FedEx Scam: ಫೆಡ್‌ಎಕ್ಸ್ ವಂಚನಾ ಜಾಲಕ್ಕೆ ಬಿದ್ದ ಬೆಂಗಳೂರಿನ 29 ವರ್ಷದ ವಕೀಲೆ, 15 ಲಕ್ಷ ರೂ ನಷ್ಟ, ವಿಡಿಯೋ ಬಂಧನದ ಚಿತ್ರಣ ಅನಾವರಣ
ಕುಖ್ಯಾತ ಫೆಡ್ಎಕ್ಸ್ ವಂಚನಾ (FedEx Scam) ಜಾಲಕ್ಕೆ ಸಿಲುಕಿದ ಬೆಂಗಳೂರಿನ 29 ವರ್ಷದ ವಕೀಲೆಯೊಬ್ಬರು 15 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಎರಡು ದಿನಗಳ ಕಾಲ ವಿಡಿಯೋ ಬಂಧನಕ್ಕೆ (video arrest) ಒಳಗಾಗಿ ವಂಚಕರ ಕೈಗೊಂಬೆಯಂತೆ ವರ್ತಿಸಬೇಕಾಗಿ ಬಂದ ಕ್ಷಣಗಳ ವಿವರ ವರದಿ ಇಲ್ಲಿದೆ.

ಬೆಂಗಳೂರು: ಮಹಿಳಾ ವಕೀಲರೊಬ್ಬರು ಕುಖ್ಯಾತ ಫೆಡ್ಎಕ್ಸ್ ವಂಚನಾ (FedEx Scam) ಜಾಲದ ಸೈಬರ್ ಕ್ರಿಮಿನಲ್‌ಗಳ ಜಾಲಕ್ಕೆ ಸಿಲುಕಿ ಎರಡು ದಿನಗಳ ಕಾಲ “ವಿಡಿಯೋ ಬಂಧನ” (Video arrest) ಎದುರಿಸಿದರು. ಆ ಸಮಯದಲ್ಲಿ 14.57 ಲಕ್ಷ ರೂಪಾಯಿ ಕಳೆದುಕೊಂಡರು. ಅಷ್ಟೇ ಅಲ್ಲ, ಕ್ಯಾಮೆರಾ ಎದುರು ನಗ್ನರಾಗಬೇಕಾಯಿತು ಎಂದು ಬೆಂಗಳೂರು ಪೊಲೀಸರು ಮಂಗಳವಾರ ತಿಳಿಸಿದ್ದಾಗಿ ಪಿಟಿಐ ವರದಿ ಮಾಡಿದೆ.
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಈ ಘಟನೆಯು ಏಪ್ರಿಲ್ 3 ಮತ್ತು 5ರ ನಡುವೆ ಸಂಭವಿಸಿದೆ. ಬೆಂಗಳೂರು ಪೂರ್ವ ವಿಭಾಗದ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದೆ. ಅಂತಾರಾಷ್ಟ್ರೀಯ ಕೊರಿಯರ್ ಕಂಪನಿಯ ಕಸ್ಟಮರ್ ಕೇರ್‌ನಿಂದ ಕರೆ ಮಾಡುತ್ತಿದ್ದೇವೆ ಎನ್ನುತ್ತ ಬೆಂಗಳೂರು ನಗರದ 29 ವರ್ಷದ ಸಂತ್ರಸ್ತೆಗೆ ಫೋನ್ ಕರೆ ಬಂದಿತ್ತು. ಈ ರೀತಿಯಾಗಿ ವಂಚಕರು ಮಹಿಳಾ ವಕೀಲರನ್ನು ಬಲೆಗೆ ಬೀಳಿಸಲು ಜಾಲಹಣೆದಿದ್ದರು.
ಫೆಡ್‌ಎಕ್ಸ್ ವಂಚನೆ- ಹೀಗಿತ್ತು ಅವರ ವಂಚನಾ ಕ್ರಮ
ಫೆಡ್‌ಎಕ್ಸ್ ಹೆಸರಿನಲ್ಲಿ ಬಂದ ಆ ಕರೆಯನ್ನು ಸ್ವೀಕರಿಸಿದಾಗ, ಕಸ್ಟಮರ್ ಕೇರ್‌ನಿಂದ ಎಂದು ಫೋನ್ ಮಾಡಿದ ವ್ಯಕ್ತಿ, "ತಮ್ಮ ಪಾರ್ಸೆಲ್ ವಾಪಸ್ ಬಂದಿದೆ. ತಾವು ಕಸ್ಟಮರ್ ಕೇರ್ ಎಕ್ಸಿಕ್ಯೂಟಿವ್ ಜೊತೆಗೆ ಮಾತನಾಡಬೇಕು" ಎಂದು ಸಂತ್ರಸ್ತೆಗೆ ಹೇಳಿದ್ದಾರೆ.
ಬಳಿಕ ಎಕ್ಸಿಕ್ಯೂಟಿವ್ ಎಂದು ಹೇಳಿಕೊಂಡಾತ ಮಾತನಾಡುತ್ತ, “ಪಾರ್ಸೆಲ್‌ನಲ್ಲಿ 5 ಪಾಸ್‌ಪೋರ್ಟ್, 3 ಕ್ರೆಡಿಟ್ ಕಾರ್ಡ್‌ಗಳು, 140 ಸಿಂಥೆಟಿಕ್ಸ್ (ಎಂಡಿಎಂಎ) ಗಳಿದ್ದು, ಅದನ್ನು ಮುಂಬಯಿಯಿಂದ ಥಾಯ್ಲೆಂಡ್‌ಗೆ ತಮ್ಮ ಹೆಸರಿನಲ್ಲಿ ಕಳುಹಿಸಲಾಗಿದೆ. ಒಂದೊಮ್ಮೆ ಇದನ್ನು ಕಳುಹಿಸಿದ್ದು ತಾವು ಎಂದಾದರೆ ಅದನ್ನು ಮುಟ್ಟುಗೋಲು ಹಾಕಲಾಗಿದೆ. ತಾವು ವಿಚಾರಣೆ ಎದುರಿಸಬೇಕು. ಬಂಧಿಸಲಾಗುತ್ತದೆ. ತಾವು ಕಳುಹಿಸಿದ್ದು ಅಲ್ಲ ಎಂದಾದರೆ ತಮ್ಮ ಹೆಸರು, ಗುರುತನ್ನು ದುರುಪಯೋಗ ಮಾಡಿದ್ದಾರೆ ಎಂದು ಮುಂಬಯಿಯ ಸೈಬರ್ ಕ್ರೈಮ್ ಟೀಮ್ ಅನ್ನು ಸಂಪರ್ಕಿಸಿ ದೂರು ದಾಖಲಿಸಬೇಕು” ಎಂದು ಹೇಳಿದ್ದಾನೆ.
ವಂಚನೆಯ ಸುಳಿವು ಸಿಗದೇ ಮಹಿಳಾ ವಕೀಲರು, “ಹೌದು ತಾನು ಹೆಸರು ಮತ್ತು ಗುರುತು ದುರುಪಯೋಗ ಕೇಸ್ ದಾಖಲಿಸಬೇಕು” ಎಂದಿದ್ದಾರೆ.
ಕೂಡಲೇ ಆ ಎಕ್ಸಿಕ್ಯೂಟಿವ್ ಎಂದು ಹೇಳಿಕೊಂಡಾತ ಫೋನ್ ಕರೆಯನ್ನು ವರ್ಗಾವಣೆ ಮಾಡಿದ್ದ. ನಂತರ ಮಾತನಾಡಿದವರು ಮುಂಬಯಿಯ ಸೈಬರ್ ಕ್ರೈಮ್ ಟೀಮ್‌ನವರು ಎಂದು ಪರಿಚಯಿಸಿಕೊಂಡಿದ್ದಾರೆ. ಅವರು ಸ್ಕೈಪ್ ಡೌನ್‌ಲೋಡ್ ಮಾಡಲು ಸೂಚಿಸಿದ್ದಾರೆ. ಬಳಿಕ ಇಮೇಲ್ ಐಡಿ ಎಂಟರ್ ಮಾಡುವಂತೆ ಸೂಚಿಸಿದ್ದಾರೆ. ಆ ಇಮೇಲ್ ಐಡಿ ಮೂಲಕವೇ ಅವರು ಚಾಟ್ ಮಾಡಿದ್ದಾರೆ ಎಂದು ಮಹಿಳಾ ವಕೀಲರು ದೂರಿನಲ್ಲಿ ತಿಳಿಸಿದ್ದಾರೆ.
ಇಷ್ಟಾದ ಬಳಿಕ, “ಅಕ್ರಮ ಪಾರ್ಸೆಲ್” ಕುರಿತು ವಿಚಾರಿಸಿದ ಆ ತಂಡದವರು, ಆಧಾರ್ ಕಾರ್ಡ್ ವಿವರ ಕೇಳಿದ್ದಾರೆ. ಬಳಿಕ ಉನ್ನತಾಧಿಕಾರಿಗಳ ಜೊತೆಗೆ ಮಾತನಾಡುವುದಾಗಿ ತಿಳಿಸಿದ್ದಾರೆ. ಅಷ್ಟಾಗಿ, ಆಧಾರ್ ಕಾರ್ಡ್ ಭದ್ರತಾ ಅಧಿಕಾರಿಗಳ ನಿಗಾದಲ್ಲಿದ್ದು, ಮಾನವ ಕಳ್ಳಸಾಗಣೆ ಮತ್ತು ಡ್ರಗ್ಸ್ ಸಾಗಣೆಗೆ ಸಂಬಂಧಿಸಿ ಸೂಕ್ಷ್ಮ ಪರಿಶೀಲನೆಯಲ್ಲಿಟ್ಟಿದ್ದಾರೆ ಎಂಬ ಸಂದೇಶ ಬಂತು.
ಇದಾಗಿ, ಸ್ಕೈಪ್ ಕರೆ ಶುರುವಾಗಿದ್ದು, ಹಿರಿಯ ಸಿಬಿಐ ಅಧಿಕಾರಿ ಎಂದು ಪರಿಚಯಿಸಿಕೊಂಡ ಅಭಿಷೇಕ್ ಚೌಹಾನ್ ಕ್ಯಾಮೆರಾ ಎದುರು ಕುಳಿತು ಮಾತು ಆರಂಭಿಸಿದ. ಈಗ ತಮ್ಮ ವಿರುದ್ಧ ಮಾನವ ಕಳ್ಳಸಾಗಣೆ, ಅಕ್ರಮ ಹಣದ ವಹಿವಾಟು, ಗುರುತು ಕಳವು ಕೇಸ್‌ಗಳಿವೆ ಎಂದು ಬೆದರಿಸುತ್ತ, ಬ್ಯಾಂಕ್ ಖಾತೆ, ಎಷ್ಟು ಹಣ ಬ್ಯಾಲೆನ್ಸ್ ಇದೆ, ವಾರ್ಷಿಕ ಆದಾಯ ಎಷ್ಟು, ಹೂಡಿಕೆ ಎಷ್ಟು ಎಂಬಿತ್ಯಾದಿ ಮಾಹಿತಿ ಎಲ್ಲವೂ ಪಡೆದುಕೊಂಡರು. ಬಳಿಕ ಹಣವನ್ನೂ ವರ್ಗಾವಣೆ ಮಾಡಿಸಿಕೊಂಡರು ಎಂದು ಮಹಿಳಾ ವಕೀಲರು ದೂರಿನಲ್ಲಿ ತಿಳಿಸಿದ್ದಾಗಿ ಪಿಟಿಐ ವರದಿಮಾಡಿದೆ.
ಹಣ ವರ್ಗಾವಣೆ ಮಾಡಿದ ಹಂತಗಳು ಹೀಗಿದ್ದವು
ತಮ್ಮ ವಿರುದ್ಧ ಮಾನವ ಕಳ್ಳಸಾಗಣೆ, ಅಕ್ರಮ ಹಣದ ವಹಿವಾಟು, ಗುರುತು ಕಳವು ಕೇಸ್‌ಗಳಿವೆ ಎಂದು ಬೆದರಿಸುತ್ತ ಬಂದ “ಸಿಬಿಐ ಅಧಿಕಾರಿ”, ಇದು ಬಹಳ ಸೂಕ್ಷ್ಮ ಕೇಸ್ ಆಗಿರುವ ಕಾರಣ, ತನಿಖೆ ಪೂರ್ಣವಾಗುವ ತನಕವೂ ಯಾವುದೇ ಮಾಹಿತಿ ಬಹಿರಂಗಗೊಳಿಸುವುದಿಲ್ಲ ಎಂದು ಪ್ರಮಾಣ ಮಾಡಿಸಿಕೊಂಡರು.
ಪಾಲಕರು ಮತ್ತು ಪೊಲೀಸರಿಗೂ ಮಾಹಿತಿ ನೀಡದಂತೆ ನಿರ್ಬಂಧಿಸಲಾಗಿತ್ತು. ವಿಡಿಯೋ ಕರೆಯಲ್ಲಿ ಬಂಧನದಲ್ಲಿರಿಸಲಾಗಿತ್ತು. ಪೊಲೀಸರು, ರಾಜಕೀಯ ವ್ಯಕ್ತಿಗಳ ಹಸ್ತಕ್ಷೇಪ ಉಂಟಾದರೆ ಮುಂದೆ ಬಹಳ ಸಮಸ್ಯೆಗಳಾಗುತ್ತವೆ ಎಂದು ಆ “ಸಿಬಿಐ ಅಧಿಕಾರಿ” ಬೆದರಿಸಿದ್ದ. ಇದಕ್ಕೂ ಮೊದಲು ನಾರ್ಕೋಟಿಕ್ಸ್ ಟೆಸ್ಟ್ ಹೆಸರಲ್ಲಿ ಕ್ಯಾಮೆರಾ ಎದುರು ಬಲವಂತವಾಗಿ ಬಟ್ಟೆ ಕಳಚುವಂತೆ ಮಾಡಿದ್ದರು. ಮಾಡದೇ ಇದ್ದರೆ ತಮನ್ನಷ್ಟೇ ತಮ್ಮ ಮನೆ ಮಂದಿಯನ್ನೂ ಡ್ರಗ್ಸ್ ಕೇಸ್‌ನಲ್ಲಿ ಬಂಧಿಸುವುದಾಗಿ ಬೆದರಿಸಿದ್ದರು.
ಹಗಲು ರಾತ್ರಿ ನಿರಂತರ ವಿಡಿಯೋ ಆನ್ ಮಾಡಿಟ್ಟುಕೊಂಡು ಅವರ ಜೊತೆಗೆ ಸಂವಹನ ನಡೆಸಬೇಕಾಗಿ ಬಂತು. ಏಪ್ರಿಲ್ 4 ರಂದು 10,78,993 ರೂಪಾಯಿಯನ್ನು ನಿತಿನ್ ಜೋಸೆಫ್ ಎಂಬ ಹೆಸರಿನ ಖಾತೆಗೆ ವರ್ಗಾವಣೆ ಮಾಡಬೇಕಾಯಿತು. ಅದಾಗಿ ಏಪ್ರಿಲ್ 5 ರಂದು ಅಮೆಜಾನ್‌ನಲ್ಲಿ 2.04 ಲಕ್ಷ ರೂಪಾಯಿ ಮತ್ತು 1.74 ಲಕ್ಷ ರೂಪಾಯಿಯನ್ನು ಪ್ರತ್ಯೇಕವಾಗಿ ವ್ಯಯಿಸಬೇಕಾಯಿತು. ಏಪ್ರಿಲ್ 5ರ ಮೂರು ಗಂಟೆಯೊಳಗೆ 10 ಲಕ್ಷ ರೂಪಾಯಿ ವರ್ಗಾವಣೆ ಮಾಡದೇ ಇದ್ದರೆ ಆ ವಿಡಿಯೋವನ್ನು ಡಾರ್ಕ್‌ವೆಬ್‌ನಲ್ಲಿ ಮಾರಾಟ ಮಾಡುವುದಾಗಿ ಆ ಅಧಿಕಾರಿ ಬೆದರಿಸಿದ್ದ ಎಂದು ಮಹಿಳಾ ವಕೀಲೆ ದೂರಿನಲ್ಲಿ ತಿಳಿಸಿದ್ದಾಗಿ ಪಿಟಿಐ ವರದಿ ಮಾಡಿದೆ.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.
