ಕನ್ನಡ ಸುದ್ದಿ  /  Karnataka  /  Bengaluru News Attack On Kannada Muddulakshmi Serial Actor Charith Balappa Regarding Garbage Dumping Mrt

Bengaluru News; ಮುದ್ದುಲಕ್ಷ್ಮಿ ಧಾರಾವಾಹಿ ನಟ ಚರಿತ್‌ ಬಾಳಪ್ಪ ಮೇಲೆ ಹಲ್ಲೆ; ಪ್ರತ್ಯೇಕ ಪ್ರಕರಣದಲ್ಲಿ ಕ್ಷುಲ್ಲಕ ಕಾರಣಕ್ಕೆಇಬ್ಬರ ಕೊಲೆ

Bengaluru News: ಖಾಲಿ ಸ್ಥಳದಲ್ಲಿ ಕಸ ಹಾಕುವ ವಿಚಾರಕ್ಕೆ ಸಂಬಂಧಿಸಿದ್ದಂತೆ ಮುದ್ದುಲಕ್ಷ್ಮಿ ಕನ್ನಡ ಧಾರಾವಾಹಿ ನಟ ಚರಿತ್‌ ಬಾಳಪ್ಪ ಮೇಲೆ ಹಲ್ಲೆ ನಡೆದಿದೆ. ಮತ್ತೊಂದು ಪ್ರಕರಣದಲ್ಲಿ ಶಿವ ಎಂಬ ರೌಡಿ ಹಾಗೂ ಕ್ಷುಲ್ಲಕ ವಿಚಾರಕ್ಕೆ ಯೋಗೀಶ್‌ ಎಂಬ ಯುವಕನನ್ನು ಕೊಲೆ ಮಾಡಲಾಗಿದ್ದು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ವರದಿ: ಮಾರುತಿ ಹೆಚ್‌, ಬೆಂಗಳೂರು)

ಮುದ್ದುಲಕ್ಷ್ಮಿ ಕನ್ನಡ ಧಾರಾವಾಹಿ ನಟಿ ಚರಿತ್‌ ಬಾಳಪ್ಪ ಮೇಲೆ ಹಲ್ಲೆ
ಮುದ್ದುಲಕ್ಷ್ಮಿ ಕನ್ನಡ ಧಾರಾವಾಹಿ ನಟಿ ಚರಿತ್‌ ಬಾಳಪ್ಪ ಮೇಲೆ ಹಲ್ಲೆ

Bengaluru News: ಖಾಲಿ ಜಾಗದಲ್ಲಿ ಕಸ ಹಾಕುತ್ತಿದ್ದ ವಿಷಯಕ್ಕೆ ಸಂಬಂಧಪಟ್ಟಂತೆ ನಡೆದ ಗಲಾಟೆಯಲ್ಲಿ ಮತ್ತೊಂದು ಗುಂಪು ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಕಿರುತೆರೆ ನಟ ಚರಿತ್ ಬಾಳಪ್ಪ ಪೊಲೀಸರಿಗೆ ದೂರು ನೀಡಿದ್ದಾರೆ. ಕಿರುತೆರೆ ನಟ ಚರಿತ್‌, ಬೆಂಗಳೂರಿನ ಅನ್ನಪೂರ್ಣೇಶ್ವರಿನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು ಪೊಲೀಸರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮುದ್ದುಲಕ್ಷ್ಮಿ ಧಾರಾವಾಹಿ ನಟ ಚರಿತ್‌ ಬಾಳಪ್ಪ

ಈ ಘಟನೆ ಫೆ.23ರಂದು ನಡೆದಿದ್ದು ಚರಿತ್ ಬಾಳಪ್ಪ ತಡವಾಗಿ ದೂರು ನೀಡಿದ್ದಾರೆ. ಠಾಣೆಯ ವ್ಯಾಪ್ತಿಯ ಡಿ ಗ್ರೂಪ್‌ ಬಡಾವಣೆಯಲ್ಲಿ ವಾಸಿಸುತ್ತಿರುವ ಚರಿತ್ ಬಾಳಪ್ಪ, ತಮ್ಮ ಮನೆಯ ಕಸವನ್ನು ಖಾಲಿ ಜಾಗದಲ್ಲಿ ಎಸೆದಿದ್ದರು. ಅದನ್ನು ಗಮನಿಸಿದ ಸ್ಥಳೀಯರೊಬ್ಬರು ಇಲ್ಲಿ ಕಸ ಎಸೆಯುವುದು ಸರಿಯಲ್ಲ, ಬಿಬಿಎಂಪಿ ವಾಹನಕ್ಕೆ ಕಸ ಹಾಕಬೇಕು ಎಂದು ತಾಕೀತು ಮಾಡಿದ್ದರು. ಬಳಿಕ, ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಇದೇ ಸಂದರ್ಭದಲ್ಲಿ ಚರಿತ್ ಮೇಲೆ ಕೆಲವರು ಹಲ್ಲೆ ಮಾಡಿದ್ದಾರೆ. ಹಲ್ಲೆ ಬಳಿಕ ಪ್ರಾಥಮಿಕ ಚಿಕಿತ್ಸೆ ಪಡೆದು ಚರಿತ್, ಚಿತ್ರೀಕರಣಕ್ಕೆಂದು ಹೈದರಾಬಾದ್‌ಗೆ ಹೋಗಿದ್ದರು. ಅಲ್ಲಿಂದ ಮರಳಿ ಬಂದ ನಂತರ ದೂರು ನೀಡಿದ್ದಾರೆ ಎಂದು ಪೊಲೀಸ್ ಮೂಲಗಳು ಹೇಳಿವೆ.

ಚರಿತ್ ಯಾವಾಗಲೂ ತಮ್ಮ ಮನೆಯ ಕಸವನ್ನು ಖಾಲಿ ಜಾಗದಲ್ಲಿ ಎಸೆಯುತ್ತಾರೆ. ಇವರ ಈ ವರ್ತನೆಯನ್ನು ವಿರೋಧಿಸಿ ಸ್ಥಳೀಯರು ಹಲವು ಬಾರಿ ಕಸ ಹಾಕದಂತೆ ಬುದ್ದಿ ಹೇಳಿದ್ದರು. ಆದರೂ ಚರಿತ್ ಬದಲಾಗಿರಲಿಲ್ಲ ಎಂಬುದು ತನಿಖೆಯಿಂದ ಗೊತ್ತಾಗಿದೆ. ಇದೇ ವಿಚಾರಕ್ಕೆ ಇದೀಗ ಅವರ ಮೇಲೆ ಹಲ್ಲೆ ಆಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಚರಿತ್ ಅವರು, ಲವ್‌ ಲವಿಕೆ ಹಾಗೂ ಮುದ್ದುಲಕ್ಷ್ಮಿ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸಿದ್ದಾರೆ.

ರೌಡಿ ಸೇರಿ ಇಬ್ಬರ ಕೊಲೆ

ಬೆಂಗಳೂರು ನಗರದಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ರೌಡಿ ಸೇರಿ ಇಬ್ಬರನ್ನು ಕೊಲೆ ಮಾಡಲಾಗಿದೆ. ಫ್ಲವರ್‌ ಗಾರ್ಡನ್‌ನ ರೌಡಿ ಶಿವ ಅಲಿಯಾಸ್ ಶರತ್ (35) ಹಾಗೂ ಶ್ರೀನಗರದ ಯೋಗೇಶ್ (23) ಕೊಲೆಯಾದ ಯುವಕರು. ಕಾಟನ್‌ಪೇಟೆ ಪೊಲೀಸ್ ಠಾಣೆ ಮತ್ತು ಬ್ಯಾಟರಾಯನಪುರ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ರೌಡಿ ಶಿವ ಹಾಗೂ ಎದುರಾಳಿ ತಂಡದವರ ನಡುವೆ ದ್ವೇಷವಿತ್ತು. ಶಿವ ಸ್ಥಳೀಯ ವ್ಯಾಪಾರಿಗಳನ್ನು ಬೆದರಿಸುತ್ತಿದ್ದ ಎನ್ನುವುದು ಗೊತ್ತಾಗಿತ್ತು. ಇದೇ ಕಾರಣಕ್ಕೆ ಎದುರಾಳಿ ತಂಡದವರು ಶಿವನನ್ನು ಮಾರಕಾಸ್ತ್ರಗಳಿಂದ ಹೊಡೆದು ಕೊಂದಿದ್ದಾರೆ. ರೌಡಿ ಶಿವ, ತಡರಾತ್ರಿ ಆಂಜನಪ್ಪ ಗಾರ್ಡನ್‌ಗೆ ಹೋಗಿದ್ದ. ಈ ಸಂದರ್ಭವನ್ನು ಬಳಸಿಕೊಂಡ ದುಷ್ಕರ್ಮಿಗಳ ತಂಡ, ಶಿವನ ಮೇಲೆ ಹಠಾತ್ ದಾಳಿ ನಡೆಸಿ ಕೊಲೆ ಮಾಡಿ ಪರಾರಿಯಾಗಿದೆ. ಕೊಲೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ. ಸ್ಥಳೀಯ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಡ್ಯಾನ್ಸ್‌ ಮಾಡುವ ವಿಚಾರಕ್ಕೆ ವ್ಯಕ್ತಿಯ ಕೊಲೆ: ನೃತ್ಯ ಮಾಡುವ ಸಂದರ್ಭದಲ್ಲಿ ಮೈ ತಾಕಿದ್ದಕ್ಕೆ ಆರಂಭವಾದ ಗಲಾಟೆ ಯುವಕನೊಬ್ಬನ ಹತ್ಯೆಯಲ್ಲಿ ಅಂತ್ಯಗೊಂಡ ಪ್ರಕರಣ ಬೆಳಕಿಗೆ ಬಂದಿದೆ. ಬೈಕ್ ರಿಪೇರಿ ಕೆಲಸ ಮಾಡುತ್ತಿದ್ದ ಯೋಗೇಶ್, ಗಿರಿ ನಗರ ಬಳಿಯ ದೇವಸ್ಥಾನವೊಂದಕ್ಕೆ ಶಿವರಾತ್ರಿ ಪೂಜೆಗೆ ಹೋಗಿದ್ದ. ಅಲ್ಲಿ ಸ್ಥಳೀಯ ಯುವಕರು ನೃತ್ಯ ಮಾಡುತ್ತಿದ್ದರು. ಯೋಗೇಶ್ ಸಹ ನೃತ್ಯ ಮಾಡಲು ಆರಂಭಿಸಿದ್ದ. ಇದೇ ಸಂದರ್ಭದಲ್ಲಿ ಆರೋಪಿಯೊಬ್ಬನಿಗೆ ಯೋಗೇಶ್ ಮೈ ತಾಗಿತ್ತು. ಈ ವಿಷಯಕ್ಕೆ ಇಬ್ಬರ ನಡುವೆ ಜಗಳ ಆರಂಭವಾಗಿತ್ತು.

ಯೋಗೇಶ್ ಹಾಗೂ ಆರೋಪಿಗಳು ಪರಸ್ಪರ ಕೈ ಕೈ ಮಿಲಾಯಿಸಿದ್ದರು. ಸ್ಥಳೀಯರು ಜಗಳ ಬಿಡಿಸಿ ಎಲ್ಲರನ್ನೂ ಅಲ್ಲಿಂದ ಕಳಿಸಿದ್ದರು. ಯೋಗೇಶ್‌ ತನ್ನ ಬೈಕ್‌ನಲ್ಲಿ ಮನೆಯತ್ತ ಹೊರಟಿದ್ದ ಸಂದರ್ಭದಲ್ಲಿ ಆತನನ್ನು ಹಿಂಬಾಲಿಸಿದ ಆರೋಪಿಗಳು, ಮಾರ್ಗ ಮಧ್ಯೆ ಯೋಗೇಶ್ ಬೈಕ್‌ ಅಡ್ಡಗಟ್ಟಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ನೃತ್ಯ ಮಾಡುವಾಗ ನಡೆದ ಗಲಾಟೆಯಿಂದ ಕೊಲೆ ನಡೆದಿದೆ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಕೊಲೆ ಪ್ರಕರಣ ದಾಖಲಿಸಿಕೊಂಡು, ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವರದಿ: ಮಾರುತಿ ಹೆಚ್‌, ಬೆಂಗಳೂರು

IPL_Entry_Point