ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಿನಲ್ಲಿ ಸತತ ಎರಡನೇ ದಿನವೂ ಮಳೆ, ತೊಂದರೆ ಅನುಭವಿಸಿದರೂ ಮಳೆಯಾಗಿದ್ದಕ್ಕೆ ಖುಷಿಪಟ್ಟ ನಾಗರಿಕರು

ಬೆಂಗಳೂರಿನಲ್ಲಿ ಸತತ ಎರಡನೇ ದಿನವೂ ಮಳೆ, ತೊಂದರೆ ಅನುಭವಿಸಿದರೂ ಮಳೆಯಾಗಿದ್ದಕ್ಕೆ ಖುಷಿಪಟ್ಟ ನಾಗರಿಕರು

ಬೆಂಗಳೂರಿನಲ್ಲಿ ಸತತ ಎರಡನೇ ದಿನವೂ ಮಳೆಯಾಗಿದ್ದು, ನಾನಾ ಭಾಗಗಳಲ್ಲಿ ಸಂಚಾರ ಅಸ್ತವ್ಯಸ್ತವಾಗಿದ್ದವು. ಗಾಳಿಗೆ ಮರಗಳು ಉರುಳಿದ ಕಾರಣ ಕೆಲ ತೊಂದರೆ ಉಂಟಾಗಿತ್ತು. ಈ ತೊಂದರೆ ಅನುಭವಿಸಿದರೂ ಮಳೆಯಾಗಿದ್ದಕ್ಕೆ ನಾಗರಿಕರು ಖುಷಿಪಟ್ಟರು. (ವರದಿ -ಎಚ್. ಮಾರುತಿ, ಬೆಂಗಳೂರು)

ಬೆಂಗಳೂರಿನಲ್ಲಿ ಸತತ ಎರಡನೇ ದಿನವೂ ಮಳೆ ಮತ್ತು ಗಾಳಿಗೆ ಉರುಳಿದ ಮರ ತೆರವು ಕಾರ್ಯಾಚರಣೆ (ಎಡಚಿತ್ರ) ವಾಹನ ಸಂಚಾರ ಅಸ್ತವ್ಯಸ್ತ (ಬಲಚಿತ್ರ). ಇಂತಹ ತೊಂದರೆ ಅನುಭವಿಸಿದರೂ ಮಳೆಯಾಗಿದ್ದಕ್ಕೆ ನಾಗರಿಕರು ಖುಷಿಪಟ್ಟರು.
ಬೆಂಗಳೂರಿನಲ್ಲಿ ಸತತ ಎರಡನೇ ದಿನವೂ ಮಳೆ ಮತ್ತು ಗಾಳಿಗೆ ಉರುಳಿದ ಮರ ತೆರವು ಕಾರ್ಯಾಚರಣೆ (ಎಡಚಿತ್ರ) ವಾಹನ ಸಂಚಾರ ಅಸ್ತವ್ಯಸ್ತ (ಬಲಚಿತ್ರ). ಇಂತಹ ತೊಂದರೆ ಅನುಭವಿಸಿದರೂ ಮಳೆಯಾಗಿದ್ದಕ್ಕೆ ನಾಗರಿಕರು ಖುಷಿಪಟ್ಟರು.

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸತತ ಎರಡನೆಯ ದಿನವೂ ಮಳೆ ಅಬ್ಬರಿಸಿದೆ. ನಗರದ ಬಹುತೇಕ ಪ್ರದೇಶಗಳಲ್ಲಿ ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಜೋರು ಮಳೆಯಾಗಿದೆ. ಮಳೆ ಸುರಿಯುವಾಗ ಗಾಳಿಯ ಆರ್ಭಟಕ್ಕೆ ವಿವಿಧ ಭಾಗಗಳಲ್ಲಿ ಮರಗಳು ಧರೆಗುರುಳಿದ್ದು, ಸಂಚಾರ ಅಸ್ತವ್ಯಸ್ತಗೊಂಡಿತ್ತು. ಸಹಜವಾಗಿಯೇ ಮಳೆಯಿಂದಾಗಿ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಟ್ರೆಂಡಿಂಗ್​ ಸುದ್ದಿ

ಕಚೇರಿ ಮುಗಿಸಿಕೊಂಡು ಮನೆಗಳತ್ತ ಹೊರಟಿದ್ದ ಉದ್ಯೋಗಿಗಳು ಪರದಾಡಬೇಕಾಯಿತು. 9 ಗಂಟೆಯ ನಂತರ ಮಳೆಯ ಆರ್ಭಟ ಕಡಿಮೆಯಾಗಿದ್ದು, ಮನೆ ಸೇರಿಕೊಳ್ಳಲು ಸಹಾಯವಾಯಿತು. ಆದರೂ ಕೆಲವು ಭಾಗಗಳಲ್ಲಿ ರಸ್ತೆ ಮತ್ತು ಅಂಡರ್ ಪಾಸ್ ಗಳು ಜಲಾವೃತವಾಗಿದ್ದವು. ದ್ವಿಚಕ್ರ ವಾಹನ ಸವಾರರು ಹೆಚ್ಚು ತೊಂದರೆ ಅನುಭವಿಸಬೇಕಾಯಿತು.

ಬೆಂಗಳೂರಿನ ಯಾವೆಲ್ಲ ಪ್ರದೇಶದಲ್ಲಿ ಮಳೆಯಾಗಿತ್ತು

ರಾಜಾಜಿನಗರ, ಯಲಹಂಕ,ಮಹಾಲಕ್ಷ್ಮಿ ಲೇ ಔಟ್, ಬೊಮ್ಮನಹಳ್ಳಿ, ಮಾಗಡಿ ರಸ್ತೆ, ಗಿರಿನಗರ, ಕೋರಮಂಗಲ,ವಿಜಯ ನಗರ ಚಾಮರಾಜ ಪೇಟೆ ಸೇರಿದಂತೆ ಬಹುತೇಕ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದೆ. ಅಲ್ಲಲ್ಲಿ ವಿದ್ಯುತ್ ಕಂಬಗಳು ಉರುಳಿ ಬಿದ್ದ ಪ್ರಕರಣಗಳು ವರದಿಯಾಗಿದ್ದು, ವಿದ್ಯುತ್ ಸರಬರಾಜಿಗೆ ಅಡಚಣೆ ಉಂಟಾಯಿತು ಎಂದು ಬೆಸ್ಕಾಂ ಮೂಲಗಳು ತಿಳಿಸಿವೆ. ಮೈಸೂರು ರಸ್ತೆ, ನಾಯಂಡಹಳ್ಳಿ, ಹೆಬ್ಬಾಳ ರಸ್ತೆ, ಹೊರವರ್ತುಲ ರಸ್ತೆಗಳಲ್ಲಿ ವಾಹನ ದಟ್ಟಣೆ ವಿಪರೀತವಾಗಿತ್ತು.

ಆರು ದಿನಗಳಿಂದೀಚೆಗೆ ಮೂರು ದಿನ ಮಳೆಯಾಗಿದ್ದು ಬಾಣಲೆಯಂತೆ ಕಾದಿದ್ದ ಬೆಂಗಳೂರು ತಂಪಾಗಿದೆ. ವರುಣನ ದರ್ಶನವಿಲ್ಲದೆ ಐದು ತಿಂಗಳಿಂದ ಕಂಗೆಟ್ಟಿದ್ದ ಉದ್ಯಾನ ನಗರಿಯ ಕೋಟ್ಯಂತರ ಜನರ ಹರ್ಷ ಇಮ್ಮಡಿಯಾಗಿದೆ. ಅಷ್ಟೇ ಅಲ್ಲ, ನೀರು ಸರಬರಾಜಿಗೆ ಪರದಾಡುತ್ತಿದ್ದ ಜಲ ಮಂಡಳಿ ಮತ್ತು ಬಿಬಿಎಂಪಿ ನಿಟ್ಟುಸಿರು ಬಿಡುವಂತಾಗಿದೆ. ಬೆಂಗಳೂರಿನಲ್ಲಿ ಮಳೆಯ ಪರಿಣಾಮ 200ಕ್ಕೂ ಹೆಚ್ಚು ಮರಗಳು ಧರೆಗುರುಳಿದಿವೆ ಎಂದು ಪಾಲಿಕೆ ಅಧಿಕಾರಿಗಳು ಹೇಳಿದ್ದಾರೆ.

ಮೇ 17ರ ವರೆಗೂ ಬೆಂಗಳೂರು ಸೇರಿ ವಿವಿಧೆಡೆ ಮಳೆ ಮುನ್ಸೂಚನೆ

ಎರಡು ದಿನಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಸುರಿಯುತ್ತಿರುವ ಮಳೆ ಮೇ 17 ರವರೆಗೂ ಎಲ್ಲಾ ಜಿಲ್ಲೆಗಳಲ್ಲೂ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರಿನಲ್ಲಿ ಇಂದು (ಮೇ 10) ಯೆಲ್ಲೋ ಅಲರ್ಟ್‌ ಘೋಷಿಸಲಾಗಿದ್ದು, ವಿವಿಧೆಡೆ ಮಳೆಯಾಗುವ ಸಾಧ್ಯತೆ ಇದೆ. ಇದೇ ವೇಳೆ ಗಾಳಿಯೂ ಇರುವ ಕಾರಣ ಸಾರ್ವಜನಿಕರು ಸಂಚಾರದ ವೇಳೆ ಜಾಗರೂಕರಾಗಿರಬೇಕು ಎಂದು ಸಂಚಾರ ಪೊಲೀಸರು ಎಚ್ಚರಿಸಿದ್ದಾರೆ.

ಮಂತ್ರಿ ಮಾಲ್‌ ಬಳಿ ನಿನ್ನೆ (ಮೇ 9) ರಾತ್ರಿ ಮಳೆಗೆ ರಸ್ತೆಯಲ್ಲಿ ನೀರು ನಿಂತು ಸಂಚಾರಕ್ಕೆ ಅಡ್ಡಿಯಾಗಿತ್ತು.

ಬಿನ್ನಿ ಮಿಲ್‌ ಬಳಿ ನೀರು ನಿಂತ ಕಾರಣ ಹುಣಸೆಮರದ ಕಡೆಗೆ ನಿಧಾನಗತಿಯ ವಾಹನ ಸಂಚಾರ ನಿನ್ನೆ ರಾತ್ರಿ ಕಂಡುಬಂದಿತ್ತು.

ಹಳೆ ಉದಯ ಟಿವಿ ಜಂಕ್ಷನ್‌ ಬಳಿ ನೀರು ನಿಂತಿರುವುದರಿಂದ ಜಯಮಹಲ್ ರಸ್ತೆಯಲ್ಲೂ ನಿನ್ನೆ ರಾತ್ರಿ ನಿಧಾನಗತಿಯ ಸಂಚಾರವಿತ್ತು.

ಇದೇ ರೀತಿ, ಕೆಐಎಎಲ್ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಹುಣಸಮಾರನಹಳ್ಳಿ (ಐಎಎಫ್ ನಿಲ್ದಾಣದ ಬಳಿ) ಜಲಾವೃತಗೊಂಡಿತ್ತು. ಅಲ್ಲಿ ಎರಡೂ ಬದಿಯಲ್ಲಿ ನಿಧಾನಗತಿಯ ಸಂಚಾರದ ಕಾರಣ ಸಂಚಾರ ದಟ್ಟಣೆ ಉಂಟಾಗಿತ್ತು.

ಇನ್ನು, ಮೈಸೂರು ರಸ್ತೆಯ ಆರ್ ಆರ್ ನಗರದ ಕಮಾನು ಬಳಿ ಜಲಾವೃತಗೊಂಡಿತ್ತು. ಹೀಗಾಗಿ ನಾಯಂಡಹಳ್ಳಿ ಕಡೆಗೆ ಬರುವ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಅಲ್ಲದೆ, ಸಂಚಾರ ದಟ್ಟಣೆ ನಿರ್ವಹಣೆಗಾಗಿ ಪೊಲೀಸರು ಜ್ಞಾನಭಾರತಿ ಕ್ಯಾಂಪಸ್‌ಗೆ ವಾಹನ ಸಂಚಾರ ಮಾರ್ಗವನ್ನು ಬದಲಾಯಿಸಿದ್ದರು.

ಜ್ಞಾನಭಾರತಿ ಜಂಕ್ಷನ್‌ ಬಳಿ ನೀರು ನಿಂತಿರುವುದರಿಂದ ಆರ್‌ಆರ್ ನಗರ ಜಂಕ್ಷನ್ ಕಡೆಗೆ ನಿಧಾನಗತಿಯ ಸಂಚಾರವಿತ್ತು. ವಿಂಡ್ಸರ್ ಮ್ಯಾನರ್‌ ಬಳಿ ನೀರು ನಿಂತಿರುವುದರಿಂದ ಓಲ್ಡ್ ಹೈಗ್ರೌಂಡ್ ಜಂಕ್ಷನ್ ಕಡೆಗೆ ನಿಧಾನಗತಿಯ ಸಂಚಾರ ಕಂಡುಬಂದಿತ್ತು.

(ವರದಿ -ಎಚ್. ಮಾರುತಿ, ಬೆಂಗಳೂರು)

IPL_Entry_Point