ಬೆಂಗಳೂರಿನಲ್ಲಿ ಕಳೆಗಟ್ಟಿದ ಕ್ರಿಸ್‌ಮಸ್‌ ಸಂಭ್ರಮ, ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ; ರಾಜಧಾನಿಯಲ್ಲಿ ನೋಡಲೇಬೇಕಾದ 5 ಚರ್ಚ್‌ಗಳಿವು
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಿನಲ್ಲಿ ಕಳೆಗಟ್ಟಿದ ಕ್ರಿಸ್‌ಮಸ್‌ ಸಂಭ್ರಮ, ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ; ರಾಜಧಾನಿಯಲ್ಲಿ ನೋಡಲೇಬೇಕಾದ 5 ಚರ್ಚ್‌ಗಳಿವು

ಬೆಂಗಳೂರಿನಲ್ಲಿ ಕಳೆಗಟ್ಟಿದ ಕ್ರಿಸ್‌ಮಸ್‌ ಸಂಭ್ರಮ, ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ; ರಾಜಧಾನಿಯಲ್ಲಿ ನೋಡಲೇಬೇಕಾದ 5 ಚರ್ಚ್‌ಗಳಿವು

ವಿಶ್ವದಾದ್ಯಂತ ಕ್ರಿಸ್‌ಮಸ್‌ ಸಂಭ್ರಮ ಜೋರಾಗಿದೆ. ಬೆಂಗಳೂರಿನ ಪ್ರಸಿದ್ಧ ಚರ್ಚ್‌ಗಳು ಅಲಂಕರಿಸಿಕೊಂಡು ಬೆಳಕಿನ ರಂಗಿನಲ್ಲಿ ಮಿಂದೇಳುತ್ತಿದೆ. ಶತಮಾನಗಳ ಇತಿಹಾಸ ಹೊಂದಿರುವ ಪ್ರಸಿದ್ಧ ಚರ್ಚ್‌ಗಳಲ್ಲಿ ನಿನ್ನೆ ರಾತ್ರಿಯಿಂದಲೇ ಯೇಸುವಿನ ಪ್ರಾರ್ಥನೆ ಆರಂಭವಾಗಿದೆ. ಮತ್ತೊಂದೆಡೆ ಗ್ರಾಹಕರನ್ನು ಸೆಳೆಯಲು ಮಾಲ್‌ಗಳೂ ಸಹ ಅಲಂಕೃತಗೊಂಡಿವೆ. (ವರದಿ: ಎಚ್. ಮಾರುತಿ)

ಬೆಂಗಳೂರಿನ ಪ್ರಸಿದ್ಧ ಚರ್ಚ್‌ಗಳು
ಬೆಂಗಳೂರಿನ ಪ್ರಸಿದ್ಧ ಚರ್ಚ್‌ಗಳು

ಬೆಂಗಳೂರು: ಕ್ರಿಸ್‌ಮಸ್‌ ದಿನಗಳಲ್ಲಿ ಬೆಂಗಳೂರಿನ ಬೀದಿಗಳಲ್ಲಿ ಸಂಚರಿಸುವುದೇ ಅಂದ. ಅದರಲ್ಲೂ ಪ್ರಸಿದ್ಧ ಚರ್ಚ್‌ಗಳಿರುವ ಬೀದಿಗಳಂತೂ ಹಬ್ಬದ ವಾತಾವರಣವನ್ನೇ ಸೃಷ್ಟಿಸಿರುತ್ತವೆ. ಇಂದು ಕ್ರಿಸ್‌ಮಸ್‌ ಹಬ್ಬವಾಗಿದ್ದು ಬೆಂಗಳೂರಿನ ಎಂಜಿ ರಸ್ತೆ, ಟ್ರಿನಿಟಿ, ಬ್ರಿಗೆಡ್‌ ರಸ್ತೆ, ಕೋರಮಂಗಲ ಹೀಗೆ ಪ್ರಮುಖ ಏರಿಯಾಗಳಲ್ಲಿ ಸಂಭ್ರಮ ಕಳೆಗಟ್ಟಿದೆ. ಚರ್ಚ್‌ಗಳಲ್ಲಿ ಮದ್ಯರಾತ್ರಿಯಿಂದಲೇ ಯೇಸುವಿನ ಪ್ರಾರ್ಥನೆ ಆರಂಭವಾಗಿದೆ. ಇದರೊಂದಿಗೆ ಮಾಲ್‌ಗಳು ಕೂಡ ಕ್ರಿಸ್‌ಮಸ್‌ ಹಬ್ಬವಾಗಿ ಮದುಮಣಗಿತ್ತಿಯಂತೆ ಸಿಂಗರಿಸಿಕೊಂಡು ಗ್ರಾಹಕರನ್ನು ಸೆಳೆಯುತ್ತಿದೆ.

ಬೆಂಗಳೂರು ಚರ್ಚ್‌ಗಳಿಗೆ ಪ್ರಸಿದ್ಧಿ ಪಡೆದಿದೆ. ಶತಶತಮಾನಗಳ ಚರ್ಚ್‌ಗಳು ಇಲ್ಲಿದೆ. ಕ್ರಿಸ್‌ಮಸ್‌ ಹಬ್ಬದಂದು ಬೆಂಗಳೂರಿನ ಪ್ರಸಿದ್ಧ 5 ಚರ್ಚ್‌ಗಳ ಪರಿಚಯ ತಿಳಿಯಿರಿ. ಈ ಚರ್ಚ್‌ಗಳು ಐತಿಹಾಸಿಕ ಮಹತ್ವವನ್ನು ಹೊಂದಿವೆ. ಅವುಗಳ ರಚನೆ, ವಿನ್ಯಾಸ ಆಕರ್ಷಿಸಿದೆ ಇರದು.

ಇದನ್ನೂ ಓದಿ: Christmas 2023: ಶಾಂತಿ, ಸಂತೋಷದ ಸಂಕೇತ ಕ್ರಿಸ್‌ಮಸ್‌ ಆಚರಣೆಯ ಇತಿಹಾಸ, ಮಹತ್ವ ತಿಳಿಯಿರಿ

1. ಸೇಂಟ್‌ ಮೇರಿಸ್‌ ಬೆಸಿಲಿಕಾ ಚರ್ಚ್

ಶಿವಾಜಿನಗರದ ಸೇಂಟ್‌ ಮೇರಿಸ್‌ ಬೆಸಿಲಿಕಾ ಚರ್ಚ್ 17ನೆ ಶತಮಾನದಲ್ಲಿ ನಿರ್ಮಾಣಗೊಂಡಿದೆ. ಬಸ್ ನಿಲ್ದಾಣಕ್ಕೆ ಸಮೀಪದಲ್ಲಿದ್ದು, ಬೆಂಗಳೂರಿಗೆ ಆಗಮಿಸುವ ಪ್ರವಾಸಿಗರು ಈ ಚರ್ಚ್ ನೋಡದೆ ಮರಳುವುದಿಲ್ಲ. ಗೋಥಿಕ್ ಶೈಲಿಯಲ್ಲಿ ನಿರ್ಮಾಣಗೊಂಡಿರುವ ಈ ಚರ್ಚ್‌ನ ವಾಸ್ತು ಶಿಲ್ಪ ಮನಮೋಹಕವಾಗಿದೆ. ವಿದ್ಯುತ್‌ ದೀಪಗಳಿಂದ ಅಲಂಕೃತವಾಗಿರುವ ಈ ಚರ್ಚ್‌ನಲ್ಲಿ ಭಾನುವಾರ ಸಂಜೆಯಿಂದಲೇ ಜನ ಜಂಗುಳಿ ನೆರೆದಿತ್ತು. ಯೇಸುವಿನ ಜೀವನ ಬಿಂಬಿಸುವ ಗೋದಲಿ ಪ್ರದರ್ಶನವನ್ನು ಸಾವಿರಾರು ಮಂದಿ ವೀಕ್ಷಿಸಿದರು.

2. ಸೇಂಟ್ ಪ್ಯಾಟ್ರಿಕ್ ಚರ್ಚ್

ಬೆಂಗಳೂರಿನಲ್ಲಿರುವ ಅತ್ಯಂತ ಪುರಾತನ ಕ್ಯಾಥೋಲಿಕ್ ಚರ್ಚ್‌ಗಳಲ್ಲಿ ಸೇಂಟ್ ಪ್ಯಾಟ್ರಿಕ್ ಚರ್ಚ್‌ ಸಹ ಒಂದು. ಇದು ಬ್ರಿಗೇಡ್‌ ರಸ್ತೆಯಲ್ಲಿದೆ. 1844ರಲ್ಲಿ ನಿರ್ಮಿಸಲಾದ ಈ ಐತಿಹಾಸಿಕ ಕಟ್ಟಡ ವಿಶಿಷ್ಟ ಶೈಲಿಯ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ. ಅದರ ಕಮಾನಿನ ಪ್ರವೇಶದ್ವಾರ ಮತ್ತು ಕ್ರಿಸ್ತನ ಅಪೊಸ್ತಲರನ್ನು ಸಂಕೇತಿಸುವ ಹನ್ನೆರಡು ಸ್ತಂಭಗಳು ಬೆರಗು ಮೂಡಿಸುತ್ತವೆ. ಚರ್ಚ್‌ನ ಬಲಭಾಗದಲ್ಲಿ ಸೇಂಟ್ ಆಂಥೋನಿಗೆ ಅರ್ಪಿತವಾದ ದೇವಾಲಯವಿದೆ. ಈ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದರೆ ಸಮಸ್ಯೆಗಳಿಂದ ಮುಕ್ತರಾಗಬಹುದು ಎಂದು ನಂಬಲಾಗಿದೆ.

ಇದನ್ನೂ ಓದಿ: Christmas celebrations: ಕ್ರಿಸ್‌ಮಸ್‌ ಸಂಭ್ರಮ: ಬಗೆಬಗೆಯ ಬಣ್ಣಗಳಲ್ಲಿ ಮಿಂದೆದ್ದ ಏಷಿಯಾದ ಅತಿ ದೊಡ್ಡ ಮೈಸೂರು ಸೆಂಟ್‌ ಫಿಲೋಮಿನಾ ಚರ್ಚ್‌

3. ಫ್ರಾನ್ಸಿಸ್ ಕ್ಸೇವಿಯರ್ ಕ್ಯಾಥೆಡ್ರಲ್ ಚರ್ಚ್

ಬೆಂಗಳೂರಿನ ರೋಮನ್ ಕ್ಯಾಥೋಲಿಕ್ ಚರ್ಚ್‌ಗಳಲ್ಲಿ ಒಂದು ಈ ಫ್ರಾನ್ಸಿಸ್ ಕ್ಸೇವಿಯರ್ ಕ್ಯಾಥೆಡ್ರಲ್ ಚರ್ಚ್. ಇದು ಕ್ಲೀವ್‌ ಲ್ಯಾಂಡ್‌ ಟೌನ್‌ನಲ್ಲಿದೆ. ಇದನ್ನು 1851ರಲ್ಲಿ ನಿರ್ಮಿಸಲಾಯಿತು. ಆದರೆ 1905ರಲ್ಲಿ, ಚರ್ಚ್‌ನ ಗೋಪುರದಿಂದ ಶಿಲುಬೆ ಬಿದ್ದಾಗ, ಕಟ್ಟಡವನ್ನು ಮರು ನಿರ್ಮಿಸಲಾಗಿದೆ.

4. ಹೋಲಿ ಟ್ರಿನಿಟಿ ಚರ್ಚ್

1852ರಲ್ಲಿ ಹೋಲಿ ಟ್ರಿನಿಟಿ ಚರ್ಚ್‌ ಅನ್ನು ಸ್ಥಾಪಿಸಲಾಯಿತು. ಇದು ಬೆಂಗಳೂರಿನ ಪ್ರತಿಷ್ಠಿತ ಟ್ರಿನಿಟಿ ಸರ್ಕಲ್‌ನಲ್ಲಿದೆ. ದಕ್ಷಿಣ ಭಾರತದ ಅತಿದೊಡ್ಡ ಮಿಲಿಟರಿ ಚರ್ಚ್ ಎಂದು ಹೆಸರುವಾಸಿಯಾಗಿದೆ. ಬೆಂಗಳೂರಿನ ಅತ್ಯಂತ ಮಹತ್ವದ ಪ್ರೊಟೆಸ್ಟಂಟ್ ಚರ್ಚ್‌ಗಳಲ್ಲಿ ಒಂದಾಗಿದೆ. ಇದು ನಗರದ ಪ್ರಮುಖ ಹೆಗ್ಗುರುತಾಗಿದೆ. ಒಂದು ನಿಲ್ದಾಣ, ಒಂದು ಚರ್ಚ್ ಎಂಬ ಈಸ್ಟ್ ಇಂಡಿಯಾ ಕಂಪನಿ ನೀತಿಯ ವಿರುದ್ಧದ ಪ್ರತಿಭಟನೆಯ ಫಲವಾಗಿ ಈ ಚರ್ಚ್ ಅಸ್ತಿತ್ವಕ್ಕೆ ಬಂದಿದೆ. ಹೋಲಿ ಟ್ರಿನಿಟಿ ಚರ್ಚ್ ತನ್ನದೇ ಆದ ವಿಶಿಷ್ಠ ವಾಸ್ತುಶಿಲ್ಪವನ್ನು ಹೊಂದಿದೆ.

5. ಸೇಂಟ್ ಮಾರ್ಕ್ಸ್ ಕ್ಯಾಥೆಡ್ರಲ್ ಚರ್ಚ್

200 ವರ್ಷಗಳಿಗೂ ಹೆಚ್ಚು ಇತಿಹಾಸವನ್ನು ಹೊಂದಿರುವ ಸೇಂಟ್ ಮಾರ್ಕ್ಸ್ ಕ್ಯಾಥೆಡ್ರಲ್ ಬೆಂಗಳೂರಿನ ಅತ್ಯಂತ ಹಳೆಯ ಚರ್ಚ್‌ಗಳಲ್ಲಿ ಒಂದಾಗಿದೆ. ಇದು ಬೆಂಗಳೂರಿನ ಎಂಜಿ ರಸ್ತೆಯಲ್ಲಿದೆ. ಈ ಚರ್ಚ್ 1808 ರಲ್ಲಿ ಸ್ಥಾಪನೆಯಾಗಿದೆ.

ಎಲ್ಲಾ ಚರ್ಚ್‌ಗಳಲ್ಲಿ ಬೃಹತ್ ಗಾತ್ರದ ನಕ್ಷತ್ರಗಳು, ಕ್ರಿಸ್‌ಮಸ್‌ ವೃಕ್ಷಗಳು, ಬಣ್ಣ ಬಣ್ಣದ ಬಲೂನುಗಳು, ಘಂಟೆಗಳು ಹಾಗೂ ಸೆಂಟಾ ಕ್ಲಾಸ್‌ ಪ್ರತಿರೂಪಗಳು ಗಮನಸೆಳೆಯುತ್ತಿವೆ.

ಮಾಲ್‌ಗಳು, ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಮತ್ತು ಕಮರ್ಷಿಯಲ್ ಸ್ಟ್ರೀಟ್‌ಗಳಿಗೂ ಕ್ರಿಸ್‌ಮಸ್‌ಗೂ ಅವಿನಾಭಾವ ಸಂಬಂಧ. ಡಿಸೆಂಬರ್ ತಿಂಗಳಲ್ಲಿ ವಿಶೇಷವಾಗಿ ಅಲಂಕೃತಗೊಂಡು ಗ್ರಾಹಕರನ್ನು ಆಕರ್ಷಿಸುತ್ತವೆ. ಒರಾಯನ್ ಮಾಲ್‌ನಲ್ಲಿ 85 ಅಡಿ ಎತ್ತರದ ಕ್ರಿಸ್‌ಮಸ್ ಟ್ರೀ ನಿರ್ಮಿಸಲಾಗಿದ್ದು ಪ್ರಮುಖ ಆಕರ್ಷಣೆಯಾಗಿದೆ. ನೆಕ್ಸಸ್ ಮಾಲ್‌ನಲ್ಲಿ 40 ಅಡಿ ಎತ್ತರದ ಕ್ರಿಸ್‌ಮಸ್ ಟ್ರೀ ಗಮನ ಸೆಳೆಯುತ್ತದೆ. ಫೀನಿಕ್ಸ್ ಮಾಲ್‌ನಲ್ಲಿ 100 ಅಡಿ ಎತ್ತರದ ಕ್ರಿಸ್‌ಮಸ್ ಟ್ರೀ ಸ್ಥಾಪಿಸಲಾಗಿದೆ.

ಇನ್ನು ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಮತ್ತು ಕಮರ್ಷಿಯಲ್ ಸ್ಟ್ರೀಟ್‌ಗಳನ್ನು ಸಂಜೆಯ ನಂತರ ನೋಡುವುದೇ ಒಂದು ಚೆಂದ. ಜಗಮಗಿಸುವ ವಿದ್ಯುತ್ ದೀಪಗಳು ಸ್ವಾಗತ ಕೋರುತ್ತವೆ. ಸಾಮಾನ್ಯವಾಗಿ ಕ್ರಿಸ್‌ಮಸ್ ಸಂದರ್ಭದಲ್ಲಿ ಭಾರಿ ರಿಯಾಯಿತಿ ಇದ್ದು ಈ ರಸ್ತೆಗಳಿಗೆ ಭೇಟಿ ನೀಡದ ಮತ್ತು ಶಾಪಿಂಗ್ ಮಾಡುವುದು ಅನೇಕ ನಿವಾಸಿಗಳಿಗೆ ವಾಡಿಕೆಯಾಗಿದೆ.

Whats_app_banner