Bengaluru News: ಲಾಲ್ಬಾಗ್ನಲ್ಲಿ 2 ಲಕ್ಷ ಹೂವು ವಿತರಣೆ, ಕೃತಕ ಹೂವು ಬಳಸದಂತೆ ವಿನೂತನ ಜಾಗೃತಿ ಅಭಿಯಾನ
ಬೆಂಗಳೂರಿನ ಲಾಲ್ಬಾಗ್ನಲ್ಲಿ 2 ಲಕ್ಷ ಹೂವು ವಿತರಿಸಿ ಕೃತಕ ಹೂಗಳನ್ನು ಬಳಸದಂತೆ ರಾಜ್ಯದ ಹೂವು ಬೆಳೆಗಾರರಿಂದ ವಿನೂತನ ಜನಜಾಗೃತಿ ಅಭಿಯಾನ ನಡೆಯಿತು. ಈ ಅಭಿಯಾನದಲ್ಲಿ ಭಾಗವಹಿಸಿದ ಅಪರ ಮುಖ್ಯಕಾರ್ಯದರ್ಶಿ ಹಾಗೂ ಅಭಿವೃದ್ದಿ ಆಯುಕ್ತರಾದ ಶಾಲಿನಿ ರಜನೀಶ್ ಭಾಗಿ ನೈಸರ್ಗಿಕ ಹೂಗಳನ್ನ ಬಳಕೆ ಮಾಡಿ ಹೂವು ಬೆಳೆಗಾರರಿಗೆ ಪ್ರೋತ್ಸಾಹ ನೀಡುವಂತೆ ಜನರಲ್ಲಿ ಮನವಿ ಮಾಡಿದರು.
ಬೆಂಗಳೂರು: ಕರ್ನಾಟಕದಲ್ಲಿ ಕೃತಕ ಹೂವುಗಳ ಬಳಕೆ ಹೆಚ್ಚಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಹೂವು ಬೆಳೆಗಾರರು ಇಂದು (ಡಿ.31) ಬೆಂಗಳೂರಿನ ಲಾಲ್ಬಾಗ್ನಲ್ಲಿ 2 ಲಕ್ಷ ಹೂವುಗಳನ್ನು ವಿತರಿಸಿ, ಕೃತಕ ಹೂವು ಬಳಸದಂತೆ ಜನರಲ್ಲಿ ಜಾಗೃತಿ ಮೂಡಿಸುವ ವಿನೂತನ ಅಭಿಯಾನ ನಡೆಸಿದರು.
ಹೂವು ಬೆಳೆಗಾರರನ್ನ ಬೀದಿಗೆ ತಳ್ಳಿರುವ ಕೃತಕ ಹೂವುಗಳ ಬಳಕೆಗೆ ಕಡಿವಾಣ ಹಾಕುವಂತೆ ಜನರಲ್ಲಿ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ರಾಜ್ಯದ ಹೂವು ಬೆಳೆಗಾರರು, ಸುಮಾರು 2 ಲಕ್ಷ ಹೂವುಗಳನ್ನು ಜನರಿಗೆ ಉಚಿತವಾಗಿ ವಿತರಿಸಿದರು. ಪ್ಲಾಸ್ಟಿಕ್ ಹಾಗೂ ಸಿಂಥಟಿಕ್ ಹೂವುಗಳ ಬಳಕೆಯಿಂದ ಪರಿಸರದ ಮೇಲೆ ಆಗುವ ದಷ್ಪರಿಣಾಮಗಳು ಹಾಗೂ ರೈತರಿಗೆ ಆಗುವ ಅನ್ಯಾಯದ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಿದರು.
ತೋಟಗಾರಿಕೆ ಇಲಾಖೆ-ಕರ್ನಾಟಕ ಸರ್ಕಾರ, ಅಂತರಾಷ್ಟ್ರೀಯ ಪುಷ್ಪ ಹರಾಜು ಬೆಂಗಳೂರು,ಜಿಎಫ್ಸಿಐ, ಅಗ್ರಿ ಪ್ಲಾಸ್ಟ್, ರಾಜ್ಯದ ಹೂ ಬೆಳೆಗಾರರು/ ಖರೀದಾರರ ಸಹಯೋಗದಲ್ಲಿ ಈ ಅಭಿಯಾನ ನಡೆಯಿತು. ಈ ಕಾರ್ಯಕ್ರಮದಲ್ಲಿ ರಾಜ್ಯದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ದಿ ಆಯುಕ್ತೆ ಶಾಲಿನಿ ರಜನೀಶ್ ಭಾಗವಹಿಸಿದ್ದರು.
ಕರ್ನಾಟಕದಲ್ಲಿ ಹೂವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ವಾಣಿಜ್ಯ ಬೆಳೆಯಾಗಿ ಬೆಳೆಸಲಾಗುತ್ತಿದೆ. ವಿಶ್ವದ ಹಲವಾರು ರಾಷ್ಟ್ರಗಳಿಗೆ ಇಲ್ಲಿನಿಂದಲೇ ಹೂವುಗಳನ್ನು ರಫ್ತು ಮಾಡಲಾಗುತ್ತಿದೆ. ಕೃತಕ ಹೂಗಳನ್ನ ಬಿಟ್ಟು ಜನರು ಹೆಚ್ಚಿನ ಪ್ರಮಾಣದಲ್ಲಿ ನೈಸರ್ಗಿಕ ಹೂವುಗಳನ್ನ ಬಳಸಬೇಕು ಎಂದು ಶಾಲಿನಿ ರಜನೀಶ್ ಮನವಿ ಮಾಡಿದರು.
ಕೃತಕ ಹೂವುಗಳ ಬಳಕೆಯಿಂದ ಪರಿಸರದ ಮೇಲೆ ಅಷ್ಟೇ ಅಲ್ಲದೇ ರಾಜ್ಯದ ಹೂವು ಬೆಳೆಗಾರರಿಗೂ ತೊಂದರೆ ಆಗುತ್ತಿದೆ. ಈ ಬಗ್ಗೆ ಅಗತ್ಯ ಕ್ರಮದ ಕೈಗೊಳ್ಳುವಂತೆ ಬೆಳೆಗಾರರು ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಸರಕಾರದ ಗಮನ ಸೆಳೆಯಲಾಗುವುದು ಎಂದು ಶಾಲಿನಿ ರಜನೀಶ್ ಭರವಸೆ ನೀಡಿದರು.
ಕರ್ನಾಟಕದಲ್ಲಿ 38000 ಹೆಕ್ಟೇರ್ ಪ್ರದೇಶದಲ್ಲಿ ಪುಷ್ಪ ಕೃಷಿ ಮಾಡಲಾಗುತ್ತಿದೆ. ಸುಮಾರು 1500 ಹೆಕ್ಟೇರ್ಗಿಂತಲೂ ಹೆಚ್ಚು ಪ್ರದೇಶದಲ್ಲಿ ವಾಣಿಜ್ಯ ಪುಷ್ಪಗಳನ್ನು ಬೆಳೆಯಲಾಗುತ್ತಿದೆ. ರಾಜ್ಯದಲ್ಲಿ ಗುಲಾಬಿ, ಸೇವಂತಿಗೆ, ಚೆಂಡು ಹೂ, ಸುಗಂಧರಾಜ, ಕನಕಾಂಬರ ಇತ್ಯಾದಿ ಬಿಡಿ ಹೂಗಳನ್ನು ಹಾಗೂ ಕಟ್ ಗುಲಾಬಿ, ಕಟ್ ಸೇವಂತಿಗೆ, ಜೆರ್ಬೆರ, ಆಂತುರಿಯಮ್ಸ, ಆರ್ಕಿಡ್ಸ್ ಇತ್ಯಾದಿ ವಾಣಿಜ್ಯ ಬೆಳೆಗಳನ್ನು ಹಸಿರು ಮನೆ/ ಪಾಲಿಮನೆಯಲ್ಲಿ ಬೆಳೆಲಾಗುತ್ತಿದೆ. ಇದರಿಂದ ನೇರ ಹಾಗೂ ಪರೋಕ್ಷವಾಗಿ 11 ಲಕ್ಷ ಜನ ಬದುಕಿಗಾಗಿ ಇದನ್ನೇ ಅವಲಂಬಿಸಿದ್ದಾರೆ.
ಇಷ್ಟೇ ಅಲ್ಲ, ರಾಜ್ಯದಲ್ಲಿ 2.8 ಲಕ್ಷ ಎಕರೆ ಪ್ರದೇಶದಲ್ಲಿ ಕಾಕಡ, ಮಲ್ಲಿಗೆ, ಮ್ಯಾರಿಗೋಲ್ಡ್, ಸಂಪಂಗಿ, ಕನಕಾಂಬರ ಸೇರಿ 40 ಬಗೆಯ ಹೂಗಳನ್ನು ಬೆಳೆಯಲಾಗುತ್ತದೆ. ಬದುಕಿಗಾಗಿ ಇದನ್ನು ಅವಲಂಬಿಸಿರುವವರ ಸಂಖ್ಯೆ 52 ಲಕ್ಷಕ್ಕೂ ಹೆಚ್ಚು. ಕೃತಕ ಹೂವುಗಳ ಬಳಕೆಯ ಕಾರಣ ನೈಜ ಹೂವುಗಳಿಗೆ ಉತ್ತಮ ದರ ದೊರಕದೆ ಬೆಳೆಗಾರರು ತೊಂದರೆಗೆ ಸಿಲುಕಿಕೊಂಡಿದ್ದಾರೆ. ಜನರು ಕೃತಕ ಹೂವುಗಳನ್ನ ಬಿಟ್ಟು ನೈಸರ್ಗಿಕ ಹೂವುಗಳ ಬಳಕೆಯನ್ನು ಹೆಚ್ಚಿಸಬೇಕು ಎಂದು ದಕ್ಷಿಣ ಭಾರತ ಹೂ ಬೆಳೆಗಾರರ ಸಂಘದ ಅಧ್ಯಕ್ಷ ಟಿ ಎಂ ಅರವಿಂದ್ ಮನವಿ ಮಾಡಿದರು.
ರೈತರ ಆದಾಯದಲ್ಲಿ ಕುಸಿತ: ಪ್ರತಿ ಎಕರೆಗೆ 50 ಲಕ್ಷ ರೂಪಾಯಿ ಬಂಡವಾಳ ಹೂಡಿಕೆ ಮಾಡಿ ಪಾಲಿ ಹೌಸ್ ಸೇರಿ ಹಲವಾರು ಉಪಕರಣಗಳ ಖರೀದಿಗೆ ರೈತರು ಮುಂದಾಗಿದ್ದಾರೆ. ಸರಿಯಾದ ಪ್ರಮಾಣದ ಬೆಲೆ ದೊರೆಕದೆ ಇದ್ದಲ್ಲಿ ರೈತರ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದಿಲ್ಲ. ಅಲ್ಲದೆ ರೈತರ ಆದಾಯ ಕುಸಿತದಿಂದಾಗಿ ಮಾಡಿರುವ ಸಾಲ ತೀರಿಸಲಾಗದೆ ರೈತರು ಸಂಕಷ್ಟದಲ್ಲಿದ್ದಾರೆ.
ಪ್ರತಿವರ್ಷ ಹಬ್ಬಗಳಲ್ಲಿ, ಮದುವೆ ಹಾಗೂ ಇನ್ನಿತರೆ ಸಮಾರಂಭಗಳಲ್ಲಿ ಕೃತಕ ಹೂಗಳ ಬಳಕೆ ಹೆಚ್ಚಾಗುತ್ತಿದೆ. ಹೀಗಾಗಿ, ನೈಜ ಹೂಗಳನ್ನು ಕೊಳ್ಳುವರಿಲ್ಲದಂತಾಗಿದೆ. ಇದೇ ರೀತಿಯ ಬಳಕೆ ಹೆಚ್ಚಾದಲ್ಲಿ ನೈಸರ್ಗಿಕ ಹೂಗಳ ಬಳಕೆ ಸಂಪೂರ್ಣ ಕಡಿಮೆಯಾಗಲಿದ್ದು ಹೂ ಬೆಳೆಗಾರರು ಸಂಕಷ್ಟಕ್ಕೀಡಾಗುವ ಪರಿಸ್ಥಿತಿ ಎದುರಾಗಲಿದೆ. ಹೊಸ ವರ್ಷದ ಈ ಶುಭ ಸಂದರ್ಭದಲ್ಲಿ ಜನರು ನೈಸರ್ಗಿಕ ಹೂವುಗಳನ್ನ ಹೆಚ್ಚಿನ ಪ್ರಮಾಣದಲ್ಲಿ ಬಳಸಲು ಮುಂದಾಗಬೇಕು ಎಂದರು.
ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಕಾರ್ಯದರ್ಶಿ ಡಾ. ಶಾಮ್ಲಾ ಇಕ್ಬಾಲ್, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕರು ಹಾಗೂ ಅಂತಾರಾಷ್ಟ್ರೀಯ ಪುಷ್ಪ ಹರಾಜು ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ರಾದ ವಿಶ್ವನಾಥ್ ಮುನಿಯಪ್ಪ ದಕ್ಷಿಣ ಭಾರತ ಹೂ ಬೆಳೆಗಾರರ ಸಂಘದ ನಿರ್ದೇಶಕ ಶ್ರೀಕಾಂತ್ ಸೇರಿ ಹಲವರು ಉಪಸ್ಥಿತರಿದ್ದರು.