ಬೆಂಗಳೂರು: ಆತ್ಮಹತ್ಯೆಯ ನಾಟಕವಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡ ಜಿಮ್ ತರಬೇತುದಾರ; ಮನೆಯಲ್ಲೇ ಬಿಬಿಎ ವಿದ್ಯಾರ್ಥಿನಿ ಶಂಕಾಸ್ಪದ ಸಾವು
ಬೆಂಗಳೂರು: ಆತ್ಮಹತ್ಯೆಯ ನಾಟಕವಾಡಲು ಹೋಗಿ ಬಿಹಾರ ಮೂಲದ ಜಿಮ್ ತರಬೇತುದಾರ ಪ್ರಾಣವನ್ನೇ ಕಳೆದುಕೊಂಡ ಘಟನೆ ವರದಿಯಾಗಿದೆ. ಇನ್ನೊಂದು ಪ್ರಕರಣದಲ್ಲಿ ಬಿಬಿಎ ವಿದ್ಯಾರ್ಥಿನಿಯೊಬ್ಬರು ತನ್ನ ಮನೆಯಲ್ಲೇ ಶಂಕಾಸ್ಪದವಾಗಿ ಸಾವಿಗೀಡಾಗಿದ್ದಾರೆ. ಇವುಗಳ ವಿವರ ವರದಿ ಇಲ್ಲಿದೆ. ( ವರದಿ- ಎಚ್. ಮಾರುತಿ, ಬೆಂಗಳೂರು)
ಬೆಂಗಳೂರು: ಪತ್ನಿಯನ್ನು ಹೆದರಿಸಲು ಆತ್ಮಹತ್ಯೆಯ ನಾಟಕವಾಡಲು ಹೋಗಿ ಜಿಮ್ ತರಬೇತುದಾರನೊಬ್ಬ ಜೀವ ಕಳೆದುಕೊಂಡಿರುವ ಹೃದಯ ವಿದ್ರಾವಕ ಘಟನೆ ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಿಹಾರ ಮೂಲದ 28 ವರ್ಷದ ಅಮಿತ್ ಕುಮಾರ್ ಸಾಹು ಮೃತಪಟ್ಟ ಜಿಮ್ ತರಬೇತುದಾರ. ಅಮಿತ್ ಕೇವಲ ಒಂದು ವರ್ಷದ ಹಿಂದೆಯಷ್ಟೇ ಅಮೂಲ್ಯ ಎಂಬುವರನ್ನು ಪ್ರೀತಿಸಿ ವಿವಾಹವಾಗಿದ್ದ. ಎರಡೂ ಕುಟುಂಬದವರ ವಿರೋಧದ ನಡುವೆಯೂ ಇಬ್ಬರೂ ವಿವಾಹವಾಗಿದ್ದರು. ಬಾಗಲಕುಂಟೆಯ ಪೈಪ್‌ಲೈನ್ ರಸ್ತೆ, ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸಮೀಪ ವಾಸವಾಗಿದ್ದರು. ನರ್ಸಿಂಗ್ ಕೋರ್ಸ್ ಗೆ ಸೇರಿಕೊಂಡಿದ್ದ ಅಮೂಲ್ಯ ಪತಿಯ ಜೊತೆ ಹೆಚ್ಚು ಸಮಯ ಕಳೆಯುತ್ತಿರಲಿಲ್ಲ. ಆಕೆ ಸದಾ ಮೊಬೈಲ್‌ನಲ್ಲೇ ಸಮಯ ಕಳೆಯುತ್ತಿದ್ದರು. ಇದೇ ಕಾರಣಕ್ಕೆ ಇಬ್ಬರ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು.
ಅಮೂಲ್ಯ ಪತಿಯಿಂದ ದೂರವಾಗಿ ಬೇರೆ ಮನೆ ಮಾಡಿಕೊಂಡು ವಾಸವಿದ್ದರು. ಪ್ರೀತಿಸಿ ಮದುವೆಯಾದರೂ ಪ್ರೀತಿ ಸಿಗಲಿಲ್ಲ ಎಂದು ಅಮಿತ್ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಪತ್ನಿ ಅಮೂಲ್ಯಗೆ ಕರೆ ಮಾಡಿ ವಾಪಸ್ ಮನೆಗೆ ಬರುವಂತೆ ಪದೇ ಪದೇ ಮನವಿ ಮಾಡಿಕೊಂಡರೂ ಆಕೆ ಕೇಳಿರಲಿಲ್ಲ. ಇದರಿಂದ ಬೇಸತ್ತ ಅಮಿತ್ ಕುಮಾರ್ ಸಂಜೆ 7 ಗಂಟೆ ಹೊತ್ತಿಗೆ ಅಮೂಲ್ಯರ ಮೊಬೈಲ್‌ಗೆ ವಿಡಿಯೋ ಕಾಲ್ ಮಾಡಿ ಮಾತನಾಡುತ್ತಾ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ನೇಣು ಬಿಗಿದುಕೊಂಡಂತೆ ಹೆದರಿಸಿದ್ದಾರೆ. ಆದರೆ ನಾಟಕವಾಡಲು ಹೋಗಿ ನಿಜವಾಗಿಯೂ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು.
ಸುದ್ದಿ ತಿಳಿದ ಬಾಗಲಗುಂಟೆ ಠಾಣೆ ಪೊಲೀಸರು ಸ್ಥಳಕ್ಕೆ ಹೋಗಿ ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಮನೆಯಲ್ಲೇ ಬಿಬಿಎ ವಿದ್ಯಾರ್ಥಿನಿ ಶಂಕಾಸ್ಪದ ಸಾವು
ಬಿಬಿಎ ವಿದ್ಯಾರ್ಥಿನಿಯೊಬ್ಬರು ತಮ್ಮ ಮನೆಯಲ್ಲೇ ಶಂಕಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ದಾರುಣ ಘಟನೆ ಬೆಂಗಳೂರಿನ ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
21 ವರ್ಷದ ಪ್ರಭುದ್ಯಾ ಮೃತಪಟ್ಟ ವಿದ್ಯಾರ್ಥಿನಿ. ತಮ್ಮ ಮನೆಯ ಸ್ನಾನದ ಕೊಠಡಿಯಲ್ಲಿ ಕತ್ತು ಹಾಗೂ ಕೈ ಕೊಯ್ದಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಪ್ರಭುದ್ಯಾ ತಾಯಿ ಕೆ.ಆರ್.ಸೌಮ್ಯಾ ದೂರು ನೀಡಿದ್ದಾರೆ. ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಪ್ರಭುದ್ಯಾ ಅವರ ಮೊಬೈಲ್ ವಶಪಡಿಸಿ ಕೊಂಡಿರುವ ಪೊಲೀಸರು ಮೊಬೈಲ್ ಗೆ ಬಂದಿರುವ ಮತ್ತು ಹೋಗಿರುವ ಕರೆಗಳನ್ನು ಪರಿಶೀಲಿಸುತ್ತಿದ್ದಾರೆ. ತಮ್ಮ ತಾಯಿಯ ಜೊತೆ ಪ್ರಭುದ್ಯಾ ಮತ್ತು ಅವರ ಸಹೋದರ ವಾಸವಾಗಿದ್ದರು. ವಿದ್ಯಾರ್ಥಿನಿಯ ಮರಣೋತ್ತರ ಪರೀಕ್ಷೆ ನಡೆದಿದ್ದು ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸರು ಹೇಳಿದ್ದಾರೆ.
ಸೌಮ್ಯಾ ಪ್ರತಿಕ್ರಿಯಿಸಿ ನನ್ನ ಮಗಳು ಆತ್ಮಹತ್ಯೆ ಮಾಡಿಕೊಳ್ಳುವ ಹೇಡಿ ಅಲ್ಲ. ಧೈರ್ಯವಂತೆಯಾಗಿದ್ದಳು. ಯಾರೋ ಕೊಲೆ ಮಾಡಿದ್ದಾರೆ ಎಂದು ದೂರಿದ್ದಾರೆ. ಕಾಲೇಜಿನಿಂದ ಮಧ್ಯಾಹ್ನ 1.30ರ ವೇಳೆಗೆ ಮನೆಗೆ ಮರಳಿದ್ದಳು. 3 ಗಂಟೆಯರೆಗೂ ನಮ್ಮ ಜೊತೆಯೇ ಇದ್ದಳು. ನಾನು ಹೊರಗೆ ಹೋಗಿ ಬರುವಷ್ಟರಲ್ಲಿ ಈ ಹತ್ಯೆ ನಡೆದಿದೆ. ಮನೆಯ ಹಿಂಬಾಗಿಲು ತೆರೆದಿತ್ತು. ಮಗಳ ಮೊಬೈಲ್ ಕಾಣಿಸುತ್ತಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಸ್ನಾನದ ಕೊಠಡಿಯಲ್ಲಿ ಈ ಘಟನೆ ನಡೆದಿದೆ. ಅಲ್ಲಿ ನೋಡಿದಾಗ ಮಗಳು ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಕೂಡಲೇ ಮಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಗಳು ಉಳಿಯಲಿಲ್ಲ ಎಂದು ರೋದಿಸುತ್ತಿದ್ದರು.
( ವರದಿ- ಎಚ್. ಮಾರುತಿ, ಬೆಂಗಳೂರು)
ಗಮನಿಸಿ; ಯಾವುದೇ ಸಮಸ್ಯೆಗೂ ಆತ್ಮಹತ್ಯೆ ಪರಿಹಾರವಲ್ಲ
ಖಿನ್ನತೆ, ಆತ್ಮಹತ್ಯೆಯ ಆಲೋಚನೆಗಳು ಬಾಧಿಸುತ್ತಿದ್ದರೆ ನಿಮ್ಮ ಗೆಳತಿ / ಗೆಳೆಯರೊಂದಿಗೆ, ಹೆತ್ತವರೊಂದಿಗೆ, ಸಂಬಂಧಿಕರು, ಆಪ್ತರೊಂದಿಗೆ ಮುಕ್ತವಾಗಿ ಮಾತನಾಡಿ. ಪೊಲೀಸರ, ಆಪ್ತಸಮಾಲೋಚಕರ, ವೈದ್ಯರ ನೆರವು ಪಡೆಯಿರಿ. ಕರ್ನಾಟಕದಲ್ಲಿ ಆರೋಗ್ಯ ಸಹಾಯವಾಣಿ 104, ವೃದ್ಧರ ಸಹಾಯವಾಣಿ 1090, ಮಕ್ಕಳ ಸಹಾಯವಾಣಿ 1098 ಮತ್ತು ಸ-ಮುದ್ರ ಸಹಾಯವಾಣಿ 98803 96331 ಮೂಲಕ ಟೆಲಿ ಕೌನ್ಸೆಲಿಂಗ್ ನೆರವು ಪಡೆದುಕೊಳ್ಳಿ. ಕೊನೇ ನಿರ್ಧಾರಕ್ಕೆ ಮೊದಲು ನಿಮ್ಮವರ ಬಗ್ಗೆ ಒಂದು ಕ್ಷಣ ಯೋಚಿಸಿ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.