Double Decker Flyover- ಬೆಂಗಳೂರಿನ ಮೊದಲ ಡಬಲ್ ಡೆಕ್ಕರ್ ಫ್ಲೈ ಓವರ್‌ ಹೇಗಿದೆ, ಗಮನಸೆಳೆಯುತ್ತಿದೆ ಲೇಟೆಸ್ಟ್ ಫೋಟೋ
ಕನ್ನಡ ಸುದ್ದಿ  /  ಕರ್ನಾಟಕ  /  Double Decker Flyover- ಬೆಂಗಳೂರಿನ ಮೊದಲ ಡಬಲ್ ಡೆಕ್ಕರ್ ಫ್ಲೈ ಓವರ್‌ ಹೇಗಿದೆ, ಗಮನಸೆಳೆಯುತ್ತಿದೆ ಲೇಟೆಸ್ಟ್ ಫೋಟೋ

Double Decker Flyover- ಬೆಂಗಳೂರಿನ ಮೊದಲ ಡಬಲ್ ಡೆಕ್ಕರ್ ಫ್ಲೈ ಓವರ್‌ ಹೇಗಿದೆ, ಗಮನಸೆಳೆಯುತ್ತಿದೆ ಲೇಟೆಸ್ಟ್ ಫೋಟೋ

ಬೆಂಗಳೂರಿನ ಮೊದಲ ಡಬಲ್ ಡೆಕ್ಕರ್ ಫ್ಲೈ ಓವರ್ ಸ್ಥಿತಿ ಗತಿ ಏನು, ನಿರ್ಮಾಣ ಕಾರ್ಯದ ಪ್ರಗತಿ ಏನಾಗಿದೆ ಎಂಬ ಕುತೂಹಲ ಸಹಜ. ಈ ಫ್ಲೈ ಓವರ್ ಸಂಚಾರಕ್ಕೆ ಮುಕ್ತವಾಗಲಿ ಎಂದು ಬೆಂಗಳೂರಿಗರು ಕಾತರದಿಂದ ಕಾಯುತ್ತಿದ್ದಾರೆ. ಇದರ ಲೇಟೆಸ್ಟ್ ಫೋಟೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಬೆಂಗಳೂರಿನ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್‌ನ ಎರಡು ನೋಟ- ಮೊದಲ ಚಿತ್ರದಲ್ಲಿ ಫ್ಲೈಓವರ್‌ನ ಕೆಳಗಿನ ನೋಟ, ಎರಡನೇಯದ್ದು ಮೇಲ್ನೋಟ
ಬೆಂಗಳೂರಿನ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್‌ನ ಎರಡು ನೋಟ- ಮೊದಲ ಚಿತ್ರದಲ್ಲಿ ಫ್ಲೈಓವರ್‌ನ ಕೆಳಗಿನ ನೋಟ, ಎರಡನೇಯದ್ದು ಮೇಲ್ನೋಟ (PC - WF_Watcher / siemen_subbaiah)

ಬೆಂಗಳೂರು: ನಾಗಪುರ ಸೇರಿ ಪ್ರಮುಖ ನಗರಗಳಲ್ಲಿ ಸಂಚಾರ ದಟ್ಟಣೆ ನಿರ್ವಹಣೆಗಾಗಿ ಮಾಡಿರುವ ಡಬಲ್‌ ಡೆಕ್ಕರ್ ಫ್ಲೈ ಓವರ್ ಆಯಾ ಪಟ್ಟಣದಲ್ಲಿ ಸಂಚರಿಸುವಾಗ ಗಮನಸೆಳೆಯುತ್ತವೆ. ನಮ್ಮ ಬೆಂಗಳೂರಿನಲ್ಲೂ ನಿರ್ಮಾಣವಾಗುತ್ತಿದೆ ಮೊದಲ ಡಬಲ್ ಡೆಕ್ಕರ್ ಫ್ಲೈ ಓವರ್.

ವಾಸ್ತವದಲ್ಲಿ ಈ ಫ್ಲೈಓವರ್ ಕಾಮಗಾರಿ 2022ರ ಜೂನ್ ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಹೇಳಲಾಗಿತ್ತು. ಅಲ್ಲಿಂದೀಚೆಗೆ ಅದು ಮುಂದೂಡಲ್ಪಟ್ಟು 2023ರ ಮಾರ್ಚ್‌ನಲ್ಲಿ ಪೂರ್ಣಗೊಳ್ಳಲಿದೆ ಎಂದು 2022ರ ಡಿಸೆಂಬರ್‌ ತಿಂಗಳಲ್ಲಿ ವರದಿಯಾಗಿತ್ತು. ಅದಾಗಿ, ಇತ್ತೀಚೆಗೆ 2024ರ ಏಪ್ರಿಲ್‌ನಲ್ಲಿ ಯೆಲ್ಲೋ ಲೈನ್ ಮೆಟ್ರೋ ಉದ್ಘಾಟನೆಯಾಗುವಾಗ ಇದು ಕೂಡ ಸಂಚಾರಕ್ಕೆ ಮುಕ್ತವಾಗಲಿದೆ ಎಂಬ ಮಾತು ಕೇಳಿತ್ತು.

ಈಗ ಈ ಡಬಲ್ ಡೆಕ್ಕರ್ ಫ್ಲೈಓವರ್ ಸುದ್ದಿ ಯಾಕೆ ಮುನ್ನೆಲೆಗೆ ಬಂತು ಎಂದು ಆಲೋಚಿಸುತ್ತಿದ್ದೀರಾ? ಸೋಷಿಯಲ್ ಮೀಡಿಯಾದಲ್ಲಿ ಡಬಲ್ ಡೆಕ್ಕರ್ ಫ್ಲೈ ಓವರ್‌ನ ಲೇಟೆಸ್ಟ್ ಫೋಟೋ ಎಕ್ಸ್‌ನಲ್ಲಿ ಶೇರ್ ಆಗಿದೆ. ಅದೇ ಫೋಟೋ ಫೇಸ್‌ಬುಕ್‌ನಲ್ಲೂ ಶೇರ್ ಆಗಿ ಹತ್ತು ಹಲವು ಕಾಮೆಂಟ್‌ಗಳಿಗೆ ಒಳಗಾಗಿದೆ.

ಎಂ-ಇಂಡಿಕೇಟರ್ ಫೇಸ್‌ಬುಕ್ ಪುಟದಲ್ಲಿ ಈ ಫೋಟೋ ಶೇರ್ ಆಗಿದ್ದು, ವ್ಯೂ ಫ್ರಂ ಬೆಂಗಳೂರು'ಸ್ ಫಸ್ಟ್ ಡಬಲ್ ಡೆಕ್ಕರ್ ಫ್ಲೈಓವರ್ ಎಂಬ ಶೀರ್ಷಿಕೆಯನ್ನು ನೀಡಲಾಗಿದೆ.

ಇದೇ ಫೋಟೋವನ್ನು ಮೊದಲು ಶೇರ್ ಮಾಡಿದ್ದು ಸೈಮ್‌ ಸುಬ್ಬಯ್ಯ. ಅವರು ಈ ಫೋಟವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿದ್ದರು.

ಬಿಟಿಎಂನ ಬಿಹೈವ್ ವರ್ಕ್‌ಸ್ಪೇಸ್‌ನಿಂದ ಈ ಫೋಟೋ ತೆಗೆಯಲಾಗಿದೆ ಎಂದು ಅವರು ನಮೂದಿಸಿದ್ದಾರೆ. ಅವರ ಈ ಫೋಟೋಕ್ಕೆ ಬೆಂಗಳೂರು ಮೆಟ್ರೋ ಅಪ್ಡೇಟ್ಸ್ ಸ್ಪಂದಿಸಿದ್ದು, ಕೆಳ ಭಾಗದಿಂದ ತೆಗೆದ ಫೋಟೋವನ್ನು ಶೇರ್ ಮಾಡಿದೆ.

ಬೆಂಗಳೂರಿನ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್

ದಕ್ಷಿಣ ಬೆಂಗಳೂರು ಮತ್ತು ವೈಟ್‌ಫೀಲ್ಡ್ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿಯ ಐಟಿ ಕೇಂದ್ರಗಳನ್ನು ಸಂಪರ್ಕಿಸುವ ರೀತಿಯಲ್ಲಿ ನಿರ್ಮಾಣವಾಗುತ್ತಿದೆ ಬೆಂಗಳೂರಿನ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್.

ಡಬಲ್ ಡೆಕ್ಕರ್ ಫ್ಲೈ ಓವರ್ ಎಂದರೆ, ಅದು ರಸ್ತೆ-ಕಮ್-ಮೆಟ್ರೋ ರೈಲು ಸಂಚಾರ ವ್ಯವಸ್ಥೆಯ 3.3 ಕಿಮೀ ಉದ್ದದ ಮೇಲ್ಸೇತುವೆ. ಈ ಫ್ಲೈ ಓವರ್ ರಾಗಿಗುಡ್ಡ ಮತ್ತು ಮಾರೇನಹಳ್ಳಿ ರಸ್ತೆಯ (CSB) ಕೇಂದ್ರೀಯ ಸಿಲ್ಕ್ ಬೋರ್ಡ್ ಅನ್ನು ಸಂಪರ್ಕಿಸುತ್ತದೆ. ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಇದರ ನಿರ್ಮಾಣ ಹೊಣೆಗಾರಿಕೆ ಹೊತ್ತುಕೊಂಡಿದೆ.

ಕೆಳಗಿನ ಡೆಕ್ ಅಂದರೆ ರಸ್ತೆ ಮಾರ್ಗದ ಫೈ ಓವರ್‌ ನೆಲದಿಂದ 8 ಮೀಟರ್ ಎತ್ತರದಲ್ಲಿದೆ. ಇಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ. ಅದರಿಂದ 8 ಮೀಟರ್ ಮೇಲೆ ಅಂದರೆ ನೆಲದಿಂದ 16 ಮೀಟರ್ ಎತ್ತರದಲ್ಲಿ ಮೆಟ್ರೋ ಮಾರ್ಗ ನಿರ್ಮಾಣವಾಗುತ್ತಿದೆ. ಇದು ಎರಡು ಫ್ಲೈ ಓವರ್ ಓಳಗೊಂಡಿರುವ ಕಾರಣ ಇದಕ್ಕೆ ಡಬಲ್ ಡೆಕ್ಕರ್ ಫ್ಲೈ ಓವರ್ ಎನ್ನುತ್ತಾರೆ.

ಇಂಥದ್ದೇ ವ್ಯವಸ್ಥೆ ನಾಗಪುರ, ಜೈಪುರ, ಮುಂಬಯಿ ಮತ್ತು ಇತರೆ ನಗರಗಳಲ್ಲಿ ಇದೆ. ಬೆಂಗಳೂರಿನ ಡಬಲ್ ಡೆಕ್ಕರ್ ಫ್ಲೈಓವರ್ ಎಲೆಕ್ಟ್ರಾನಿಕ್ಸ್ ಸಿಟಿ, ಎಚ್‌ಎಸ್‌ಆರ್ ಲೇಔಟ್ ಮತ್ತು ಬಿಟಿಎಂ ಲೇಔಟ್‌ಗೆ ನೇರ ಸಂಪರ್ಕ ಒದಗಿಸುವ ನಿರೀಕ್ಷೆಯಿದೆ.

Whats_app_banner