೋ ಅಥವಾ ನಾಯಿಗಳದ್ದೋ ಎಂಬುದನ್ನು ಪತ್ತೆ ಹಚ್ಚಲು ಆರೋಗ್ಯ ಇಲಾಖೆ ಅಧಿಕಾರಿಗಳು ಆ ಮಾಂಸದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.

ಬೆಂಗಳೂರಲ್ಲಿ ಬೌ ಬೌ ಮಾಂಸ ಮಾರಾಟ; ಸಿಟಿ ರೈಲ್ವೆ ನಿಲ್ದಾಣದಲ್ಲಿ ಏನು ನಡೆಯಿತು?

ರಾಜಸ್ಥಾನದಿಂದ ಸುಮಾರು ಅಂದಾಜು90 ಬಾಕ್ಸ್‌ಗಳಲ್ಲಿ ಬೆಂಗಳೂರಿನ ರೈಲ್ವೆ ನಿಲ್ದಾಣಕ್ಕೆ ಮಾಂಸ ಸರಬರಾಜಾಗಿತ್ತು. ಈ ಬಗ್ಗೆ ಅನುಮಾನಗೊಂಡ ಕೆಲ ಸಂಘಟನೆಗಳ ಕಾರ್ಯಕರ್ತರು ದಾಳಿ ನಡೆಸಿ, ಸರಬರಾಜಾಗಿರುವ ಮಾಂಸವು ಕುರಿಯದ್ದಲ್ಲ. ಅದು ನಾಯಿ ಮಾಂಸ ಎಂಬ ಅನುಮಾನ ವ್ಯಕ್ತಪಡಿಸಿದರು.

ಈ ವೇಳೆ ಮಾಂಸದ ವ್ಯಾಪಾರಿ ಅಬ್ದುಲ್ ರಜಾಕ್ ಅವರು, 90 ಬಾಕ್ಸ್‌ಗಳಲ್ಲಿದ್ದ ಮಾಂಸವನ್ನು ಪರಿಶೀಲಿಸಲು ಅವಕಾಶ ಕೊಡದೆ ಅಡ್ಡಿಪಡಿಸಿದ್ದರು. ಅಲ್ಲದೇ ಇದು ನಾಯಿ ಮಾಂಸವಲ್ಲ, ಕುರಿಯ ಮಾಂಸವಾಗಿದ್ದು, ಹಲವಾರು ವರ್ಷಗಳಿಂದ ಮಾಂಸದ ವ್ಯಾಪಾರ ನಡೆಸುತ್ತಿದ್ದೇವೆ. ಅಗತ್ಯ ಪರವಾನಗಿಯನ್ನೂ ಹೊಂದಿದ್ದೇವೆ ಎಂದು ಸ್ಪಷ್ಟನೆ ನೀಡಿದರು. ಆದರೆ, ಕೆಲ ಸಂಘಟನೆಗಳ ಕಾರ್ಯಕರ್ತರು ಅವರ ಮಾತನ್ನು ಒಪ್ಪಲಿಲ್ಲ. ಅದರಲ್ಲಿರುವುದು ನಾಯಿಯ ಮಾಂಸವಾಗಿದ್ದು, ಪರಿಶೀಲಿಸಲು ಬಿಡುವಂತೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಎರಡೂ ಕಡೆಯವರ ನಡುವೆ ಮಾತಿನ ಚಕಮಕಿ ನಡೆಯಿತು. ಇದರ ನಡುವೆಯೇ ಕಾರ್ಯಕರ್ತರು ಒಂದೆರಡು ಬಾಕ್ಸ್ ತೆರೆದು ನೋಡಿದಾಗ ಅದರಲ್ಲಿ ಉದ್ದ ಬಾಲದ ಮಾಂಸ ಪತ್ತೆಯಾಗಿದ್ದು, ಅದು ನಾಯಿ ಮಾಂಸ ಎಂಬ ವಾದಕ್ಕೆ ಪುಷ್ಟಿ ನೀಡಿತು. ಹೀಗಾಗಿ ಅಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಯಿತು. ಕೂಡಲೇ ಪೊಲೀಸರು ಮಧ್ಯಪ್ರವೇಶಿಸಿ, ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದರು. ಅಲ್ಲಿದ್ದ ಮಾಂಸವನ್ನು ವಶಪಡಿಸಿಕೊಂಡು

ಮಾಂಸ ಪ್ರಯೋಗಾಲಯಕ್ಕೆ, ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಕ್ಕೆ ಪುನೀತ್ ಕೆರೆಹಳ್ಳಿ ಬಂಧನ

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖಾ ಅಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಿ, ಬಾಕ್ಸ್‌ಗಳಲ್ಲಿದ್ದ ಕೆಲ ಮಾಂಸದ ತುಂಡುಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದಾರೆ. ಪೊಲೀಸರು ಇದ್ದರೂ, ಆರಂಭದಲ್ಲಿ ಆ ಬಾಕ್ಸ್‌ಗಳನ್ನು ತೆರೆಯಲು ಆಹಾರ ಇಲಾಖೆ ಅಧಿಕಾರಿಗಳಿಗೂ ಕೂಡ ಅಬ್ದುಲ್ ರಜಾಕ್ ಬಿಡಲಿಲ್ಲ ಎಂಬ ಆರೋಪ ಕೇಳಿಬಂದಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಅಂಬರೀಶ್ ಮತ್ತು ಸುಬ್ರಹ್ಮಣ್ಯ ಅವರ ತಂಡ ಮಾಂಸದ ತುಂಡುಗಳನ್ನು ಪ್ರಯೋಗಾಲಯಕ್ಕೆ ತಗೊಂಡು ಹೋಗಿದ್ದಾರೆ. ವರದಿ ಬಂದ ಬಳಿಕ ಆ ಮಾಂಸ ಕುರಿಯದ್ದೋ ಅಥವಾ ನಾಯಿಯದ್ದೋ ಎಂಬ ಶಂಕೆ ನಿವಾರಣೆಯಾಗಲಿದೆ.

ಈ ನಡುವೆ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆಂಬ ಆರೋಪದ ಮೇರೆಗೆ ಪುನೀತ್ ಕೆರೆಹಳ್ಳಿ ಅವರನ್ನು ಪೊಲೀಸರು ಬಂಧಿಸಿದರು. ಠಾಣೆಯಲ್ಲಿ ಅವರು ಅಸ್ವಸ್ಥರಾದ ಕಾರಣ ಬಳಿಕ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾಗಿ ಮೂಲಗಳು ತಿಳಿಸಿವೆ.


(ಕನ್ನಡದಲ್ಲಿ ಸ್ಪಷ್ಟ ಸುದ್ದಿ, ನಿಖರ ವಿಶ್ಲೇಷಣೆ, ಸಮಗ್ರ ಮಾಹಿತಿಗೆ ಎಚ್‌ಟಿ ಕನ್ನಡ ಬೆಸ್ಟ್‌. ಕರ್ನಾಟಕದ ತಾಜಾ ವಿದ್ಯಮಾನ, ಅದೇ ರೀತಿ ರಾಜಕೀಯ ವಿಶ್ಲೇಷಣೆ, ದೇಶ ಮತ್ತು ಜಗತ್ತಿನ ವಿದ್ಯಮಾನಗಳ ವರದಿಗಳನ್ನು ಓದಲು kannada.hindustantimes.com/nation-and-world ಕ್ಕೆ ಭೇಟಿ ನೀಡಿ.)

Whats_app_banner