ಬೆಂಗಳೂರಿನ ಪಬ್‌ನಲ್ಲಿ ನಟ, ನಟಿಯರಿಗೆ ಪಾರ್ಟಿ ಮಾಡಲು ಮುಂಜಾನೆವರೆಗೆ ಅವಕಾಶ; ನಟ ದರ್ಶನ್‌, ರಾಕ್‌ಲೈನ್‌ ಸೇರಿದಂತೆ ವಿವಿಧ ಮಂದಿಗೆ ನೋಟಿಸ್‌
ಕನ್ನಡ ಸುದ್ದಿ  /  ಮನರಂಜನೆ  /  ಬೆಂಗಳೂರಿನ ಪಬ್‌ನಲ್ಲಿ ನಟ, ನಟಿಯರಿಗೆ ಪಾರ್ಟಿ ಮಾಡಲು ಮುಂಜಾನೆವರೆಗೆ ಅವಕಾಶ; ನಟ ದರ್ಶನ್‌, ರಾಕ್‌ಲೈನ್‌ ಸೇರಿದಂತೆ ವಿವಿಧ ಮಂದಿಗೆ ನೋಟಿಸ್‌

ಬೆಂಗಳೂರಿನ ಪಬ್‌ನಲ್ಲಿ ನಟ, ನಟಿಯರಿಗೆ ಪಾರ್ಟಿ ಮಾಡಲು ಮುಂಜಾನೆವರೆಗೆ ಅವಕಾಶ; ನಟ ದರ್ಶನ್‌, ರಾಕ್‌ಲೈನ್‌ ಸೇರಿದಂತೆ ವಿವಿಧ ಮಂದಿಗೆ ನೋಟಿಸ್‌

ಬೆಂಗಳೂರಿನ ಪಬ್‌ವೊಂದರಲ್ಲಿ ನಟ, ನಟಿಯರು ಮುಂಜಾನೆವರೆಗೆ ಪಾರ್ಟಿ ಮಾಡಲು ಅವಕಾಶ ನೀಡಿದ ಸಂಬಂಧ ಎಫ್‌ಐಆರ್ ದಾಖಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಐಪಿಎಸ್‌ ಅಧಿಕಾರಿಗೆ ಬೆದರಿಕೆ ಹಾಕಿದ್ದ ಯುವಕನ ವಿರುದ್ದ ಎಫ್ಐಆರ್‌ ದಾಖಲಿಸಲಾಗಿದೆ.

ಬೆಂಗಳೂರು ನಗರ ಪೊಲೀಸ್
ಬೆಂಗಳೂರು ನಗರ ಪೊಲೀಸ್

ಬೆಂಗಳೂರಿನಲ್ಲಿ ಸಿನಿಮಾವೊಂದರ ಭರ್ಜರಿ ಯಶಸ್ಸನ್ನು ಸಂಭ್ರಮಿಸಲು ಮುಂಜಾನೆವರೆಗೆ ಪಬ್‌ನಲ್ಲಿ ಪಾರ್ಟಿ ನಡೆಸಲು ಅವಕಾಶ ಮಾಡಿಕೊಟ್ಟ ಆರೋಪದ ಮೇರೆಗೆ ಬೆಂಗಳೂರಿನಲ್ಲಿ ಪಬ್‌ ಮಾಲೀಕ ಸೇರಿದಂತೆ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಸುಬ್ರಹ್ಮಣ್ಯನಗರ ಠಾಣೆ ಪೊಲೀಸರು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ಅಪ್‌ಡೇಟ್‌: ನಟ ದರ್ಶನ್, ಅಭಿಷೇಕ್ ಅಂಬರೀಷ್, ನಿರ್ಮಾಪಕ ರಾಕ್​ಲೈನ್ ವೆಂಕಟೇಶ್, ನಟ ಡಾಲಿ ಧನುಂಜಯ್, ನಟ ಚಿಕ್ಕಣ್ಣ, ನಿನಾಸಂ ಸತೀಶ್, ನಿರ್ದೇಶಕ ತರುಣ್ ಸುಧೀರ್, ಸಂಗೀತ ನಿರ್ದೇಶಕ ಹರಿಕೃಷ್ಣ ಅವರಿಗೆ ಪೊಲೀಸರು ನೋಟಿಸ್‌ ನೀಡಿದ್ದಾರೆ.

ಯಶವಂತಪುರದ ಒರಾಯನ್ ಮಾಲ್ ಎದುರಿನ ಜೆಟ್‌ಲ್ಯಾಗ್ ಪಬ್‌ನ ಮಾಲೀಕರಾದ ಶಶಿರೇಖಾ ಜಗದೀಶ್ ಮತ್ತು ಪಬ್‌ನ ವ್ಯವಸ್ಥಾಪಕ ಪ್ರಶಾಂತ್ ವಿರುದ್ಧ ಕರ್ನಾಟಕ ಪೊಲೀಸ್ ಕಾಯ್ದೆ ಹಾಗೂ ಅಬಕಾರಿ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪಬ್‌ನ ಮಾಲೀಕರಿಗೆ ಕಾರಣ ಕೇಳಿ ನೋಟಿಸ್ ಕೊಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಈ ಪಬ್‌ನಲ್ಲಿ ನಡೆದ ಪಾರ್ಟಿಯಲ್ಲಿ ಸಿನಿಮಾ ನಟ ನಟಿಯರು ಮತ್ತು ನಿರ್ಮಾಪಕರು ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ. ಜನವರಿ 3ರಂದು ರಾತ್ರಿ ಹಮ್ಮಿಕೊಳ್ಳಲಾಗಿತ್ತು. ರಾತ್ರಿ 8 ಗಂಟೆಗೆ ಆರಂಭವಾದ ಪಾರ್ಟಿ ಜ.4ರ ಮುಂಜಾನೆ 3.30ರವರೆಗೆ ನಡೆದಿತ್ತು ಎಂದು ಗೊತ್ತಾಗಿದೆ. ಈ ಸಂದರ್ಭದಲ್ಲಿ ಪಾರ್ಟಿಯಲ್ಲಿ ಭಾಗಿಯಾಗಿದ್ದ ಎಲ್ಲರಿಗೂ ಮುಂಜಾನೆವರೆಗೆ ಮದ್ಯ ಹಾಗೂ ಊಟದ ವ್ಯವಸ್ಥೆ ಮಾಡಲಾಗಿತ್ತು. ರಾತ್ರಿ 12.45ಕ್ಕೆ ಬೀಟ್‌ನಲ್ಲಿದ್ದ ಪಿಎಸ್‌ಐ ಹಾಗೂ ಹೊಯ್ಸಳ ಸಿಬ್ಬಂದಿ ಪಬ್‌ಗೆ ಭೇಟಿ ನೀಡಿ ಪಬ್‌ ಬಂದ್ ಮಾಡುವಂತೆ ಸೂಚಿಸಿದ್ದರು. ಆದರೂ ಮುಂಜಾನೆವರೆಗೂ ಪಾರ್ಟಿ ಮುಂದುವರೆದಿತ್ತು ಎಂದು ಮೂಲಗಳು ತಿಳಿಸಿವೆ.

ಇವರನ್ನು ನೋಡಲು ರಸ್ತೆಗಳಲ್ಲಿ ನೂರಾರು ಮಂದಿ ಸೇರಿದ್ದರು. ಇದರಿಂದ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಕರ್ತವ್ಯಲೋಪದ ಹಿನ್ನೆಲೆಯಲ್ಲಿ ರಾತ್ರಿ ಬೀಟ್‌ಗೆ ನಿಯೋಜಿಸಲ್ಪಟ್ಟಿದ್ದ ಸಿಬ್ಬಂದಿ ಹಾಗೂ ಪಿಎಸ್‌ಐ ವಿರುದ್ಧವೂ ತನಿಖೆಗೆ ಆದೇಶಿಸಲಾಗಿದೆ. ಒಂದು ವೇಳೆ ಕರ್ತವ್ಯ ಲೋಪ ಕಂಡು ಬಂದರೆ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹಿರಿಯ ಅಧಿಕಾರಿಗಳ ತಿಳಿಸಿದ್ದಾರೆ. ನಟ ನಟಿಯರು ಭಾಗಿಯಾಗಿದ್ದ ಈ ಪಾರ್ಟಿಯಲ್ಲಿ ಡ್ರಗ್ಸ್‌ ಸೇವನೆ ಆಗಿಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ಆದರೂ ಮುಂಜಾನೆವರೆಗೆ ಮದ್ಯ ಪೂರೈಕೆ ಮಾಡಿರುವುದು ದೃಢಪಟ್ಟಿದೆ. ಅವಧಿ ಮೀರಿ ಪಬ್ ಕಾರ್ಯಾಚರಣೆ ನಡೆಸಿದ ಆರೋಪದ ಮೇರೆಗೆ ಪಬ್ ವಿರುದ್ದ ಎಫ್‌ಐಆರ್‌ ದಾಖಲು ಮಾಡಿದ್ದು, ತನಿಖೆ ಮುಂದುವರಿದಿದೆ ಎಂದು ಎಂದು ಉತ್ತರ ವಿಭಾಗ ಡಿಸಿಪಿ ಸೈದುಲು ಅಡಾವತ್ ತಿಳಿಸಿದ್ದಾರೆ. ಅಬಕಾರಿ ಕಾಯಿದೆ ಷರತ್ತುಗಳ ಪ್ರಕಾರ ಬೆಳಗ್ಗೆ 10 ಗಂಟೆಯಿಂದ ರಾತ್ರಿ 1 ಗಂಟೆಯವರೆಗೆ ಮಾತ್ರ ರೆಸ್ಟೋಬಾರ್ ತೆರೆಯಲು ಅವಕಾಶವಿದೆ.

ಐಪಿಎಸ್‌ ಅಧಿಕಾರಿಗೆ ಬೆದರಿಕೆ ಹಾಕಿದ್ದ ಯುವಕನ ವಿರುದ್ದ ಎಫ್ಐಆರ್‌

ಐಪಿಎಸ್‌ ಅಧಿಕಾರಿ ಶೋಭಾರಾಣಿ ಅವರಿಗೆ ನಿಂದಿಸಿ ಬೆದರಿಕೆ ಹಾಕಿದ್ದ ಬೈಕ್‌ ಸವಾರನೊಬ್ಬನ ವಿರುದ್ದ ಬೆಂಗಳೂರಿನ ಆರ್‌ಎಂಸಿ ಯಾರ್ಡ್‌ ಪೊಲೀಸ್‌ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿದೆ.

ಸಪ್ತಗಿರಿ ಲೇಔಟ್‌ನ ಜಿ.ಅಭಿಷೇಕ್‌ ವಿರುದ್ಧ ದೂರು ದಾಖಲಾಗಿದೆ. ‌ಬಿಬಿಎಂಪಿ ಕೇಂದ್ರ ಕಚೇರಿಯ ಬೆಂಗಳೂರು ಮಹಾನಗರ ಕಾರ್ಯಪಡೆಯಲ್ಲಿ ಎಸ್‌ಪಿಯಾಗಿ ಶೋಭಾರಾಣಿ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಜ.3ರಂದು ಸರ್ಕಾರಿ ವಾಹನದಲ್ಲಿ ಕೆಲಸಕ್ಕೆ ತೆರಳುತ್ತಿದ್ದಾಗ ಗೊರಗುಂಟೆಪಾಳ್ಯ ಸಿಗ್ನಲ್‌ ಬಳಿ ಹಿಂಬದಿಯಿಂದ ಬಂದ ಬೈಕ್‌, ಕಾರಿಗೆ ಡಿಕ್ಕಿ ಹೊಡೆದಿತ್ತು.

ನಂತರ ಕಾರು ನಿಲ್ಲಿಸಿದ ಚಾಲಕ ಬೈಕ್ ಸವಾರನನ್ನು ಪ್ರಶ್ನಿಸುತ್ತಿದ್ದರು. ಆಗ ಕಾರು ಚಾಲಕನಿಗೆ ಅಭಿಷೇಕ್‌ ನಿಂದಿಸಿದ. ಇದನ್ನು ಗಮನಿಸಿದ ನಾನು ಕಾರಿನಿಂದ ಇಳಿದು ಪ್ರಶ್ನಿಸಿದ್ದಕ್ಕೆ ನನ್ನನ್ನೂ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾನೆ. ಆದ್ದರಿಂದ ಬೈಕ್‌ ಸವಾರನ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಶೋಭಾರಾಣಿ ದೂರು ನೀಡಿದ್ದಾರೆ.

Whats_app_banner