ಎಚ್‌ಎಸ್‌ಆರ್‌ಪಿ ಗಡುವಿಗೆ ಇನ್ನು 7 ದಿನ ಇರುವಾಗ ಮುಗಿಯದ ಗೊಂದಲ, ಸವಾಲುಗಳು; ಫೆ 17ರ ಗಡುವು ವಿಸ್ತರಣೆಯಾದೀತೇ
ಎಚ್‌ಎಸ್‌ಆರ್‌ಪಿ ಗಡುವಿಗೆ ಇನ್ನು 7 ದಿನ ಬಾಕಿ ಇರುವಾಗ ಮುಗಿಯದ ಗೊಂದಲ ಕಾಡುತ್ತಿವೆ. ಸವಾಲುಗಳು ಹೆಚ್ಚಾಗಿದ್ದು ವಾಹನ ಮಾಲೀಕರು ಹೈರಾಣಾಗಿದ್ದಾರೆ. ಹೀಗಾಗಿ, ಫೆ 17ರ ಗಡುವು ವಿಸ್ತರಣೆಯಾದೀತೇ ಎಂಬ ನಿರೀಕ್ಷೆ ಹೆಚ್ಚಾಗಿದೆ.
ಹೈ-ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್ (ಹೆಚ್‌ಎಸ್‌ಆರ್‌ಪಿ) ಅಳವಡಿಸುವ ಗಡುವು ಫೆ.17 ಆಗಿದ್ದು, ಈ ದಿನ ಸಮೀಪಿಸುತ್ತಿರುವಂತೆ ವಾಹನ ಮಾಲೀಕರು ಗೊಂದಲಕ್ಕೆ ಒಳಗಾಗಿದ್ದಾರೆ. ಅಷ್ಟೇ ಅಲ್ಲ ಹಲವು ಸವಾಲುಗಳನ್ನೂ ಎದುರಿಸುತ್ತಿದ್ದಾರೆ.
ಸಾರಿಗೆ ಇಲಾಖೆಯು 2023ರ ಆಗಸ್ಟ್‌ನಲ್ಲಿ ಎಚ್‌ಎಸ್‌ಆರ್‌ಪಿ ಅಳವಡಿಸುವುದಕ್ಕೆ ಸಂಬಂಧಿಸಿದ ಅಧಿಸೂಚನೆಯನ್ನು ಪ್ರಕಟಿಸಿದೆ. 2019ರ ಏಪ್ರಿಲ್ 1ಕ್ಕೆ ಮೊದಲು 2 ಕೋಟಿ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಸುವುದನ್ನು ಕಡ್ಡಾಯಗೊಳಿಸಿತ್ತು. ಇದಕ್ಕೆ 2023ರ ನವೆಂಬರ್ 17ರ ಗಡುವು ನಿಗದಿ ಮಾಡಿತ್ತು. ಆದರೆ ಎಲ್ಲರೂ ಎಚ್‌ಎಸ್‌ಆರ್‌ಪಿ ಅಳವಡಿಸದ ಕಾರಣ ಈ ಗಡುವನ್ನು 2024ರ ಫೆಬ್ರವರಿ 17ಕ್ಕೆ ಮರುನಿಗದಿ ಮಾಡಿತ್ತು. ಈಗ ಈ ಗಡುವು ಮುಗಿಯಲು ವಾರ ಮಾತ್ರ ಬಾಕಿ ಇದೆ.
ಎಚ್‌ಎಸ್‌ಆರ್‌ಪಿ ಅಳವಡಿಕೆ ಗಡುವು ವಿಸ್ತರಣೆಯಾಗುವ ಸಾಧ್ಯತೆ
ಆದಾಗ್ಯೂ, ಕೋಟ್ಯಂತರ ವಾಹನಗಳಿಗೆ ಇನ್ನೂ ಎಚ್‌ಎಸ್‌ಆರ್‌ಪಿ ಅಳವಡಿಕೆ ಆಗಿಲ್ಲ. ರಾಜ್ಯ ಸಾರಿಗೆ ಇಲಾಖೆ ಕೂಡ ಈ ವಿಚಾರವಾಗಿ ವ್ಯಾಪಕ ಪ್ರಚಾರ ಮತ್ತು ಜಾಗೃತಿ ಶಿಬಿರಗಳನ್ನು ನಡೆಸಿಲ್ಲ. ಹೀಗಾಗಿ
ಇನ್ನೂ ಕೋಟ್ಯಂತರ ವಾಹನಗಳು ಸಾಲುಗಟ್ಟಿ ನಿಲ್ಲದಿರುವುದರಿಂದ ಹಾಗೂ ಎಚ್‌ಎಸ್‌ಆರ್‌ಪಿ ಅಳವಡಿಕೆ ಕುರಿತು ರಾಜ್ಯ ಸಾರಿಗೆ ಇಲಾಖೆ ವ್ಯಾಪಕ ಪ್ರಚಾರ ಮತ್ತು ಜಾಗೃತಿ ಶಿಬಿರಗಳನ್ನು ಕೈಗೊಳ್ಳದ ಕಾರಣ ಮತ್ತೊಮ್ಮೆ ಗಡುವನ್ನು ವಿಸ್ತರಿಸದೆ ಸರ್ಕಾರಕ್ಕೆ ಬೇರೆ ದಾರಿಯಿಲ್ಲದಂತಾಗಿದೆ ಎಂದು ಸಾರಿಗೆ ಇಲಾಖೆ ಮೂಲಗಳು ತಿಳಿಸಿವೆ.
ವಿವಿಧ ಸವಾಲುಗಳನ್ನು ಬಿಂಬಿಸುತ್ತಿವೆ ವರದಿಗಳು
ಹಿಂದೆ ಅಸ್ತಿತ್ವದಲ್ಲಿದ್ದ ಆದರೆ ಈಗ ಇಲ್ಲದೇ ಇರುವ ಕಂಪನಿಗಳಿಂದ ವಾಹನ ಖರೀದಿಸಿದ ವಾಹನ ಮಾಲೀಕರಿಗೆ ಇಂತಹ ಸಮಸ್ಯೆ ಹೆಚ್ಚಾಗಿ ಕಾಡಿದೆ.
ಬೆಂಗಳೂರು ರಾಜಾಜಿನಗರದ ಹರೀಶ್ ಆರ್ ನಾಯಕ್ ಎಂಬುವವರನ್ನು ಉಲ್ಲೇಖಿಸಿರುವ ದ ಹಿಂದೂ ಪತ್ರಿಕೆ ವರದಿ, ಹಳೆಯ ವಾಹನ ಮಾಲೀಕರು ಎದುರಿಸುತ್ತಿರುವ ಸಮಸ್ಯೆ, ಸವಾಲುಗಳ ಕಡೆಗೆ ಗಮನಸೆಳೆದಿದೆ. 15 ವರ್ಷ ಹಳೆಯ ಬೈಕ್‌ಗೆ ಎಚ್‌ಎಸ್‌ಆರ್‌ಪಿ ಪಡೆಯಲು ಪ್ರಯತ್ನಿಸಿದ್ದು, ಈ ಬೈಕ್‌ನ ಉತ್ಪಾದನಾ ಕಂಪನಿ ಈಗ ಅಸ್ತಿತ್ವದಲ್ಲಿ ಇಲ್ಲದ ಕಾರಣ ಅದರ ಹೆಸರು ವೆಬ್‌ಸೈಟ್‌ನಲ್ಲಿರುವ ಪಟ್ಟಿಯಲ್ಲಿ ಇಲ್ಲ. ಹೀಗಾಗಿ ಎಚ್‌ಎಸ್‌ಆರ್‌ಪಿ ಪಡೆಯಲಾಗದ ಪರಿಸ್ಥಿತಿ ಇದೆ ಎಂಬುದರ ಕಡೆಗೆ ವರದಿ ಗಮನಸೆಳೆದಿದೆ.
ವೆಬ್‌ಸೈಟ್ ಮೂಲಕ ಎಚ್‌ಎಸ್‌ಆರ್‌ಪಿಗೆ ಆರ್ಡರ್ ನೀಡಬೇಕಾಗಿದ್ದು, ತಾಂತ್ರಿಕ ಸಮಸ್ಯೆ ಕಾರಣ ಹಲವರ ಮನವಿ ತಿರಸ್ಕೃತವಾಗಿವೆ. ಇದಕ್ಕೆ ಮಂಡ್ಯದ ವ್ಯಕ್ತಿಯೊಬ್ಬರ ಅನುಭವವನ್ನು ವರದಿ ವಿವರಿಸಿದೆ.
ಎಚ್‌ಎಸ್‌ಆರ್‌ಪಿ ಪಡೆಯಲು ಬುಕ್‌ಮೈಎಚ್‌ಎಸ್‌ಆರ್‌ಪಿ ವೆಬ್‌ಸೈಟ್‌ಗೆ ಹೋಗಿ ವಿವರ ನಮೂದಿಸಿದರೆ, ಈಗ ನಿಗದಿಯಾಗಿರುವ ಫೆ.17 ಡೆಡ್‌ಲೈನ್ ಒಳಗೆ ಎಚ್‌ಎಸ್‌ಆರ್‌ಪಿ ಪಡೆಯಲಾಗುತ್ತಿಲ್ಲ. ಎಲ್ಲ ಡೀಲರ್‌ಗಳಲ್ಲೂ ಮಾರ್ಚ್ ಮಧ್ಯಭಾಗದ ತನಕ ಮುಂಗಡ ಸ್ಲಾಟ್ ಬುಕ್ ಆಗಿದೆ. ಹೀಗಾಗಿ, ಫೆ.17ರ ನಂತರ ದಂಡ ಶುಲ್ಕ ಪಾವತಿಸಬೇಕಾದ ಅನಿವಾರ್ಯತೆ ಎದುರಾಗಲಿದೆ ಎಂಬ ಆತಂಕ, ಕಳವಳವನ್ನು ವ್ಯಕ್ತಿಯೊಬ್ಬರು ವ್ಯಕ್ತಪಡಿಸಿದ್ದಾರೆ ಎಂಬುದನ್ನು ದ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ವಿವರಿಸಿದೆ.
ಕರ್ನಾಟಕದಲ್ಲಿ 2.15 ಕೋಟಿ ಹಳೆ ವಾಹನಗಳು; 3 ಲಕ್ಷದಷ್ಟು ವಾಹನಗಳಿಗೆ ಎಚ್‌ಎಸ್‌ಆರ್‌ಪಿ
ಕರ್ನಾಟಕದಲ್ಲಿ 2.30 ಲಕ್ಷ ವಾಹನಗಳಿಗೆ ಮಾತ್ರ ಎಚ್‌ಎಸ್‌ಆರ್‌ಪಿ ಅಳವಡಿಕೆಯಾಗಿದೆ. ರಾಜ್ಯದಲ್ಲಿ 1950 ರಿಂದಲೂ ಆಗಿರುವ ನೋಂದಣಿ ಪ್ರಕಾರ ರಾಜ್ಯದಲ್ಲಿ 2.15 ಕೋಟಿ ಹಳೇ ವಾಹನಗಳಿವೆ. 2019ರಿಂದ ಹಿಂದಿನ 15 ವರ್ಷದಲ್ಲಿ ನೋಂದಣಿಯಾಗಿರುವ ವಾಹನಗಳ ಸಂಖ್ಯೆಯನ್ನು ಪರಿಗಣಿಸಿದರೆ ಅಂದಾಜು 1.70 ಕೋಟಿ ವಾಹನಗಳಿವೆ. ಇದಕ್ಕೆ ಹೋಲಿಸಿದರೆ ಎಚ್‌ಎಸ್‌ಆರ್‌ಪಿ ಅಳವಡಿಸುವ ವಿಚಾರದಲ್ಲಿ ವಾಹನ ಮಾಲೀಕರಲ್ಲಿ ಜಾಗೃತಿ ಇಲ್ಲದೇ ಇರುವುದು ಕಂಡುಬಂದಿದೆ. ಆದ್ದರಿಂದ 3 ತಿಂಗಳ ಮಟ್ಟಿಗೆ ಅವಧಿ ವಿಸ್ತರಣೆ ಮಾಡಲಾಗುತ್ತಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಈ ಹಿಂದೆ ಫೆ.17ಕ್ಕೆ ಗಡುವನ್ನು ಮರುನಿಗದಿ ಮಾಡಿದಾಗ ಹೇಳಿದ್ದರು.