Bangalore water crisis: ಬೆಂಗಳೂರಿಗೆ ಬೇಸಿಗೆ ಮುನ್ನವೇ ಕಾದಿದೆ ಜಲ ಕಂಟಕ: ಈಗಲೇ ಬತ್ತಿದ ಬೋರ್‌ವೆಲ್‌ಗಳು, ಟ್ಯಾಂಕರ್ ನೀರು ದುಬಾರಿ
Water problem in Bengaluru ಕರ್ನಾಟಕದಲ್ಲಿ ಮುಂಗಾರು ಮಳೆ ಕೈಕೊಟ್ಟಿದೆ. ಇದರಿಂದ ರಾಜ್ಯದ ರೈತರು ಕಂಗಾಲಾಗಿದ್ದು, ಶೀಘ್ರದಲ್ಲೇ ರಾಜ್ಯ ಸರ್ಕಾರ ಬರ ಘೋಷಿಸುವ ಸಾಧ್ಯತೆ ಇದೆ. ಈ ನಡುವೆ ಬೆಂಗಳೂರಿನಲ್ಲೂ ನೀರಿಗೆ ಹಾಹಾಕಾರ ಎದುರಾಗಿದೆ.
ಬೆಂಗಳೂರು: ಇನ್ನೂ ಮಳೆಗಾಲವೇ ಮುಗಿದಿಲ್ಲ. ಈಗಲೇ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಅಲ್ಲಲ್ಲಿ ಬಾಧಿಸುತ್ತಿದೆ.
ಹಲವು ಬಡಾವಣೆಗಳಲ್ಲಿ ಜನ ನೀರಿಗಾಗಿ ತೊಂದರೆ ಅನುಭವಿಸುತ್ತಿದ್ದು. ಪ್ರತಿಭಟನೆಯನ್ನು ಕೂಡ ದಾಖಲಿಸಿದ್ದಾರೆ. ಚಳಿಗಾಲ ಮುಗಿದ ನಂತರ ಬೇಸಿಗೆ ಕಾಲ. ಆದರೆ ಈಗಲೇ ಜನರಿಗೆ ನೀರಿನ ಸಮಸ್ಯತೆ ಕಾಡತೊಡಗಿದೆ. ಈ ಬಾರಿ ಮಳೆ ಕೊರತೆಯಿಂದ ನೀರಿನ ಸಮಸ್ಯೆ ಅಧಿಕವಾಗುವ ಮುನ್ಸೂಚನೆಯನ್ನು ನೀಡುತ್ತಿದೆ.
ಎಲ್ಲೆಲ್ಲಿ ಸಮಸ್ಯೆ
ಸಿಲಿಕಾನ್ ಸಿಟಿಯ ಹೊರವಲಯಗಳಲ್ಲಿ ನೀರಿನ ಅಭಾವ ತೀವ್ರವಾಗಿದೆ. ಕನಕಪುರ ರಸ್ತೆಯಲ್ಲಿ ಪ್ರತಿಷ್ಠಿತ ವಿಲ್ಲಾಗಳು, ವೈಟ್ ಫೀಲ್ಡ್, ಸರ್ಜಾಪುರ ರಸ್ತೆಗಳಲ್ಲಿರುವ ಕೋಟಿ ಕೋಟಿ ಗಟ್ಟಲೆಯ ಗೇಟೆಡ್ ಕಮ್ಯುನಿಟಿ ವಿಲ್ಲಾಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದು ನೀರು ಇಂಗಿಹೋಗಿದೆ. ಇದರಿಂದ ಬೋರ್ ವೆಲ್ ಗಳಿಂದ ನೀರು ಬರದ ಕಾರಣ ಅಲ್ಲಿನ ನಿವಾಸಿಗಳು ಟ್ಯಾಂಕರ್ ಗಳ ಮೊರೆ ಹೋಗಿದ್ದಾರೆ. ಟ್ಯಾಂಕರ್ ಬೆಲೆ ದುಪ್ಪಟ್ಟು ಆಗಿರುವುದು ಕೂಡ ಜನರಿಗೆ ಬಾಧಿಸುತ್ತಿದೆ.
ಕಳೆದ ತಿಂಗಳಷ್ಟೇ ಕನಕಪುರ ರಸ್ತೆಯ ವಕೀಲ್ ಗಾರ್ಡನ್ ಸಿಟಿಯಲ್ಲಿ 10 ಲಕ್ಷ ರೂಪಾಯಿ ವೆಚ್ಚದಲ್ಲಿ 4 ಕೊಳವೆ ಬಾವಿಗಳನ್ನು ಕೊರೆಸಲಾಗಿತ್ತು. ಆದರೆ, ಕೊರೆಸಿದ ಬೆರಳೆಣಿಕೆಯ ದಿನದಲ್ಲೇ ನೀರು ಬರದೆ ಬರಡಾಗಿದೆ. ಇದರಿಂದ ನಿವಾಸಿಗಳುಯ ಸಾವಿರಕ್ಕೂ ಹೆಚ್ಚು ರೂಪಾಯಿ ನೀಡಿ ಟ್ಯಾಂಕರ್ ಗಳ ಮೇಲೆ ಅವಲಂಬಿತರಾಗಿದ್ದಾರೆ.
ಟ್ಯಾಂಕರ್ ನೀರು ದುಬಾರಿ
ಇನ್ನೂ ಬೆಂಗಳೂರಿನ ಉತ್ತರ ಮತ್ತು ಪೂರ್ವದ ಕಥೆಯೂ ಇದೆ ಆಗಿದೆ. ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ. ಟ್ಯಾಂಕರ್ ಗಳು ಶೇ. 50 ರಷ್ಟು ಹಣ ದುಪ್ಪಟ್ಟು ಮಾಡಿವೆ. ಬೆಂಗಳೂರು ನಗರದಕ್ಕೆ ಈ ಬಾರಿ ಅಂದರೆ ಜೂನ್ ನಿಂದ ಆಗಸ್ಟ್ ವರೆಗೂ ಶೇ. 92ರಷ್ಟು ಮಳೆ ಕೊರತೆ ಉಂಟಾಗಿದೆ.
ಕಾವೇರಿ ನೀರು ಸರಬರಾಜಾಗುವ ಪ್ರದೇಶಗಳಲ್ಲೂ ಕೂಡ ಪರಿಸ್ಥಿತಿ ಬಿಗಡಾಯಿಸಿದೆ. ವಾರಕ್ಕೊಮ್ಮೆ ಬರುತ್ತಿದ್ದ ಕಾವೇರಿ, ತಿಂಗಳಾದರೂ ಇತ್ತ ಇಣುಕಿಯೂ ನೋಡುತ್ತಿಲ್ಲ ಎಂಬುದು ನಿವಾಸಿಗಳ ಅಳಲು. ಗೇಟೆಡ್ ಕಮ್ಯುನಿಟಿ ಒಂದರಲ್ಲಿ 12 ಕೊಳವೆ ಬಾವಿಗಳಿದ್ದು, 10 ಬಾವಿಗಳಲ್ಲಿ ನೀರು ಬರುತ್ತಿಲ್ಲ. ಟ್ಯಾಂಕರ್ ಗಳ ಬೇಡಿಕೆಯಷ್ಟು ಹಣ ನೀಡಿದರೂ ಟ್ಯಾಂಕರ್ ನೀರು ಸಿಗುತ್ತಿಲ್ಲ ಎನ್ನುತ್ತಾರೆ ಸಿಗೇಹಳ್ಳಿ ನಿವಾಸಿಗಳು.
ಹೊಸ ಬಡಾವಣೆಗಿಲ್ಲ ಟ್ಯಾಂಕರ್ ನೀರು
ಮತ್ತೊಂದೆಡೆ, ಟ್ಯಾಂಕರ್ ಗಳ ಮಾಲೀಕರು ಹೊಸ ನಿವಾಸಿಗಳಿಗೆ ನೀರು ಕೊಡಲು ಮುಂದಾಗುತ್ತಿಲ್ಲ. ತಮ್ಮ ಹಳೆಯ ಗ್ರಾಹಕರಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಅಲ್ಲದೇ, ಹೊಸ ಗ್ರಾಹಕರಿಗೆ 5 ವರ್ಷಗಳ ಒಪ್ಪಂದ ಮಾಡಿಕೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ. ಮುಂದಿನ ವರ್ಷ ಮಳೆ ಬಂದು ನಮ್ಮ ಬೋರ್ ವೆಲ್ ಗಳಲ್ಲೇ ನೀರು ಬಂದರೆ ಒಪ್ಪಂದ ಮಾಡಿಕೊಂಡು ನಷ್ಟವಾಗಲಿದೆ ಎಂಬುದು ಉತ್ತರ ಭಾಗದ ನಿವಾಸಿಯೊಬ್ಬರ ಅಳಲು.
ನೀರೇ ಸಿಗುತ್ತಿಲ್ಲ ಎಂಬ ಅಳಲು
ಟ್ಯಾಂಕರ್ ಮಾಲೀಕರು ಸಹ ಸಂಕಷ್ಟಕ್ಕೆ ಸಿಲುಕಿದ್ದಾರೆ. ನೀರಿನ ಬೇಡಿಕೆ ಇದ್ದರೂ ಪೂರೈಸಲು ಸಾಧ್ಯವಾಗುತ್ತಿಲ್ಲ. ಟ್ಯಾಂಕರ್ ಗೆ ತುಂಬಿಸುವ ನೀರಿನ ಬೋರ್ ವೆಲ್ ಗಳು ಸಹ ಬತ್ತಿಹೋಗಿವೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಟ್ಯಾಂಕರ್ ಮಾಲೀಕರೊಬ್ಬರು, ತಾವು 20 ವರ್ಷಗಳಿಂದ ದೊಡ್ಡನೆಕ್ಕುಂದಿಯಲ್ಲಿ ಟ್ಯಾಂಕರ್ ನೀರು ಸರಬರಾಜು ಮಾಡುತ್ತಿದ್ದೇವೆ. ಒಂದು ಬೋರ್ ವೆಲ್ ನಲ್ಲಿ 50 ಲೋಡ್ ನೀರು ತೆಗೆಯುತ್ತಿದ್ದೆವು. ಆದರೆ, ಇದೀಗ 7 ಲೋಡ್ ಸಹ ತೆಗೆಯಲು ಆಗುತ್ತಿಲ್ಲ. ಬೋರ್ ವೆಲ್ ಗಳು ಬತ್ತಿ ಹೋಗಿವೆ. ಹೀಗಾಗಿ, ಮಳೆಗಾಲದಲ್ಲೂ ನಮ್ಮಿಂದ ನೀರು ಪಡೆಯುವ ನಮ್ಮ ಗ್ರಾಹಕರಿಗೆ ಮಾತ್ರ ಒದಗಿಸುತ್ತಿದ್ದೇವೆ ಎನ್ನುತ್ತಾರೆ.
ಹೀಗಾಗಿ, ಅಪಾರ್ಟ್ ಮೆಂಟ್ ಗಳಲ್ಲಿನ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೋರ್ ವೆಲ್ ಗಳು ಬತ್ತಿರುವುದರಿಂದ ಮಾತ್ರ ಟ್ಯಾಂಕರ್ ಮೊರೆ ಹೋಗುವ ಅಪಾರ್ಟ್ ಮೆಂಟ್ ನಿವಾಸಿಗಳಿಗೆ ಟ್ಯಾಂಕರ್ ಮಾಲೀಕರು ಹೆಚ್ಚು ಒತ್ತು ನೀಡುತ್ತಿಲ್ಲ.
ಇದೆಲ್ಲದರ ನಡುವೆ ವೈಟ್ ಫೀಲ್ಡ್ ನ ರಾಮಗೊಂಡನಹಳ್ಳಿಯಲ್ಲಿ ಅಕ್ರಮ ಬೋರ್ ವೆಲ್ ಗಳ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ರಾಮಗೊಂಡನಹಳ್ಳಿಯಲ್ಲಿ ಕುಡಿಯುವ ನೀರಿಗೂ ಪರಿತಪಿಸುವಂತಾಗಿದೆ.
(ವಿಶೇಷ ವರದಿ: ಅಕ್ಷರ ಕಿರಣ್,ಬೆಂಗಳೂರು)
ನೀರಿನ ದರದ ವಿವರ ಹೀಗಿದೆ.
ಟ್ಯಾಂಕರ್ ಲೀಟರ್ ಜೂನ್ ನಲ್ಲಿ ಆಗಸ್ಟ್ 31 ರಂದು
6 ಸಾವಿರ ಲೀಟರ್ 700ರೂ.-850ರೂ. ರೂ.800 - ರೂ. 1000
12 ಸಾವಿರ ಲೀಟರ್ 1000 ರೂ. - 1200 ರೂ. ರೂ. 1200 - ರೂ. 1800
ವಿಭಾಗ