ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಕಿದ್ವಾಯಿ ಆಸ್ಪತ್ರೆ ಸಹೋದ್ಯೋಗಿಯ ಕೊಲೆ ಯತ್ನಕೇಸ್‌ನಲ್ಲಿ ಇಬ್ಬರ ಸೆರೆ; ಅಂದ್ರಹಳ್ಳಿ ರಸ್ತೆಯಲ್ಲಿ ಅಪಘಾತಕ್ಕೆ ಇಬ್ಬರ ಬಲಿ

ಬೆಂಗಳೂರು ಕಿದ್ವಾಯಿ ಆಸ್ಪತ್ರೆ ಸಹೋದ್ಯೋಗಿಯ ಕೊಲೆ ಯತ್ನಕೇಸ್‌ನಲ್ಲಿ ಇಬ್ಬರ ಸೆರೆ; ಅಂದ್ರಹಳ್ಳಿ ರಸ್ತೆಯಲ್ಲಿ ಅಪಘಾತಕ್ಕೆ ಇಬ್ಬರ ಬಲಿ

ಬೆಂಗಳೂರು ಅಪರಾಧ ಸುದ್ದಿ: ಬೆಂಗಳೂರು ಕಿದ್ವಾಯಿ ಆಸ್ಪತ್ರೆ ಸಹೋದ್ಯೋಗಿ ಕೊಲೆ ಯತ್ನ ಕೇಸ್‌ನಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಇನ್ನೊಂದು ಪ್ರತ್ಯೇಕ ಪ್ರಕರಣದಲ್ಲಿ ಅಂದ್ರಹಳ್ಳಿಯ ರಸ್ತೆಯಲ್ಲಿ ಆಟೊ ಮತ್ತು ಬೈಕ್‌ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಇಬ್ಬರು ಯುವಕರ ಸಾವು ಸಂಭವಿಸಿದೆ. (ವರದಿ- ಎಚ್. ಮಾರುತಿ, ಬೆಂಗಳೂರು)

ಬೆಂಗಳೂರು ಅಪರಾಧ ಸುದ್ದಿ- ಬೆಂಗಳೂರು ಕಿದ್ವಾಯಿ ಆಸ್ಪತ್ರೆ ಸಹೋದ್ಯೋಗಿ ಕೊಲೆ ಯತ್ನಕೇಸ್‌ನಲ್ಲಿ ಇಬ್ಬರ ಸೆರೆ (ಸಾಂಕೇತಿಕ ಚಿತ್ರ)
ಬೆಂಗಳೂರು ಅಪರಾಧ ಸುದ್ದಿ- ಬೆಂಗಳೂರು ಕಿದ್ವಾಯಿ ಆಸ್ಪತ್ರೆ ಸಹೋದ್ಯೋಗಿ ಕೊಲೆ ಯತ್ನಕೇಸ್‌ನಲ್ಲಿ ಇಬ್ಬರ ಸೆರೆ (ಸಾಂಕೇತಿಕ ಚಿತ್ರ)

ಬೆಂಗಳೂರು: ಸಹೋದ್ಯೋಗಿಯ ಕೊಲೆಗೆ ಸುಪಾರಿ ಕೊಟ್ಟಿದ್ದ ಕಿದ್ವಾಯಿ ಆಸ್ಪತ್ರೆಯ ಪ್ರಯೋಗಾಲಯದ ಮುಖ್ಯಸ್ಥ ಮತ್ತು ಸುಪಾರಿ ಪಡೆದಿದ್ದ ಇಬ್ಬರನ್ನು ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಕಿದ್ವಾಯಿ ಆಸ್ಪತ್ರೆಯ ಪ್ರಯೋಗಾಲಯದ ಮುಖ್ಯಸ್ಥ ಶ್ರೀಧರ್‌, ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಧರ್ಮಪುರದ ಕಂಬತ್ತನಹಳ್ಳಿಯ ಸಿದ್ದೇಶ್‌ ಹಾಗೂ ಶಿವಮೊಗ್ಗದ ಅಶೋಕನಗರದ ಜನತಾ ಕಾಲೊನಿ ನಿವಾಸಿ ನಿತೇಶ್‌ ಬಂಧಿತ ಆರೋಪಿಗಳು. ಶ್ರೀಧರ್‌ ಕೆ.ಆರ್‌. ಪುರಂ ಮೆಡಹಳ್ಳಿ ವಿನಾಯಕನಗರದಲ್ಲಿ ವಾಸಿಸುತ್ತಿದ್ದ.

ಇವರು ಕಿದ್ವಾಯಿ ಆಸ್ಪತ್ರೆಯ ಪ್ರಯೋಗಾಲಯ ತಂತ್ರಜ್ಞ ಚಂದ್ರಕಾಂತ್‌ ಆವರನ್ನು ಕೊಲ್ಲಲು ಪ್ರಯತ್ನ ನಡೆಸಿದ್ದರು. ಮಾಗಡಿ ರಸ್ತೆ ಸುಂಕದಕಟ್ಟೆ ಹೊಯ್ಸಳ ನಗರದ ನಿವಾಸಿ, 30 ವರ್ಷದ ಚಂದ್ರಕಾಂತ್‌ ಕೆಲಸಕ್ಕೆ ತೆರಳಲು ಮನೆಯಿಂದ ಸುಂಕದಕಟ್ಟೆಯ ವಿನೋದಪ್ಪ ಬೇಕರಿ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದರು. ಆಗ ಸುಪಾರಿ ಪಡೆದಿದ್ದ ಇಬ್ಬರು ಆರೋಪಿಗಳು ಚಂದ್ರಕಾಂತ್‌ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಲು ಪ್ರಯತ್ನಿಸಿದ್ದರು. ಆದರೆ ಚಂದ್ರಕಾಂತ್‌ ಆರೋಪಿಗಳಿಂದ ತಪ್ಪಿಸಿಕೊಂಡು ಕೂದಲೆಳೆಯ ಅಂತರದಿಂದ ಅಪಾಯದಿಂದ ಪಾರಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಸುಪಾರಿ ಹತ್ಯೆ ಯತ್ನ; ಏನಿದು ಪ್ರಕರಣ

ಶ್ರೀಧರ್ ಹಾಗೂ ಚಂದಕಾಂತ್‌ ಇಬ್ಬರೂ ಕಿದ್ವಾಯಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗಳು. ಆರೋಪಿ ಶ್ರೀಧರ್, ಕಿದ್ವಾಯಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬರನ್ನು ಪ್ರೀತಿಸುತ್ತಿದ್ದ. ಆ ಯುವತಿ ಜತೆ ಚಂದ್ರಕಾಂತ್ ಸ್ವಲ್ಪ ಹೆಚ್ಚು ಮಾತನಾಡಿದ್ದರು. ಈ ರೀತಿ ಮಾತನಾಡದಂತೆ ಶ್ರೀಧರ್ ಒಂದೆರಡು ಬಾರಿ ಚಂದ್ರಕಾಂತ್‌ಗೆ ಎಚ್ಚರಿಕೆ ನೀಡಿದ್ದ. ಆದರೆ, ಚಂದ್ರಕಾಂತ್ ಸಹೋದ್ಯೋಗಿ ಜೊತೆ ಮಾತನಾಡಿದರೆ ತಪ್ಪೇನು ಎಂದು ಮರು ಪ್ರಶ್ನೆ ಹಾಕಿದ್ದ. ಅಂದಿನಿಂದ ಶ್ರೀಧರ್ ಮತ್ತು ಚಂದ್ರಕಾಂತ್ ನಡುವೆ ದ್ವೇಷ ಉಂಟಾಗಿತ್ತು.

ಈ ಮಧ್ಯೆ ಶ್ರೀಧರ್ ತನ್ನ ಮತ್ತೊಬ್ಬ ಸ್ನೇಹಿತ ಸಿದ್ದೇಶ್‌ಗೆ ಈ ಪ್ರೇಮ ಪ್ರಕರಣವನ್ನು ತಿಳಿಸಿ ಚಂದ್ರಕಾಂತ್ ಅಡ್ಡ ಬರುತ್ತಿರುವ ಬಗ್ಗೆ ವಿವರಿಸಿದ್ದ. ಚಂದ್ರಕಾಂತ್ ಕೊಲೆ ಮಾಡಿದರೆ ಆಸ್ಪತ್ರೆಯಲ್ಲಿ ಕೆಲಸ ಕೊಡಿಸುತ್ತೇನೆ ಎಂದು ಶ್ರೀಧರ್ ಪುಸಲಾಯಿಸಿದ್ದ. ಈತನ ಮಾತನ್ನು ನಂಬಿದ ಸಿದ್ದೇಶ್‌ ತನ್ನ ಸ್ನೇಹಿತ ನಿತೇಶ್‌ ಜೊತೆ ಸೇರಿ ಹತ್ಯೆ ಮಾಡಲು ಯೋಜನೆ ರೂಪಿಸಿದ್ದರು. ಜೊತೆಗೆ ಕೊಲೆ ಮಾಡಲು 1 ಲಕ್ಷ ರೂಪಾಯಿಗೆ ಸುಪಾರಿ ಪಡೆದುಕೊಂಡಿದ್ದರು. ಸುಂಕದಕಟ್ಟೆಯಲ್ಲಿ ಚಂದ್ರಕಾಂತ್ ನಡೆದುಕೊಂಡು ತೆರಳುತ್ತಿದ್ದ ಸಂದರ್ಭದಲ್ಲಿ ಕೊಲೆಗೆ ಪ್ರಯತ್ನ ನಡೆಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಆಟೊ ಮತ್ತು ಬೈಕ್‌ ನಡುವೆ ಭೀಕರ ಅಪಘಾತ, ಇಬ್ಬರು ಯುವಕರ ಸಾವು

ಬೆಂಗಳೂರಿನ ಪೀಣ್ಯ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಅಂದ್ರಹಳ್ಳಿ ರಸ್ತೆಯಲ್ಲಿ ಸರಕು ಸಾಗಣೆ ಆಟೊ ಮತ್ತು ಬೈಕ್‌ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಯುವಕರು ಮೃತಪಟ್ಟಿದ್ದಾರೆ. ಅಂದ್ರಹಳ್ಳಿ ನಿವಾಸಿಗಳಾದ ಫಾರೂಕ್ ಮತ್ತು ಅಬ್ರಾರ್ ಅಹ್ಮದ್ ಮೃತಪಟ್ಟ ದುರ್ದೈವಿಗಳು. ಇಬ್ಬರೂ18 ವರ್ಷದ ಯುವಕರು. ಈ ಅಪಘಾತದಲ್ಲಿ ಗಾಯಗೊಂಡ ಮೊಹಮ್ಮದ್ ಸಿದ್ದಿಕ್ ಎಂಬ ಮತ್ತೊಬ್ಬ ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಮೃತಪಟ್ಟ ಇಬ್ಬರು ಹಾಗೂ ಗಾಯಗೊಂಡ ಓರ್ವ ಸೇರಿ ಮೂವರೂ ಒಂದೇ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದರು. ಅಂದ್ರಹಳ್ಳಿ ಮುಖ್ಯ ರಸ್ತೆಯಲ್ಲಿ ರಾತ್ರಿ 11.30ರ ಸುಮಾರಿಗೆ ಎದುರಿನಿಂದ ಇಳಿಜಾರು ರಸ್ತೆಯಲ್ಲಿ ಸರಕು ಸಾಗಣೆ ಆಟೊ ಬರುತ್ತಿತ್ತು. ಆಗ ನಿಯಂತ್ರಣ ಕಳೆದುಕೊಂಡ ಆಟೊ, ಬೈಕ್‌ಗೆ ಡಿಕ್ಕಿ ಹೊಡೆದಿದೆ. ಇದರಿಂದ ಬೈಕ್ ಮೇಲಿದ್ದ ಮೂವರೂ ಸವಾರರು ಗಂಭೀರವಾಗಿ ಗಾಯಗೊಂಡಿದ್ದರು. ಸ್ಥಳೀಯರು ಕೂಡಲೇ ಆ ಮೂವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಮೃತಪಟ್ಟಿದ್ಧಾರೆ ಎಂದು ಸಂಚಾರ ಪೊಲೀಸರು ಹೇಳಿದ್ದಾರೆ.

ಗೂಡ್ಸ್‌ ಆಟೊದ ಚಾಲಕ ಉಮೇಶ್ ವಾಹನವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ಆತನ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಸರಕು ಸಾಗಣೆ ಆಟೊದ ಮುಂದಿನ ಟೈರ್ ಸ್ಫೋಟಗೊಂಡ ಪರಿಣಾಮ ಅಪಘಾತ ಸಂಭವಿಸಿದೆ ಎಂದು ಉತ್ತರ ಸಂಚಾರ ವಿಭಾಗದ ಡಿಸಿಪಿ ಸಿರಿಗೌರಿ ತಿಳಿಸಿದ್ದಾರೆ.

(ವರದಿ- ಎಚ್. ಮಾರುತಿ, ಬೆಂಗಳೂರು)

IPL_Entry_Point