ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು: ಪೊಲೀಸ್ ಕಚೇರಿ ಜಾಗ ತಮ್ಮದೆಂದು ನಕಲಿ ದಾಖಲೆ ಸೃಷ್ಟಿಸಿದ್ದ 6 ಮಂದಿ ಸೆರೆ, ನಟಿ ಹೇಮಾ ನ್ಯಾಯಾಂಗ ಬಂಧನ ವಿಸ್ತರಣೆ

ಬೆಂಗಳೂರು: ಪೊಲೀಸ್ ಕಚೇರಿ ಜಾಗ ತಮ್ಮದೆಂದು ನಕಲಿ ದಾಖಲೆ ಸೃಷ್ಟಿಸಿದ್ದ 6 ಮಂದಿ ಸೆರೆ, ನಟಿ ಹೇಮಾ ನ್ಯಾಯಾಂಗ ಬಂಧನ ವಿಸ್ತರಣೆ

ಬೆಂಗಳೂರು ಅಪರಾಧ ಸುದ್ದಿ; ಪೊಲೀಸ್ ಕಚೇರಿ ಜಾಗ ತಮ್ಮದೆಂದು ನಕಲಿ ದಾಖಲೆ ಸೃಷ್ಟಿಸಿದ್ದ 6 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೊಂದೆಡೆ, ರೇವ್ ಪಾರ್ಟಿ ಡ್ರಗ್ಸ್ ಸೇವನೆ ಪ್ರಕರಣದಲ್ಲಿ ನಟಿ ಹೇಮಾಗೆ ಮತ್ತೆ 14 ದಿನಗಳ ನ್ಯಾಯಾಂಗ ಬಂಧನ ವಿಸ್ತರಣೆಯಾಗಿದೆ. (ವರದಿ- ಎಚ್. ಮಾರುತಿ, ಬೆಂಗಳೂರು)

ಬೆಂಗಳೂರು: ಪೊಲೀಸ್ ಕಚೇರಿ ಜಾಗ ತಮ್ಮದೆಂದು ನಕಲಿ ದಾಖಲೆ ಸೃಷ್ಟಿಸಿದ್ದ 6 ಮಂದಿ ಸೆರೆ, ನಟಿ ಹೇಮಾ ನ್ಯಾಯಾಂಗ ಬಂಧನ ವಿಸ್ತರಣೆ. (ಸಾಂದರ್ಭಿಕ ಚಿತ್ರ)
ಬೆಂಗಳೂರು: ಪೊಲೀಸ್ ಕಚೇರಿ ಜಾಗ ತಮ್ಮದೆಂದು ನಕಲಿ ದಾಖಲೆ ಸೃಷ್ಟಿಸಿದ್ದ 6 ಮಂದಿ ಸೆರೆ, ನಟಿ ಹೇಮಾ ನ್ಯಾಯಾಂಗ ಬಂಧನ ವಿಸ್ತರಣೆ. (ಸಾಂದರ್ಭಿಕ ಚಿತ್ರ)

ಬೆಂಗಳೂರು: ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಿ ಅಥವಾ ಬಡಬಗ್ಗರ ಜಾಮೀನು ನಿವೇಶನಗಳನ್ನು ಸ್ವಾಹಾ ಮಾಡುವ ಖದೀಮರ ಬಗ್ಗೆ ಕೇಳಿದ್ದೇವೆ. ಆದರೆ ಇಂತಹ ಕಳ್ಳರ ಗುಂಪೊಂದು ಪೊಲೀಸ್ ಕಚೇರಿಗೆ ಸೇರಿದ ಜಾಗವನ್ನೇ ತಮ್ಮದೆಂದು ದಾಖಲೆ ಸೃಷ್ಟಿಸಿಕೊಂಡಿದ್ದ 6 ಮಂದಿಯನ್ನು ಪೊಲೀಸರು ಪರಪ್ಪನ ಅಗ್ರಹಾರಕ್ಕೆ ಮುದ್ದೆ ಮುರಿಯಲು ಕಳುಹಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಬೆಂಗಳೂರು ನಗರ ಕೇಂದ್ರ ವಲಯದ ಪೊಲೀಸ್ ಕಚೇರಿಗೆ ಸೇರಿದ ಜಾಗ ತಮ್ಮದೆಂದು ನಕಲಿ ದಾಖಲೆ ಸೃಷ್ಟಿಸಿಕೊಂಡಿದ್ದ ಈ ಆರು ಮಂದಿ ವಿರುದ್ಧ ಬೆಂಗಳೂರಿನ ಹೈಗೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಜಯನಗರದ ರಾಜಶೇಖರ್, ವಿದ್ಯಾರಣ್ಯಪುರದ ಎಂ.ಡಿ.ಹನೀಫ್, ಉಲ್ಲಾಳದ ಮಹಮ್ಮದ್ ನದೀಮ್, ಸಂಜಯನಗರದ ಗಣಪತಿ, ಮೋಹನ್ ಶೆಟ್ಟಿ ಮತ್ತು ಜಹೀರ್ ಎಂಬುವರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಇವರ ವಿರುದ್ಧ ಜಿಲ್ಲಾ ನಿಯಂತ್ರಣ ಕೊಠಡಿ ವೈರ್‌ ಲೆಸ್ ವಿಭಾಗದ ಇನ್‌ಸ್ಪೆಕ್ಟರ್ ಸಂತೋಷಗೌಡ ದೂರು ಸಲ್ಲಿಸಿದ್ದರು. ಇವರು ನೀಡಿದ್ದ ದೂರು ಆಧರಿಸಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸ್ ಕಚೇರಿ ಜಾಗವನ್ನೇ ದಾಖಲೆಯಲ್ಲಿ ಹೈಜಾಕ್ ಮಾಡಿದ ಪ್ರಕರಣ

ಜೂನ್ 6ರಂದು ಬೆಂಗಳೂರು ನಗರದಲ್ಲಿರುವ ಕೇಂದ್ರ ವಲಯ ಪೊಲೀಸ್ ಕಚೇರಿ ಹಾಗೂ ಗ್ರಾಮಾಂತರ ಜಿಲ್ಲಾ ಪೊಲೀಸ್ ಕಚೇರಿ ಆವರಣಕ್ಕೆ ನುಗ್ಗಿದ್ದ ಇಬ್ಬರು ಆರೋಪಿಗಳು ಸ್ಥಳದ ವಿಡಿಯೊ ಚಿತ್ರೀಕರಣ ಮಾಡುತ್ತಿದ್ದರು ಮತ್ತು ಫೋಟೊ ತೆಗೆಯುತ್ತಿದ್ದರು.

ಅವರ ಈ ನಡವಳಿಕೆಯನ್ನು ಇನ್‌ಸ್ಪೆಕ್ಟರ್ ಸಂತೋಷಗೌಡ ಪ್ರಶ್ನಿಸಿದ್ದಾರೆ. ಇಷ್ಟಕ್ಕೇ ಆರೋಪಿಗಳು ಇನ್‌ಸ್ಪೆಕ್ಟರ್ ಅವರನ್ನು ಪ್ರಶ್ನಿಸಿ ಬೆದರಿಕೆ ಹಾಕಿದ್ದಾರೆ. ಈ ಜಾಗದ ದಾಖಲೆ ಮೋಹನ್‌ಶೆಟ್ಟಿ ಹಾಗೂ ರಾಜಶೇಖರ್ ಅವರ ಹೆಸರಿನಲ್ಲಿದೆ ಎಂದು ಹೇಳಿದ್ದಾರೆ. ಅವರಿಬ್ಬರನ್ನು ಕರೆಸಿ ವಿಚಾರಣೆ ನಡೆಸಿದಾಗ ಜಹೀರ್ ಅಹಮದ್ ಮೋಹನ್‌ಶೆಟ್ಟಿ ಹಾಗೂ ರಾಜಶೇಖರ್ ಸೇರಿದಂತೆ ಹಲವರು ಈ ಭೂಮಿಯ ಜಿಪಿಎ ಮಾಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪೊಲೀಸ್ ಇಲಾಖೆಗೆ ಸೇರಿದ ಜಾಗವನ್ನು ಮಾರಾಟ ಮಾಡುವ ದುರುದ್ದೇಶದಿಂದ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡಿರುವುದು ತಿಳಿದು ಬಂದಿದೆ. ಆರೋಪಿಗಳು ಅಕ್ರಮವಾಗಿ ಕಚೇರಿ ಆವರಣಕ್ಕೆ ನುಗ್ಗಿದ್ದಾರೆ ಎಂದೂ ದೂರಿನಲ್ಲಿ ತಿಳಿಸಲಾಗಿದೆ. ಇವರ ವಿರುದ್ಧ ಪ್ರಕರಣ ಮುಂದುವರೆದಿದ್ದು ಪೊಲೀಸ್ ಇಲಾಖೆಗೆ ಸೇರಿದ ಸ್ವತ್ತಿನ ದಾಖಲೆಗಳನ್ನು ಹೇಗೆ ಸೃಷ್ಟಿಸಿ ಕೊಂಡರು ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

ರೇವ್ ಪಾರ್ಟಿ ,ನಟಿ ಹೇಮಾ ಮತ್ತೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ

ಬೆಂಗಳೂರಿನ ಆನೇಕಲ್ ತಾಲ್ಲೂಕಿನ ವೈಟ್ ಫೀಲ್ಡ್ ಸಮೀಪವಿರುವ ಜಿ.ಆರ್.ಫಾರ್ಮ್ ಹೌಸ್‌ನಲ್ಲಿ ನಡೆದಿದ್ದ ರೇವ್ ಪಾರ್ಟಿ ಪ್ರಕರಣದಲ್ಲಿ ಡ್ರಗ್ಸ್ ಸೇವನೆ ಹಾಗೂ ತನಿಖೆಯ ದಿಕ್ಕು ತಪ್ಪಿಸುವ ಉದ್ದೇಶದಿಂದ ಸುಳ್ಳು ವಿಡಿಯೊ ಮಾಡಿ ಹರಿಬಿಟ್ಟ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ತೆಲುಗು ನಟಿ ಹೇಮಾ ಅವರನ್ನು ಮತ್ತೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಈ ಪ್ರಕರಣದಲ್ಲಿ ಹೆಚ್ಚಿನ ವಿಚಾರಣೆಗಾಗಿ ಹೇಮಾ ಅವರನ್ನು ಒಂದು ದಿನದ ಮಟ್ಟಿಗೆ ಸಿಸಿಬಿ ಕಸ್ಟಡಿಗೆ ಪಡೆದುಕೊಂಡಿತ್ತು. ಕಸ್ಟಡಿ ಅಂತ್ಯಗೊಂಡ ಕಾರಣ ಗುರುವಾರ ಸಂಜೆ 6 ಗಂಟೆ ಸುಮಾರಿಗೆ ಆರೋಪಿಯನ್ನು ಆನೇಕಲ್‌ನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಆರೋಪಿಗೆ ನ್ಯಾಯಾಂಗ ಬಂಧನ ವಿಸ್ತರಿಸಿ ಕೋರ್ಟ್ ಆದೇಶ ಹೊರಡಿಸಿದೆ. ಆ ನಂತರ ಆರೋಪಿಯನ್ನು ಪರಪ್ಪನ ಅಗ್ರಹಾರದ ಜೈಲಿಗೆ ಕಳುಹಿಸಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದ್ದಾರೆ.

ನಾನು ಮಾದಕ ವಸ್ತು ಸೇವನೆ ಮಾಡಿಲ್ಲ. ದುರುದ್ದೇಶಪೂರ್ವಕವಾಗಿ ಪೊಲೀಸರು ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ನಟಿ ಹೇಮಾ ವಿಚಾರಣೆ ಸಂದರ್ಭದಲ್ಲಿ ಹೇಳಿಕೆ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರೇವ್ ಪಾರ್ಟಿ ನಡೆದ ದಿನ 58 ವರ್ಷದ ನಟಿ ಹೇಮಾ, ರೇವ್ ಪಾರ್ಟಿ ನಡೆದ ಸ್ಥಳದಿಂದಲೇ ವಿಡಿಯೋ ಚಿತ್ರೀಕರಣ ಮಾಡಿ ನಾನು ಹೈದರಬಾದ್ ನ ನನ್ನ ತೋಟದ ಮನೆಯಲ್ಲಿದ್ದೇನೆ. ಯಾವುದೇ ಪಾರ್ಟಿಯಲ್ಲಿ ಭಾಗಿಯಾಗಿಲ್ಲ ಎಂದು ಸ್ಪಷ್ಟನೆ ನೀಡುವ ವಿಫಲ ಯತ್ನ ನಡೆಸಿದ್ದರು.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024