Bengaluru News: ಬೆಂಗಳೂರಲ್ಲಿ ಗ್ಯಾಸ್ ಗೀಸರ್‌ನಿಂದ ವಿಷಾನಿಲ ಸೋರಿಕೆ, 23 ವರ್ಷದ ತಾಯಿ ಸಾವು, 4 ವರ್ಷದ ಪುತ್ರನ ಸ್ಥಿತಿ ಗಂಭೀರ
ಬೆಂಗಳೂರಿನ ಸದಾಶಿವನಗರ ಸಮೀಪ ಮನೆಯಲ್ಲಿ ಗ್ಯಾಸ್ ಗೀಸರ್ ಲೀಕ್ ಆದ ಪರಿಣಾಮ 23 ವರ್ಷದ ತಾಯಿ ಮೃತಪಟ್ಟು, 4 ವರ್ಷದ ಮಗು ಗಂಭೀರವಾಗಿ ಅಸ್ವಸ್ಥಗೊಂಡ ಹೃದಯವಿದ್ರಾವಕ ಘಟನೆ ನಡೆದಿದೆ.
ಬೆಂಗಳೂರು: ಮನೆಯ ಬಾತ್‌ರೂಮ್‌ನಲ್ಲಿ ಗ್ಯಾಸ್ ಗೀಸರ್‌ನ ಅನಿಲ ಸೋರಿಕೆಯಾಗಿ 23 ವರ್ಷದ ಮಹಿಳೆಯೊಬ್ಬರು ಮೃತಪಟ್ಟು, ಅವರ 4 ವರ್ಷದ ಪುತ್ರ ಗಂಭೀರವಾಗಿ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹೃದಯವಿದ್ರಾವಕ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸದಾಶಿವ ನಗರದ ಅಶ್ವತ್ಥನಗರದಲ್ಲಿ ಶನಿವಾರ ಈ ದುರಂತ ಸಂಭವಿಸಿದ್ದು, ಮೃತ ಮಹಿಳೆಯನ್ನು ಜಗದೀಶ್ ಅವರ ಪತ್ನಿ ರಮ್ಯಾ (23) ಎಂದು ಗುರುತಿಸಲಾಗಿದೆ. ಅವರ ಪುತ್ರ ಸಾಮ್ರಾಟ್ (4) ಅಸ್ವಸ್ಥಗೊಂಡಿದ್ದು, ಎಂ.ಎಸ್.ರಾಮಯ್ಯ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ರಮ್ಯಾ ಅವರು ಶನಿವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಪುತ್ರ ಸಾಮ್ರಾಟನನ್ನು ಸ್ನಾನ ಮಾಡಿಸಲು ಬಾತ್ ರೂಮ್‌ಗೆ ಕರೆದೊಯ್ದು ಬಾಗಿಲು ಮುಚ್ಚಿದ್ದರು. ಇದೇ ವೇಳೆ, ಗ್ಯಾಸ್ ಗೀಸರ್‌ನಿಂದ ವಿಷಾನಿಲ ಕಾರ್ಬನ್ ಮಾನಕ್ಕೆಡ್ ಸೋರಿಕೆಯಾಗಿದೆ. ವಿಷ ಅನಿಲ ಉಸಿರಾಡಿದ ಕಾರಣ ಸ್ಥಳದಲ್ಲೇ ಪ್ರಜ್ಞೆ ತಪ್ಪಿತಾಯಿ-ಮಗು ಕುಸಿದು ಬಿದ್ದಿದ್ದಾರೆ.
ಪತ್ನಿ ಮತ್ತು ಮಗ ಬಾತ್‌ರೂಮ್‌ನಿಂದ ಹೊರ ಬಾರದೇ ಇದ್ದ ಕಾರಣ ಅನುಮಾನಗೊಂಡು ಪತಿ ಜಗದೀಶ್ ಬಾಗಿಲು ಬಡಿದಿದ್ದರು. ಪ್ರತಿಕ್ರಿಯೆ ಇಲ್ಲದ ಕಾರಣ ಗಾಬರಗಿಂಡು ಬಾಗಿಲು ಒಡೆದು ನೋಡಿದಾಗ, ಕುಸಿದು ಬಿದ್ದ ಸ್ಥಿತಿಯಲ್ಲಿ ಇಬ್ಬರನ್ನೂ ಕಂಡಿದ್ದಾರೆ. ಕೂಡಲೇ ನೆರೆಮನೆಯವರ ಸಹಾಯ ಪಡೆದು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಆದರೆ, ಆಸ್ಪತ್ರೆಗೆ ಕರೆದೊಯ್ದ ಕೆಲ ಕ್ಷಣಗಳಲ್ಲೇ ಚಿಕಿತ್ಸೆ ಫಲಕಾರಿಯಾಗದೇ ದುರದೃಷ್ಟವಶಾತ್ ರಮ್ಯಾ ಅವರು ಮೃತಪಟ್ಟಿದ್ದಾರೆ. ಮಗುವಿನ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುನ್ನೆಚ್ಚರಿಕೆ ವಹಿಸಿ
ಬಾತ್‌ರೂಮ್ ಪ್ರವೇಶಿಸಿ ಬಾಗಿಲು ಮುಚ್ಚುವ ಮೊದಲು
- ಬಾತ್‌ರೂಮ್‌ನಲ್ಲಿ ವೆಂಟಿಲೇಟರ್ ಗಾಳಿ ಓಡಾಡುವುದಕ್ಕೆ ಓಪನ್ ಇದೆಯಾ ಎಂದು ಗಮನಿಸಿ
- ಗ್ಯಾಸ್ ಗೀಸರ್ ಇದ್ದರೆ ಅದರ ಸ್ಥಿತಿ ಹೇಗಿದೆ ಎಂದು ಒಮ್ಮೆ ಪರಿಶೀಲಿಸಿಬಿಡಿ..
- ಗ್ಯಾಸ್ ಗೀಸರ್ ಆನ್ ಮಾಡುವಾಗ ಬಾಗಿಲು ಓಪನ್ ಇಟ್ಟುಕೊಳ್ಳಿ. ಸೂಕ್ತ ಪರಿಶೀಲನೆ ಬಳಿಕ ಬಾಗಿಲು ಮುಚ್ಚಿ ಸ್ನಾನಕ್ಕೆ ಮುಂದಾಗಿ..
- ಇದೇ ರೀತಿ ವಿದ್ಯುತ್ ಗೀಸರ್ ಇದ್ದರೂ ಅದರ ಸ್ಥಿತಿಗತಿ ನೋಡಿಕೊಳ್ಳಿ (ನೆಲ ಒದ್ದೆ ಇದ್ದಾಗ ವಿದ್ಯುತ್ ಆಘಾತ ಉಂಟಾಗುವ ಸಾಧ್ಯತೆ ಅಲ್ಲಗಳೆಯವಂತೆ ಇಲ್ಲ)
- ನೀರು ಬಿಸಿಮಾಡುವ ವಿದ್ಯುತ್ ಕಾಯಿಲ್ ಬಳಸುತ್ತಿದ್ದರೆ, ಸ್ವಿಚ್ ಆನ್ ಮಾಡಿ ನೀರಿಗೆ ಕೈ ಅದ್ದಬೇಡಿ..
ಇದನ್ನೂ ಓದಿ| ಧನುರ್ಮಾಸ ಕೊನೆ ಎಂದು, ಈ ಹೆಸರೇಕೆ ಬಂತು, ಇದೇಕೆ ಶೂನ್ಯ ಮಾಸ, ಮಾರ್ಗಶಿರ ಮಾಸ ಕೂಡ ಇದುವೇನಾ
ಮದ್ಯದ ಅಮಲಿನಲ್ಲಿ ಸ್ನೇಹಿತನ ಕುತ್ತಿಗೆ ಬಿಗಿದು ಕೊಲೆಗೈದವನ ಸೆರೆ
ಬೆಂಗಳೂರು ವ್ಯಾಪ್ತಿಯಲ್ಲಿ ಡಿಸೆಂಬರ್ 18ರಂದು ಮದ್ಯದ ಅಮಲಿನಲ್ಲಿ ಕೆಟ್ಟ ಶಬ್ದಗಳಿಂದ ನಿಂದಿಸಿದ ಸ್ನೇಹಿತನನ್ನು ಸ್ಕಾರ್ಫ್ ಬಳಸಿ ಕುತ್ತಿಗೆ ಬಿಗಿದು ಕೊಲೆಗೈದು ಪರಾರಿಯಾಗಿದ್ದ ಆರೋಪಿಯನ್ನು ಬಾಗಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಜಾರ್ಖಂಡ್ ಮೂಲದ ಬಾಬು ಲಾಲ್ ಸಿಂಗ್ (32) ಬಂಧಿತ ಎಂದು ಗುರುತಿಸಲಾಗಿದೆ.
ಉತ್ತರ ಪ್ರದೇಶ ಮೂಲದ ಜಿತೇಂದ್ರ ಮತ್ತು ಜಾರ್ಖಂಡ್ ಮೂಲದ ಬಾಬು ಲಾಲ್ ಸಿಂಗ್ ಕೆಲ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದು, ಬಾಗಲೂರಿನಲ್ಲಿ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಅಕ್ಕಪಕ್ಕದ ನಿವಾಸಿಗಳಾಗಿದ್ದರು. ಡಿ.18ರಂದು ಜಿತೇಂದ್ರಗೆ ಕರೆ ಮಾಡಿದ ಆರೋಪಿ ಬಾಬು ಲಾಲ್ ಸಿಂಗ್ ಮದ್ಯ ಸೇವಿಸಲು ಬರುವಂತೆ ಕರೆದಿದ್ದ.
ಆತ ಬಂದ ಬಳಿಕ ಇತರೆ ಸ್ನೇಹಿತರ ಜತೆ ಕಂಠಪೂರ್ತಿ ಸಿಂಗ್ ಮದ್ಯ ಸೇವಿಸಿದ್ದಾರೆ. ಇದರ ನಡುವೆ, ಜಿತೇಂದ್ರ ಮದ್ಯ ಸಾಕು ಎಂದು ಪಾರ್ಟಿ ಸ್ಥಳದಿಂದ ಎದ್ದು ಹೋಗಿದ್ದ. ಆದರೂ ಆರೋಪಿ ಬಾಬುಲಾಲ್, ಜಿತೇಂದ್ರನಿಗೆ ಇನ್ನಷ್ಟು ಮದ್ಯ ಸೇವಿಸುವಂತೆ ಒತ್ತಾಯಿಸಿದ್ದ. ಅದರಿಂದ ಬೇಸರಗೊಂಡ ಜಿತೇಂದ್ರ, ಕೆಟ್ಟ ಶಬ್ದಗಳಿಂದ ನಿಂದಿಸಿದ್ದಾನೆ.
ಈ ಜಗಳ ತಾರಕಕ್ಕೇರಿದ್ದು, ವಿಕೋಪಕ್ಕೆ ಹೋಗಿ ಬಾಬು ಲಾಲ್ ತನ್ನ ಕುತ್ತಿಗೆಯಲ್ಲಿದ್ದ ಸ್ಕಾರ್ಫ್ ತೆಗೆದು ಜಿತೇಂದ್ರನ ಕುತ್ತಿಗೆ ಬಿಗಿದು ಕೊಲೆಗೈದು, ಪಾರ್ಟಿ ಸ್ಥಳದ ಪಕ್ಕದಲ್ಲೇ ಇದ್ದ ಪೊದೆಗೆ ಮೃತದೇಹ ಎಸೆದು ಪರಾರಿಯಾಗಿದ್ದ. ಬಾಗಲೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿತ್ತು. ತಲೆಮರೆಸಿಕೊಂಡಿದ್ದ ಬಾಬು ಲಾಲ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದರು.