Bengaluru Crime: ಗುದದ್ವಾರಕ್ಕೆ ಏರ್‌ಪ್ರೆಷರ್ ಪೈಪ್ ಗಾಳಿ ಹಿಡಿದ ಸ್ನೇಹಿತ, ಕರುಳು ಒಡೆದು ಮೃತಪಟ್ಟ 24 ವರ್ಷದ ಯುವಕ
ಬೆಂಗಳೂರಿನ ಥಣಿಸಂದ್ರದಲ್ಲಿ ಗುದದ್ವಾರಕ್ಕೆ ಏರ್‌ಪ್ರೆಷರ್ ಪೈಪ್ ಗಾಳಿ ಹಿಡಿದ ಸ್ನೇಹಿತನ ತಮಾಷೆಯ ಕೃತ್ಯದಿಂದಾಗಿ 24 ವರ್ಷದ ಯುವಕ ಕರುಳು ಒಡೆದು ಮೃತಪಟ್ಟ ಘಟನೆ ವರದಿಯಾಗಿದೆ. ಇನ್ನೊಂದೆಡೆ, ಪರೀಕ್ಷೆ ನಡೆಯುತ್ತಿದ್ದರೂ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಮಾರಾಮಾರಿ ವಿಡಿಯೋ ವೈರಲ್ ಆಗಿದ್ದು ಕೇಸ್ ದಾಖಲಾಗಿದೆ. (ವರದಿ- ಎಚ್. ಮಾರುತಿ, ಬೆಂಗಳೂರು)
ಬೆಂಗಳೂರು: ಸ್ನೇಹಿತರು ತಮಾಷೆಗೆಂದು ಮಾಡಿದ ಕೃತ್ಯದಿಂದ ಯುವಕನೊಬ್ಬ ಪ್ರಾಣ ಕಳೆದುಕೊಂಡ ಘಟನೆ ಬೆಂಗಳೂರಿನ ಸಂಪಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಗುದದ್ವಾರದೊಳಗೆ ಏರ್ ಪ್ರೆಷರ್ ಪೈಪ್‌ನಿಂದ ಗಾಳಿ ಬಿಟ್ಟಿದ್ದರಿಂದ ಹೊಟ್ಟೆಯಲ್ಲಿಯ ಕರುಳು ಮತ್ತಿತರ ಅಂಗಗಳು ಒಡೆದು ಹೋಗಿ 24 ವರ್ಷದ ಆರ್. ಯೋಗೇಶ್ ಎಂಬ ಯುವಕ ಮೃತಘಟ್ಟ ಘಟನೆ ವರದಿಯಾಗಿದೆ. ಈ ಕೃತ್ಯ ಎಸಗಿದ ಮುರುಳಿ ಎಂಬುವರನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ದೇವನಹಳ್ಳಿ ತಾಲ್ಲೂಕಿನ ಯೋಗೇಶ್, ಬೆಂಗಳೂರಿನ ಥಣಿಸಂದ್ರದಲ್ಲಿ ತನ್ನ ಸಹೋದರಿಯ ಮನೆಯಲ್ಲಿ ವಾಸವಿದ್ದರು. ಇವರು ಖಾಸಗಿ ಏಜೆನ್ಸಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಯೋಗೇಶ್ ಮುರುಳಿ ಯೋಗೇಶ್ ಹಲವು ವರ್ಷಗಳ ಸ್ನೇಹಿತರಾಗಿದ್ದರು.
ಥಣಿಸಂದ್ರದಲ್ಲಿರುವ ಸಿಎನ್‌ಎಸ್ ಕಾರ್ ಸ್ಪಾ ಸರ್ವೀಸ್ ಮಳಿಗೆಯಲ್ಲಿ ಆರೋಪಿ ಮುರುಳಿ ಕೆಲಸ ಮಾಡುತ್ತಿದ್ದ. ಈತನನ್ನು ಭೇಟಿಯಾಗಲು ಯೋಗೇಶ್ ಆಗಾಗ್ಗೆ ಬರುತ್ತಿದ್ದ. ಯೋಗೇಶ್ ಮಳಿಗೆಗೆ ಹೋಗಿದ್ದಾಗ ಮುರುಳಿ ಏರ್ ಪ್ರೆಷರ್ ಪೈಪ್ ಮೂಲಕ ಕಾರನ್ನು ಸ್ವಚ್ಛಗೊಳಿಸುತ್ತಿದ್ದ.
ಆತ ಪೈಪ್ ಹಿಡಿದುಕೊಂಡೇ ಯೋಗೇಶ್‌ನನ್ನು ಮಾತನಾಡಿಸಲು ಬಂದಿದ್ದ. ಸಲುಗೆಯಿಂದ ಯೋಗೇಶ್‌ನನ್ನು ಅಪ್ಪಿಕೊಂಡು ಗುದದ್ವಾರಕ್ಕೆ ಪೈಪ್ ಹಿಡಿದು ಒತ್ತಿದ್ದ. ಕೂಡಲೇ ಏರ್ ಪ್ರೆಷರ್ ಪೈಪ್‌ನಿಂದ ಗುದದ್ವಾರದೊಳಗೆ ವೇಗವಾಗಿ ಗಾಳಿ ನುಗ್ಗಿತ್ತು. ಗಾಳಿಯ ಒತ್ತಡ ಹೆಚ್ಚಾಗಿ ಕರುಳು ತುಂಡರಿಸಿದ್ದವು. ಇದರಿಂದ ಹೊಟ್ಟೆಯೊಳಗೆ ರಕ್ತಸ್ರಾವವಾಗಿ ಯೋಗೇಶ್ ಅವರು ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಯೋಗೇಶ್ ಚೇತರಿಸಿಕೊಳ್ಳದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಐಪಿಸಿ ಸೆಕ್ಷನ್ 304 (ಕೊಲೆ ಮಾಡುವ ಉದ್ದೇಶವಿಲ್ಲದೆ ನಡೆದ ಹತ್ಯೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ಆರೋಪಿ ಮುರುಳಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಮಾಷೆ ಮಾಡುವಾಗ ಆಕಸ್ಮಿಕವಾಗಿ ಈ ಘಟನೆ ನಡೆದಿದೆ ಎಂದು ಆರೋಪಿ ಮುರುಳಿ ಹೇಳಿಕೆ ನೀಡಿದ್ದಾನೆ. ಬೈಕ್ ರಿಪೇರಿ ಮಾಡಿಸಿಕೊಂಡು ಬರುವುದಾಗಿ ಹೇಳಿದ್ದ ಯೋಗೇಶ್, ಬರ್ಮುಡಾ ಧರಿಸಿ ಸ್ನೇಹಿತನನ್ನು ಭೇಟಿ ಮಾಡಲು ಆಗಮಿಸಿದ್ದರು ಎಂದು ತಿಳಿದು ಬಂದಿದೆ. ಮುರುಳಿಯ ನಿರ್ಲಕ್ಷ್ಯದಿಂದ ಸಾವು ಸಂಭವಿಸಿದೆ ಎಂದು ಯೋಗೇಶ್ ಅಕ್ಕ ದೂರು ನೀಡಿದ್ದಾರೆ.
ಪರೀಕ್ಷೆ ನಡೆಯುತ್ತಿದ್ದರೂ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಮಾರಾಮಾರಿ
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಗಿಸಿ ಪರೀಕ್ಷಾ ಕೊಠಡಿಯಿಂದ ಹೊರಬಂದಾಗ ಬ್ಯಾಗ್ ಎತ್ತಿಕೊಳ್ಳುವ ವಿಷಯಕ್ಕೆ ವಿದ್ಯಾರ್ಥಿಗಳ ನಡುವೆ ನಡೆದ ಜಗಳದಲ್ಲಿ ಮೂವರು ವಿದ್ಯಾರ್ಥಿಗಳು ಗಾಯಗೊಂಡಿರುವ ಪ್ರಕರಣ ಬೆಂಗಳೂರಿನ ಜೆ.ಪಿ.ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ರಾಗಿಗುಡ್ಡದ ಶಾಲೆಯೊಂದರಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರವಿದೆ. ಇಲ್ಲಿಗೆ ಸಾರಕ್ಕಿ ಶಾಲೆಯೊಂದರ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಬಂದಿದ್ದರು. ಎಲ್ಲ ವಿದ್ಯಾರ್ಥಿಗಳು ಒಂದೇ ಸ್ಥಳದಲ್ಲಿ ಬ್ಯಾಗ್ ಇರಿಸಿ ಪರೀಕ್ಷೆ ಬರೆಯಲು ಹೋಗಿದ್ದರು.
ಪರೀಕ್ಷೆ ಮುಗಿಸಿ ಹೊರಬಂದ ನಂತರ ವಿದ್ಯಾರ್ಥಿಗಳು ಬ್ಯಾಗ್ ಎತ್ತಿ ಪೈಪೋಟಿ ನಡೆಸಿದ್ದರು. ಇದರಿಂದ ವಿದ್ಯಾರ್ಥಿಗಳ ನಡುವೆ ತಳ್ಳಾಟ ನೂಕಾಟ ಉಂಟಾಗಿತ್ತು. ಅಲ್ಲಿಯೇ ಇದ್ದವರು ಜಗಳ ಬಿಡಿಸಿ ವಿದ್ಯಾರ್ಥಿಗಳನ್ನು ಕಳುಹಿಸಿದ್ದರು.
ಸಾರಕ್ಕಿ ಶಾಲೆಯ ವಿದ್ಯಾರ್ಥಿಗಳು ತಮ್ಮ ತಮ್ಮ ಮನೆಗೆ ಹೊರಟಿದ್ದಾಗ ಅವರನ್ನು ಅಡ್ಡಗಟ್ಟಿದ್ದ ರಾಗಿಗುಡ್ಡದ ವಿದ್ಯಾರ್ಥಿಗಳು ಮತ್ತೆ ಜಗಳ ಆರಂಭಿಸಿದ್ದರು. ಪಕ್ಕದಲ್ಲೇ ಇದ್ದ ಕಬ್ಬಿನ ಜ್ಯೂಸ್ ಸೆಂಟರ್ ನಿಂದ ಚಾಕು ಎತ್ತಿಕೊಂಡು ಮೂವರು ವಿದ್ಯಾರ್ಥಿಗಳಿಗೆ ಚುಚ್ಚಿದ್ದರು ಎಂದು ತಿಳಿದು ಬಂದಿದೆ.
ತಕ್ಷಣವೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳ ಹೇಳಿಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇವರು ಅಪ್ರಾಪ್ತ ಬಾಲಕರಾಗಿರುವುದರಿಂದ, ಹೆಸರು ಬಹಿರಂಗಪಡಿಸುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಸಾರ್ವಜನಿಕರೊಬ್ಬರು ವಿದ್ಯಾರ್ಥಿಗಳ ಗಲಾಟೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು. ಚಾಕು ಇರಿದ ಐವರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಜೆ.ಪಿ.ನಗರ ಠಾಣೆಯ ಪೊಲೀಸರು ತಿಳಿಸಿದ್ದಾರೆ.
(ವರದಿ- ಎಚ್. ಮಾರುತಿ, ಬೆಂಗಳೂರು)
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.