ಹೈಟೆಕ್ ವೇಶ್ಯಾವಾಟಿಕೆ ದಂಧೆ ಜಾಲ ಪತ್ತೆ, ಮೂವರು ಮಹಿಳೆಯರ ರಕ್ಷಣೆ; ಆಸ್ತಿ ಹಂಚಿಕೆ ವಿಚಾರಕ್ಕೆ ಅಪ್ಪ ಮಕ್ಕಳ ನಡುವೆ ಆಸಿಡ್ ಎರಚಾಟ
ಹೈಟೆಕ್ ವೇಶ್ಯಾವಾಟಿಕೆ ದಂಧೆ ಜಾಲ ಪತ್ತೆ ಮಾಡಿರುವ ಬೆಂಗಳೂರು ಪೊಲೀಸರು ಮೂವರು ಮಹಿಳೆಯರ ರಕ್ಷಣೆ ಮಾಡಿದ್ದಾರೆ. ಇನ್ನೊಂದು ಪ್ರತ್ಯೇಕ ಪ್ರಕರಣದಲ್ಲಿ ಆಸ್ತಿ ಹಂಚಿಕೆ ವಿಚಾರಕ್ಕೆ ಅಪ್ಪ ಮಕ್ಕಳ ನಡುವೆ ಆಸಿಡ್ ಎರಚಾಟ ನಡೆದಿದ್ದು, ಈ ಕುರಿತು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. (ವರದಿ- ಎಚ್. ಮಾರುತಿ, ಬೆಂಗಳೂರು)

ಬೆಂಗಳೂರು: ವೆಬ್‌ಸೈಟ್ ಬಳಸಿಕೊಂಡು ಆನ್‌ಲೈನ್ ಮೂಲಕ ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ತಂಡದಿಂದ ಮೂವರು ಮಹಿಳೆಯನ್ನು ರಕ್ಷಣೆ ಮಾಡಿರುವ ಬೆಂಗಳೂರಿನ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಕೃಷ್ಣ ಪ್ರಸಾದ್, ರಾಹುಲ್ ಹಾಗೂ ಆಶೀಶ್ ಬಂಧಿತ ಆರೋಪಿಗಳು. ಅವರಿಂದ 13 ಮೊಬೈಲ್‌ಗಳು, ಒಂದು ದ್ವಿಚಕ್ರ ವಾಹನ, ಒಂದು ಕಾರು ಮತ್ತು 30 ಸಾವಿರ ರೂಪಾಯಿ ನಗದು ವಶಡಿಸಿಕೊಳ್ಳಲಾಗಿದೆ. ಕೃಷ್ಣ ಪ್ರಸಾದ್ ಹೈಟೆಕ್ ವೇಶ್ಯಾವಾಟಿಕೆ ದಂಧೆಯ ಮುಖ್ಯ ಆರೋಪಿ ಎಂದು ಅಮೃತಹಳ್ಳಿ ಠಾಣೆ ಪೊಲೀಸರು ಹೇಳಿದ್ದಾರೆ.
ಆರೋಪಿಗಳು ಮೊಬೈಲ್, ವೆಬ್‌ಸೈಟ್ ಆಧಾರಿತ ವೇಶ್ಯಾವಾಟಿಕೆ ದಂಧೆ ನಡೆಸುತ್ತಾ ಅಕ್ರಮ ಹಣ ಸಂಪಾದನೆ ಮಾಡುತ್ತಿದ್ದರು. ಮಾರ್ಚ್ 21 ರಂದು ಈಶಾನ್ಯ ವಿಭಾಗದ ಮಹಿಳಾ ಪೊಲೀಸ್ ಠಾಣೆ ಪಿಎಸ್‌ಐ ಒಬ್ಬರು, ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಸ್ತಿನಲ್ಲಿರುವಾಗ ಪೊಲೀಸ್ ಬಾತ್ಮೀದಾರರೊಬ್ಬರು ವೇಶ್ಯಾವಾಟಿಕೆ ದಂಧೆ ಕುರಿತು ಮಾಹಿತಿ ನೀಡದ್ದರು. ಈ ಮಾಹಿತಿಯನ್ನು ಆಧರಿಸಿ ವೇಶ್ಯಾಗೃಹದ ಮೇಲೆ ದಾಳಿ ನಡೆಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಇದೇ ಮಾಹಿತಿಯ ಆಧಾರದ ಮೇಲೆ ಮಡಿವಾಳ ಕೋರಮಂಗಲ ಸೇರಿದಂತೆ ಬೆಂಗಳೂರಿನ ಇತರೆ ಪ್ರದೇಶಗಳಲ್ಲಿ ದಾಳಿ ನಡೆಸಲಾಗಿದ್ದು, ಕೆಲವು ಹೋಟೆಲ್‌ಗಳಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಸ್ತಿ ಹಂಚಿಕೆ ವಿಚಾರಕ್ಕೆ ಅಪ್ಪ ಮಕ್ಕಳ ನಡುವೆ ಜಗಳ
ಆಸ್ತಿ ಹಂಚಿಕೆಗೆ ಸಂಬಂಧಿಸಿದಂತೆ ಅಪ್ಪ ಸಹೋದರ ಹಾಗೂ ಸಹೋದರಿ ಮೂವರೂ ನನ್ನ ಮೇಲೆ ಹಲ್ಲೆ ನಡೆಸಿ ಆ್ಯಸಿಡ್ ದಾಳಿ ನಡೆಸಿದ್ಧಾರೆ ಎಂದು ಬೆಂಗಳೂರಿನ ಶೆಟ್ಟಿಹಳ್ಳಿಯ ನಿವಾಸಿ ಕಿರಣ್ ಎಂಬುವರು ಬಾಗಲಗುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದನ್ನು ಆಧರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಆ್ಯಸಿಡ್ ದಾಳಿಯಿಂದ ಕಿರಣ್ ಅವರ ಎಡಭಾಗದ ಕಣ್ಣು ಹಾಗೂ ಎದೆಯ ಭಾಗದಲ್ಲಿ ಗಾಯವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ಧಾರೆ. ಬಾಗಲಗುಂಟೆ ನಿವಾಸಿ, ದೂರುದಾರ ಕಿರಣ್ ಅವರ ತಂದೆ ರಾಮಕೃಷ್ಣಯ್ಯ, ಸೋದರಿ ಕಲಾವತಿ, ಸೋದರ ಉಪೇಂದ್ರ ಕುಮಾರ್ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿ ಕೊಳ್ಳಲಾಗಿದೆ.
ಬಾಗಲಗುಂಟೆಯ 5ನೇ ಕ್ರಾಸ್‌ನಲ್ಲಿ ರಾಮಕೃಷ್ಣಯ್ಯ ಅವರಿಗೆ ಸೇರಿದ ಮನೆಯಿದೆ. ಈ ಮನೆ ರಾಮಕೃಷ್ಣಯ್ಯ ಅವರ ಸ್ವಯಾರ್ಜಿತ ಆಸ್ತಿಯಾಗಿದ್ದು, ಈ ಮನೆಯನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳಲು ಸಹೋದರಿ ಕಲಾವತಿ ಮಸಲತ್ತು ನಡೆಸುತ್ತಿದ್ದಾರೆ. ಆಸ್ತಿ ಹೊಡೆಯಲು ನಮ್ಮ ತಂದೆಗೆ ಅಕ್ಕ ಚಾಡಿ ಹೇಳುತ್ತಿದ್ದಾರೆ. ಇತ್ತೀಚೆಗೆ ನಮ್ಮ ತಾಯಿಯ ತಿಥಿ ನಡೆಸುವ ಸಂಬಂಧ ಮಾತನಾಡಲು ಅವರ ಮನೆಗೆ ಹೋಗಿದ್ದೆ. ಆಗ ನನ್ನ ಮೇಲೆ ಹಲ್ಲೆ ನಡೆಸಿ ಆ್ಯಸಿಡ್ ಎರಚಿದ್ದಾರೆ ಎಂದು ಕಿರಣ್ ದೂರಿನಲ್ಲಿ ತಿಳಿಸಿದ್ದಾರೆ.
ಬೀಗದ ಕೀ ಕದ್ದು ಕಳವು ಮಾಡಿದ್ದ ಆರೋಪಿ ವಶಕ್ಕೆ
ಮನೆ ಮಾಲೀಕರೊಬ್ಬರು ಶೂ ಸ್ಟ್ಯಾಂಡ್ ಕೆಳಗೆ ಬೀಗದ ಕೀ ಇರಿಸಿ ಹೋಗಿದ್ದನ್ನು ಕಂಡುಕೊಂಡು ಚಾಲಕನೊಬ್ಬ ಕಳ್ಳತನ ಮಾಡಿರುವ ಪ್ರಕರಣ ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬೀಗ ತೆಗೆದು ಚಿನ್ನಾಭರಣ ಕಳವು ಮಾಡಿದ್ದ ಸರಕು ಸಾಗಣೆ ವಾಹನದ ಚಾಲಕ ಪ್ರದೀಪ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಈತನಿಂದ 6 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಈ ಹಿಂದೆಯೂ ಆರೋಪಿ ಪ್ರದೀಪ್ ಹಲವಾರು ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಪೊಲೀಸರು ಈತನನ್ನು ಬಂಧಿಸಿದ್ದರು. ಜಾಮೀನಿನ ಮೇಲೆ ಬಿಡುಗಡೆಯಾಗಿ ಹೊರಬಂದ ನಂತರ, ಸರಕು ಸಾಗಣೆ ವಾಹನದ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಮಾರ್ಚ್ 19 ರಂದು ಮಹದೇವಪುರದ ಮನೆಯೊಂದಕ್ಕೆ ಸಾಮಾನು ಸಾಗಿಸುವಾಗ ಮನೆ ಮಾಲೀಕರೊಬ್ಬರು, ಶೂ ಸ್ಟ್ಯಾಂಡ್ ಕೆಳಗೆ ಕೀ ಇಟ್ಟು ಹೋಗಿರುವುದನ್ನು ಗಮನಿಸಿದ್ದ. ಅವರು ಹೋದ ನಂತರ ಕೀ ಎತ್ತಿಕೊಂಡು ಮನೆಯ ಬೀಗ ತೆಗೆದು ಮನೆಯೊಳಗೆ ನುಗ್ಗಿದ್ದಾನೆ. ಮನೆಯೊಳಗೆ ಬೀರು ಒಡೆದು ಸುಮಾರು 6 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಮಾಡಿ ಪರಾರಿಯಾಗಿದ್ದ. ಕಚೇರಿ ಕೆಲಸ ಮುಗಿಸಿಕೊಂಡು ಮನೆ ಮಾಲೀಕರು ಹಿಂತಿರುಗಿದಾಗ ಮನೆಯಲ್ಲಿ ಕಳ್ಳತನ ನಡೆದಿರುವುದು ಗೊತ್ತಾಗಿದೆ. ಆಗ ದೂರು ನೀಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.
(ವರದಿ- ಎಚ್. ಮಾರುತಿ, ಬೆಂಗಳೂರು)
