ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಬಳಸದಂತೆ ತಾಕೀತು; ಬೆಂಗಳೂರು ಆಟೋಚಾಲಕರ ಗೂಂಡಾ ವರ್ತನೆಗೆ ಅಸಮಾಧಾನ; ಎಕ್ಸ್‌ನಲ್ಲಿ ನಾಗರಿಕರೊಬ್ಬರ ಅಳಲು
ಕನ್ನಡ ಸುದ್ದಿ  /  ಕರ್ನಾಟಕ  /  ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಬಳಸದಂತೆ ತಾಕೀತು; ಬೆಂಗಳೂರು ಆಟೋಚಾಲಕರ ಗೂಂಡಾ ವರ್ತನೆಗೆ ಅಸಮಾಧಾನ; ಎಕ್ಸ್‌ನಲ್ಲಿ ನಾಗರಿಕರೊಬ್ಬರ ಅಳಲು

ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಬಳಸದಂತೆ ತಾಕೀತು; ಬೆಂಗಳೂರು ಆಟೋಚಾಲಕರ ಗೂಂಡಾ ವರ್ತನೆಗೆ ಅಸಮಾಧಾನ; ಎಕ್ಸ್‌ನಲ್ಲಿ ನಾಗರಿಕರೊಬ್ಬರ ಅಳಲು

ರ‍್ಯಾಪಿಡೋ ಬೈಕ್ ಟ್ಯಾಕ್ಸಿಯಲ್ಲಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಮೇಲೆ ಕರ್ನಾಟಕ ಸರ್ಕಾರ ಇತ್ತೀಚೆಗಷ್ಟೆ ನಿಷೇಧ ಹೇರಿದೆ. ಇದರ ಬೆನ್ನಿಗೆ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಬಳಸದಂತೆ ಬಳಕೆದಾರರೊಬ್ಬರನ್ನು ತಡೆದ ಆಟೋಚಾಲಕರ ದುರ್ವರ್ತನೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಒಳಗಾಗಿದೆ. ಇಲ್ಲಿದೆ ಅದರ ವರದಿ.

ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಬಳಸದಂತೆ ತಾಕೀತು ಮಾಡುವ ಭರದಲ್ಲಿ ಬೆಂಗಳೂರು ಆಟೋಚಾಲಕರು ತೋರಿದ ಗೂಂಡಾ ವರ್ತನೆಗೆ ಅಸಮಾಧಾನ. (ಸಾಂಕೇತಿಕ ಚಿತ್ರ)
ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಬಳಸದಂತೆ ತಾಕೀತು ಮಾಡುವ ಭರದಲ್ಲಿ ಬೆಂಗಳೂರು ಆಟೋಚಾಲಕರು ತೋರಿದ ಗೂಂಡಾ ವರ್ತನೆಗೆ ಅಸಮಾಧಾನ. (ಸಾಂಕೇತಿಕ ಚಿತ್ರ)

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬಹುತೇಕರು ಟ್ಯಾಕ್ಸಿಯನ್ನು ಅವಲಂಬಿಸಿದ್ದಾರೆ. ಅದು ಆಟೋ, ಕಾರು ಮಾತ್ರವಲ್ಲ ಒಬ್ಬರೇ ಪ್ರಯಾಣ ಮಾಡುವುದೆಂದರೆ ಬೈಕ್ ಟ್ಯಾಕ್ಸಿಯನ್ನು ಬಳಸಲು ಮುಂದಾಗುತ್ತಾರೆ. ಆದರೆ, ಇದಕ್ಕೆ ಆಟೋ ಚಾಲಕರು ವಿರೋಧ ವ್ಯಕ್ತಪಡಿಸುತ್ತಿರುವುದು ಮಾತ್ರವಲ್ಲದೆ, ಥಳಿಸಲು ಮುಂದಾಗುವ ಘಟನೆಗಳೂ ನಡೆದಿವೆ. ಇದೀಗ ಅಂಥದ್ದೇ ಘಟನೆಯೊಂದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

ಹೌದು, ರಾಜ್ಯದಲ್ಲಿ ವಿದ್ಯುತ್ ಚಾಲಿತ ಟ್ಯಾಕ್ಸಿಗಳ ಕಾರ್ಯಾಚರಣೆಯನ್ನು ಸರ್ಕಾರ ಇತ್ತೀಚೆಗಷ್ಟೆ ನಿಷೇಧಿಸಿದೆ. ಆದರೂ ಕೂಡ ಬೆಂಗಳೂರಿನ ಆಟೋರಿಕ್ಷಾ ಚಾಲಕರು ಮತ್ತು ಬೈಕ್ ಟ್ಯಾಕ್ಸಿ ಸವಾರರ ನಡುವಿನ ಶೀತಲ ಸಮರ ಕೊನೆಗೊಂಡಿಲ್ಲ. ಇತ್ತೀಚೆಗೆ ನಡೆದ ಘಟನೆಯೊಂದರಲ್ಲಿ ಆಟೋ ಚಾಲಕರ ಗುಂಪೊಂದು ಪ್ರಯಾಣಿಕರೊಬ್ಬರಿಗೆ ಬೈಕ್ ಟ್ಯಾಕ್ಸಿ ತೆಗೆದುಕೊಳ್ಳದಂತೆ ಬಲವಂತ ಮಾಡಿದ್ದಲ್ಲದೆ, ಬೈಕ್ ಟ್ಯಾಕ್ಸಿ ಸವಾರನಿಗೆ ಬೆದರಿಕೆ ಹಾಕಿರುವ ಘಟನೆ ವರದಿಯಾಗಿದೆ.

ಈ ಬಗ್ಗೆ ಮೈಕ್ರೋಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ಕರ್ನಾಟಕ ವೆದರ್‌ಪೇಜ್ ಖಾತೆಯಲ್ಲಿ ಈ ರೀತಿಯ ಅನುಭವ ಹಂಚಿಕೊಳ್ಳಲಾಗಿದೆ.

ಕರ್ನಾಟಕ ವೆದರ್‌ಪೇಜ್ ಖಾತೆಯಲ್ಲಿ ಹಂಚಿಕೊಳ್ಳಲಾದ ಅನುಭವ

ಮೆಟ್ರೋ ನಿಲ್ದಾಣದಿಂದ ಹೊರಬರುತ್ತಿದ್ದಂತೆ, ರ‍್ಯಾಪಿಡೋ ಬೈಕ್ ಟ್ಯಾಕ್ಸಿಯನ್ನು ಆ್ಯಪ್ ಮೂಲಕ ಬುಕ್ ಮಾಡಿದ್ದೆ. ಅದರಂತೆ ಬೈಕ್ ಸವಾರ ತಾನಿದ್ದಲ್ಲಿಗೆ ಬಂದು ಕರೆದುಕೊಂಡು ಹೋಗಲು ಮುಂದಾದ. ಈ ವೇಳೆ ಅಲ್ಲಿ ಜಮಾಯಿಸಿದ ಆಟೋ ಚಾಲಕರು ಬೈಕ್ ಸವಾರನನ್ನು ನಿಂದಿಸಲು ಪ್ರಾರಂಭಿಸಿದರು ಮತ್ತು ಅವನನ್ನು ಅಲ್ಲಿಂದ ಓಡಿಸಿದರು.

ರ‍್ಯಾಪಿಡೋ ಬೈಕ್ ಟ್ಯಾಕ್ಸಿಯು ಎಲೆಕ್ಟ್ರಿಕ್ ವಾಹನ ಆಗಿತ್ತು. ನಗರದಲ್ಲಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ನಿಷೇಧಿಸಿರುವುದನ್ನು ಅರಿತ ಅವರು ರ‍್ಯಾಪಿಡೋ ಮೂಲಕ ಮತ್ತೊಂದು ಬೈಕ್ ರೈಡ್ ಅನ್ನು ಬುಕ್ ಮಾಡಿದರಂತೆ. ಈ ಬಾರಿ ಅವರಿಗೆ ಎಲೆಕ್ಟ್ರಿಕ್ ವಾಹನವಲ್ಲದ ಹೋಂಡಾ ಬೈಕ್ ಸ್ಥಳಕ್ಕೆ ಬಂದು ಕರೆದುಕೊಂಡು ಹೋಗಲು ಸವಾರ ಮುಂದಾದ. ಈ ಬಾರಿಯೂ ಆಟೋ ಚಾಲಕರು ಮತ್ತೆ ಬಲವಂತವಾಗಿ ಸವಾರಿಯನ್ನು ರದ್ದುಗೊಳಿಸುವಂತೆ ಆಗ್ರಹಿಸಿದ್ದಾರೆ. ಅಲ್ಲದೆ, ಪ್ರಯಾಣಿಕನಿಗೆ ಸವಾರಿ ಮಾಡಲು ಅವಕಾಶ ನೀಡಲಿಲ್ಲ ಎಂದು ದೂರಿದ್ದಾರೆ.

ಎಲೆಕ್ಟ್ರಿಕ್ ಬೈಕ್ ಅಲ್ಲದ ಮತ್ತೊಂದು ರೈಡ್ ಬುಕ್ ಮಾಡಿದರೂ ಆಟೋ ಚಾಲಕರು ಮತ್ತೆ ಮಧ್ಯ ಪ್ರವೇಶಿಸಿದರು ಎಂದು ಅವರು ಆರೋಪಿಸಿದ್ದಾರೆ. ಬೈಕ್ ಸವಾರ ಬಂದು ಇನ್ನೇನು ಹೊರಡಬೇಕು ಎಂದಾಗ, ಆಟೋ ಚಾಲಕರು ಬಲವಂತವಾಗಿ ಬೈಕ್ ನಿಂದ ಪ್ರಯಾಣಿಕನನ್ನು ಕೆಳಗಿಳಿಸಿದಲ್ಲದೆ, ನಿಂದಿಸಲು ಪ್ರಾರಂಭಿಸಿದರು ಅಂತಾ ಅವರು ದೂರಿದ್ದಾರೆ.

ಆಟೋ ಚಾಲಕರ ದುರ್ವರ್ತನೆಯ ಬಗ್ಗೆ ಖೇದ

ಆಟೋ ಚಾಲಕರ ವರ್ತನೆಯಿಂದ ಬೇಸರಗೊಂಡ ಪ್ರಯಾಣಿಕ ಅವರಿಗೆ ಸ್ಪಷ್ಟನೆ ನೀಡಲು ಮುಂದಾಗಿದ್ದಾರೆ. ನಗರದಲ್ಲಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳನ್ನು ಮಾತ್ರ ನಿಷೇಧಿಸಲಾಗಿದೆ. ಎಲೆಕ್ಟ್ರಿಕ್ ಅಲ್ಲದ ಬೈಕ್ ಗಳನ್ನು ನಿಷೇಧಿಸಲಾಗಿಲ್ಲ. ಅದರ ಸವಾರಿಯನ್ನು ತೆಗೆದುಕೊಳ್ಳಬಹುದು ಎಂದು ಹೇಳಿದ್ದಾಗಿ ಎಕ್ಸ್ ನಲ್ಲಿ ಪ್ರಯಾಣಿಕ ಬರೆದುಕೊಂಡಿದ್ದಾರೆ.

ಆದರೆ, ಪ್ರಯಾಣಿಕನ ಮಾತಿಗೆ ತಲೆದೂಗದ ಆಟೋ ಚಾಲಕರು ಮತ್ತಷ್ಟು ಕೋಪದಿಂದ ವರ್ತಿಸಿದ್ದಾರೆ. ನಮ್ಮೊಂದಿಗೆ ನಿಯಮಗಳನ್ನು ಮಾತನಾಡಬೇಡಿ. ನಿಮಗಿಂತ ನಮಗೆ ಚೆನ್ನಾಗಿ ತಿಳಿದಿದೆ ಎಂದು ಹೇಳಿದರಂತೆ. ಈ ವೇಳೆ ಫೋಟೋ ಅಥವಾ ವಿಡಿಯೋಗಳನ್ನು ಪ್ರಯಾಣಿಕ ಸೆರೆಹಿಡಿಯಲು ಮುಂದಾದ್ರೂ ಸಾಧ್ಯವಾಗಿಲ್ಲ. ಆಟೋ ಚಾಲಕರ ಚಿತ್ರ ಸೆರೆಹಿಡಿಯಲು ಅವರು ಅನುಮತಿಸಲಿಲ್ಲ ಎಂದು ಪ್ರಯಾಣಿಕ ತಮಗಾದ ಸಂಕಷ್ಟವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಆಟೋ ಚಾಲಕರು ಈ ರೀತಿ ವರ್ತಿಸುವುದು ಸರಿಯಲ್ಲ. ಬೈಕ್ ಟ್ಯಾಕ್ಸಿ ರೈಡ್ ನೆಚ್ಚಿಕೊಳ್ಳುವ ಸಾಮಾನ್ಯ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಅವರು ಬೆಂಗಳೂರು ಪೊಲೀಸರನ್ನು ಒತ್ತಾಯಿಸಿದ್ದಾರೆ. ಇನ್ನು, ಈ ಘಟನೆಯನ್ನು ಗಮನಿಸಿದ್ದು, ಕ್ರಮ ಕೈಗೊಳ್ಳುವುದಾಗಿ ಬೆಂಗಳೂರು ಪೊಲೀಸರು ತಿಳಿಸಿದ್ದಾರೆ.

ಬೈಕ್ ಟ್ಯಾಕ್ಸಿಗಳನ್ನು ನಿಷೇಧಿಸಬೇಕು ಎಂಬುದು ಬೆಂಗಳೂರಿನ ಆಟೋ ರಿಕ್ಷಾ ಒಕ್ಕೂಟಗಳ ಪ್ರಮುಖ ಬೇಡಿಕೆಯಾಗಿದೆ. ಬೈಕ್ ಟ್ಯಾಕ್ಸಿ ಚಾಲಕರ ಮೇಲೆ ಆಟೋ ಚಾಲಕರು ಹಲ್ಲೆ ನಡೆಸಿರುವ ಸಾಕಷ್ಟು ಘಟನೆಗಳು ನಡೆದಿವೆ.

(ವರದಿ - ಪ್ರಿಯಾಂಕಾ, ಬೆಂಗಳೂರು)

(This copy first appeared in Hindustan Times Kannada website. To read more like this please logon to kannada.hindustantimes.com)

Whats_app_banner