Viral News: ಬೆಂಗಳೂರು ಟ್ರಾಫಿಕ್‌ ನಡುವೆ ಸಂಚಲನ ಮೂಡಿಸಿದ 3 ಶಬ್ದದ ಎಚ್ಚರಿಕೆ ಫಲಕ
ಕನ್ನಡ ಸುದ್ದಿ  /  ಕರ್ನಾಟಕ  /  Viral News: ಬೆಂಗಳೂರು ಟ್ರಾಫಿಕ್‌ ನಡುವೆ ಸಂಚಲನ ಮೂಡಿಸಿದ 3 ಶಬ್ದದ ಎಚ್ಚರಿಕೆ ಫಲಕ

Viral News: ಬೆಂಗಳೂರು ಟ್ರಾಫಿಕ್‌ ನಡುವೆ ಸಂಚಲನ ಮೂಡಿಸಿದ 3 ಶಬ್ದದ ಎಚ್ಚರಿಕೆ ಫಲಕ

ಮೊಬೈಲ್ ಇಲ್ಲದೆ ಬದುಕು ಸಾಗುವುದೇ ಇಲ್ಲವೇ? ಸಾಮಾಜಿಕ ಮತ್ತು ಭೌತಿಕ ಜೀವನದಿಂದ ದೂರ ಸರಿಯುತ್ತಿದ್ದೇವೆಯೇ? ಮೊಬೈಲ್ ಬಳಕೆ ಅನಾಹುತಗಳನ್ನು ಕುರಿತ ಮೂರು ಪದಗಳ ಈ ಒಂದು ಸೈನ್ ಬೋರ್ಡ್ ಅಷ್ಟೊಂದು ವೈರಲ್ ಆಗಿದ್ದಾದರೂ ಏಕೆ ಎಂಬುದರ ಕುರಿತು ಒಂದು ಕಿರುನೋಟ. (ಬರಹ- ಎಚ್. ಮಾರುತಿ, ಬೆಂಗಳೂರು)

ಬೆಂಗಳೂರು ಟ್ರಾಫಿಕ್‌ ನಡುವೆ ಸಂಚಲನ ಮೂಡಿಸಿದ 3 ಶಬ್ದದ ಎಚ್ಚರಿಕೆ ಫಲಕ ಹೀಗಿತ್ತು.
ಬೆಂಗಳೂರು ಟ್ರಾಫಿಕ್‌ ನಡುವೆ ಸಂಚಲನ ಮೂಡಿಸಿದ 3 ಶಬ್ದದ ಎಚ್ಚರಿಕೆ ಫಲಕ ಹೀಗಿತ್ತು. (@prakritea17)

ಮೊಬೈಲ್‌ಗಳಿಗೆ ನಾವು ಅದೆಷ್ಟು ದಾಸರಾಗಿಬಿಟ್ಟಿದ್ದೇವೆ ಎಂದರೆ ಈ ಪುಟ್ಟ ಯಂತ್ರ ಇಲ್ಲದಿದ್ದರೆ ಬದುಕು ಮುಂದಕ್ಕೆ ಸಾಗುವುದಿಲ್ಲವೇನೋ ಎನ್ನುವಷ್ಟರ ಮಟ್ಟಿಗೆ ನಾವು ಚಟ ಹತ್ತಿಸಿಕೊಂಡು ಬಿಟ್ಟಿದ್ದೇವೆ. ದೂರವಾಣಿ ಇಲ್ಲದೆ ಬದುಕುವುದು ಹೇಗೆಂದು ಅನೇಕ ಗಣ್ಯರು ನಮಗೆ ಉದಾಹರಣೆ ಆಗಿರುವುದನ್ನು ನಾವು ಮರೆತು ಬಿಟ್ಟಿದ್ದೇವೆ.

ಹೊಸದಾಗಿ ಸ್ಥಿರ ದೂರವಾಣಿ ಕಾಲಿಟ್ಟಾಗ ದೂರ ಸಂಪರ್ಕ ಇಲಾಖೆ ಉಚಿತವಾಗಿ ಲ್ಯಾಂಡ್ ಲೈನ್ ಹಾಕಿಕೊಡಲು ಮುಂದಾದಾಗ ಖ್ಯಾತ ಸಾಹಿತಿ ಶಿವರಾಮ ಕಾರಂತರು ಬೇಡವೇ ಬೇಡ ಎಂದು ನಿರಾಕರಿಸಿದ್ದರು. ಬರಗೂರು ರಾಮಚಂದ್ರಪ್ಪ ಅವರು ದಶಕಗಳ ಕಾಲ ಮೊಬೈಲ್ ಬಳಸುತ್ತಿರಲಿಲ್ಲ. ಆದರೆ ಈಗ ಮೊಬೈಲ್ ಇಲ್ಲದ ಜೀವನವನ್ನೂ ಊಹಿಸಿಕೊಳ್ಳಲು ಸಾಧ್ಯವೇ ಇಲ್ಲವಾಗಿದೆ.

ಆರೋಗ್ಯದ ಕಾರಣಗಳಿಗಾಗಿ ಮೊಬೈಲ್ ಅನ್ನು ಎಷ್ಟು ಬಳಸಬೇಕೆಂದು ವೈದ್ಯರು ಎಚ್ಚರಿಸುತ್ತಿದ್ದರೆ ವಾಹನ ಚಲಾಯಿಸುವಾಗ ರಸ್ತೆ ದಾಟುವಾಗ ಮೊಬೈಲ್ ಬಳಸದಿರುವಂತೆ ಪೊಲೀಸರು ಎಚ್ಚರಿಕೆ ನೀಡಿದರೂ, ದಂಡ ಹಾಕುತ್ತಿದ್ದರೂ ಶಿಕ್ಷೆಗ ಸಿದ್ದ ಎನ್ನುತ್ತಿದ್ದಾರೆಯೇ ಹೊರತು ಮೊಬೈಕ್ ನಿಂದ ಕ್ಷಣ ಹೊತ್ತು ಆಚೆ ಬರುವ ಮಾತೇ ಇಲ್ಲ.

ಇತ್ತೀಚೆಗೆ ಬೆಂಗಳೂರು ನಗರ ಸಂಚಾರ ಪೊಲೀಸರು ಹಾಕಿದ್ದ ಒಂದು ಸೈನ್ ಬೋರ್ಡ್ ಎಕ್ಸ್ ನಲ್ಲಿ ವೈರಲ್ ಆಗಿದ್ದು, ತೀವ್ರ ಕುತೂಹಲ ಕೆರಳಿಸಿದೆ. ಈ ಸೈನ್ ಬೋರ್ಡ್ ನೆಟ್ಟಿಗರ ಗಮನವನ್ನು ಸೆಳೆಯುತ್ತಲೇ ಇದೆ. ಇದರ ಸಂದೇಶ ಮನಮುಟ್ಟುವಂತಿದ್ದು, ಮೂರು ಪದಗಳ ಈ ಸೈನ್ ಬೋರ್ಡ್ ಅಷ್ಟೊಂದು ಪರಿಣಾಮಕಾರಿಯಾಗಿದೆ.

BEWARE OF SMARTPHONE ZOMBIES ಎಂಬ ಇಂಗ್ಲೀಷ್ ಸೈನ್ ಬೋರ್ಡ್ ನ ಈ ಪುಟ್ಟ ಸಂದೇಶ ಗಂಭೀರವಾಗಿದೆ. ಸಧ್ಯದ ಕಾಲಮಾನಕ್ಕೆ ಮತ್ತು ವಿಶೇಷವಾಗಿ ಮೊಬೈಲ್ ಗೆ ದಾಸರಾಗಿರುವವರಿಗೆ ಹೆಚ್ಚು ಅನ್ವಯವಾಗುತ್ತದೆ.

ಪ್ರಕೃತಿ ಎಂಬುವರು ಮೈಕ್ರೊಬ್ಲಾಗಿಂಗ್ ಸೈಟ್‌ನಲ್ಲಿ ಈ ಸಂದೇಶವನ್ನು ಹಂಚಿಕೊಂಡಿದ್ದಾರೆ.

ಇಬ್ಬರು ವ್ಯಕ್ತಿಗಳು ಮೊಬೈಲ್ ನಲ್ಲಿ ಮಾತನಾಡುತ್ತಲೇ ರಸ್ತೆಯನ್ನು ದಾಟುತ್ತಿದ್ದಾರೆ. ಅದೇ ಸಂದರ್ಭದಲ್ಲಿ ಈ ಬೋರ್ಡ್ ಈ ಸಂದೇಶ ನೀಡುತ್ತಿದೆ. ZOMBIES ಅಂದರೆ ಯಂತ್ರ ಮಾನವ, ಸತ್ತಂತೆ ಇರುವ, ವಿಚಿತ್ರ ಲಕ್ಷಣವುಳ್ಳವರು ಭೂತಾತ್ಮ ಪ್ರೇತಾತ್ಮ ಎಂಬ ಹತ್ತಾರು ಅರ್ಥಗಳಿವೆ. ಯಂತ್ರ ಮಾನವ ಎಂಬ ಅರ್ಥ ಹೆಚ್ಚು ಅನ್ವಯವಾಗುತ್ತದೆ. ಈ ಪೋಸ್ಟ್ ಹಂಚಿಕೊಳ್ಳುತ್ತಾ ಪ್ರಕೃತಿ ಅವರು, ಬೆಂಗಳೂರಿನ ಈ ಒಂದು ಸೈನ್ ಬೋರ್ಡ್ ನಮ್ಮ ಪೀಳಿಗೆಯ ಮೇಲೆ ದಾಳಿ ನಡೆಸಿದೆ ಎಂದು ಹೇಳಿಕೊಂಡಿದ್ದಾರೆ.

ಮೊಬೈಲ್ ಫೋನ್ ಬಳಕೆಯಿಂದಾಗುವ ಅನಾಹುತಗಳನ್ನು ಹೇಳುತ್ತಿದೆ. ಭೌತಿಕ ಪ್ರಪಂಚದಿಂದ ನಾವು ಹೇಗೆ ದೂರ ಉಳಿದಿದ್ದೇವೆ ಸಾಮಾಜಿಕ ಜೀವನದಲ್ಲಿ ಒಬ್ಬರಿಗೊಬ್ಬರ ಸಂಪರ್ಕವೇ ಇಲ್ಲದೆ ಹೇಗೆ ಬದುಕುತ್ತಿದ್ದೇವೆ ಮತ್ತು ಸುರಕ್ಷತಾ ಕ್ರಮಗಳಿಂದಲೂ ನಾವು ಹಿಂದೆ ಸರಿದಿರುವುದನ್ನು ಈ ಸೈನ್ ಬೋರ್ಡ್ ಬಿಂಬಿಸುತ್ತದೆ.

ಮೂರು ದಿನಗಳ ಹಿಂದೆ ಈ ಪೋಸ್ಟನ್ನು ಎಕ್ಸ್ ನಲ್ಲಿ ಹಂಚಿಕೊಳ್ಳಲಾಗಿದ್ದು ನಾಲ್ಕು ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ ಮತ್ತು 10 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಈ ಸಂದೇಶ ತಮಾಷೆಯಾದರೂ ಇಂದಿನ ಕಾಲಮಾನಕ್ಕೆ ಸರಿಯಾಗಿ ಹೊಂದುತ್ತದೆ ಎಂದು ವ್ಯಾಖ್ಯಾನಿಸಿದವರೇ ಹೆಚ್ಚು.

ನಮ್ಮ ಪೀಳಿಗೆ ಕ್ಷಣಗಳನ್ನು ಸೆರೆಹಿಡಿಯುತ್ತದೆ. ಆದರೆ ಅನುಭವಿಸಿದ್ದು ಕಡಿಮೆ ಎಂದು ಒಬ್ಬರು ಹೇಳಿಕೊಂಡರೆ, ಸ್ಮಾರ್ಟ್ ಫೋನ್ ಯಂತ್ರಮಾನವರಿಗೆ ಈ ಸೈನ್ ಬೋರ್ಡ್ ಇರುವುದು ಅರ್ಥವಾಗುವುದೇ ಇಲ್ಲ ಎನ್ನುವುದು ನೋವಿನ ಸಂಗತಿ ಎಂದಿದ್ದಾರೆ. ಮತ್ತೊಬ್ಬರು ಈ ಸೈನ್ ಬೋರ್ಡ್ ಅನ್ನು ನನ್ನ ಮನೆಯಲ್ಲಿ ನೇತು ಹಾಕುವೆ ಎಂದು ಹೇಳಿದ್ದಾರೆ. ಇತ್ತೀಚಿ ದಿನಗಳಲ್ಲಿ ಜನದಟ್ಟಣೆ ಇರುವ ಪ್ರದೇಶಗಳಲ್ಲಿ ರಸ್ತೆ ದಾಟುವಾಗ ಮೊಬೈಲ್ ಬಳಸುವುದು ಕಡ್ಡಾಯವೇನೋ ಎಂದು ಅನ್ನಿಸುತ್ತಿದೆ. ಸಾರ್ವಜನಿಕರು ಕನಿಷ್ಠ ಮೂಲಭೂತ ಜ್ಞಾನ ಹೊಂದಿಲ್ಲದಿರುವುದು ನೋವಿನ ಸಂಗತಿ ಎಂದು ಬರೆದಿದ್ದಾರೆ.

ಮೊಬೈಲ್ ಅನ್ನು ಯಾವಾಗ ಎಷ್ಟು ಹೇಗೆ ಬಳಸಬೇಕು ಎಂಬ ಮೂಲಭೂತ ಜ್ಞಾನವನ್ನು ರೂಢಿಸಿಕೊಳ್ಳೋಣ, ಆ ಮೂಲಕ ಇತರರಿಗೆ ಮಾದರಿಯಾಗೋಣ ಎನ್ನುವುದೇ ಈ ಲೇಖನದ ಹೂರಣ.

(ಬರಹ- ಎಚ್. ಮಾರುತಿ, ಬೆಂಗಳೂರು)

Whats_app_banner