ತುಂಗಭದ್ರಾ ಜಲಾಶಯದ ಕ್ರೆಸ್ಟ್‌ಗೇಟ್ ದುರಸ್ತಿಗೆ 2 ಸಂಸ್ಥೆಗಳ ನೆರವು; 60 ಟಿಎಂಸಿ ನೀರು ಉಳಿಯಲಿದೆ, ಡಿಸಿಎಂ ಡಿಕೆ ಶಿವಕುಮಾರ್ ಭರವಸೆ
Tungabhadra dam breach; ತುಂಗಭದ್ರಾ ಜಲಾಶಯದ ಕ್ರೆಸ್ಟ್‌ಗೇಟ್ ದುರಸ್ತಿಗೆ ಕ್ರಮ ತೆಗೆದುಕೊಂಡಿರುವ ಸರ್ಕಾರ, ಅದರಲ್ಲಿ 60 ಟಿಎಂಸಿ ನೀರು ಉಳಿಸಲು ಪ್ರಯತ್ನಿಸಿರುವುದಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬೆಂಗಳೂರಿನಲ್ಲಿ ಇಂದು ತಿಳಿಸಿದರು.
ಬೆಂಗಳೂರು: ತುಂಗಭದ್ರಾ ಜಲಾಶಯದಲ್ಲಿ ನೀರು ಉಳಿಸಿಕೊಂಡು ಗೇಟ್ ದುರಸ್ತಿ ಮಾಡಲು ಪ್ರಯತ್ನಿಸುತ್ತಿದ್ದೇವೆ. ಆದರೂ ಅದು ಸಾಧ್ಯವಿಲ್ಲ ಎಂದು ತಜ್ಞರು ಹೇಳುತ್ತಿರುವ ಕಾರಣ ಈಗಾಗಲೆ ಎಲ್ಲ ಗೇಟ್ ತೆರೆದು ನೀರು ಬಿಡಲಾಗಿದೆ. ಸದ್ಯ 60 ಟಿಎಂಸಿ ನೀರು ಉಳಿಸಿಕೊಂಡು ರಾಜ್ಯ ರೈತರಿಗೆ ಒಂದು ಬೆಳೆಗಾದರೂ ನೀರು ಒದಗಿಸುವುದಕ್ಕೆ ಸರ್ಕಾರ ಪ್ರಯತ್ನಿಸಲಿದೆ ಎಂದು ಉಪ ಮುಖ್ಯಮಂತ್ರಿಯೂ ಆಗಿರುವ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಜಲಾಶಯದಿಂದ 60 ಟಿಎಂಸಿ ಖಾಲಿ ಮಾಡಿದ ಮೇಲೆಯೇ ಹಾನಿಗೊಳಗಾಗಿರುವ ಗೇಟ್ ದುರಸ್ತಿ ಕಾರ್ಯ ನಡೆಸಬಹುದು ಎಂದು ತಜ್ಞರು ಹೇಳಿದ್ದಾರೆ. ಈಗಾಗಲೇ ತಜ್ಞರು ತಮ್ಮ ಕೆಲಸ ಆರಂಭಿಸಿದ್ದಾರೆ. ಕ್ರೆಸ್ಟ್ ಗೇಟ್ ದುರಸ್ತಿ ಮಾಡುವುದಕ್ಕೆ 2 ಸಂಸ್ಥೆಗಳನ್ನು ಸಂಪರ್ಕಿಸಲಾಗಿದೆ. ಗೇಟ್‌ಗಳ ದುರಸ್ತಿಗಾಗಿ ಎಂಜಿನಿಯರ್, ಜೆಎಸ್‌ಡಬ್ಲ್ಯು ಸೇರಿ ಹಲವು ಪರಿಣತರನ್ನು ಸಂಪರ್ಕಿಸಲಾಗಿದೆ. ಈಗಾಗಲೇ ಲಭ್ಯವಿರುವ ಜಲಾಶಯದ ಹಳೇ ಮಾದರಿಯನ್ನು ಕೂಡ ಪರಿಣತರಿಗೆ ನೀಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ ಹೇಳಿದರು.
ಟಿಬಿ ಡ್ಯಾಮ್ ಅಷ್ಟೇ ಅಲ್ಲ, ಇತರೆ ಅಣೆಕಟ್ಟೆಗಳ ಪರಿಶೀಲನೆ- ಜಲಸಂಪನ್ಮೂಲ ಸಚಿವ
ತುಂಗಭದ್ರಾ ಜಲಾಶಯದಿಂದ ನೀರಾವರಿ ಮಾಡಲು ಎರಡೂ ಬೆಳೆಗಳಿಗೂ 115 ಟಿಎಂಸಿ ನೀರು ದೊರೆಯಬೇಕಿದೆ. ಈಗ ನಾವು 53 ಟಿಎಂಸಿ ನೀರು ಉಳಿಸಬೇಕಿದೆ. ಗೇಟ್ ನಂಬರ್ 19ರ ಜತೆಗೆ ಇನ್ನೂ 10 ಗೇಟ್ ದುರಸ್ತಿ ಕೆಲಸವೂ ನಡೆದಿದೆ ಎಂದು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ವಿವರಿಸಿದರು.
ತುಂಗಭದ್ರಾ ಜಲಾಶಯ ಗೇಟ್ ಕಿತ್ತುಹೋದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ಅಧಿಕಾರಿಗಳ ಜತೆಗೆ ಭಾನುವಾರ ಸಭೆ ನಡೆಸಿದ ಅವರು, ಮೂರು ರಾಜ್ಯಗಳ ಪಾಲಿನ ಬಹುದೊಡ್ಡ ಸಂಪತ್ತು (ನೀರು) ಅನ್ಯಾಯವಾಗಿ ಪೋಲಾಗುತ್ತಿರುವುದು ನೋಡಿ ನೋವಾಗುತ್ತಿದೆ. ಹೇಗಾದರೂ ಮಾಡಿ ಕರ್ನಾಟಕ, ಆಂಧ್ರ, ತೆಲಂಗಾಣಗಳ ರೈತರ ಹಿತಕ್ಕಾಗಿ ನಾಟಿ ಮಾಡಿರುವ ಮುಂಗಾರು ಬೆಳೆಗಾದರೂ ನೀರು ಉಳಿಸಿಕೊಳ್ಳುವ ಪ್ರಯತ್ನ ನಡೆದಿದೆ. ನಾಲೈದು ದಿನದೊಳಗೆ ಗೇಟು ದುರಸ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.
ತುಂಗಭದ್ರಾ ಅಣೆಕಟ್ಟೆ ರೀತಿಯಲ್ಲಿ ಇತರೆ ಡ್ಯಾಂಗಳಲ್ಲೂ ಕೂಲಂಕಷ ಪರಿಶೀಲನೆಗೆ ಸೂಚನೆ ನೀಡಲಾಗಿದೆ. ಎಲ್ಲ ಡ್ಯಾಂಗಳ ಸುರಕ್ಷತೆ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಈ ನಿಟ್ಟಿನಲ್ಲಿ ಸಮರೋಪಾದಿಯಲ್ಲಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವ ಡಿಕೆ ಶಿವಕುಮಾರ್ ತಿಳಿಸಿದರು.
ತುಂಗಭದ್ರಾ ಜಲಾಶಯದ 19ನೇ ಗೇಟ್‌ನಿಂದಲೇ 35 ಸಾವಿರ ಕ್ಯುಸೆಕ್ ನೀರು ಹೊರಕ್ಕೆ
ಈ ದುರಂತಕ್ಕೆ ನಾನು ಯಾರನ್ನೂ ಹೊಣೆ ಮಾಡುವುದಿಲ್ಲ. ಯಾವ ಅಧಿಕಾರಿಯನ್ನೂ ಗುರಿಯಾಗಿಸಿಕೊಂಡು ಕ್ರಮವಹಿಸುವುದಿಲ್ಲ ಎಂದ ಡಿಕೆ ಶಿವಕುಮಾರ್ ಅವರು, ಈಗಾಗಲೇ ನಾನು ಆಂಧ್ರ, ತೆಲಂಗಾಣ ರಾಜ್ಯಗಳೊಂದಿಗೆ ಚರ್ಚೆ ಮಾಡಿ, ದುರಂತ ನಿಭಾಯಿಸುವ ದಿಸೆಯಲ್ಲಿ ಕ್ರಮ ತೆಗೆದುಕೊಂಡಿದ್ದೇನೆ ಎಂದು ಹೇಳಿದರು.
ಇದೇ ವೇಳೆ ನದಿ ಪಾತ್ರದ ಜನರಲ್ಲಿ ಜಾಗೃತಿ ಮೂಡಿಸಲು ಸ್ಥಳೀಯಾಡಳಿತ ಧ್ವನಿವರ್ಧಕದ ಮೂಲಕವೂ ಎಚ್ಚರಿಕೆ ಸಂದೇಶ ರವಾನಿಸಿದೆ. ಇನ್ನೊಂದೆಡೆ ಸೋಷಿಯಲ್ ಮೀಡಿಯಾ ಮೂಲಕವೂ ಜನರನ್ನು ಎಚ್ಚರಿಸುವ ಕೆಲಸ ಮಾಡಲಾಗಿದೆ.
ತುಂಗಭದ್ರಾ ಜಲಾಶಯದ ಮುರಿದಿರುವ 19ನೇ ಗೇಟ್‌ವೊಂದರಿಂದಲೇ 35000 ಕ್ಯುಸೆಕ್ ಹಾಗೂ ಉಳಿದ ಗೇಟ್‌ಗಳಿಂದ ಒಟ್ಟಾರೆ 98,000 ಕ್ಯುಸೆಕ್ ನೀರು ಹೊರಗೆ ನದಿಗೆ ಹರಿಯುತ್ತಿದೆ. ಒಟ್ಟು 65 ಟಿಎಂಸಿ ನೀರು ಖಾಲಿ ಮಾಡಿದ ಮೇಲೆಯೇ ದುರಸ್ತಿ ಕಾರ್ಯ ನಡೆಯಲಿದೆ. ಹೀಗಾಗಿ, ನದಿ ಪಾತ್ರದ ಜನರಿಗೆ ಪ್ರವಾಹದ ಎಚ್ಚರಿಕೆ ನೀಡಿದ್ದು, ಸುರಕ್ಷಿತ ಸ್ಥಳದಲ್ಲಿ ಇರುವಂತೆ ಮನವಿ ಮಾಡಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.