Bengaluru Crime: ಗಂಗಮ್ಮನಗುಡಿ ಎಎಸ್‌ಐ ಕೈಗೆ ಗಾಜಿನ ಬಾಟಲಿಯಿಂದ ಚುಚ್ಚಿದ ಮಹಿಳೆ, ಮಾನಸಿಕ ಅಸ್ವಸ್ಥೆ ನಿಮ್ಹಾನ್ಸ್‌ಗೆ ದಾಖಲು
ಬೆಂಗಳೂರಿನ ಗಂಗಮ್ಮನಗುಡಿ ಪೊಲೀಸ್ ಠಾಣೆಯ ಕೈಗೆ ಗಾಜಿನ ಬಾಟಲಿಯಿಂದ ಚುಚ್ಚಿದ ಮಹಿಳೆ ಮಾನಸಿಕ ಅಸ್ವಸ್ಥೆ. ಆಕೆಯನ್ನು ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಮದುವೆ ನಿರಾಕರಿಸಿದ ಮಹಿಳೆಯ ಕೊಲೆಯಾಗಿದೆ. (ವರದಿ- ಎಚ್. ಮಾರುತಿ, ಬೆಂಗಳೂರು)
ಬೆಂಗಳೂರು: ಆಸ್ತಿ ವಿವಾದದ ಸಂಬಂಧ ಪೊಲೀಸರು ತನ್ನ ಪರವಾಗಿ ನಿಲ್ಲಲಿಲ್ಲ ಎಂದು ಆರೋಪಿಸಿ ಮಹಿಳೆಯೊಬ್ಬರು ಕರ್ತವ್ಯನಿರತ ಎಎಸ್‌ಐ ಒಬ್ಬರಿಗೆ ಬಾಟಲಿಯಿಂದ ಚುಚ್ಚಿ ಗಾಯಗೊಳಿಸಿರುವ ಪ್ರಕರಣ ಬೆಂಗಳೂರಿನ ಗಂಗಮ್ಮನಗುಡಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ಅಶ್ವಿನಿ ಎಂಬ ಮಹಿಳೆ ಗಂಗಮ್ಮನಗುಡಿ ಪೊಲೀಸ್ ಠಾಣೆಯ ಎಎಸ್ಐ ನಾಗರಾಜು ಅವರಿಗೆ ಚುಚ್ಚಿದ್ದಾರೆ. ನಾಗರಾಜು ಅವರ ಬಲ ಕೈಗೆ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಇವರ ಮೇಲೆ ಹಲ್ಲೆ ನಡೆಸಿದ ಅಬ್ಬಿಗರೆ ನಿವಾಸಿ ಅಶ್ವಿನಿ ಎಂಬ ಮಹಿಳೆಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಆದರೆ ಅಶ್ವಿನಿ ಅವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವುದು ತಿಳಿದು ಬಂದಿದೆ. ಅವರನ್ನು ಚಿಕಿತ್ಸೆಗಾಗಿ ನಿಮ್ಹಾನ್ಸ್‌ಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಪತಿಯಿಂದ ಪ್ರತ್ಯೇಕವಾಗಿ ವಾಸವಿರುವ ಅಶ್ವಿನಿ ತನ್ನ ಸಹೋದರನ ಜತೆ ಆಸ್ತಿಗಾಗಿ ಕಲಹ ನಡೆಸುತ್ತಲೇ ಇದ್ದಾರೆ. ಮತ್ತೊಂದು ಕಡೆ ಹತ್ತು ವರ್ಷಗಳಿಂದ ಆಕೆ ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ತಿ ವಿವಾದದ ಸಂಬಂಧ ದೂರು ನೀಡಲು ಪೊಲೀಸ್ ಠಾಣೆಗೆ ಆಗಮಿಸಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಪರಿಶೀಲಿಸುವುದಾಗಿ ಭರವಸೆ ನೀಡಿದ್ದರು. ಈ ಉತ್ತರದಿಂದ ಕೋಪಗೊಂಡ ಅಶ್ವಿನಿ ತನ್ನ ಬಳಿಯಿದ್ದ ಗಾಜಿನ ಬಾಟಲಿಯನ್ನು ಒಡೆದು ಎಎಸ್‌ಐ ಅವರ ಬಲಗೈಗೆ ಚುಚ್ಚಿದ್ದಾರೆ. ಅಲ್ಲಿಯೇ ಇದ್ದ ಇತರ ಪೊಲೀಸರು ಆಕೆಯನ್ನು ಹಿಡಿದುಕೊಂಡು ಎಎಸ್ಐ ನಾಗರಾಜು ಅವರನ್ನು ರಕ್ಷಿಸಿದ್ದಾರೆ.
ರಂಗೋಲಿ, ಚಪ್ಪಲಿ ಸ್ಟ್ಯಾಂಡ್ ವಿಷಯಕ್ಕೂ ಜಗಳ
ಎಂತೆಂತಹ ಕ್ಷುಲಕ ವಿಷಯಗಳಿಗೆ ಜಗಳ ನಡೆಯುತ್ತದೆ ಮತ್ತು ಪೊಲೀಸ್ ಠಾಣೆಯ ಮೆಟ್ಟಿಲು ಹತ್ತುತ್ತದೆ ಎಂದರೆ ಒಮ್ಮೊಮ್ಮೆ ಅಚ್ಚರಿಯಾಗುತ್ತದೆ. ಕೋಡಿಚಿಕ್ಕನಹಳ್ಳಿಯಲ್ಲಿನ ಚೈತನ್ಯ ಪ್ಯಾರಡೈಸ್ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿರುವ ಈ ನೆರೆಹೊರೆಯವರು ಇದೀಗ ಪೊಲೀಸ್ ಠಾಣೆಗೆ ಅಲೆಯುತ್ತಿದ್ದಾರೆ.
ಮನೆ ಎದುರು ಚಪ್ಪಲಿ ಸ್ಟ್ಯಾಂಡ್ ಇಡುವ ವಿಚಾರಕ್ಕೆ ನೆರೆಹೊರೆಯವರ ನಡುವೆ ಆರಂಭವಾದ ಗಲಾಟೆ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಬೊಮ್ಮನಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪ್ರಣಬ್ ಜ್ಯೋತಿ ಸಿಂಗ್ ಹಾಗೂ ನೇಹಾ ದಂಪತಿ ವಿರುದ್ಧ ಮಂಜುನಾಥ್ ಹಾಗೂ ಸರಿತಾ ದಂಪತಿ ದೂರು ನೀಡಿದ್ದಾರೆ. ದೂರು ಸ್ವೀಕರಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಣಬ್ ಹಾಗೂ ನೇಹಾ ದಂಪತಿ ತಮ್ಮ ಮನೆಯ ಎದುರು ನೆಲೆಸಿದ್ದಾರೆ. ಅಲ್ಲಿಂದ ನಮ್ಮನ್ನು ಓಡಿಸಲು ಆಗಾಗ್ಗೆ ಬೆದರಿಕೆ ಹಾಕುತ್ತಿದ್ದಾರೆ. ಮಾನಸಿಕ ಹಿಂಸೆಯನ್ನೂ ನೀಡುತ್ತಿದ್ದಾರೆ ಎಂದು ಎನ್.ಬಿ.ಮಂಜುನಾಥ್ ಅವರು ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ. ಈಗಾಗಲೇ ಎರಡು ಬಾರಿ ದೂರು ನೀಡಿದ್ದೇನೆ. ಮಾರ್ಚ್ 27ರಂದು ರಾತ್ರಿ 9 ಗಂಟೆ ಹೊತ್ತಿಗೆ ಮನೆ ಮುಂಬಾಗ ಹಾಕಿದ್ದ ರಂಗೋಲಿಯನ್ನು ಅಳಿಸಿದ್ದಾರೆ. ಚಪ್ಪಲಿ ಸ್ಟ್ಯಾಂಡ್ ಅನ್ನು ಕಾಲಿನಿಂದ ಒದ್ದು ಬೀಳಿಸಿದ್ದಾರೆ. ಅಕ್ಕಪಕ್ಕದಲ್ಲಿ ಗಲಾಟೆ ಮಾಡಿ ಕೊಳ್ಳುವುದು ಬೇಡ ಎಂದು ಸುಮ್ಮನಿದ್ದರೂ ಪದೇ ಪದೇ ತೊಂದರೆ ನೀಡುತ್ತಿದ್ದಾರೆ ಎಂದು ಮಂಜುನಾಥ್ ದೂರಿನಲ್ಲಿ ತಿಳಿಸಿದ್ದಾರೆ.
ಮದುವೆಗೆ ನಿರಾಕರಣೆ, ಮಹಿಳೆ ಕೊಲೆ
ಮದುವೆಗೆ ನಿರಾಕರಿಸಿದ್ದರಿಂದ ಮಹಿಳೆಯೊಬ್ಬರನ್ನು ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ. ಜಯನಗರದ 5ನೇ ಬ್ಲಾಕ್‌ನ ಚಂದ್ರಗುಪ್ತ ಆಟದ ಮೈದಾನದ ಸಮೀಪ ಈ ಕೊಲೆ ನಡೆದಿದೆ.
ಪಶ್ಚಿಮ ಬಂಗಾಳದ ಕೋಲ್ಕತ್ತ ಮೂಲದ ಫರೀದಾ ಖಾತೂನ್ ಕೊಲೆಯಾದ ಮಹಿಳೆ. ಈಕೆಯನ್ನು ಎನ್.ಎಲ್.ಗಿರೀಶ್ ಅಲಿಯಾಸ್ ರೆಹಾನ್ ಅಹಮದ್ ಎಂಬಾತ ಕೊಲೆ ಮಾಡಿದ್ದಾನೆ. 35 ವರ್ಷದ ಈತನನ್ನು ಪೊಲೀಸರು ಬಂಧಿಸಿದ್ದಾರೆ.
42 ವರ್ಷದ ಫರೀದಾ ಖಾತೂನ್ 2022 ರಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಈಕೆಯ ಪತಿ ಕೆಲವು ವರ್ಷಗಳ ಹಿಂದೆ ನಿಧನರಾಗಿದ್ದು, ಈಕೆಗೆ ಇಬ್ಬರು ಮಕ್ಕಳಿದ್ದಾರೆ. ಬೆಂಗಳೂರಿನಲ್ಲಿ ಈಕೆಗೆ ಗಿರೀಶ್ ಎಂಬಾತ ಪರಿಚಯವಾಗಿದ್ದಾನೆ. ಪರಿಚಯ ಪ್ರೀತಿಯಾಗಿ ಬೆಳೆದಿದೆ.
ಗಿರೀಶ್ ಹಿಂದೂ ಧರ್ಮದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡು ತನ್ನ ಹೆಸರನ್ನು ರೆಹಾನ್ ಅಹಮದ್ ಎಂದು ಬದಲಿಸಿಕೊಂಡಿರುತ್ತಾನೆ. ಈತ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಫರೀದಾ ಖಾತೂನ್ ಜಯನಗರದ ಸ್ಪಾ ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಮಾರ್ಚ್ 29ರಂದು ಗಿರೀಶ್ ಅಲಿಯಾಸ್ ರೆಹಾನ್ ಹುಟ್ಟುಹಬ್ಬವಿತ್ತು. ಇಬ್ಬರೂ ಜಯನಗರದಲ್ಲಿ ಓಯೋ ರೂಂ ಪಡೆದುಕೊಂಡು ಅಲ್ಲಿಯೇ ಉಳಿದುಕೊಂಡಿದ್ದಾರೆ. ವಿವಾಹವಾಗೋಣ ಎಂದು ಒತ್ತಾಯಿಸಿದಾಗ ಫರೀದಾ ನಿರಾಕರಿಸಿದ್ದಾರೆ.
ಮತ್ತೆ ಶನಿವಾರ ಓಯೋ ರೂಂನಿಂದ ಜೊತೆಯಲ್ಲೇ ಹೊರಬಂದು ಬೆಂಗಳೂರು ನಗರವನ್ನು ಸುತ್ತಾಡಿದ್ದಾರೆ. ಸಂಜೆ 7 ಗಂಟೆಯ ವೇಳೆಗೆ ಜಯನಗರದ ಚಂದ್ರಗುಪ್ತ ಉದ್ಯಾನಕ್ಕೆ ಅಗಿಮಿಸಿ ಮತ್ತೆ ಮದುವೆ ಆಗುವಂತೆ ಬಲವಂತ ಮಾಡಿದ್ದಾನೆ. ಫರೀದಾ ಆಗಲೂ ನಿರಾಕರಿಸಿದಾಗ ಚಾಕುವಿನಿಂದ ಆಕೆಯ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ನಂತರ ಚಾಕುವಿನ ಸಹಿತ ಪೊಲೀಸ್ ಠಾಣೆಗೆ ಆಗಮಿಸಿ ಶರಣಾಗಿದ್ದಾನೆ.
(ವರದಿ- ಎಚ್. ಮಾರುತಿ, ಬೆಂಗಳೂರು)
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.