Bengaluru News: ಕಳೆದ 3 ವರ್ಷಗಳಲ್ಲಿ ಮುಚ್ಚಿವೆ 104 ಗಾರ್ಮೆಂಟ್ಸ್‌; ಮಹಿಳೆಯರೂ ಸೇರಿ ಉದ್ಯೋಗ ಕಳೆದುಕೊಂಡಿದ್ದು 33 ಸಾವಿರ ಕಾರ್ಮಿಕರು
ಕನ್ನಡ ಸುದ್ದಿ  /  ಕರ್ನಾಟಕ  /  Bengaluru News: ಕಳೆದ 3 ವರ್ಷಗಳಲ್ಲಿ ಮುಚ್ಚಿವೆ 104 ಗಾರ್ಮೆಂಟ್ಸ್‌; ಮಹಿಳೆಯರೂ ಸೇರಿ ಉದ್ಯೋಗ ಕಳೆದುಕೊಂಡಿದ್ದು 33 ಸಾವಿರ ಕಾರ್ಮಿಕರು

Bengaluru News: ಕಳೆದ 3 ವರ್ಷಗಳಲ್ಲಿ ಮುಚ್ಚಿವೆ 104 ಗಾರ್ಮೆಂಟ್ಸ್‌; ಮಹಿಳೆಯರೂ ಸೇರಿ ಉದ್ಯೋಗ ಕಳೆದುಕೊಂಡಿದ್ದು 33 ಸಾವಿರ ಕಾರ್ಮಿಕರು

Bengaluru News: ಹೆಚ್ಚಿನ ವಿದ್ಯಾಭ್ಯಾಸ ಇಲ್ಲದ ಬಹುತೇಕ ಮಹಿಳೆಯರು ಜೀವನಕ್ಕಾಗಿ ಗಾರ್ಮೆಂಟ್ಸ್‌ ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಕಳೆದ 3 ವರ್ಷಗಳ ಅವಧಿಯಲ್ಲಿ ಸುಮಾರು 104 ಗಾರ್ಮೆಂಟ್ಸ್‌ ಮುಚ್ಚಿದ್ದು ಮಹಿಳೆಯರು ಸೇರಿದಂತೆ ಸುಮಾರು 33,163 ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ.

ಕಳೆದ 3 ವರ್ಷಗಳಲ್ಲಿ 104 ಗಾರ್ಮೆಂಟ್ಸ್‌ ಮುಚ್ಚಿದ್ದು  33,163 ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ (ಸಾಂದರ್ಭಿಕ ಚಿತ್ರ)
ಕಳೆದ 3 ವರ್ಷಗಳಲ್ಲಿ 104 ಗಾರ್ಮೆಂಟ್ಸ್‌ ಮುಚ್ಚಿದ್ದು 33,163 ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ (ಸಾಂದರ್ಭಿಕ ಚಿತ್ರ) (PC: @IncNaushad)

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ದೇಶದ ಮಾಹಿತಿ ತಂತ್ರಜ್ಞಾನ ರಾಜಧಾನಿ ಎಂದು ಹೆಸರು ಪಡೆದಿದೆ. ಆದರೆ ಈ ಐಟಿ ಬಿಟಿ ಕಂಪನಿಗಳು ಪ್ರವರ್ಧಮಾನಕ್ಕೂ ಬರುವುದಕ್ಕೂ ಮುನ್ನ ಬೆಂಗಳೂರಿನಲ್ಲಿ ಸಾವಿರಾರು ಗಾರ್ಮೆಂಟ್ಸ್ ಕಂಪನಿಗಳಿದ್ದು, ಲಕ್ಷಾಂತರ ಮಂದಿಗೆ ಉದ್ಯೋಗ ದೊರಕಿಸಿಕೊಟ್ಟಿರುವುದನ್ನು ಮರೆತುಬಿಟ್ಟಿದ್ದೇವೆ. ಇಡೀ ದೇಶದಲ್ಲಿಯೇ ಅತಿ ಹೆಚ್ಚು ಗಾಮೆಂಟ್ಸ್ ಉತ್ಪನ್ನಗಳ ಉತ್ಪಾದನೆ ನಡೆಯುವುದು ನಮ್ಮ ಬೆಂಗಳೂರಿನಲ್ಲಿ ಎನ್ನುವುದು ಕಡಿಮೆ ಸಾಧನೆಯೇನಲ್ಲ.

ಅದರಲ್ಲೂ ವಿಶೇಷವಾಗಿ ಈ ಗಾರ್ಮೆಂಟ್ಸ್ ಉದ್ಯೋಗಿಗಳಲ್ಲಿ ಮಹಿಳೆಯರೇ ಅತಿ ಹೆಚ್ಚು. ಇವರು ತಮ್ಮ ಜೀವನಾಧಾರಕ್ಕೆ ಈ ಉದ್ಯೋಗವನ್ನು ಅವಲಂಬಿಸಿರುವುದು ಸುಳ್ಳಲ್ಲ. ಆದರೆ ಅತಂಕ್ಕೀಡಾಗುವ ವಿದ್ಯಾಮಾನವೊಂದು ಜರುಗಿದೆ. ಕಳೆದ 3 ವರ್ಷಗಳಲ್ಲಿ 86 ಗಾರ್ಮೆಂಟ್ಸ್ ಮುಚ್ಚಿದ್ದು, ಸುಮಾರು 22,862 ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಇತ್ತಿಚಿನ ಅಂಕಿಅಂಶಗಳ ಪ್ರಕಾರ 2021ರಲ್ಲಿ ಬೆಂಗಳೂರು ಜಿಲ್ಲೆಯಲ್ಲಿ 24 ಗಾರ್ಮೆಂಟ್ಸ್ ಗಳು ಮುಚ್ಚಿದ್ದು, 3,695 ಉದ್ಯೋಗಗಳು ನಷ್ಟವಾಗಿವೆ. 2022ರಲ್ಲಿ 18 ಗಾರ್ಮೆಂಟ್‌ಗಳು ಮುಚ್ಚಲಾಗಿದ್ದು, 2,730 ಮಹಿಳಾ ಉದ್ಯೋಗಿಗಳು ಸೇರಿ 4,682 ಮಂದಿ ಉದ್ಯೋಗ ವಂಚಿತರಾಗಿದ್ದಾರೆ. 2023ರಲ್ಲಿಯೂ ಇದೇ ಅನುಭವವಾಗಿದೆ. 2023 ರಲ್ಲಿ 86 ಗಾರ್ಮೆಂಟ್ಸ್ ಮುಚ್ಚಲಾಗಿದ್ದು, 33,163 ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ.

3 ವರ್ಷಗಳಲ್ಲಿ 104 ಗಾರ್ಮೆಂಟ್‌ಗಳಿಗೆ ಬೀಗ

ಹೀಗೆ ಕರ್ನಾಟಕದಲ್ಲಿ ಕಳೆದ 3 ವರ್ಷಗಳಿಂದ 104 ಗಾರ್ಮೆಂಟ್ಸ್ ಮುಚ್ಚಲ್ಪಟ್ಟಿದ್ದು, ಒಟ್ಟು 40,384 ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಇವರೆಲ್ಲರೂ ಬಡತನ ರೇಖೆಗಿಂತ ಕೆಳಗಿರುವವರು ಮತ್ತು ಮಧ್ಯಮ ವರ್ಗದ ಜನರು ಎನ್ನುವುದು ಮುಖ್ಯ. ಇತ್ತೀಚೆಗೆ ಪೂರ್ಣಗೊಂಡ ವಿಧಾನಮಂಡಲ ಅಧಿವೇಶನದಲ್ಲಿ ವಿಧಾನಪರಿಷತ್ ಸದಸ್ಯ ಮಧು ಮಾದೇಗೌಡ ಈ ವಿಷಯ ಪ್ರಸ್ತಾಪಿಸಿ ಗಾರ್ಮೆಂಟ್‌ಗಳು ಮುಚ್ಚುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಕಾರ್ಮಿಕ ಸಚಿವ ಸಂತೋಷ್ ಲಾಡ್ ಈ ವಿಷಯವನ್ನು ಒಪ್ಪಿಕೊಂಡಿದ್ದು, ಅವರೂ ಕಳವಳ ವ್ಯಕ್ತಪಡಿಸಿದ್ದರು. ವಿದೇಶಗಳಲ್ಲಿ ಉಂಟಾಗಿರುವ ಆರ್ಥಿಕ ಹಿಂಜರಿಕೆ, ಕೋವಿಡ್-19, ಕಾರ್ಮಿಕರ ವಲಸೆ, ಬಂಡವಾಳ ಹೂಡಿಕೆ ಮತ್ತು ಹೆಚ್ಚಿದ ಇತರ ವೆಚ್ಚಗಳು, ನಷ್ಟ, ಸಂಪನ್ಮೂಲಗಳ ಕೊರತೆ ಮತ್ತು ಹೆಚ್ಚುತ್ತಿರುವ ಸ್ಪರ್ಧೆ ಮೊದಲಾದ ಕಾರಣಗಳಿಗಾಗಿ ಈ ಉದ್ಯಮ ನಷ್ಟದಲ್ಲಿದೆ ಎಂದು ಉತ್ತರಿಸಿದ್ದರು.

ಆದರೂ ಸಚಿವ ಲಾಡ್ ಅವರು ಆಶಾದಾಯಕ ಸಂಗತಿಯೊಂದನ್ನು ಹಂಚಿಕೊಂಡಿದ್ದಾರೆ. ಕಳೆದ 3 ವರ್ಷಗಳಲ್ಲಿ 144 ಗಾರ್ಮೆಂಟ್ಸ್ ಮುಚ್ಚಲ್ಪಟ್ಟಿದ್ದರೂ ಅಷ್ಟೇ ಸಂಖ್ಯೆಯ ಗಾರ್ಮೆಂಟ್‌ಗಳು ಹೊಸದಾಗಿ ಆರಂಭ ಮಾಡಿವೆ. ಹೊಸ ಉದ್ಯೋಗಗಳನ್ನು ಸೃಷ್ಟಿ ಮಾಡಿವೆ. ಇದು ಕೈಗಾರಿಕೆಯ ಬೆಳವಣಿಗೆಯನ್ನು ತೋರಿಸುತ್ತದೆ ಎಂದು ತಿಳಿಸಿದ್ದರು. ಯೂರೋಪ್ ಅಮೆರಿಕಾ ಮೊದಲಾದ ರಾಷ್ಟ್ರಗಳಲ್ಲಿ ವೆಚ್ಚಗಳನ್ನು ಕಡಿಮೆ ಮಾಡಿರುವುದರಿಂದ ಭಾರತದ ಗಾರ್ಮೆಂಟ್ಸ್ ಉದ್ಯಮದ ಮೇಲೆ ಹೊಡೆತ ಬಿದ್ದಿದೆ. ಈ ಉದ್ಯಮದಲ್ಲಿ ಸ್ಪರ್ಧೆ ಹೆಚ್ಚಿದ್ದು, ಕಾರ್ಮಿಕರ ಅಭಾವವೂ ಇದೆ. ಸಾರಿಗೆ ವೆಚ್ಚವನ್ನು ನೀಡಿ ಕಾರ್ಮಿಕರನ್ನು ಆಕರ್ಷಿಸುತ್ತಿದ್ದೇವೆ ಎಂದು ಗಾರ್ಮೆಂಟ್ಸ್ ವ್ಯವಸ್ಥಾಪಕರೊಬ್ಬರು ಹೇಳಿದ್ದಾರೆ.

ಅನುಭವಿಗಳನ್ನು ಕೆಲಸಕ್ಕೆ ತೆಗೆದುಕೊಳ್ಳಲು ಹಿಂದೇಟು

ಹೊಸ ಉದ್ಯಮಗಳು ಸಾಮಾನ್ಯವಾಗಿ ಹೊಸ ಉದ್ಯೋಗಿಗಳನ್ನೇ ನೇಮಕ ಮಾಡಿಕೊಳ್ಳುತ್ತವೆ. ಹೆಚ್ಚಿನ ವೇತನ ನೀಡಬೇಕಾಗುತ್ತದೆ ಎಂಬ ಕಾರಣಕ್ಕೆ ಅನುಭವಿಗಳನ್ನು ಆಯ್ಕೆ ಮಾಡಿಕೊಳ್ಳುವುದಿಲ್ಲ. ಹಾಗಾಗಿ ಮಧ್ಯ ವಯಸ್ಕರೆಲ್ಲಾ ನಿರುದ್ಯೋಗಿಗಳಾಗುವ ಸಂಭವಗಳೇ ಹೆಚ್ಚು. ಈ ಉದ್ಯೋಗ ನಷ್ಟದಿಂದ ಅತಿ ಹೆಚ್ಚು ತೊಂದರೆಗೆ ಒಳಗಾಗುವವರು ಮಹಿಳೆಯರು. ಈ ಉದ್ಯೋಗಕ್ಕೆ ಸಮಾನಾದ ಮತ್ತೊಂದು ಉದ್ಯೋಗ ದೊರಕುವುದಿಲ್ಲ. ಆದ್ದರಿಂದ ಅಂತಹ ಕುಟುಂಬಗಳ ಆರ್ಥಿಕ ಪರಿಸ್ಥಿತಿಯ ಮೇಲೆ ಹೊಡೆತ ಬೀಳುತ್ತದೆ ಎಂದು ಮತ್ತೊಬ್ಬ ವ್ಯವಸ್ಥಾಪಕರು ಹೇಳುತ್ತಾರೆ. ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಉದ್ಯಮಗಳಲ್ಲಿ ನೀಡುತ್ತಿರುವ ವೇತನ ಪರಿಷ್ಕರಣೆ ಮಾಡಿರುವುದರಿಂದ ಗಾರ್ಮೆಂಟ್ಸ್ ಉದ್ಯಮದ ಬೆಳವಣಿಗೆಗೆ ಹೊಡೆತ ಬಿದ್ದಿದೆ ಎಂದು ಗಾರ್ಮೆಂಟ್ಸ್ ಮಾಲೀಕರೊಬ್ಬರು ಅಭಿಪ್ರಾಯಪಡುತ್ತಾರೆ.

Whats_app_banner