ಬೆಂಗಳೂರು: ತೃತೀಯ ಲಿಂಗಿಯ ಕೊಲೆ ಮಾಡಿ ಪರಾರಿಯಾಗಿದ್ದ 51 ವರ್ಷದ ಮಹಿಳೆಯ ಬಂಧನ; ಬೈಕ್ ಮೆಕ್ಯಾನಿಕ್ ಹತ್ಯೆ, ಪರಿಚಯಸ್ಥರ ಕೃತ್ಯದ ಶಂಕೆ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು: ತೃತೀಯ ಲಿಂಗಿಯ ಕೊಲೆ ಮಾಡಿ ಪರಾರಿಯಾಗಿದ್ದ 51 ವರ್ಷದ ಮಹಿಳೆಯ ಬಂಧನ; ಬೈಕ್ ಮೆಕ್ಯಾನಿಕ್ ಹತ್ಯೆ, ಪರಿಚಯಸ್ಥರ ಕೃತ್ಯದ ಶಂಕೆ

ಬೆಂಗಳೂರು: ತೃತೀಯ ಲಿಂಗಿಯ ಕೊಲೆ ಮಾಡಿ ಪರಾರಿಯಾಗಿದ್ದ 51 ವರ್ಷದ ಮಹಿಳೆಯ ಬಂಧನ; ಬೈಕ್ ಮೆಕ್ಯಾನಿಕ್ ಹತ್ಯೆ, ಪರಿಚಯಸ್ಥರ ಕೃತ್ಯದ ಶಂಕೆ

ಬೆಂಗಳೂರು ಮುರುಗೇಶ್ ಪಾಳ್ಯದ ಸಮೀಪ ತೃತೀಯ ಲಿಂಗಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರತ್ಯೇಕ ಪ್ರಕರಣದಲ್ಲಿ, ಬೈಕ್ ಮೆಕ್ಯಾನಿಕ್ ಹತ್ಯೆಯಾಗಿದ್ದು, ಪರಿಚಯಸ್ಥರೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. (ವರದಿ- ಎಚ್. ಮಾರುತಿ, ಬೆಂಗಳೂರು)

ಬೆಂಗಳೂರು ಮುರುಗೇಶ್‌ ಪಾಳ್ಯದಲ್ಲಿ ತೃತೀಯ ಲಿಂಗಿಯನ್ ಕೊಲೆ ಮಾಡಿ ಪರಾರಿಯಾಗಿದ್ದ ಮಹಿಳೆಯ ಬಂಧನವಾಗಿದೆ. (ಸಾಂಕೇತಿಕ ಚಿತ್ರ)
ಬೆಂಗಳೂರು ಮುರುಗೇಶ್‌ ಪಾಳ್ಯದಲ್ಲಿ ತೃತೀಯ ಲಿಂಗಿಯನ್ ಕೊಲೆ ಮಾಡಿ ಪರಾರಿಯಾಗಿದ್ದ ಮಹಿಳೆಯ ಬಂಧನವಾಗಿದೆ. (ಸಾಂಕೇತಿಕ ಚಿತ್ರ)

ಬೆಂಗಳೂರು: ತೃತೀಯ ಲಿಂಗಿ ಮಂಜಿ ಬಾಯ್ ಅಲಿಯಾಸ್ ಮಂಜ ನಾಯ್ ಎಂಬುವವರನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ ಆರೋಪದಡಿಯಲ್ಲಿ ಅವರ ಸ್ನೇಹಿತೆ ಪ್ರೇಮಾ ಎಂಬಾಕೆಯನ್ನು ಬೆಂಗಳೂರಿನ ಜೀವನ್‌ ಬಿಮಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಏಪ್ರಿಲ್ 26 ರಂದು ರಾತ್ರಿ 42 ವರ್ಷದ ಮಂಜಿ ಬಾಯ್ ಅವರನ್ನು ಕೊಲೆ ಮಾಡಲಾಗಿತ್ತದರೂ ಈ ಪ್ರಕರಣ ಮೇ 3ರಂದು ಬೆಳಕಿಗೆ ಬಂದು ಶವ ಪತ್ತೆಯಾಗಿತ್ತು. ಮುರುಗೇಶ್ ಪಾಳ್ಯದ ಶ್ರೀರಾಮನಗರದಲ್ಲಿ ಮಂಜಿ ಬಾಯ್ ಮತ್ತು ಪ್ರೇಮಾ ಜೊತೆಯಲ್ಲಿ ವಾಸವಾಗಿದ್ದರು. ಚನ್ನರಾಯಪಟ್ಟಣದ ಪ್ರೇಮಾ ಅವರ ಪತಿ ಹಲವು ವರ್ಷಗಳ ಹಿಂದೆಯೇ ಮೃತಪಟ್ಟಿದ್ದರು. ನಂತರ ಪ್ರೇಮಾ ಬೆಂಗಳೂರಿಗೆ ಬಂದು ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದರು. ಆಗ ಮಂಜಿ ಬಾಯ್ ಪರಿಚಯವಾಗಿತ್ತು.

ಪರಸ್ಪರ ಪರಿಚಿತರಾಗಿದ್ದ ಇವರು, ಒಂದೇ ಮನೆಯಲ್ಲಿ ವಾಸವಿದ್ದರು. ಆರಂಭದಲ್ಲಿ ಚೆನ್ನಾಗಿಯೇ ಇದ್ದ ಇವರು ಇತ್ತೀಚಿನ ದಿನಗಳಲ್ಲಿ ಸದಾ ಜಗಳವಾಡುತ್ತಿದ್ದರು. ಕೊಲೆ ನಡೆದ ಏಪ್ರಿಲ್ 26 ರಂದು ರಾತ್ರಿಯೂ ಇಬ್ಬರ ನಡುವೆ ಜೋರು ಗಲಾಟೆ ನಡೆದಿತ್ತು.

ಕೋಪದಲ್ಲಿ ಮಂಜಿ ಬಾಯ್, ಚಾಕುವಿನಿಂದ ಪ್ರೇಮಾ ಅವರನ್ನು ಚುಚ್ಚಲು ಮುಂದಾಗಿದ್ದರು. ಆದರೆ ಪ್ರೇಮಾ ತಪ್ಪಿಸಿಕೊಂಡಿದ್ದರು. ನಂತರ ಸಿಟ್ಟಿಗೆದ್ದ ಪ್ರೇಮಾ, ಮಂಜಿ ಬಾಯ್ ಅವರನ್ನು ಭದ್ರವಾಗಿ ಹಿಡಿದುಕೊಂಡು ಕುತ್ತಿಗೆಯನ್ನು ಟವಲ್ ನಿಂದ ಗಟ್ಟಿಯಾಗಿ ಬಿಗಿದಿದ್ದರು. ಇದರಿಂದ ಉಸಿರುಗಟ್ಟಿ ಮಂಜಿ ಬಾಯ್ ಸ್ಥಳದಲ್ಲೇ ಮೃತಪಟ್ಟಿದ್ದರು.

ಘಟನೆಯ ನಂತರ ಭಯಭೀತರಾಗಿ ಪ್ರೇಮಾ ತಮ್ಮ ಸ್ವಂತ ಊರಿಗೆ ಹೊರಟು ಹೋಗಿದ್ದರು. ಮೇ 3ರಂದು ಇವರು ವಾಸವಿದ್ದ ಮನೆಯಿಂದ ದುರ್ವಾಸನೆ ಬೀರಲು ಆರಂಭವಾಗಿತ್ತು. ಮಂಜಿ ಬಾಯ್ ಅವರ ಸಂಬಂಧಿಕರು ಆಗಮಿಸಿ ನೋಡಿದಾಗ ಮಂಜಿ ಮೃತದೇಹ ಕೊಳೆತು ಹೋಗಿತ್ತು. ಮಂಜಿ ಬಾಯ್ ಮೃತದೇಹ ಕೊಳೆತ ಸ್ಥಿತಿಯಲ್ಲಿ ಕಂಡಿತ್ತು. ಆದರೆ ಆರಂಭದಲ್ಲಿ ಕೊಲೆ ನಡೆದಿರುವ ಯಾವುದೇ ಮಾಹಿತಿ ಇರಲಿಲ್ಲ.

ಮರಣೋತ್ತರ ಪರೀಕ್ಷೆ ನಡೆಸಿದಾಗಲೇ ಕೊಲೆಯಾಗಿದೆ ಎಂದು ಗೊತ್ತಾಗಿತ್ತು. ಪೊಲೀಸರು ಸಂಬಂಧಿಕರು ಮತ್ತು ನೆರೆಹೊರೆಯವರನ್ನು ವಿಚಾರಣೆ ನಡೆಸಿದಾಗ ಇವರ ಜೊತೆ ಪ್ರೇಮಾ ವಾಸವಾಗಿರುವ ಮಾಹಿತಿ ಲಭ್ಯವಾಗಿತ್ತು. ಕೊಲೆ ಮಾಡಿ ಪರಾರಿಯಾಗಿದ್ದ ಪ್ರೇಮಾ ಅವರನ್ನು ಪೊಲೀಸರು ಬಂಧಿಸಿ ಕರೆ ತಂದಿದ್ದರು. ವಿಚಾರಣೆ ನಡೆಸಿದಾಗ ಆಕೆ ಎಲ್ಲ ವಿವರ ನೀಡಿದ್ದಾರೆ. ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಬೈಕ್ ಮೆಕ್ಯಾನಿಕ್ ಕೊಲೆ; ಪರಿಚಯಸ್ಥರೇ ಕೊಲೆ ಮಾಡಿರುವ ಶಂಕೆ

ಬೆಂಗಳೂರಿನ ಓಕಳಿಪುರ ಬಳಿಯ ರೈಲ್ವೆ ಸೇತುವೆ ಸಮೀಪದಲ್ಲಿ ಬೈಕ್ ಮೆಕ್ಯಾನಿಕ್ ದಿಲೀಪ್ ಎಂಬುವರ ಶವ ಪತ್ತೆಯಾಗಿದ್ದು ಪರಿಚಯಸ್ಥರೇ ಕೊಲೆ ಮಾಡಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಕೊಲೆ ನಡೆದು ವಾರವಾಗಿದ್ದರೂ ಗುರುತು ಪತ್ತೆಯಾಗಿರಲಿಲ್ಲ. ನಂತರ ಪೊಲೀಸರು ಮೃತದೇಹದ ಭಾವಚಿತ್ರಗಳನ್ನು ಬೆಂಗಳೂರಿನ ಹಾಗೂ ಹೊರ ಜಿಲ್ಲೆಗಳ ಪೊಲೀಸ್ ಠಾಣೆಗಳಿಗೆ ಕಳುಹಿಸಿದ್ದರು.

ಸಂಬಂಧಿಕರು ದಿಲೀಪ್ ಅವರದ್ದೇ ಮೃತದೇಹ ಎಂಬುದನ್ನು ಗುರುತು ಹಿಡಿದಿದ್ದಾರೆ. ಲಕ್ಷ್ಮೀ ನಾರಾಯಣಪುರದ 34 ವರ್ಷದ ದಿಲೀಪ್ ಅವರನ್ನು ಕೊಲೆ ಮಾಡಿ, ಮೃತದೇಹವನ್ನು ರೈಲ್ವೇ ಹಳಿ ಬಳಿ ಎಸೆದು ಹೋಗಿದ್ದಾರೆ. ಆರೋಪಿಗಳನ್ನು ಪತ್ತೆ ಹಚ್ಚಲು ಸಮೀಪದ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ

(ವರದಿ- ಎಚ್. ಮಾರುತಿ, ಬೆಂಗಳೂರು)