ವಿಡಿಯೊ ಮಾರ್ಫಿಂಗ್ ಆರೋಪ: ಬೆಂಗಳೂರಿನಲ್ಲಿ ಇಬ್ಬರು ಬಾಲಕರು ಸೇರಿ ಮೂವರ ಬಂಧನ, ವೀಲಿಂಗ್ ಮಾಡುತ್ತಿದ್ದವನ ವಾಹನ ವಶ, ಪೋಷಕರ ವಿರುದ್ಧ ಪ್ರಕರಣ
ಕನ್ನಡ ಸುದ್ದಿ  /  ಕರ್ನಾಟಕ  /  ವಿಡಿಯೊ ಮಾರ್ಫಿಂಗ್ ಆರೋಪ: ಬೆಂಗಳೂರಿನಲ್ಲಿ ಇಬ್ಬರು ಬಾಲಕರು ಸೇರಿ ಮೂವರ ಬಂಧನ, ವೀಲಿಂಗ್ ಮಾಡುತ್ತಿದ್ದವನ ವಾಹನ ವಶ, ಪೋಷಕರ ವಿರುದ್ಧ ಪ್ರಕರಣ

ವಿಡಿಯೊ ಮಾರ್ಫಿಂಗ್ ಆರೋಪ: ಬೆಂಗಳೂರಿನಲ್ಲಿ ಇಬ್ಬರು ಬಾಲಕರು ಸೇರಿ ಮೂವರ ಬಂಧನ, ವೀಲಿಂಗ್ ಮಾಡುತ್ತಿದ್ದವನ ವಾಹನ ವಶ, ಪೋಷಕರ ವಿರುದ್ಧ ಪ್ರಕರಣ

ವಿದ್ಯಾರ್ಥಿನಿ ಫೋಟೊವನ್ನ ಅಶ್ಲೀಲವಾಗಿ ಮಾರ್ಫಿಂಗ್ ಮಾಡಿದ ಆರೋಪದಲ್ಲಿ ಬಂಧನವಾಗಿರುವ ಮೂವರ ಪೈಕಿ ಒಬ್ಬ ಕಾಲೇಜು ವಿದ್ಯಾರ್ಥಿಯಾಗಿದ್ದು, ಬಾಗಲೂರಿನಲ್ಲಿ ವಾಸಿಸುತ್ತಿದ್ದಾನೆ. ಉಳಿದ ಇಬ್ಬರು ಬಾಲಕರು ಶಾಲಾ ವಿದ್ಯಾರ್ಥಿಗಳಾಗಿದ್ದು, ಅವರನ್ನು ಬಾಲ ನ್ಯಾಯಮಂಡಳಿ ಎದುರು ಹಾಜರು ಪಡಿಸಲಾಗಿದೆ.

ವಿಡಿಯೊ ಮಾರ್ಫಿಂಗ್ ಆರೋಪದಲ್ಲಿ ಬಾಲಕ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ವೀಲಿಂಗ್ ಮಾಡುತ್ತಿದ್ದವನ ವಾಹನ ವಶಕ್ಕೆ ಪಡೆಯಲಾಗಿದ್ದು, ಪೋಷಕರ ವಿರುದ್ದ ದೂರು ದಾಖಲಾಗಿದೆ.
ವಿಡಿಯೊ ಮಾರ್ಫಿಂಗ್ ಆರೋಪದಲ್ಲಿ ಬಾಲಕ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ವೀಲಿಂಗ್ ಮಾಡುತ್ತಿದ್ದವನ ವಾಹನ ವಶಕ್ಕೆ ಪಡೆಯಲಾಗಿದ್ದು, ಪೋಷಕರ ವಿರುದ್ದ ದೂರು ದಾಖಲಾಗಿದೆ.

ಬೆಂಗಳೂರು: ಮೊಬೈಲ್ ಜ್ಞಾನಾರ್ಜನೆಗೆ ಬಳಕೆಯಾಗಬೇಕು. ಅದರಲ್ಲೂ ಶಾಲಾ ವಿದ್ಯಾರ್ಥಿಗಳು ತಮ್ಮ ಚಿತ್ತವನ್ನು ಓದಿನತ್ತ ಮಾತ್ರ ಕೇಂದ್ರಿಕರಿಸಬೇಕು. ಆದರೆ ಇಲ್ಲಿ ಕೆಲವು ಶಾಲಾ ವಿದ್ಯಾರ್ಥಿಗಳು ವಿಡಿಯೊ ಮಾರ್ಫಿಂಗ್ ಮಾಡಿ ಸಿಕ್ಕಿಹಾಕಿಕೊಂಡು ಇದೀಗ ಪ್ರಕರಣ ಎದುರಿಸುತ್ತಿದ್ದಾರೆ. ಬಾಲಕಿಯರ ಭಾವಚಿತ್ರಗಳನ್ನು ಇನ್‌ಸ್ಟಾಗ್ರಾಂ ಖಾತೆಯಿಂದ ಡೌನ್‌ಲೋಡ್ ಮಾಡಿಕೊಂಡು ಅಶ್ಲೀಲವಾಗಿ ಮಾರ್ಫಿಂಗ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುರುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ಇಬ್ಬರು ಅಪ್ರಾಪ್ತ ವಯಸ್ಸಿನ ಬಾಲಕರು ಸೇರಿದಂತೆ ಮೂವರು ಆರೋಪಿಗಳನ್ನು ಬೆಂಗಳೂರಿನ ಈಶಾನ್ಯ ವಿಭಾಗದ ಸೆನ್ ಠಾಣೆ (ಸೈಬರ್ ಆರ್ಥಿಕ ಹಾಗೂ ಮಾದಕ ದ್ರವ್ಯ ನಿಯಂತ್ರಣ) ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಮೂವರು ಆರೋಪಿಗಳ ಪೈಕಿ ಒಬ್ಬ ಕಾಲೇಜು ವಿದ್ಯಾರ್ಥಿಯಾಗಿದ್ದು, ಬಾಗಲೂರಿನಲ್ಲಿ ವಾಸಿಸುತ್ತಿದ್ದಾನೆ. ಉಳಿದ ಇಬ್ಬರು ಬಾಲಕರು ಶಾಲಾ ವಿದ್ಯಾರ್ಥಿಗಳಾಗಿದ್ದು, ಅವರನ್ನು ಬಾಲ ನ್ಯಾಯಮಂಡಳಿ ಎದುರು ಹಾಜರು ಪಡಿಸಲಾಗಿದೆ. ಈ ಮೂವರು ಆರೋಪಿಗಳ ಬಳಿ ಇದ್ದ ಮೊಬೈಲ್‌ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಬಾಲಕಿಯ ಇನ್‌ಸ್ಟಾಗ್ರಾಂ ಖಾತೆಯಿಂದ ಭಾವಚಿತ್ರಗಳನ್ನು ಆಯ್ದುಕೊಂಡು ಅವುಗಳನ್ನು ಅಶ್ಲೀಲವಾಗಿ ಮಾರ್ಫಿಂಗ್ ಮಾಡುತ್ತಿದ್ದರು. ನಂತರ ಸಾಮಾಜಿಕ ಜಾಲತಾಣಗಳಲ್ಲಿ ಈ ಅಶ್ಲೀಲ ಫೋಟೋಗಳನ್ನು ಪೋಸ್ಟ್ ಮಾಡುತ್ತಿದ್ದರು. ಈ ದುಷ್ಕೃತ್ಯಕ್ಕಾಗಿಯೇ ನಕಲಿ ಖಾತೆಗಳನ್ನು ಸೃಷ್ಟಿಸಿಕೊಂಡಿದ್ದರು ಎನ್ನುವುದು ತನಿಖೆಯಿಂದ ತಿಳಿದುಬಂದಿದೆ.

ವೀಲಿಂಗ್ ಮಾಡುತ್ತಿದ್ದ ಬಾಲಕನಿಂದ ವಾಹನ ವಶ; ಪೋಷಕರ ವಿರುದ್ದ ದೂರು ದಾಖಲು

ಬೆಂಗಳೂರಿನ ಕೆಜಿ ಹಳ್ಳಿ ಸಂಚಾರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ವೀಲಿಂಗ್ ಮಾಡುವವರನ್ನು ಪತ್ತೆ ಹಚ್ಚಲೆಂದೇ ವಿಶೇಷ ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ವಿಶೇಷ ಕಾರ್ಯಾಚರಣೆಯಲ್ಲಿ ವೀಲಿಂಗ್ ಮಾಡುತ್ತಿದ್ದ ಓರ್ವ ಬಾಲಕನನ್ನು ಪೊಲೀಸರು ಪತ್ತೆಹಚ್ಚಿ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಪೊಲೀಸರು ಗಸ್ತು ತಿರುಗುತ್ತಿದ್ದಾಗ ಹೆಚ್‌ಬಿಆರ್ ಲೇಔಟ್ ಮುಖ್ಯರಸ್ತೆಯಲ್ಲಿ ವೀಲಿಂಗ್ ಮಾಡುತ್ತಿದ್ದ ಬಾಲಕನ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡು ವಿಚಾರಣೆ ನಡೆಸಿದ್ದಾರೆ. ಈ ಬಾಲಕ ಅಪ್ರಾಪ್ತ ವಯಸ್ಕ ಎಂದು ವಿಚಾರಣೆಯಿಂದ ತಿಳಿದು ಬಂದಿದೆ.

ಸಂಚಾರ ಪೊಲೀಸರು ಈ ಬಾಲಕನ ಪೋಷಕರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಜೊತೆಗೆ ವಾಹನದಲ್ಲಿ ಡ್ಯಾಗರ್ ಸಿಕ್ಕಿರುವುದರಿಂದ ಮುಂದಿನ ಕ್ರಮಕ್ಕೆ ಡಿ.ಜೆ.ಹಳ್ಳಿ ಕಾನೂನು ಮತ್ತು ಸುವ್ಯವಸ್ಥೆ ಪೊಲೀಸ್ ಠಾಣೆಯ ವಶಕ್ಕೆ ನೀಡಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ ಕೆ ವಂಶಿ ತಿಳಿಸಿದ್ದಾರೆ.

ಅಪಘಾತ: ಫುಡ್ ಡೆಲಿವರಿ ಬಾಯ್ ಸಾವು

ಬೆಂಗಳೂರಿನ ಮೈಸೂರು ರಸ್ತೆಯ ಗುಡ್ಡದಹಳ್ಳಿಯ ಭಾಗ್ಯಲಕ್ಷ್ಮಿ ಫುಡ್ ಇಂಡಸ್ತ್ರೀಸ್ ಸಮೀಪ ಪೆಟ್ರೋಲ್ ತುಂಬಿದ ಟ್ಯಾಂಕರ್ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಫುಡ್ ಡೆಲಿವರಿ ಬಾಯ್ ಕಿಶೋರ್ ಎಂಬುವರು ಅಸುನೀಗಿದ್ದಾರೆ. 50 ವರ್ಷದ ಇವರನ್ನು ರಾಜರಾಜೇಶ್ವರಿನಗರದ ನಿವಾಸಿ ಎಂದು ಗುರುತಿಸಲಾಗಿದೆ. ಮಧ್ಯಾಹ್ನ 1 ಗಂಟೆ ಹೊತ್ತಿಗೆ ಫುಡ್ ಡೆಲಿವರಿ ಮಾಡಲು ಕಿಶೋರ್ ಬೈಕ್‌ನಲ್ಲಿ ತೆರಳುತ್ತಿದ್ದರು. ಅದೇ ಸಂದರ್ಭದಲ್ಲಿ ಎದುರಿನಿಂದ ಅತಿವೇಗವಾಗಿ ಬಂದ ಟ್ಯಾಂಕರ್ ಡಿಕ್ಕಿ ಹೊಡೆಡಿದ್ದರಿಂದ ಬೈಕ್ ಸವಾರ ಕಿಶೋರ್ ಕೆಳಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಅಲ್ಲಿಯೇ ಇದ್ದ ಸ್ಥಳೀಯರು ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner