ಆನೇಕಲ್ ಬಳಿ ಉರುಳಿ ಬಿದ್ದ 150 ಅಡಿ ಎತ್ತರದ ತೇರು, ಹುಸ್ಕೂರು ಮದ್ದೂರಮ್ಮ ಭಕ್ತಾದಿಗಳು ಅಪಾಯದಿಂದ ಪಾರು, ರಥ ವಿಶೇಷ ಇಲ್ಲಿದೆ
ಆನೇಕಲ್ ಬಳಿ ಉರುಳಿ ಬಿದ್ದ 150 ಅಡಿ ಎತ್ತರದ ತೇರು ದೇಶದ ಗಮನಸೆಳೆದಿದೆ. ಹುಸ್ಕೂರು ಮದ್ದೂರಮ್ಮ ಭಕ್ತಾದಿಗಳು ಅಪಾಯದಿಂದ ಪಾರಾಗಿದ್ದು, ಯಾವುದೇ ಪ್ರಾಣಾಪಾಯ ಆಗಿಲ್ಲ. ಹುಸ್ಕೂರು ಮದ್ದೂರಮ್ಮ ಜಾತ್ರೆಗೆ ಹೋಗುತ್ತಿದ್ದ ತೇರು ಇದಾಗಿದ್ದು, ತೇರಿನ ವಿಶೇಷ ಅಂಶಗಳ ವಿವರ ಇಲ್ಲಿದೆ. (ವರದಿ- ಎಚ್. ಮಾರುತಿ, ಬೆಂಗಳೂರು)

ಬೆಂಗಳೂರು: ಆನೇಕಲ್ ತಾಲ್ಲೂಕಿನ ಹೀಲಲಿಗೆ ಗ್ರಾಮದ 150 ಅಡಿ ಎತ್ತರದ ತೇರು ಉರುಳಿ ಬಿದ್ದಿದೆ. ಅದೃಷ್ಟವಶಾತ್ ಯಾರಿಗೂ ಯಾವುದೇ ರೀತಿಯ ಅಪಾಯ ಸಂಭವಿಸಿಲ್ಲ. ಈ ತೇರನ್ನು ಹುಸ್ಕೂರು ಮದ್ದೂರಮ್ಮ ಜಾತ್ರೆಗೆ ತೆಗೆದುಕೊಂಡು ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಉರುಳಿದೆ ಎಂದು ತಿಳಿದು ಬಂದಿದೆ. 150 ಅಡಿ ಎತ್ತರದ ಈ ತೇರನ್ನು ಟ್ರ್ಯಾಕ್ಟರ್ ಮತ್ತು ಎತ್ತುಗಳ ಸಹಾಯದಿಂದ ಎಳೆಯಲಾಗುತ್ತಿತ್ತು. ಆದರೆ ನಿಯಂತ್ರಣ ತಪ್ಪಿ ಕುಸಿದು ಬಿದ್ದಿದೆ.
ತೇರನ್ನು ಎಳೆದುಕೊಂಡು ಮುಂದೆ ಸಾಗುತ್ತಿದ್ದಾಗ ತುದಿಯ ಭಾಗ ಅಲ್ಲಾಡಿದೆ. ಇದರಿಂದ ತೇರು ನೇರವಾಗಿ ನಿಲ್ಲಲಾಗಿಲ್ಲ ಮತ್ತು ನಿಯಂತ್ರಣಕ್ಕೆ ಸಿಗದೇ ಎಡಭಾಗಕ್ಕೆ ವಾಲುತ್ತಾ ನೆಲಕ್ಕೆ ಉರುಳಿದೆ. ತೇರು ಬೀಳುವುದನ್ನು ನೋಡಿ ಎಚ್ಚೆತ್ತುಕೊಂಡ ಭಕ್ತರು ಓಡಿ ಹೋಗಿದ್ದಾರೆ. ಮುಂಚೆಯೇ ಎಚ್ಚೆತ್ತು ಕೊಂಡಿದ್ದರಿಂದ ಅಲ್ಲಿ ನೆರೆದಿದ್ದ ಸಾರ್ವಜನಿಕರಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
2018ರಲ್ಲೂ ತೇರು ಬಿದ್ದ ಘಟನೆ
ಹೀಲಲಿಗೆಯಿಂದ ಹುಸ್ಕೂರಿಗೆ ಸುಮಾರು 70 ಎತ್ತುಗಳು ಹಾಗೂ ಟ್ರ್ಯಾಕ್ಟರ್ ಮೂಲಕ ತೇರನ್ನು ಎಳೆದುಕೊಂಡು ಹೋಗಲಾಗುತ್ತಿತ್ತು. 2018 ರಲ್ಲಿಯೂ ಇದೇ ರೀತಿ ತೇರು ಕುಸಿದು ಬಿದ್ದಿತ್ತು. ಹುಸ್ಕೂರು ಮದ್ದೂರಮ್ಮನ ದೇವಾಲಯ ಎಲೆಕ್ಟ್ರಾನಿಕ್ ಸಿಟಿಯಿಂದ 5 ಕಿ.ಮೀ. ದೂರದಲ್ಲಿದೆ. ಈ ದೇವಾಲಯವನ್ನು ಚೋಳರ ನಿರ್ಮಿಸಿದ್ದಾರೆ ಎಂಬ ಪ್ರತೀತಿ ಇದೆ. ಮದ್ದೂರಮ್ಮನ ಜಾತ್ರೆಗೂ ನೂರಾರು ವರ್ಷಗಳ ಇತಿಹಾಸವಿದ್ದು, ಪ್ರತಿ ವರ್ಷ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಜಾತ್ರೆಯನ್ನು ನಡೆಸುತ್ತಾ ಬರಲಾಗಿದೆ.
ಮದ್ದೂರಮ್ಮ ದೇವಸ್ಥಾನಕ್ಕೆ ಸುತ್ತಮುತ್ತಲಿನ ಹತ್ತು ಗ್ರಾಮಗಳಿಂದ ತೇರನ್ನು ತೆಗೆದುಕೊಂಡು ಬರಲಾಗುತ್ತದೆ. ಒಂದೊಂದು ಗ್ರಾಮದ ಜನ ಒಂದೊಂದು ರೀತಿಯಲ್ಲಿ ತೇರನ್ನು ಅಲಂಕರಿಸಿರುತ್ತಾರೆ. ಪೈಪೋಟಿಯ ಮೇಲೆಯೂ ತೇರಿನ ಎತ್ತರವನ್ನು ಎತ್ತರಿಸುತ್ತಾ ಹೋಗುತ್ತಾರೆ. ಈ ವರ್ಷ ಹೀಲಲಿಗೆ ಗ್ರಾಮಸ್ಥರು 120 ಅಡಿ ಎತ್ತರದ ತೇರನ್ನು ಸಿದ್ಧಪಡಿಸಿದ್ದರು.
ಈ ತೆರಿಗೆ ಕುರ್ಜು ಎಂದೂ ಹೆಸರಿದೆ
ಮದ್ದೂರಮ್ಮನ ತೇರನ್ನು ಸ್ಥಳೀಯರು ಕುರ್ಜು ಎಂದೂ ಕರೆಯುತ್ತಾರೆ. ಮದ್ದೂರಮ್ಮ ದೇವಸ್ಥಾನದ ಮೂಲ ಮಂಡ್ಯ ಜಿಲ್ಲೆಯ ಮದ್ದೂರಿನ ಮದ್ದೂರಮ್ಮ ಎಂದು ಹೇಳಲಾಗುತ್ತಿದೆ. ಹುಸ್ಕೂರಿನ ಭಕ್ತರೊಬ್ಬರ ಸೇವೆಯನ್ನು ಮೆಚ್ಚಿ ಮದ್ದೂರಿನ ಮದ್ದೂರಮ್ಮ ಇಲ್ಲಿ ಬಂದು ನೆಲೆಸಿದ್ದಾಳೆ ಎಂಬ ನಂಬಿಕೆ ಇದೆ.
ಶತಮಾನಗಳ ಹಳೆಯ ದೇವಾಲಯವಾಗಿದ್ದು, ಸುತ್ತಮುತ್ತಲಿನ ಗ್ರಾಮಸ್ಥರೆಲ್ಲರೂ ಸೇರಿ ದೇವಸ್ಥಾನ ಜೀರ್ಣೋದ್ಧಾರ ಮಾಡಿದ್ದಾರೆ. ಹೊಸ ಗೋಪುರಗಳನ್ನು ನಿರ್ಮಾಣ ಮಾಡಲಾಗಿದೆ. ಮದ್ದೂರಮ್ಮ ಜಾತ್ರೆಯು 5 ದಿನಗಳು ನಡೆಯಲಿದ್ದು, ಸುತ್ತಮುತ್ತಲಿನ ಸಿಂಗೇನ ಅಗ್ರಹಾರ,ಮುತ್ತನಲ್ಲೂರು, ಕೊಡತಿ, ಹಾರೋಹಳ್ಳಿ ಹಾಗೂ ದೊಡ್ಡ ನಾಗಮಂಗಲ ಸೇರಿದಂತೆ ವಿವಿಧ ಗ್ರಾಮಗಳಿಂದ ರಥವನ್ನು ನಿರ್ಮಿಸಿಕೊಂಡು ಜಾತ್ರೆಗೆ ತರಲಾಗುತ್ತದೆ. ಈ ರೀತಿ ತರಲಾದ ಹತ್ತಕ್ಕೂ ಹೆಚ್ಚು ತೇರುಗಳನ್ನು ನೋಡುವುದೇ ಒಂದು ಮನಮೋಹಕ ದೃಶ್ಯ.
ಯಾವುದೇ ತೇರು 100 ಅಡಿಗಿಂತ ಕಡಿಮೆ ಇರುವುದಿಲ್ಲ. ಗ್ರಾಮದ ಜನತೆ 200 ಅಡಿವರೆಗೆ ತೇರು ನಿರ್ಮಿಸಿರುವ ಉದಾಹರಣೆಗಳೂ ಉಂಟು. ಇಂತಹ ರಥ ಅಥವಾ ಕುರ್ಜುವನ್ನು ನಿರ್ಮಾಣ ಮಾಡಲು ತಿಂಗಳುಗಟ್ಟಲೇ ಸಮಯ ಹಿಡಿಯುತ್ತದೆ. ಮರದ ಅಟ್ಟಣಿಗೆಯಿಂದ ನಿರ್ಮಿಸಲಾಗುವ ಕುರ್ಜುಗಳಿಗೆ ಬಣ್ಣ ಬಣ್ಣದ ಬಟ್ಟೆಗಳಿಂದ ಅಲಂಕರಿಸಲಾಗುತ್ತದೆ. ತೇರು ಬೇರೊಂದು ಊರಿನವರಿಗಿಂತ ಎತ್ತರ ಇರಬೇಕು ಎನ್ನುವುದು ಗ್ರಾಮಸ್ಥರಿಗೆ ಪ್ರತಿಷ್ಠೆಯೂ ಹೌದು.
ಹೀಗೆ ತರಲಾದ ಹೀಲಲಿಗೆ ಗ್ರಾಮದ 150 ಅಡಿ ಎತ್ತರದ ತೇರು ದೀಪಹಳ್ಳಿ ಗ್ರಾಮದ ಐಪರ್ ಮಾರ್ಕೆಟ್ ಸಮೀಪ ನೆಲಕ್ಕೆ ಉರುಳಿದೆ. ಮೂರು ತಿಂಗಳಿಂದ ಈ ಕುರ್ಜನ್ನು ಸಿದ್ಧಪಡಿಸಲಾಗಿತ್ತು. ತೇರು ಬಿತ್ತು ಎಂದು ಹೀಲಲಿಗೆ ಗ್ರಾಮಸ್ಥರು ಕುಗ್ಗಿಹೋಗಿಲ್ಲ. ಮುಂದಿನ ವರ್ಷ ಇದೇ ಎತ್ತರದ ಕುರ್ಜನ್ನು ಕಟ್ಟಿ ಹುಸ್ಕೂರು ಮದ್ದೂರಮ್ಮ ದೇವಾಲಯದ ಜಾತ್ರೆಗೆ ತೆಗೆದುಕೊಂಡ ಹೋಗುತ್ತೇವೆ ಎಂದು ಹೇಳುತ್ತಾರೆ.
(ವರದಿ- ಎಚ್. ಮಾರುತಿ, ಬೆಂಗಳೂರು)
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.
