ಬೆಂಗಳೂರು: ಕೆಲಸ ಹುಡುಕುತ್ತಿದ್ದ ಚಿಕ್ಕಮಗಳೂರು ಯುವತಿ ಮೇಲೆ ಲೈಂಗಿಕ ದೌರ್ಜನ್ಯ; ಆಟೋ ಚಾಲಕನ ಬಂಧನ
ಬೆಂಗಳೂರು ಅಪರಾಧ ಸುದ್ದಿ: ಕೊಡಿಗೇಹಳ್ಳಿಯಲ್ಲಿ ಅಸಲಿ ಚಿನ್ನಕ್ಕೆ ಬದಲಾಗಿ ನಕಲಿ ಚಿನ್ನ ಇಟ್ಟ ಕೆಲಸದಾಕೆಯನ್ನು ಪೊಲೀಸರು ಬಂಧಿಸಿ ಕೇಸ್ ದಾಖಲಿಸಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಕೆಲಸ ಹುಡುಕುತ್ತಿದ್ದ ಚಿಕ್ಕಮಗಳೂರು ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಆಟೋ ಚಾಲಕನ ಬಂಧನವಾಗಿದೆ. (ವರದಿ- ಎಚ್. ಮಾರುತಿ, ಬೆಂಗಳೂರು)
ಬೆಂಗಳೂರು: ಮನೆ ಕೆಲಸ ಕೊಟ್ಟಿದ್ದ ಮಾಲೀಕರ ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರನ್ನು ಬೆಂಗಳೂರಿನ ಕಾಡುಗೋಡಿ ಠಾಣೆ ಪೊಲೀಸರು ಬಂಧಿಸಿ ಆಕೆಯಿಂದ ರೂಪಾಯಿ 12 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿ ಕೊಂಡಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಈ ಮಹಿಳೆ, ಕೊಡಿಗೇಹಳ್ಳಿಯ ಅಪಾರ್ಟ್‌ಮೆಂಟ್ ವೊಂದರ ಮನೆಯಲ್ಲಿ ಮನೆ ಕೆಲಸ ಮಾಡಿಕೊಂಡಿದ್ದರು. ಈಕೆ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಅಸಲಿ ಚಿನ್ನಾಭರಣಗಳನ್ನು ಕಳವು ಮಾಡಿ ನಂತರ ಅದೇ ಸ್ಥಳದಲ್ಲಿ ನಕಲಿ ಚಿನ್ನಾಭರಣ ಇಡುತ್ತಿದ್ದರು. ಮನೆಯ ಯಾರೊಬ್ಬರಿಗೂ ಅನುಮಾನ ಬರದಂತೆ ಎಂಟು ತಿಂಗಳಿನಿಂದ ಇದೆ ಕೆಲಸ ಮಾಡಿಕೊಂಡು ಬಂದಿದ್ದರು. ಮನೆಯವರು ನಕಲಿ ಆಭರಣಗಳನ್ನೇ ಅಸಲಿ ಎಂದು ನಂಬಿದ್ದರು.
ಆದರೆ ಇತ್ತೀಚೆಗೆ ಮನೆ ಮಾಲೀಕರು ಸಂಬಂಧಿಯೊಬ್ಬರ ಮನೆಗೆ ಕಾರ್ಯಕ್ರಮಕ್ಕೆ ಹೊರಟಿದ್ದರು. ಈ ವೇಳೆ ಆಭರಣ ಧರಿಸುವಾಗ ವಿನ್ಯಾಸದಲ್ಲಿ ಬದಲಾವಣೆಯಾಗಿರುವುದನ್ನು ಗಮನಿಸಿದ್ದರು. ಅನುಮಾನ ಬಂದು ಚಿನ್ನಾಭರಣ ಮಳಿಗೆಯೊಂದಕ್ಕೆ ತೆರಳಿ ಪರಿಶೀಲಿಸಿದ್ದರು. ಆಗ ಅದು ನಕಲಿ ಚಿನ್ನವೆಂಬುದು ತಿಳಿದು ಬಂದಿತ್ತು. ಕೆಲಸದ ಮಹಿಳೆ ಮೇಲೇ ಅನುಮಾನ ವ್ಯಕ್ತಪಡಿಸಿ ಅವರು ದೂರು ನೀಡಿದ್ದರು.
ಕೆಲಸ ಬಿಟ್ಟು ಊರಿನಲ್ಲಿ ನೆಲೆಸಿದ್ದ ಮಹಿಳೆಯನ್ನು ಬಂಧಿಸಿ ಬೆಂಗಳೂರು ನಗರಕ್ಕೆ ಕರೆತರಲಾಗಿದೆ ಮತ್ತು ಆಕೆಯಿಂದ 12 ಲಕ್ಷ ಮೌಲ್ಯದ 150 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆಲಸ ಹುಡುಕುತ್ತಿದ್ದ ಯುವತಿ ಮೇಲೆ ಲೈಂಗಿಕ ದೌರ್ಜನ್ಯ; ಆಟೋ ಚಾಲಕನ ಬಂಧನ
ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದ ಯುವತಿಯೊಬ್ಬರನ್ನು ಮನೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ ಆಟೊ ಚಾಲಕನ ಮೇಲೆ ಯುವಕನೊಬ್ಬ ಮಚ್ಚಿನಿಂದ ಹಲ್ಲೆ ನಡೆಸಿದ್ದು ಈ ಸಂಬಂಧ ಕೋಣನಕುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಘಟನೆ ಸಂಬಂಧ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಟೊ ಚಾಲಕನ ಮೇಲೆ ಹಲ್ಲೆ ಮಾಡಿದ ಆರೋಪದಡಿಯಲ್ಲಿ ಯುವಕನನ್ನು ಬಂಧಿಸಲಾಗಿದ್ದರೆ, ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಆಟೊ ಚಾಲಕನನ್ನು ಬಂಧಿಸಲಾಗಿದೆ.
ಆಟೋ ಚಾಲಕ ಮತ್ತು ಯುವಕನ ಬಂಧನ- ಏನಿದು ಪ್ರಕರಣ
ಚಿಕ್ಕಮಗಳೂರು ಮೂಲದ ಯುವತಿ ಹಾಗೂ ಕೇರಳದ ಯುವಕ ಪರಸ್ಪರ ಪರಿಚಯಸ್ಥರಾಗಿದ್ದು ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದರು. ಜಯನಗರದಲ್ಲಿದ್ದ ಸ್ನೇಹಿತರೊಬ್ಬರನ್ನು ಭೇಟಿಯಾಗಲು ಮೆಟ್ರೊ ನಿಲ್ದಾಣ ಬಳಿ ರಾತ್ರಿ ಕಾಯುತ್ತಿದ್ದರು. ಆದರೆ, ಸ್ನೇಹಿತ ಸಿಕ್ಕಿರಲಿಲ್ಲ.
ರೈಲ್ವೆ ನಿಲ್ದಾಣಕ್ಕೆ ಮರಳಲು ಆಟೋ ಕಾಯುತ್ತಿದ್ದರು. ಚಾಲಕನೊಬ್ಬ ಇವರನ್ನು ಹತ್ತಿಸಿಕೊಂಡು ಪರಿಚಯ ಮಾಡಿಕೊಂಡು ಕೆಲಸ ಹುಡುಕಿಕೊಂಡು ಬೆಂಗಳೂರಿನಲ್ಲಿಯೇ ಇರುವುದಾದರೆ ತನ್ನ ಮನೆಯಲ್ಲೇ ಬಾಡಿಗೆಗೆ ಇರುವಂತೆ ತಿಳಿಸಿದ್ದ. ಒಪ್ಪಿಕೊಂಡ ಯುವಕ ಯುವತಿ, ಚಾಲಕನ ಜೊತೆ ಹೊರಟಿದ್ದರು.
ಪಿಳ್ಳೆಗಾನಹಳ್ಳಿಯಲ್ಲಿರುವ ತನ್ನ ಮನೆಗೆ ಹೋಗುವುದಕ್ಕೂ ಮುನ್ನ ಆಟೋ ಚಾಲಕ ಮಾರ್ಗ ಮಧ್ಯೆ ಮದ್ಯ ಖರೀದಿಸಿದ್ದ. ಮನೆಗೆ ಹೋಗುತ್ತಿದ್ದಂತೆ ಚಾಲಕ ಕುಡಿಯಲು ಆರಂಭಿಸಿ ಯುವಕನಿಗೂ ಕುಡಿಸಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ತಡರಾತ್ರಿಯಾಗುತ್ತಿದ್ದಂತೆ ಯುವತಿಯನ್ನು ಸಹಕರಿಸುವಂತೆ ಒತ್ತಡ ಹೇರಿದ್ದ. ಅದಕ್ಕೆ ಯುವತಿ ಒಪಿರಲಿಲ್ಲ. ಚಾಲಕ ಮಚ್ಚು ತೋರಿಸಿ ಕೊಲೆ ಮಾಡುವುದಾಗಿ ಯುವತಿಯನ್ನು ಬೆದರಿಸಿದ್ದ. ಆಟೋ ಚಾಲಕನ ವರ್ತನೆಯಿಂದ ಬೇಸತ್ತ ಯುವಕ ಅದೇ ಮಚ್ಚಿನಿಂದ ಚಾಲಕನ ತಲೆಗೆ ಹೊಡೆದಿದ್ದ.
ನಂತರ ಯುವಕ ಯುವತಿ ತಮ್ಮ ಊರಿಗೆ ಮರಳಿದ್ದರು. ಇತ್ತ ಬೆಂಗಳೂರಿನಲ್ಲಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಚಾಲಕ, ಪ್ರಯಾಣಿಕರೊಬ್ಬರು ಹಲ್ಲೆ ಮಾಡಿದ್ದಾರೆ ಎಂದು ಸುಳ್ಳು ದೂರು ನೀಡಿದ್ದ. ತನಿಖೆ ಕೈಗೊಂಡ ಪೊಲೀಸರು ಯುವಕ ಯುವತಿಯನ್ನು ಪತ್ತೆ ಮಾಡಿದ್ದರು. ಹೇಳಿಕೆ ನೀಡಿದ ಯುವತಿ ಚಾಲಕನ ಕೃತ್ಯ ಕುರಿತೂ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪರಸ್ಪರ ದೂರು ದಾಖಲಾಗಿದ್ದು ಇಬ್ಬರನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
(ವರದಿ- ಎಚ್. ಮಾರುತಿ, ಬೆಂಗಳೂರು)
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.