ಬೆಂಗಳೂರು: ಅಲೆನ್ ಕೆರಿಯರ್ ಇನ್‌ಸ್ಟಿಟ್ಯೂಟ್‌ಗೆ 1.4 ಲಕ್ಷ ರೂಪಾಯಿ ದಂಡ, ವಿದ್ಯಾರ್ಥಿ ಕೇಳದ ಕೋರ್ಸ್‌ಗೆ ಸೇರಿಸಿದ ಪ್ರಕರಣ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು: ಅಲೆನ್ ಕೆರಿಯರ್ ಇನ್‌ಸ್ಟಿಟ್ಯೂಟ್‌ಗೆ 1.4 ಲಕ್ಷ ರೂಪಾಯಿ ದಂಡ, ವಿದ್ಯಾರ್ಥಿ ಕೇಳದ ಕೋರ್ಸ್‌ಗೆ ಸೇರಿಸಿದ ಪ್ರಕರಣ

ಬೆಂಗಳೂರು: ಅಲೆನ್ ಕೆರಿಯರ್ ಇನ್‌ಸ್ಟಿಟ್ಯೂಟ್‌ಗೆ 1.4 ಲಕ್ಷ ರೂಪಾಯಿ ದಂಡ, ವಿದ್ಯಾರ್ಥಿ ಕೇಳದ ಕೋರ್ಸ್‌ಗೆ ಸೇರಿಸಿದ ಪ್ರಕರಣ

ವಿದ್ಯಾರ್ಥಿ ಬಯಸದೇ ಇದ್ದ ಕೋರ್ಸ್‌ಗೆ ಸೇರಿದ ಪ್ರಕರಣದಲ್ಲಿ ಬೆಂಗಳೂರಿನ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗವು ಅಲೆನ್ ಕೆರಿಯರ್ ಇನ್‌ಸ್ಟಿಟ್ಯೂಟ್‌ಗೆ 1.4 ಲಕ್ಷ ರೂಪಾಯಿ ದಂಡ ವಿಧಿಸಿದೆ. ವಿದ್ಯಾರ್ಥಿ ಕೇಳದ ಕೋರ್ಸ್‌ಗೆ ಸೇರಿಸಿದ ಪ್ರಕರಣ ಇದಾಗಿದ್ದು, ಇದರ ವಿವರ ಇಲ್ಲಿದೆ.

ಬೆಂಗಳೂರಿನ ಅಲೆನ್ ಕೆರಿಯರ್ ಇನ್‌ಸ್ಟಿಟ್ಯೂಟ್‌ಗೆ 1.4 ಲಕ್ಷ ರೂಪಾಯಿ ದಂಡ. (ಸಾಂಕೇತಿಕ ಚಿತ್ರ)
ಬೆಂಗಳೂರಿನ ಅಲೆನ್ ಕೆರಿಯರ್ ಇನ್‌ಸ್ಟಿಟ್ಯೂಟ್‌ಗೆ 1.4 ಲಕ್ಷ ರೂಪಾಯಿ ದಂಡ. (ಸಾಂಕೇತಿಕ ಚಿತ್ರ)

ಬೆಂಗಳೂರು: ಕೇಳದೇ ಇದ್ದ ಕೋರ್ಸ್‌ಗೆ ವಿದ್ಯಾರ್ಥಿಯನ್ನು ಸೇರಿಸಿ ದಾರಿ ತಪ್ಪಿಸಿದ್ದಕ್ಕಾಗಿ ಅಲೆನ್ ಕೆರಿಯರ್ ಇನ್‌ಸ್ಟಿಟ್ಯೂಟ್‌ಗೆ 1.4 ಲಕ್ಷ ರೂಪಾಯಿ ದಂಡವನ್ನು ಬೆಂಗಳೂರಿನ ಗ್ರಾಹಕ ನ್ಯಾಯಾಲಯ ವಿಧಿಸಿದೆ. ಇದರಲ್ಲಿ 10,000 ರೂಪಾಯಿ ಪರಿಹಾರವೂ ಇದ್ದು ಒಟ್ಟುಮೊತ್ತವನ್ನು ವಿದ್ಯಾರ್ಥಿಗೆ ನೀಡುವಂತೆ ಅಲೆನ್‌ ಕೆರಿಯರ್ ಇನ್‌ಸ್ಟಿಟ್ಯೂಟ್‌ಗೆ ಗ್ರಾಹಕ ನ್ಯಾಯಾಲಯ ಆದೇಶಿಸಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ವೈದ್ಯಕೀಯ ಶಿಕ್ಷಣ ಆಕಾಂಕ್ಷಿಯಾಗಿದ್ದ ವಿದ್ಯಾರ್ಥಿ 2023ರ ಏಪ್ರಿಲ್ 6 ರಂದು ಬೆಂಗಳೂರಿನ ನಾಲ್ಕನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಈ ಕುರಿತು ದೂರು ದಾಖಲಿಸಿದ್ದರು. ವೈದ್ಯಕೀಯ ಶಿಕ್ಷಣದ ಪ್ರವೇಶ ಪರೀಕ್ಷೆಯಲ್ಲಿ ಯಶಸ್ವಿಯಾಗಲು ಸೂಕ್ತವಾದ ಕೋರ್ಸ್ ಅನ್ನು ಶಿಫಾರಸು ಮಾಡುವುದಾಗಿ ಮತ್ತು ಸಾಕಷ್ಟು ತರಬೇತಿಯನ್ನು ನೀಡುವುದಾಗಿ ಭರವಸೆಯನ್ನು ಅಲೆನ್ ಇನ್‌ಸ್ಟಿಟ್ಯೂಟ್‌ ಪ್ರತಿನಿಧಿಗಳು ನೀಡಿದ್ದರು ಎಂದು ದೂರುದಾರರು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಏನಿದು ದಾರಿ ತಪ್ಪಿಸಿದ ಪ್ರಕರಣ

ಅಲೆನ್ ಕೆರಿಯರ್ ಇನ್‌ಸ್ಟಿಟ್ಯೂಟ್‌ ಇಂದಿರಾನಗರ ಕ್ಯಾಂಪಸ್‌ನಲ್ಲಿ ಪ್ರೀ ಮೆಡಿಕಲ್ ನರ್ಚರ್ ಫೇಸ್ 2 ಎಂಬ ಕೋರ್ಸ್‌ಗೆ ಸೇರುವಂತೆ ಈ ವಿದ್ಯಾರ್ಥಿಗೆ ಶಿಫಾರಸು ಮಾಡಲಾಗಿತ್ತು. ಇದರಂತೆ ಅವರು 2022ರ ಸೆಪ್ಟೆಂಬರ್‌ 4 ರಂದು 1.25 ಲಕ್ಷ ರೂ ಬೋಧನಾ ಶುಲ್ಕ ಪಾವತಿಸಿದ್ದರು. ತರಗತಿಯೂ ಶುರುವಾಗಿತ್ತು. ಈ ತರಗತಿಯಲ್ಲಿನ ಬೋಧನೆಯನ್ನು ಗಮನಿಸಿದಾಗ, ಅದು 10ನೇ ತರಗತಿ ಉತ್ತೀರ್ಣರಾಗಿ ಬಂದವರಿಗೆ ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ಈ ವಿದ್ಯಾರ್ಥಿ 12ನೇ ತರಗತಿ ಉತ್ತೀರ್ಣರಾಗಿದ್ದು, ತನ್ನ ವಿದ್ಯಾರ್ಹತೆಗೆ ಸೂಕ್ತವಾದ ಕೋರ್ಸ್‌ಗೆ ದಾಖಲಿಸುವಂತೆ ಮನವಿ ಮಾಡಿದ್ದರು. ಈ ತರಗತಿ ಮೂರು ತಿಂಗಳು ಮುಂಚಿತವಾಗಿ ಅಂದರೆ 2022ರ ಜೂನ್ 2ಕ್ಕೆ ಶುರುವಾಗಿತ್ತು. ಇದನ್ನು ಮರೆಮಾಚಿ ಬೋಧನಾ ಶುಲ್ಕವನ್ನು ಕಟ್ಟಿಸಿಕೊಳ್ಳಲಾಗಿತ್ತು ಎಂದು ದೂರಿನಲ್ಲಿ ಅವರು ತಿಳಿಸಿದ್ದರು ಎಂದು ವರದಿ ಹೇಳಿದೆ.

ಪದೇಪದೆ ಈ ಕೋರ್ಸ್‌ ತನಗೆ ಹೇಳಿ ಮಾಡಿಸಿದ್ದು ಎಂದು ಖಚಿತವಾಗಿ ಭರವಸೆ ನೀಡಿದ್ದ ಅಲೆನ್ ಕೆರಿಯರ್ ಇನ್‌ಸ್ಟಿಟ್ಯೂಟ್, ತನ್ನ ಮನವಿಯನ್ನು ಪರಿಗಣಿಸಲೇ ಇಲ್ಲ. ಅಲ್ಲದೆ, ತಾನು ಕಟ್ಟಿದ ಶುಲ್ಕ ವಾಪಸ್ ಕೊಡುವಂತೆ ಕೇಳಿದಾಗಲೂ ಅದನ್ನೂ ನಿರ್ಲಕ್ಷಿಸಿತು ಎಂದು ಅವರು ದೂರಿನಲ್ಲಿ ತಿಳಿಸಿದ್ದರು.

ಇದರ ನಂತರ, ಆಕಾಂಕ್ಷಿಯು ಸಂಸ್ಥೆಗೆ ಲೀಗಲ್ ನೋಟಿಸ್ ಕಳುಹಿಸಿದ್ದರು. ಅದಕ್ಕೆ ಅಸಮರ್ಥನೀಯ ಉತ್ತರವನ್ನು ಅಲೆನ್‌ ನೀಡಿದ್ದರಿಂದ ವಿದ್ಯಾರ್ಥಿ ನ್ಯಾಯಾಲಯದ ಮೊರೆ ಹೋಗಿದ್ದರು.

ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಏನಾಯಿತು

ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಅಲೆನ್ ಇನ್‌ಸ್ಟಿಟ್ಯೂಟ್ ತನ್ನನ್ನು ವಂಚಿಸಿದ್ದಲ್ಲದೆ, ತನಗೆ ಅಗತ್ಯವಿಲ್ಲದ ಕೋರ್ಸ್ ನೀಡಿ ದಾರಿ ತಪ್ಪಿಸಿದೆ ಎಂದು ಆರೋಪಿಸಿ ದಾವೆ ಹೂಡಿದರು. ವಿದ್ಯಾರ್ಥಿ ಒದಗಿಸಿದ ದಾಖಲೆಗಳನ್ನು ಪರಿಶೀಲಿಸಿದ ಬಳಿಕ, ಅಲೆನ್ ಇನ್‌ಸ್ಟಿಟ್ಯೂಟ್ ಅಕ್ರಮವಾಗಿ ಲಾಭಗಳಿಸಲು ಅಗತ್ಯವಿಲ್ಲದ ಕೋರ್ಸ್‌ ನೀಡಿ ಗ್ರಾಹಕ ಹಿತಾಸಕ್ತಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ದೂರುದಾರರಿಗೆ ಮಾನಸಿಕ ನೋವು ಮತ್ತು ಆರ್ಥಿಕ ನಷ್ಟ ಉಂಟುಮಾಡಿದೆ ಎಂದು ತೀರ್ಮಾನಿಸಿತು.

ಹೀಗಾಗಿ, 10,00 ರೂಪಾಯಿ ಪರಿಹಾರ ಹೊರತಾಗಿ, ದೂರಿನ ದಿನಾಂಕದಿಂದ ಸಂಪೂರ್ಣ ಪಾವತಿಯ ದಿನಾಂಕದವರೆಗೆ ವಾರ್ಷಿಕ 6 ಪ್ರತಿಶತ ಬಡ್ಡಿಯಲ್ಲಿ ಆಕಾಂಕ್ಷಿಗೆ 1.25 ಲಕ್ಷ ರೂಪಾಯಿ ಮರುಪಾವತಿಸುವಂತೆ ನ್ಯಾಯಾಲಯವು ಅಲೆನ್‌ಗೆ ನಿರ್ದೇಶಿಸಿದೆ ಎಂದು ವರದಿ ಹೇಳಿದೆ.