ಬೆಂಗಳೂರು ಟ್ರಾಫಿಕ್ ಕಿರಿಕಿರಿ, ವಿಮಾನ ನಿಲ್ದಾಣಕ್ಕೆ ತೆರಳುವವರು 2 ಗಂಟೆ ಮುಂಚಿತವಾಗಿ ಹೊರಡಲು ಟ್ರಾಫಿಕ್ ಪೊಲೀಸರ ಸೂಚನೆ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಟ್ರಾಫಿಕ್ ಕಿರಿಕಿರಿ, ವಿಮಾನ ನಿಲ್ದಾಣಕ್ಕೆ ತೆರಳುವವರು 2 ಗಂಟೆ ಮುಂಚಿತವಾಗಿ ಹೊರಡಲು ಟ್ರಾಫಿಕ್ ಪೊಲೀಸರ ಸೂಚನೆ

ಬೆಂಗಳೂರು ಟ್ರಾಫಿಕ್ ಕಿರಿಕಿರಿ, ವಿಮಾನ ನಿಲ್ದಾಣಕ್ಕೆ ತೆರಳುವವರು 2 ಗಂಟೆ ಮುಂಚಿತವಾಗಿ ಹೊರಡಲು ಟ್ರಾಫಿಕ್ ಪೊಲೀಸರ ಸೂಚನೆ

Bangalore Traffic ಐಟಿ-ಸಿಟಿ ಬೆಂಗಳೂರಿನಲ್ಲಿ ದಿನೇ ದಿನೇ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಇದೀಗ ಹೆಬ್ಬಾಳ ಮೇಲ್ಸೇತುವೆ ಮತ್ತು ಮೆಟ್ರೋ ರೈಲು ಕಾಮಗಾರಿ ನಡೆಯುತ್ತಿರುವುದರಿಂದ ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರು ಕನಿಷ್ಠ ಎರಡು ಗಂಟೆಗಳ ಮೊದಲು ಹೊರಡುವಂತೆ ಬೆಂಗಳೂರು ಸಂಚಾರ ಪೊಲೀಸರು ಸಲಹೆ ನೀಡಿದ್ದಾರೆ.ವರದಿ: ಪ್ರಿಯಾಂಕಗೌಡ.ಬೆಂಗಳೂರು

ಬೆಂಗಳೂರಿನಲ್ಲಿ ಟ್ರಾಫಿಕ್‌ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ಬೇಗನೇ ಹೊರಡಲು ಸೂಚಿಸಲಾಗಿದೆ.
ಬೆಂಗಳೂರಿನಲ್ಲಿ ಟ್ರಾಫಿಕ್‌ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ಬೇಗನೇ ಹೊರಡಲು ಸೂಚಿಸಲಾಗಿದೆ.

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಐಟಿ-ಬಿಟಿಗೆ ಮಾತ್ರ ಹೆಸರುವಾಸಿಯಲ್ಲ ಇಲ್ಲಿನ ಟ್ರಾಫಿಕ್‍ಗೂ ಕುಖ್ಯಾತಿ ಪಡೆದಿದೆ. ನಗರದ ಟ್ರಾಫಿಕ್ ದಟ್ಟಣೆಯು ಆಗಾಗ್ಗೆ ಸುದ್ದಿಯಲ್ಲಿರುತ್ತದೆ. ಅದರಲ್ಲೂ ಮಳೆ ಬಂದರೆ ಅಥವಾ ಏನಾದರೂ ಕಾಮಗಾರಿ ನಡೆಯುತ್ತಿದ್ದರೆ, ಟ್ರಾಫಿಕ್ ಯಾವ ಮಟ್ಟದಲ್ಲಿರುತ್ತದೆ ಅನ್ನೋದನ್ನು ಊಹಿಸಲು ಸಾಧ್ಯವಿಲ್ಲ. ಇದೀಗ ಹೆಬ್ಬಾಳ ಮೇಲ್ಸೇತುವೆ ಮತ್ತು ಮೆಟ್ರೋ ರೈಲು ನಿರ್ಮಾಣದಿಂದಾಗಿ ಆ ಪ್ರದೇಶದಲ್ಲಿ ವಿಪರೀತ ಸಂಚಾರ ದಟ್ಟಣೆ ಉಂಟಾಗಿದೆ. ಹೀಗಾಗಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವವರು ಕನಿಷ್ಠ ಎರಡು ಗಂಟೆಗಳ ಮೊದಲು ಪ್ರಯಾಣಿಸುವಂತೆ ಸಂಚಾರ ಪೊಲೀಸರು ಸೂಚನೆ ನೀಡಿದ್ದಾರೆ.

ಹೆಬ್ಬಾಳ ಮೇಲ್ಸೇತುವೆ ಕಾಮಗಾರಿ ಹಾಗೂ ಬೆಂಗಳೂರು ಮೆಟ್ರೊ ರೈಲು ಕಾಮಗಾರಿಯಿಂದಾಗಿ ಮುಖ್ಯ ಅವಧಿಯಲ್ಲಿ ಸಂಚಾರ ನಿಧಾನವಾಗಿರುತ್ತದೆ. ಇದರಿಂದ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವವರು ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಿಲ್ಲ. ಹೀಗಾಗಿ ವಿಮಾನ ನಿಲ್ದಾಣದ ಕಡೆಗೆ ತೆರಳುವ ಪ್ರಯಾಣಿಕರು, ನಿಗದಿತ ಸಮಯಕ್ಕೆ ಹೊರಡುವ ವಿಮಾನಕ್ಕೆ ಕನಿಷ್ಠ ಎರಡು ಗಂಟೆಗಳ ಮುಂಚಿತವಾಗಿ ಹೊರಡಬೇಕು ಎಂದು ಸೂಚಿಸಲಾಗಿದೆ ಅಂತಾ ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.

ಪ್ರಸ್ತುತ ಕಾಮಗಾರಿಯು ಕೆ.ಆರ್.ಪುರದಿಂದ ಹೆಬ್ಬಾಳಕ್ಕೆ ಮತ್ತು ಹೆಬ್ಬಾಳ ಪೊಲೀಸ್ ಠಾಣೆಯ ಸಮೀಪವಿರುವ ಮೇಲ್ಸೇತುವೆ ಮಾರ್ಗವನ್ನು ವಿಸ್ತರಿಸುವುದರ ಜೊತೆಗೆ ಕೆಂಪಾಪುರ ಕ್ರಾಸ್‌ನಿಂದ ಹೆಬ್ಬಾಳ ಜಂಕ್ಷನ್, ಕೊಡಿಗೇಹಳ್ಳಿ ಜಂಕ್ಷನ್ ಮತ್ತು ಬ್ಯಾಟರಾಯನಪುರ ಜಂಕ್ಷನ್‌ಗೆ ನಡೆಯುತ್ತಿರುವ ಮೆಟ್ರೋ ರೈಲು ನಿರ್ಮಾಣ ಕಾಮಗಾರಿಯನ್ನು ಒಳಗೊಂಡಿದೆ. ಇನ್ನು ಟ್ರಾಫಿಕ್ ನಿಯಂತ್ರಿಸಲು ಪೊಲೀಸರು ಹಲವು ಪರ್ಯಾಯ ಮಾರ್ಗಗಳನ್ನು ಸೂಚಿಸಿದ್ದಾರೆ.

ಮೊದಲೇ ಯೋಜಿಸಿಕೊಂಡು ನಿಗದಿತ ಮಾರ್ಗ ಬಳಸಿ ಹೋದರೆ ಅನಗತ್ಯ ಕಿರಿಕಿರಿ ತಪ್ಪಲಿದೆ ಎನ್ನುವುದು ಪೊಲೀಸರ ಸೂಚನೆ ಹಿಂದಿರುವ ಕಾಳಜಿ.

ಕೆ.ಆರ್.ಪುರ ದಿಂದ ವಿಮಾನ ನಿಲ್ದಾಣದ ಕಡೆಗೆ ಹೋಗುವ ಪ್ರಯಾಣಿಕರಿಗೆ ಪರ್ಯಾಯ ಮಾರ್ಗಗಳು:

  • ಹೊರ ವರ್ತುಲ ರಸ್ತೆಯಲ್ಲಿ ಬಲಕ್ಕೆ ತಿರುಗಿ ನಂತರ ಹೆಣ್ಣೂರು ಕ್ರಾಸ್-ಬಾಗಲೂರು ರಸ್ತೆಯ ಮೂಲಕ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಬಹುದು.
  • ನಾಗವಾರ ಜಂಕ್ಷನ್‌ನಿಂದ ಹೊರವರ್ತುಲ ರಸ್ತೆಗೆ ಬಲಕ್ಕೆ ತಿರುಗಿ, ನಂತರ ಬಲಕ್ಕೆ ಥಣಿಸಂದ್ರ-ಹೆಗಡೆ ನಗರ ಮುಖ್ಯ ರಸ್ತೆಯಲ್ಲಿ, ಮತ್ತು ಬೆಲ್ಲಿ ಸೇತುವೆ-ರೇವಾ ಜಂಕ್ಷನ್‌ನಿಂದ ವಿಮಾನ ನಿಲ್ದಾಣಕ್ಕೆ ಬಾಗಲೂರು ರಸ್ತೆಯನ್ನು ಅನುಸರಿಸಬಹುದು.

ಕೆ.ಆರ್.ಪುರದಿಂದ ನಗರಕ್ಕೆ ಬರುವವರಿಗೆ:

  • ಐಒಸಿ-ಮುಕುಂದ ಥಿಯೇಟರ್ ರಸ್ತೆಯಿಂದ ಅಂಗರಾಜಪುರಂ ಮೇಲ್ಸೇತುವೆ ಬಳಸಿ.
  • ನಾಗವಾರ ಮತ್ತು ಟ್ಯಾನರಿ ರಸ್ತೆಗಳ ಮೂಲಕ ನಗರವನ್ನು ಪ್ರವೇಶಿಸಬಹುದು.

ಬೆಂಗಳೂರು-ಬಳ್ಳಾರಿ ರಸ್ತೆಯಿಂದ ನಗರಕ್ಕೆ ಬರುವ ಭಾರಿ ಮತ್ತು ಮಧ್ಯಮ ಸರಕು ವಾಹನಗಳಿಗೆ:

ದೊಡ್ಡಬಳ್ಳಾಪುರದಿಂದ ಬರುವ ವಾಹನಗಳಿಗೆ:

  • ರಾಜಾನುಕುಂಟೆ ಬಳಿ ಬಲಕ್ಕೆ ತಿರುಗಿ ಹಾಗೂ ನೆಲಮಂಗಲ ಕಡೆಗೆ ಹೋಗಿ.

ಕಾಮಗಾರಿಯಿಂದ ಉಂಟಾಗಿರುವ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು, ವಿಳಂಬವಾಗದಂತೆ ಹಾಗೂ ನಿರ್ಮಾಣ ವಲಯಗಳ ಸುತ್ತ ಭಾರಿ ದಟ್ಟಣೆಯನ್ನು ನಿರ್ವಹಿಸಲು ಪೊಲೀಸರು ಈ ಮಾರ್ಗಗಳನ್ನು ಶಿಫಾರಸು ಮಾಡಿದ್ದಾರೆ.

(ವರದಿ: ಪ್ರಿಯಾಂಕಗೌಡ, ಬೆಂಗಳೂರು)

Whats_app_banner