ಕನ್ನಡ ಸುದ್ದಿ  /  Karnataka  /  Bengaluru News 32 Skulls Found In Farmhouse Bidadi Joganahalli Village Ramanagara Owner Arrested Uks

Bengaluru Crime: ಬಿಡದಿ ಜೋಗನಹಳ್ಳಿ ಗ್ರಾಮದ ತೋಟದ ಮನೆಯಲ್ಲಿ 32 ತಲೆಬುರುಡೆಗಳು; ಮಾಲೀಕನ ಸೆರೆ

Bengaluru Crime: ರಾಮನಗರ ತಾಲೂಕು ಬಿಡದಿ ಹೋಬಳಿಯ ಜೋಗನಹಳ್ಳಿ ಗ್ರಾಮದ ತೋಟದ ಮನೆಯೊಂದರಲ್ಲಿ 32 ತಲೆಬುರುಡೆಗಳು ಪತ್ತೆಯಾಗಿವೆ. ಮನೆಯ ಮಾಲೀಕನನ್ನು ಪೊಲೀಸರು ಬಂಧಿಸಿದ್ದು, ವಿಚಿತ್ರ ಪ್ರಕರಣದ ಕೇಸ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಆರಂಭಿಕ ಮಾಹಿತಿ ಹೀಗಿದೆ.

ಬಿಡದಿ ಜೋಗನಹಳ್ಳಿ ಗ್ರಾಮದ ತೋಟದ ಮನೆಯಲ್ಲಿ 32 ತಲೆಬುರುಡೆ ಪತ್ತೆ (ಸಾಂಕೇತಿಕ ಚಿತ್ರ)
ಬಿಡದಿ ಜೋಗನಹಳ್ಳಿ ಗ್ರಾಮದ ತೋಟದ ಮನೆಯಲ್ಲಿ 32 ತಲೆಬುರುಡೆ ಪತ್ತೆ (ಸಾಂಕೇತಿಕ ಚಿತ್ರ)

ಬೆಂಗಳೂರು: ರಾಮನಗರ ಜಿಲ್ಲೆಯ ಜೋಗನಹಳ್ಳಿ ಗ್ರಾಮದ ತೋಟದ ಮನೆಯಲ್ಲಿ 32 ಮಾನವ ತಲೆಬುರುಡೆಗಳನ್ನು ಸೋಮವಾರ ಪತ್ತೆ ಹಚ್ಚಲಾಗಿದ್ದು, ಆ ಮನೆಯ ಮಾಲೀಕ ಬಲರಾಮ್ ಎಂಬುವವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗ್ರಾಮಸ್ಥರು ನೀಡಿದ ಮಾಹಿತಿ ಆಧರಿಸಿ ಪೊಲೀಸರು ಬಲರಾಮ್‌ ಮನೆಗೆ ದಾಳಿ ನಡೆಸಿದ್ದರು. ಆಗ ಪತ್ತೆಯಾದ ತಲೆಬುರುಡೆಗಳಲ್ಲಿ ವಯಸ್ಸಾದವರಿಂದ ಹಿಡಿದು ಮಕ್ಕಳವರೆಗೆ ತಲೆಬುರುಡೆಗಳು ಇದ್ದವು. ಈ ತಲೆಬುರುಡೆಗಳನ್ನು ಬೆಂಗಳೂರಿನ ವಿಧಿ ವಿಜ್ಞಾನ ತಂಡಕ್ಕೆ ಒಪ್ಪಿಸಿದ್ದು, ಅವರು ಅದರ ಪರೀಕ್ಷೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

32 ಮಾನವ ತಲೆಬುರುಡೆ ಪತ್ತೆ; ಏನಿದು ಅಸಹಜ ಘಟನೆ

ರಾಮನಗರ ತಾಲೂಕಿನ ಬಿಡದಿ ಹೋಬಳಿ ಜೋಗರದೊಡ್ಡಿ ಗ್ರಾಮದಲ್ಲಿ ತಲೆ ಬುರುಡೆ ಮತ್ತು ಕೈಕಾಲು ಮೂಳೆಗಳನ್ನು ಸಂಗ್ರಹಿಸಿಟ್ಟುಕೊಂಡು ವಾಮಾಚಾರ ಮಾಡುತ್ತಿದ್ದ ವ್ಯಕ್ತಿಯನ್ನು ಗ್ರಾಮಸ್ಥರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಬೆಳಕಿಗೆ ಬಂದಿದೆ.

ಆರೋಪಿ ಬಲರಾಮ್‌ ಬಿಡದಿ ಪುರಸಭೆಯ 18ನೇ ವಾರ್ಡ್‌ನ ಜೋಗರದೊಡ್ಡಿ ಗ್ರಾಮದ ಬಳಿ ಜಮೀನಿನಲ್ಲಿ ಶೆಡ್ ನಿರ್ಮಿಸಿ 'ಶ್ರೀ ಸ್ಮಶಾನಕಾಳಿ ಪೀಠ' ಎಂಬ ಪೂಜಾ ಕುಟೀರವನ್ನು ಸ್ಥಾಪಿಸಿಕೊಂಡಿದ್ದ. ಅಲ್ಲಿ ಕಾಳಿದೇವಿ ಫೋಟೋ ಮತ್ತು ಹೊರಗಡೆ ತ್ರಿಶೂಲವನ್ನಿಟ್ಟು ಆರಾಧಿಸುತ್ತಿದ್ದ. ಪ್ರತಿ ಅಮಾವಾಸ್ಯೆ, ಹುಣ್ಣಿಮೆಯಂದು ಸ್ಮಶಾನಕ್ಕೆ ತೆರಳಿ ಪೂಜೆ ಸಲ್ಲಿಸುತ್ತಿದ್ದ. ಆ ಸ್ಥಳಕ್ಕೆ ಯಾರನ್ನೂ ಬರಲು ಬಿಡುತ್ತಿರಲಿಲ್ಲ ಎಂದು ಗ್ರಾಮಸ್ಥರು ಹೇಳಿದ್ದಾಗಿ ಕನ್ನಡಪ್ರಭ ವರದಿ ಮಾಡಿದೆ.

ಮಾರ್ಚ್ 10ರಂದು ಅಮಾವಾಸ್ಯೆ ಇತ್ತು. ಆ ದಿನ ಬಲರಾಮ ತನ್ನ ಸಹೋದರ ರವಿಯೊಂದಿಗೆ ತೆರಳಿ ಅದೇ ಶ್ರೀ ಸ್ಮಶಾನಕಾಳಿ ಪೀಠದಲ್ಲಿ ಪೂಜೆಗೆ ಸಿದ್ದತೆ ನಡೆಸಿದ್ದ. ಆಗ ಗ್ರಾಮಸ್ಥರು ಈತನ ನಡವಳಿಕೆಯಿಂದ ಅನುಮಾನಗೊಂಡು ರಾಮನಗರ ಪೊಲೀಸರಿಗೆ ದೂರು ನೀಡಿದ್ದಾರೆ.

ಆರೋಪಿ ಬಲರಾಮ್‌ ಹೇಳಿರುವುದೇನು

ಸ್ಥಳಕ್ಕಾಗಮಿಸಿದ ಪೊಲೀಸರು, ಶ್ರೀ ಸ್ಮಶಾನಕಾಳಿ ಪೀಠದ ಬಾಗಿಲು ತೆರೆಸಿದರು. ಅಲ್ಲಿ 32 ತಲೆ ಬರುಡೆಗಳು ಪತ್ತೆಯಾಗಿದ್ದವು. ಅದಲ್ಲದೇ, ಕೈಕಾಲು ಮೂಳೆಗಳ ರಾಶಿ, ಹೋಮ ಕುಂಡ, ಭದ್ರಕಾಳಿ ಚಿತ್ರ, ಮೂರ್ತಿ, ತ್ರಿಶೂಲ, ಮೂಳೆ ಮತ್ತು ಬುರುಡೆಗಳಿಂದ ನಿರ್ಮಿಸಿದ್ದ ಆಸನ(ಪೀಠ), ಪೂಜಾ ಸಾಮಗ್ರಿ ಸಿಕ್ಕಿವೆ. ಕೂಡಲೇ ಆರೋಪಿ ಬಲರಾಮನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ವಿಚಾರಣೆ ನಡೆಸಿದರು.

ತಲೆಬುರೆಡಗಳನ್ನು ಸ್ಮಶಾನದಿಂದಲೇ ಸಂಗ್ರಹಿಸಲಾಗಿದೆ. ಕ್ಷುದ್ರ ಪೂಜೆ ಮಾಡುವುದಕ್ಕಾಗಿ ಇವೆಲ್ಲವನ್ನೂ ಬಳಸುತ್ತಿರುವುದಾಗಿ ಆರೋಪಿ ಬಲರಾಮ್ ತಿಳಿಸಿದ್ದಾಗಿ ಪೊಲೀಸರು ಹೇಳಿದ್ದಾರೆ.

ಈ ನಡುವೆ, ಬಲರಾಮ್ ತಾಯಿ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದ್ದು, ಬಲರಾಮ್ ಕೆಲವು ವರ್ಷಗಳಿಂದ ಊರಲ್ಲಿ ಇರಲಿಲ್ಲ. ಎಲ್ಲೋ ಹೋಗಿದ್ದ. ಅಲ್ಲಂದ ಬಂದ ಮೇಲೆ ಮಾತು ಕಡಿಮೆ ಮಾಡಿದ್ದ. ಈ ರೀತಿ ಕಾಳಿಪೀಠ ಸ್ಥಾಪಿಸಿದ್ದ. ಆ ಮಂತ್ರ, ತಂತ್ರ ಎಲ್ಲ ಎಲ್ಲಿಂದಲೋ ಕಲಿತುಕೊಂಡು ಬಂದಿದ್ದ ಎಂದು ಹೇಳಿದ್ದಾರೆ.

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point