ಕನ್ನಡ ಸುದ್ದಿ  /  Karnataka  /  Bengaluru News 7th Pay Commission Recommends 27 5 Pc Hike In Pay To Karnataka Govt Employees Mrt

ಕರ್ನಾಟಕ 7ನೇ ವೇತನ ಆಯೋಗ ವರದಿ ಸಲ್ಲಿಕೆ; ಕನಿಷ್ಠ ಮೂಲ ವೇತನ ಶೇ 27.5 ಹೆಚ್ಚಳಕ್ಕೆ ಶಿಫಾರಸು, 27,000 ರೂಪಾಯಿಗೆ ಏರಿಕೆ

ಕರ್ನಾಟಕ 7ನೇ ವೇತನ ಆಯೋಗ ವರದಿ ಸಲ್ಲಿಕೆಯಾಗಿದ್ದು, ರಾಜ್ಯದ ಸರ್ಕಾರಿ ನೌಕರರ ಕನಿಷ್ಠ ಮೂಲ ವೇತನವನ್ನು ಶೇ 27.5 ಹೆಚ್ಚಳಕ್ಕೆ ಶಿಫಾರಸು ಮಾಡಲಾಗಿದೆ. ಇದರಿಂದ ಕನಿಷ್ಠ ಮೂಲ ವೇತನ 27,000 ರೂಪಾಯಿಗೆ ಏರಿಕೆ ಆಗಲಿದೆ. ಈ ಕುರಿತ ಇನ್ನಷ್ಟು ವಿವರ ಇಲ್ಲಿದೆ.

ಮಾಜಿ ಮುಖ್ಯ ಕಾರ್ಯದರ್ಶಿ ಕೆ. ಸುಧಾಕರ್ ರಾವ್ ನೇತೃತ್ವದ ಏಳನೇ ವೇತನ ಆಯೋಗವು ತನ್ನ ಅಂತಿಮ ವರದಿಯನ್ನು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾರ್ಚ್ 16, 2024 ರಂದು ಬೆಂಗಳೂರಿನಲ್ಲಿ ಸಲ್ಲಿಸಿತು.
ಮಾಜಿ ಮುಖ್ಯ ಕಾರ್ಯದರ್ಶಿ ಕೆ. ಸುಧಾಕರ್ ರಾವ್ ನೇತೃತ್ವದ ಏಳನೇ ವೇತನ ಆಯೋಗವು ತನ್ನ ಅಂತಿಮ ವರದಿಯನ್ನು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾರ್ಚ್ 16, 2024 ರಂದು ಬೆಂಗಳೂರಿನಲ್ಲಿ ಸಲ್ಲಿಸಿತು.

ರಾಜ್ಯದ 7 ನೇ ವೇತನ ಆಯೋಗವು ವರದಿಯನ್ನು ಸಲ್ಲಿಸಿದ್ದು ಮೂಲವೇತನದ ಶೇಕಡ 27.5 ರಷ್ಟು ಹೆಚ್ಚಳ ಮಾಡಲು ಶಿಫಾರಸು ಮಾಡಿದೆ. ಕನಿಷ್ಠ ಮೂಲವೇತನವನ್ನು 17 ಸಾವಿರ ರೂಪಾಯಿಯಿಂದ 27 ಸಾವಿರ ರೂಪಾಯಿಗೆ ಹೆಚ್ಚಿಸುವಂತೆಯೂ ಶಿಫಾರಸು ಮಾಡಲಾಗಿದೆ. 

ಏಳನೇ ವೇತನ ಆಯೋಗವು ಸಲ್ಲಿಸಿದ ವರದಿಯನ್ನು ಆರ್ಥಿಕ ಇಲಾಖೆಯು ಕೂಲಂಕಷವಾಗಿ ಅಧ್ಯಯನ ಮಾಡಲಿದೆ. ನಂತರ ಅದು ನೀಡುವ ಸಲಹೆಗಳ ಆಧಾರದಲ್ಲಿ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಸಮಿತಿ ಸಲ್ಲಿಸಿದ ವರದಿಯನ್ನು ಸ್ವೀಕರಿಸಿ ಮಾತನಾಡಿದರು.

ಏಳನೇ ವೇತನ ಆಯೋಗವು 2022ರ ಜುಲೈ 1ಕ್ಕೆ ಇದ್ದಂತಹ ಶೇ. 31 ತುಟ್ಟಿಭತ್ಯೆ ವಿಲೀನ ಹಾಗೂ ಮೇಲಿನ 27.50 ರಷ್ಟು ಸೇರಿ ಒಟ್ಟು ಶೇ. 58.50ರಷ್ಟು ಮೂಲ ವೇತನದಲ್ಲಿ ಹೆಚ್ಚಳ ಮಾಡಲು, ಸರ್ಕಾರಿ ನೌಕರರ ಕನಿಷ್ಠ ಮೂಲ ವೇತನವನ್ನು 17,000 ರೂಪಾಯಿಯಿಂದ 27,000 ರೂಪಾಯಿಗೆ ಹಾಗೂ ಗರಿಷ್ಠ ಮೂಲ ವೇತನವನ್ನು1,04,600 ರೂಪಾಯಿಯಿಂದ 2,41,200 ರೂಪಾಯಿಗೆ ಹೆಚ್ಚಳ ಮಾಡಲು ಶಿಫಾರಸ್ಸು ಮಾಡಿದೆ.

ಸರ್ಕಾರಿ ನೌಕರರಿಗೆ ಹೊಸ ವೇತನ ಶ್ರೇಣಿ ಹಾಗೂ ಫಿಟ್‌ಮೆಂಟ್ ಸೌಲಭ್ಯವನ್ನು 2022ರ ಜುಲೈ 1ರಿಂದ ಪೂರ್ವಾನ್ವಯವಾಗುವಂತೆ ಅನುಷ್ಠಾನಗೊಳಿಸಲು ಶಿಫಾರಸ್ಸು ಮಾಡಿದೆ. 

ವಾರ್ಷಿಕ ವೇತನ ಬಡ್ತಿ ದರವನ್ನು ಕನಿಷ್ಠ 400 ರೂಪಾಯಿಯಿಂದ 650 ರೂಪಾಯಿಗೆ ಹಾಗೂ ಗರಿಷ್ಠ 3100 ರೂಪಾಯಿಯಿಂದ 5,000 ರೂಪಾಯಿ ಹೆಚ್ಚಳಕ್ಕೆ, ತುಟ್ಟಿಭತ್ಯೆಯನ್ನು 2022ರ ಜುಲೈ 1ರಿಂದ ಕೇಂದ್ರ ಸರ್ಕಾರವು ಮಂಜೂರು ಮಾಡಿದ ಪ್ರತಿ ಶೇ.1 ರಷ್ಟು ತುಟ್ಟಿಭತ್ಯೆಗೆ ಶೇ. 0.722ರಷ್ಟು ನೀಡಲು ಶಿಫಾರಸ್ಸು ಮಾಡಿದೆ.

ಭಾರತ ಸರ್ಕಾರವು ತನ್ನ ನೌಕರರಿಗೆ ಮುಂದೆ ವೇತನ ಪರಿಷ್ಕರಿಸಿದಾಗ ಕೇಂದ್ರ ವೇತನ ರಚನೆಯ ಆಧಾರದ ಮೇಲೆ ರಾಜ್ಯ ಸರ್ಕಾರವು ತನ್ನ ನೌಕರರಿಗೆ ಕೇಂದ್ರ ಮಾದರಿಯ ವೇತನ ನೀಡಲು ಶಿಫಾರಸ್ಸು ಮಾಡಿದೆ.

ಗ್ರೂಪ್ ಸಿ, ಡಿ ವೃಂದ ನೌಕರರಿಗೂ ವೇತನ ಪರಿಷ್ಕರಣೆ

ಗ್ರೂಪ್ 'ಸಿ' ಮತ್ತು 'ಡಿ' ವೃಂದದ ನೌಕರರಿಗೆ ಹಾಲಿ ಇರುವ ಜಿ.ಐ.ಎಸ್. ಮಾಸಿಕ ವಂತಿಗೆಯನ್ನು ಶೇ. 100 ಕ್ಕೆ ಹೆಚ್ಚಳ ಮತ್ತು ಗ್ರೂಪ್ 'ಎ' ಮತ್ತು 'ಬಿ' ವೃಂದಕ್ಕ ಶೇಕಡ 50ಕ್ಕೆ ಹೆಚ್ಚಿಸಲು, ಪರಿಷ್ಕರಣೆ ಬಳಿಕ ಏರಿಕೆಯಾಗುವ ಮೂಲ ವೇತನಕ್ಕೆ ಮನೆ ಬಾಡಿಗೆ ಭತ್ಯೆಯನ್ನು ಕ್ರಮವಾಗಿ 'ಎ' ವರ್ಗದ ನಗರಗಳಿಗೆ ಶೇ.20, 'ಬಿ' ವರ್ಗದ ನಗರಗಳಿಗೆ ಶೇ. 15, 'ಸಿ' ವರ್ಗದ ಪ್ರದೇಶಗಳಿಗೆ ಶೇ.7.5 ರಂತೆ ಲೆಕ್ಕಹಾಕಿ ಸೇರ್ಪಡೆ ಮಾಡಲು ಏಳನೇ ವೇತನ ಆಯೋಗವು ಶಿಫಾರಸ್ಸು ಮಾಡಿದೆ.

ಅದೇ ರೀತಿ, ಪರಿಷ್ಕರಣೆಯ ಬಳಿಕ ಹೆಚ್ಚಾಗುವ ಮೂಲವೇತನಕ್ಕೆ ನಗರ ಪರಿಹಾರ ಭತ್ಯೆಗಳನ್ನು ಕ್ರಮವಾಗಿ ಮತ್ತು 'ಬಿ' ವೃಂದದ ನೌಕರರಿಗೆ 600 ರೂಪಾಯಿಯಿಂದ 900 ರೂಪಾಯಿಗೆ ಮತ್ತು 'ಸಿ' ಮತ್ತು 'ಡಿ' ವೃಂದದ ನೌಕರರಿಗೆ 500 ರೂಪಾಯಿಯಿಂದ 750 ರೂಪಾಯಿಗೆ ಹೆಚ್ಚಳ ಮಾಡಬೇಕು ಎಂದು 7ನೇ ವೇತನ ಆಯೋಗವು ಶಿಫಾರಸು ಮಾಡಿದೆ.

ಅಂತೆಯೇ, ಸಮವಸ್ತ್ರ ಭತ್ಯೆ, ನಿಗದಿತ ಪ್ರಯಾಣ ಭತ್ಯೆ, ಸಾಗಣೆ ಭತ್ಯೆ, ದಿನಭತ್ಯೆ ಮತ್ತು ವರ್ಗಾವಣೆ ಅನುದಾನವನ್ನು ಹಾಲಿ ಇರುವ ದರಗಳಿಗೆ ಶೇ.25 ಸೇರಿಸುವುದಕ್ಕೆ ಮತ್ತು ವಿಕಲಚೇತನ ನೌಕರರಿಗೆ ಹಲವಾರು ಭತ್ಯೆಗಳು ಮತ್ತು ಸೌಲಭ್ಯಗಳನ್ನು ಹೆಚ್ಚಳ ಮಾಡುವಂತೆ ಏಳನೇ ವೇತನ ಆಯೋಗವು ಶಿಫಾರಸು ಮಾಡಿದೆ. ಇದಲ್ಲದೆ, ವಿಶೇಷಚೇತನ ಮಕ್ಕಳ ಶೈಕ್ಷಣಿಕ ಭತ್ಯೆಯನ್ನು ಪ್ರತಿ ತಿಂಗಳು 1000 ರೂಪಾಯಿಯಿಂದ 2000 ರೂಪಾಯಿ ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಏಳನೇ ವೇತನ ಆಯೋಗ ಶಿಫಾರಸ್ಸು ಮಾಡಿದೆ.

ವಾಹನ, ಗೃಹ ನಿರ್ಮಾಣ ಮುಂಗಡದ ವಿಚಾರ

ನಾಲ್ಕು ಚಕ್ರ ವಾಹನ ಖರೀದಿ ಮುಂಗಡವನ್ನು 3 ಲಕ್ಷ ರೂಪಾಯಿಯಿಂದ 6 ಲಕ್ಷ ರೂಪಾಯಿಗೆ ಹಾಗೂ ದ್ವಿ-ಚಕ್ರ ವಾಹನಕ್ಕೆ 50,000 ರೂಪಾಯಿಯಿಂದ 80,000 ರೂಪಾಯಿಗೆ ಹೆಚ್ಚಳಕ್ಕೆ ಶಿಫಾರಸ್ಸು ಮಾಡಿದೆ.

ಗೃಹನಿರ್ಮಾಣ ಮುಂಗಡವನ್ನು 'ಎ' ವೃಂದಕ್ಕೆ 65 ಲಕ್ಷ ರೂಪಾಯಿ ಮತ್ತು ಇತರೆ ವೃಂದದ ನೌಕರರಿಗೆ 40 ಲಕ್ಷ ರೂಪಾಯಿಗೆ ಹೆಚ್ಚಳಕ್ಕೆ ಶಿಫಾರಸ್ಸು ಮಾಡಲಾಗಿದೆ.

ನೌಕರರ ಸೇವಾವಧಿಯಲ್ಲಿ ಮೂರು ಭಾರಿ ಎಲ್.ಟಿ.ಸಿ. ಸೌಲಭ್ಯಕ್ಕೆ ಅವಕಾಶ, ಗ್ರೂಪ್‌ 'ಡಿ' ಮತ್ತು 'ಸಿ' ವೃಂದದ ನೌಕರರಿಗೆ ಹಾಲಿ ಇದ್ದಂತಹ ವೈದ್ಯಕೀಯ ಭತ್ಯೆ 200 ರೂಪಾಯಿಯಿಂದ 500 ರೂಪಾಯಿ ಹೆಚ್ಚಳಕ್ಕೇ ಶಿಫಾರಸ್ಸು ಮಾಡಲಾಗಿದೆ.

ಸರ್ಕಾರಿ ನೌಕರರ ಅವಲಂಬಿತ ಕುಟುಂಬದ ಸದಸ್ಯರು ಅನಾರೋಗ್ಯಕ್ಕೀಡಾದರೆ ಅಂತಹ ಸಂದರ್ಭದಲ್ಲಿ ಅವರ ಆರೈಕೆ ಮಾಡಲು ಶೇ. 50 ವೇತನದೊಂದಿಗೆ 180 ದಿನಗಳ 'ಆರೈಕೆ ರಜೆ' ಎಂಬ ಹೊಸ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಏಳನೇ ವೇತನ ಆಯೋಗ ತನ್ನ ವರದಿಯಲ್ಲಿ ಶಿಫಾರಸ್ಸು ಮಾಡಿದೆ.

ಸರ್ಕಾರಿ ಸೇವೆಗೆ ಸೇರುವ 2 ತಿಂಗಳ ಮೊದಲು ಮಗುವಿಗೆ ಜನ್ಮ ನೀಡಿದ ಮಹಿಳಾ ಸರ್ಕಾರಿ ನೌಕರರಿಗೆ ನವಜಾತ ಶಿಶುವಿನ ಆರೈಕೆಗಾಗಿ 18 ವಾರಗಳ ಹೆರಿಗೆ ರಜೆಯನ್ನೂ ಸರ್ಕಾರ ನೀಡಬೇಕು. ಅದೇ ರೀತಿ, ಕೆಲಸ ವಿರಾಮ ಸಮತೋಲನವನ್ನು ಸುಧಾರಿಸುವುದಕ್ಕೆ, ಸರ್ಕಾರಿ ನೌಕರರ ಕೆಲಸದ ಗುಣಮಟ್ಟವನ್ನು ಹೆಚ್ಚಿಸುವುದಕ್ಕೆ ವಾರದ ಐದು ದಿನಗಳ ಕೆಲಸದ ಅವಧಿಯನ್ನು ಪರಿಚಯಿಸಬೇಕು ಎಂದು ಆಯೋಗದ ವರದಿ ಶಿಫಾರಸ್ಸು ಮಾಡಿದೆ.

ರಾಜ್ಯ ಸರ್ಕಾರಿ ನೌಕರರ ಆಡಳಿತ ಇಲಾಖೆಯ ಹಾಗೂ ಕ್ಷೇತ್ರ ಇಲಾಖೆಗಳ ನೌಕರರಿಗೆ ಗುಣಮಟ್ಟದ ತರಬೇತಿಗಾಗಿ ಸಮಗ್ರ ತರಬೇತಿಗೆ ಶಿಫಾರಸ್ಸು ಮಾಡಿದೆ. ರಾಜ್ಯ ಸರ್ಕಾರಿ ನೌಕರರಿಗೆ ನೀಡಿದ ಈ ಎಲ್ಲ ಸೌಲಭ್ಯಗಳನ್ನು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರು, ಸ್ಥಳೀಯ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳ ಬೋಧಕೇತರ ನೌಕರರಿಗೂ ಅನ್ವಯವಾಗುವಂತೆ ಜಾರಿಗೊಳಿಸಬೇಕು ಎಂದು 7ನೇ ವೇತನ ಆಯೋಗದ ವರದಿ ಶಿಫಾರಸು ಮಾಡಿದೆ. 

ಕರ್ನಾಟಕ ಸರ್ಕಾರಿ ನೌಕರರ ಮಾಸಿಕ ಪಿಂಚಣಿಯ ಪ್ರಮಾಣವು ಅಂತಿಮ ಮೂಲ ವೇತನದ ಶೇ. 50  ಹಾಗೂ ಕುಟುಂಬ ಪಿಂಚಣಿಯು ಶೇ.30 ಇರುವಂತೆ ನೋಡಿಕೊಳ್ಳಬೇಕು. ಇದು ಕನಿಷ್ಠ ಪಿಂಚಣಿ 13,500 ರೂಪಾಯಿ ಹಾಗೂ ಗರಿಷ್ಠ ಪಿಂಚಣಿ 1,20,600 ರೂಪಾಯಿಗೆ ಪರಿಷ್ಕರಣೆಯಾಗಬೇಕು ಎಂದು ವರದಿ ಶಿಫಾರಸು ಮಾಡಿದೆ.

70-80 ವರ್ಷ ವಯಸ್ಸಿನ ಪಿಂಚಣಿದಾರರಿಗೆ ಮೂಲ ಪಿಂಚಣಿಯ ಹೆಚ್ಚುವರಿ ಶೇ. 10 ರಷ್ಟು ಶಿಫಾರಸ್ಸು ಮಾಡಿದೆ. ಪಿಂಚಣಿದಾರರಿಗೆ 'ಸಂಧ್ಯಾಕಿರಣ' ಎಂಬ ಆರೋಗ್ಯ ಯೋಜನೆಯನ್ನು ತ್ವರಿತವಾಗಿ ಜಾರಿಗೊಳಿಸಲು ಶಿಫಾರಸ್ಸು ಮಾಡಿದೆ. ಅಲ್ಲಿಯವರೆಗೆ ಮಾಸಿಕ ರೂ. 500 ಗಳ ವೈದ್ಯಕೀಯ ಭತ್ಯೆ ನೀಡಲು ಶಿಫಾರಸ್ಸು ಮಾಡುತ್ತದೆ.

ರಾಜ್ಯ ಸರ್ಕಾರದ ಪಿಂಚಣಿದಾರರು ಮೃತಪಟ್ಟರೆ, ಅವರ ಶವಸಂಸ್ಕಾರ ಮೊತ್ತವನ್ನು 10,000 ರೂಪಾಯಿ ಎಂದು ನಿಗದಿಮಾಡಬೇಕು ಎಂದು ಆಯೋಗದ ವರದಿ ಶಿಫಾರಸು ಮಾಡಿದೆ. 

ರಾಜ್ಯ ಸರ್ಕಾರದ ವಿವಿಧ ವೃಂದಗಳ ವೇತನ ತಾರತಮ್ಯ ಹಾಗೂ ಇಲಾಖೆಗಳ ಬೇಡಿಕೆಗಳ ಸಂಬಂಧ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಈ ಹಿಂದೆ ನೀಡಿರುವ ಮನವಿಯನ್ನು ಪರಿಶೀಲಿಸಿ ಮತ್ತೊಂದು ಅಂತಿಮ ವರದಿಯನ್ನು ಶೀಘ್ರದಲ್ಲೇ ಏಳನೇ ವೇತನ ಆಯೋಗವು ಕರ್ನಾಟಕ ಸರ್ಕಾರಕ್ಕೆ ಸಲ್ಲಿಸಲಿದೆ.

ಆಯೋಗದ ಸದಸ್ಯರಾದ ಪಿ.ಬಿ. ರಾಮಮೂರ್ತಿ, ಶ್ರೀಕಾಂತ್ ವನಹಳ್ಳಿ , ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್, ಕಾ ಡಾ.ಕೆ.ವಿ. ತ್ರಿಲೋಕಚಂದ್ರ, ಹಣಕಾಸು ಇಲಾಖೆ ಕಾರ್ಯದರ್ಶಿ ಡಾ. ಪಿ.ಸಿ. ಜಾಫರ್, ವೇತನ ಆಯೋಗದ ಸದಸ್ಯ ಕಾರ್ಯದರ್ಶಿ ಹೆಫ್ಸಿಬಾ ರಾಣಿ ಕೊರ್ಲಪಾಟಿ ಆಯೋಗದ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸುವಾಗ ಸ್ಥಳದಲ್ಲಿದ್ದರು.

(This copy first appeared in Hindustan Times Kannada website. To read more on Lok Sabha Elections, Political developments, Lok Sabha Constituency profiles, Political Analysis in Kannada please visit kannada.hindustantimes.com)

IPL_Entry_Point