ಬೆಂಗಳೂರು 2013ರ ಎಟಿಎಂ ದಾಳಿ; ಆರೋಪಿ ಮಧುಕರ ರೆಡ್ಡಿ ಪೊಲೀಸ್ ಬಲೆಗೆ ಬಿದ್ದುದು, ಆಂಧ್ರದ ಕೊಲೆಯ ಕಾರಣಕ್ಕೆ, ಕೇಸ್‌ನ ಕುತೂಹಲಕಾರಿ ವಿವರ
ಬೆಂಗಳೂರು 2013ರ ಎಟಿಎಂ ದಾಳಿ ನಡೆದರೂ, ಆರೋಪಿ ಪತ್ತೆ ಸಾಧ್ಯವಾಗದೇ ಪೊಲೀಸರು ಕೇಸ್ ಕ್ಲೋಸ್ ಮಾಡಿದ್ದರು. ಮೂರು ವರ್ಷದ ನಂತರ ಆಂಧ್ರದ ಕೊಲೆಯ ಕಾರಣಕ್ಕೆ ಪೊಲೀಸ್ ಬಲೆಗೆ ಬಿದ್ದ ಆರೋಪಿ ಮಧುಕರ ರೆಡ್ಡಿ, ವಿಚಾರಣೆಯ ವೇಳೆ ಬೆಂಗಳೂರು ಎಟಿಎಂ ದಾಳಿಯ ವಿವರ ನೀಡಿದ್ದ. ಈ ಕೇಸ್‌ನ ಕುತೂಹಲಕಾರಿ ವಿವರ ಹೀಗಿದೆ ನೋಡಿ.

ಬೆಂಗಳೂರು ಎಟಿಎಂ ಕಿಯೋಸ್ಕ್ ನೋಡಿದಾಗ ಕೆಲವರಿಗಾದರೂ 2013ರಲ್ಲಿ ಮಹಿಳೆಯ ಮೇಲೆ ನಡೆದ ಮಾರಣಾಂತಿಕ ಹಲ್ಲೆ ನೆನಪಾಗದೇ ಇರದು. ಈ ಪ್ರಕರಣದ ಆರೋಪಿಯನ್ನು ಬಂಧಿಸಲು ಪೊಲೀಸರಿಗೆ ಮೂರು ವರ್ಷ ಬೇಕಾಯಿತು. ಎಟಿಎಂ ಬೂತ್ ಒಳಗೆ ಮಾರಣಾಂತಿಕ ಹಲ್ಲೆ ಕಾರಣ ತಲೆಗೆ ತೀವ್ರ ಪೆಟ್ಟಾದ ಕಾರಣ ತಾತ್ಕಾಲಿಕ ಪಾರ್ಶ್ವವಾಯುವಿಗೆ ತೊಂದರೆಗೀಡಾಗಿದ್ದ ಮಹಿಳೆ ಶಾರೀರಿಕವಾಗಿ ಚೇತರಿಸಿಕೊಂಡಿದ್ದರು.
ಆಂಧಪ್ರದೇಶದಲ್ಲಿ 2013ರಲ್ಲಿ ನಡೆದ ಕೊಲೆ ಪ್ರಕರಣ ಸಂಬಂಧ ಬಂಧಿತನಾಗುವ ತನಕ ಆತನೇ ಬೆಂಗಳೂರು ಎಟಿಎಂ ದಾಳಿಯ ಆರೋಪಿ ಎಂದು ಖಚಿತವಾಗಿರಲಿಲ್ಲ. ಪೊಲೀಸರು ಆತನನ್ನು ಬಂಧಿಸುವುದಕ್ಕಾಗಿ ನಡೆಸಿದ ಪ್ರಯತ್ನಗಳು ಯಾವುದೂ ಸಫಲವಾಗಿರಲಿಲ್ಲ. ಈ ಕೇಸ್ ನಿರ್ಣಾಯಕ ಘಟ್ಟಕ್ಕೆ ಬಂದದ್ದು 2017ರಲ್ಲಿ ಆರೋಪಿ ಬಂಧನವಾದ ಬಳಿಕ. ಆಂಧ್ರ ಪ್ರದೇಶ ಪೊಲೀಸರ ವಿಚಾರಣೆಯಲ್ಲಿ ಬೆಂಗಳೂರು ಎಟಿಎಂ ದಾಳಿಯ ವಿಚಾರ ಬಾಯ್ಬಿಟ್ಟ ಕಾರಣ.
ಬೆಂಗಳೂರಿನ 2013ರ ಎಟಿಎಂ ದಾಳಿಯ ತನಿಖೆ ಸಾಗಿದ ಹಾದಿಯ ಅವಲೋಕನವನ್ನು ದ ಇಂಡಿಯನ್ ಎಕ್ಸ್‌ಪ್ರೆಸ್ ಒದಗಿಸಿದೆ. ಇದರ ಸಂಕ್ಷಿಪ್ತ ಚಿತ್ರಣವನ್ನು ಇಲ್ಲಿ ಒದಗಿಸಲಾಗಿದೆ.
ಬೆಂಗಳೂರು ಎಟಿಎಂ ಬೂತ್ ಒಳಗೆ 2013ರಲ್ಲಿ ಮಹಿಳೆ ಮೇಲೆ ನಡೆದ ದಾಳಿ
ಪೊಲೀಸರು ಕೋರ್ಟ್‌ಗೆ ಸಲ್ಲಿಸಿರುವ ಆರೋಪ ಪಟ್ಟಿ ಪ್ರಕಾರ ಘಟನಾವಳಿಯ ವಿವರ ಹೀಗಿದೆ. ಅಂದು 2013ರ ನವೆಂಬರ್ 19. ಬೆಂಗಳೂರು ಜೆಸಿ ರೋಡ್‌ನಲ್ಲಿ ಎಂದಿನಂತೆ ಜ್ಯೋತಿ ಉದಯ್ (47) ಎಂಬ ಬ್ಯಾಂಕ್ ಉದ್ಯೋಗಿ ನಡೆದುಕೊಂಡು ಹೋಗುತ್ತಿದ್ದರು. ಹಣ ವಿತ್‌ಡ್ರಾ ಮಾಡಿಕೊಳ್ಳಲು ಅಲ್ಲೇ ಇದ್ದ ಕಾರ್ಪೊರೇಶನ್ ಬ್ಯಾಂಕ್ ಎಟಿಎಂ ಬೂತ್‌ಗೆ ಹೋದರು. ಅದೇ ಸಮಯಕ್ಕೆ ಅವರನ್ನು ಹಿಂಬಾಲಿಸಿ ಬಂದ ವ್ಯಕ್ತಿಯೊಬ್ಬ ಎಟಿಎಂನ ಶಟರ್ ಮುಚ್ಚಿದ. ತನ್ನ ಬ್ಯಾಗ್‌ನಿಂದ ಮಚ್ಚು ಹೊರತೆಗೆದು ಕೊಲೆ ಬೆದರಿಕೆ ಹಾಕಿ, ಎಟಿಎಂನಿಂದ ಹಣ ವಿತ್‌ಡ್ರಾ ಮಾಡುವಂತೆ ಸೂಚಿಸಿದ್ದ. ಆದರೆ ಅದನ್ನು ಒಪ್ಪದೇ ಇದ್ದಾಗ, ಆಕೆಯ ತಲೆಗೆ ಹಲ್ಲೆ ನಡೆಸಿ ನೋಕಿಯಾ ಮೊಬೈಲ್ ಫೋನ್, ಬ್ಯಾಗ್ ಮತ್ತು 200 ರೂಪಾಯಿ ಕಿತ್ತುಕೊಂಡು ಪರಾರಿಯಾಗಿದ್ದ.
ಶಟರ್ ಮುಚ್ಚಿದ್ದು, ಎಟಿಎಂ ಒಳಗಿನಿಂದ ರಕ್ತ ಹೊರಗೆ ಹರಿದ ಕಾರಣ ದಾರಿ ಹೋಕರು ಶಟರ್ ಮೇಲೆತ್ತಿ ನೋಡಿದಾಗ ಮಹಿಳೆಯೊಬ್ಬರು ರಕ್ತದ ಮಡುವಿನಲ್ಲಿ ಬಿದ್ದಿದ್ದು ಕಂಡುಬಂದಿತ್ತು. ಕೂಡಲೇ ಪೊಲೀಸರಿಗೆ ಮಾಹಿತಿ ತಿಳಿಸಿದ್ದು, ಪ್ರಜ್ಞಾಹೀನರಾಗಿ ಬಿದ್ದಿದ್ದ ಆಕೆಯನ್ನು ನಿಮ್ಹಾನ್ಸ್‌ಗೆ ಕರೆದೊಯ್ದಿದ್ದರು. ಅಲ್ಲಿಂದ ಕೆಂಗೇರಿಯ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗೆ ದಾಖಲಿಸಿದ್ದರು.
2013ರ ಎಟಿಎಂ ದಾಳಿಯ ಸಿಸಿಟಿವಿ ದೃಶ್ಯವಾವಳಿ ವೈರಲ್
ಬೆಂಗಳೂರು ಜೆಸಿ ರೋಡ್‌ನ ಕಾರ್ಪೊರೇಶನ್ ಬ್ಯಾಂಕ್ ಎಟಿಎಂನಲ್ಲಿ 2013ರಲ್ಲಿ ನಡೆದ ಈ ದಾಳಿಯ ದೃಶ್ಯ ಅಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ವಿಡಿಯೋ ತುಣುಕು ವೈರಲ್ ಆಗಿತ್ತು. ಟಿವಿ ಚಾನೆಲ್, ಫೇಸ್‌ಬುಕ್ ಮುಂತಾದೆಡೆ ಈ ವಿಡಿಯೋ ವೈರಲ್ ಆಗಿ ಆರೋಪಿಯ ಮುಖಚರ್ಯೆ, ಗುರುತು ಪತ್ತೆಗೆ ಒತ್ತಡ ಹೆಚ್ಚಾಗಿತ್ತು.
ಪೊಲೀಸರಿಗೆ ಇದು ಬಹಳ ಸವಾಲಿನ ಕೆಲಸವಾಗಿತ್ತು. ಈಗಾಗಲೇ ಸಿಸಿಟಿವಿ ದೃಶ್ಯ ಬಹಿರಂಗವಾಗಿರುವ ಕಾರಣ, ಆರೋಪಿಯ ಬಂಧನ ಸಾಧ್ಯವಾಗದೇ ಇದ್ದಾಗ ಅಸಾಮರ್ಥ್ಯದ ಕುರಿತಾದ ವರದಿಗಳು ಪೊಲೀಸರ ಮೇಲಿನ ಒತ್ತಡವನ್ನು ಹೆಚ್ಚಿಸಿದ್ದವು. ಇದು ಆ ಸಮಯದಲ್ಲಿ ಪೊಲೀಸ್ ಆಯುಕ್ತರಾಗಿದ್ದ ರಾಘವೇಂದ್ರ ಔರಾದ್ಕರ್ ಅವರನ್ನು ಚಿಂತೆಗೀಡುಮಾಡಿತ್ತು. ಈ ವಿಚಾರವನ್ನು ಅಂದು ಈ ಪ್ರಕರಣದ ತನಿಖೆಗಾಗಿ ರೂಪಿಸಿದ್ದ ಎರಡು ತಂಡಗಳ ಪೈಕಿ ಒಂದರ ಸದಸ್ಯರಾಗಿದ್ದವರು ತಿಳಿಸಿದ್ದಾಗಿ ದ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ವಿವರಿಸಿದೆ.
ತನಿಖೆಯ ಆರಂಭಿಕ ಹಂತದಲ್ಲಿ ಬೆಂಗಳೂರಿನ ಹೊರ ವರ್ತುಲ ರಸ್ತೆಯಲ್ಲೊಇರುವ ಎಟಿಎಂ ಕಿಯೋಸ್ಕ್‌ನ ಇಬ್ಬರು ಭದ್ರತಾ ಸಿಬ್ಬಂದಿ ಹತ್ಯೆ ಪ್ರಕರಣಕ್ಕೆ ನಂಟು ಕಲ್ಪಿಸಲಾಯಿತು. ಆದಾಗ್ಯೂ ಬಳಿಕ ಅದಕ್ಕೂ ಈ ಪ್ರಕರಣಕ್ಕೂ ಸಂಬಂಧ ಇಲ್ಲ ಎಂಬುದು ಗೊತ್ತಾಯಿತು. ಆದರೆ, ಈ ದಾಳಿ ಪ್ರಕರಣದ ಕಾರಣ ಎಟಿಎಂ ಬೂತ್‌ಗಳಲ್ಲಿ ಭದ್ರತೆಯ ವಿಚಾರ ಮುನ್ನೆಲೆಗೆ ಬಂತು. ಭದ್ರತೆ ಹೆಚ್ಚಿಸುವ ಕೆಲಸ ನಡೆಯಿತು.
ಬೆಂಗಳೂರು ಪೊಲೀಸರು ಏನು ಮಾಡಿದರು
ತೀವ್ರ ತಲೆನೋವಾಗಿ ಕಾಡಿದ್ದ 2013ರ ಎಟಿಎಂ ದಾಳಿಯ ಆರೋಪಿಯನ್ನು ಗುರುತಿಸಿ ಬಂಧಿಸುವುದಕ್ಕೆ ಹಲವು ಪ್ರಯತ್ನಗಳು ಬೆಂಗಳೂರು ಪೊಲೀಸರು ಮಾಡಿದರು. ಶಂಕಿತನ ಚಿತ್ರಗಳನ್ನು ಬಿಡಿಸಿ ಶೇರ್ ಮಾಡಿದರು. ಆತನ ತಲೆಗೆ 1 ಲಕ್ಷ ರೂಪಾಯಿ ಬಹುಮಾನ ಘೋಷಿಸಿದರು. ಇವಾವುದೂ ಪ್ರಯೋಜನಕ್ಕೆ ಬರಲಿಲ್ಲ. ಮತ್ತೆ 20 ದಿನಗಳ ಬಳಿಕ ಬಹುಮಾನ ಮೊತ್ತವನ್ನು 5 ಲಕ್ಷ ರೂಪಾಯಿಗೆ ಏರಿಸಿದರು. ನೆರೆ ರಾಜ್ಯಗಳಲ್ಲೂ ವಿಶೇಷವಾಗಿ ಆಂಧ್ರ ಪ್ರದೇಶ ಮತ್ತು ತಮಿಳುನಾಡುಗಳಲ್ಲಿ ಆರೋಪಿಯ ಫೋಟೋ ಹಂಚಿದರು. ಆದರೆ ಫಲ ಮಾತ್ರ ಸಿಕ್ಕಿರಲಿಲ್ಲ.
ಮಹಿಳೆ ಮೇಲೆ ಹಲ್ಲೆ ನಡೆದು ಒಂದು ವರ್ಷವಾದರೂ ಆರೋಪಿಯ ಬಗ್ಗೆ ಯಾವುದೇ ಸುಳಿವು ಪೊಲೀಸರಿಗೆ ಸಿಕ್ಕಿರಲಿಲ್ಲ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜ್ಯೋತಿ ನಿಧಾನವಾಗಿ ಚೇತರಿಸಿಕೊಳ್ಳತೊಡಗಿದ್ದರು. ಸಾರ್ವಜನಿಕರ ನೆನಪಿನಿಂದಲೂ ಪ್ರಕರಣ ನಿಧಾನವಾಗಿ ಮರೆಯಾಗತೊಡಗಿತ್ತು. ಆದಾಗ್ಯೂ, ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದ ವರದಿಗಳು ಪೊಲೀಸರ ನಿದ್ದೆಗೆಡಿಸಿದ್ದವು. ಹೀಗಾಗಿ ತನಿಖೆಗೆ 300 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದೂ ಪೊಲೀಸ್ ಉನ್ನತಾಧಿಕಾರಿ ಹೇಳಿದ್ದೂ ಇದೆ. ಕೊನೆಗೆ ಕೇಸ್ ಕ್ಲೋಸ್ ಮಾಡಿದ ವರದಿಯನ್ನು ಕೋರ್ಟ್‌ಗೆ ಸಲ್ಲಿಸಿದರು ಎಂದು ವರದಿ ಹೇಳಿದೆ.
ಆಂಧ್ರದ ಕೊಲೆ ಆರೋಪಿಯ ಬಂಧನಕ್ಕೆ ಬಲೆ ಬೀಸಿದ ಮದನಪಲ್ಲಿ ಪೊಲೀಸರು
ಬೆಂಗಳೂರು ಎಟಿಎಂ ದಾಳಿ 2013ರ ನವೆಂಬರ್ 19 ಕ್ಕೆ ನಡೆದಿತ್ತು. ಇದಕ್ಕೂ 9 ದಿನ ಮೊದಲು ಅಂದರೆ 2013ರ ನವೆಂಬರ್ 10ರಂದು ಕೊಲೆ ನಡೆದಿತ್ತು. ಅದರ ಆರೋಪಿಯ ಬಂಧನಕ್ಕೆ ಮದನಪಲ್ಲಿ ಪೊಲೀಸರು ಬಲೆ ಬೀಸಿದ್ದರು. ಆರೋಪಿಯ ಹೆಸರು ಮಧುಕರ ರೆಡ್ಡಿ (35). ಊರು ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆ ತಂಬಳಪಲ್ಲೆ. ಬಾಂಬ್ ದಾಳಿ ಪ್ರಕರಣ (2005ರಲ್ಲಿ ಸ್ಥಳೀಯ ಸಮಸ್ಯೆಗೆ ಸಂಬಂಧಿಸಿ ಗ್ರಾಮ ಮುಖ್ಯಸ್ಥನ ಮೇಲೆ ಬಾಂಬ್ ದಾಳಿ ನಡೆಸಿದ್ದ ಪ್ರಕರಣ) ದಲ್ಲಿ ಜೀವಾವಧಿ ಶಿಕ್ಷೆ ಗುರಿಯಾಗಿದ್ದ ಮಧುಕರ ರೆಡ್ಡಿ 2011ರಲ್ಲಿ ಕಡಪಾ ಸೆಂಟ್ರಲ್ ಜೈಲಿನಿಂದ ತಪ್ಪಿಸಿಕೊಂಡಿದ್ದ. ಅಲ್ಲಿಂದ ಹೊರಬಂದು ದಕ್ಷಿಣ ಭಾರತದ ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ಕೆಲಸ ಮಾಡಿ ಬದುಕು ಸಾಗಿಸುತ್ತಿದ್ದ. ಆಗ ಒಂದಿಲ್ಲೊಂದು ಅಪರಾಧ ಕೃತ್ಯಗಳಲ್ಲಿ ಭಾಗವಹಿಸಿದ್ದ.
ಮಧುಕರ ರೆಡ್ಡಿ ಮದನಪಲ್ಲಿಯಲ್ಲಿರುವ ಅಜ್ಜಿಯ ಮನೆಗೆ ಬರುತ್ತಾನೆಂಬ ಖಚಿತ ಮಾಹಿತಿ ಆಧರಿಸಿ 2017ರ ಜನವರಿ 31ರಂದು ಮನದಪಲ್ಲಿ ಪೊಲೀಸರು ಆತನನ್ನು ಬಂಧಿಸಲು ಯೋಜನೆ ರೂಪಿಸಿಕೊಂಡಿದ್ದರು. ಅದರಂತೆ ಅಲ್ಲೇ ಆತನನ್ನು ಬಂಧಿಸಿದ ಪೊಲೀಸರು ವಿಚಾರಣೆಗೆ ಒಳಪಡಿಸಿದರು. ಆ ವಿಚಾರಣೆ ವೇಳೆ ಆತ ಅಕಸ್ಮಾತ್ ಆಗಿ 2013ರ ನವೆಂಬರ್ 19ರಂದು ಬೆಂಗಳೂರಿನಲ್ಲಿ ನಡೆಸಿದ ಎಟಿಎಂ ದಾಳಿಯ ವಿಚಾರ ಬಾಯ್ಬಿಟ್ಟಿದ್ದಾನೆ.
ಇದಾಗಿ, ಬೆಂಗಳೂರು ಪೊಲೀಸರಿಗೆ ಮಧುಕರ ರೆಡ್ಡಿ ಬಂಧನ ಗೊತ್ತಾಗಿ, ಎಟಿಎಂ ದಾಳಿ ಕೇಸ್ ಮೇಲೆ ಗಮನ ಕೇಂದ್ರೀಕರಿಸಿದರು. ಸಿಸಿಟಿವಿ ವಿಡಿಯೋ ಚಿತ್ರಗಳು ಅವನ ಮುಖ ಮತ್ತು ಅವರು ವಿವರಿಸಿದ ಘಟನೆಗಳ ಅನುಕ್ರಮಕ್ಕೆ ಹೊಂದಿಕೆಯಾಗಿರುವುದನ್ನು ದೃಢೀಕರಿಸಿದರು. ನಂತರ ಚಿತ್ತೂರು ಪೊಲೀಸ್ ವರಿಷ್ಠಾಧಿಕಾರಿ ಜಿ ಶ್ರೀನಿವಾಸ್, “ಹಣದಿಂದ ಹೊರಗುಳಿದಿದ್ದರು ಮತ್ತು ದಾಳಿಗೆ ಎರಡು ದಿನಗಳ ಮೊದಲು ಹಸಿದಿದ್ದರು ಎಂಬುದು ಅವರ ಹೇಳಿಕೆಯಾಗಿದೆ. ಹಣಕ್ಕಾಗಿ ಮಹಿಳೆ (ಜ್ಯೋತಿ) ಮೇಲೆ ಹಲ್ಲೆ ನಡೆಸಿದ್ದ ಎಂಬುದನ್ನು ಪತ್ರಿಕಾಗೋಷ್ಠಿಯಲ್ಲಿ ಬಹಿರಂಗಗೊಳಿಸಿದ್ದರು.
ಬೆಂಗಳೂರು ಎಟಿಎಂ ದಾಳಿ ಬಳಿಕ ಮಧುಕರ ರೆಡ್ಡಿ ತಲೆ ಬೋಳಿಸಿಕೊಂಡು ಕೇರಳದ ಎರ್ನಾಕುಲಂಗೆ ತೆರಳಿ ಅಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ. ಆತ ದರೋಡೆ ಮಾಡಿದ ಮೊಬೈಲ್ ಅನ್ನು ಆಂಧ್ರಪ್ರದೇಶದಲ್ಲಿ 500 ರೂ.ಗೆ ಮಾರಾಟ ಮಾಡಿದ್ದ. ಒಂದು ವರ್ಷದ ನಂತರ, ಚಿತ್ತೂರಿಗೆ ಬಂದು ಯಾರಿಗೂ ತಿಳಿಯದಂತೆ ಬಾಳುವೆ ನಡೆಸಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿದ್ದಾಗಿ ವರದಿ ಹೇಳಿದೆ.
ಆರೋಪ ಪಟ್ಟಿ ಮತ್ತು ಮಧುಕರ ರೆಡ್ಡಿಗೆ ಶಿಕ್ಷೆ
ಬೆಂಗಳೂರು ಎಟಿಎಂ ದಾಳಿ ಪ್ರಕರಣ ನಡೆದು 7 ವರ್ಷಗಳ ನಂತರ, ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ. 2013 ರಲ್ಲಿ ಅಪರಾಧ ನಡೆದು ಮೂರು ವರ್ಷದ ಬಳಿಕ ಬಿ ರಿಪೋರ್ಟ್ ಸಲ್ಲಿಸಲಾಗಿತ್ತು. ಆದರೆ ಮಧುಕರ ರೆಡ್ಡಿ ಬಂಧನ ಬಳಿಕ ಅದಕ್ಕೆ ಜೀವ ಬಂದಿದ್ದು, ಮತ್ತೆ ತನಿಖೆ ಮುಂದುವರಿಸಿದ ಬೆಂಗಳೂರು ಪೊಲೀಸರು, ಕದ್ದ ಮೊಬೈಲ್ ಖರೀದಿಸಿದ ವ್ಯಕ್ತಿಯ ಸಾಕ್ಷ್ಯವನ್ನೂ ದಾಖಲಿಸಿದ್ದರು. ಸಿಸಿಟಿವಿ ದೃಶ್ಯಗಳು ನಿರ್ಣಾಯಕವೆನಿಸಿದವು. 2019ರ ಫೆ.13 ರಂದು ಆರೋಪಿಯ ಗುರುತು ಪತ್ತೆ ನಡೆದಿತ್ತು. ಏಳು ಆರೋಪಿಗಳನ್ನು ನಿಲ್ಲಿಸಿ ಸಂತ್ರಸ್ತೆ ಜ್ಯೋತಿ ಅವರಲ್ಲಿ ಆರೋಪಿಯನ್ನು ಗುರುತಿಸಿದ್ದರು. ಇದು ಘಟನೆ ನಡೆದು ಆರು ವರ್ಷ ಬಳಿಕ ಆಗಿರುವಂಥದ್ದು. ಕೊನೆಗೆ 2021ರ ಫೆ.1ರಂದು ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ಮಧುಕರ ರೆಡ್ಡಿ 10 ವರ್ಷ ಸಜೆ ವಿಧಿಸಿತು.
(This copy first appeared in Hindustan Times Kannada website. To read more like this please logon to kannada.hindustantimes.com)
