ಡೆಂಗ್ಯೂ ಜ್ವರ ಸಂಕಷ್ಟ; ಬೆಂಗಳೂರಲ್ಲಿ 2000ದ ಸನಿಹ ಡೆಂಗ್ಯೂ ಕೇಸ್, ಹೆಚ್ಚಿನ ಕಾಳಜಿ ವಹಿಸಲು ಜನರಿಗೆ ಬಿಬಿಎಂಪಿ ಮನವಿ
ಡೆಂಗ್ಯೂ ಸಂಕಷ್ಟ; ಬೆಂಗಳೂರಲ್ಲಿ 2000 ದ ಸನಿಹ ಡೆಂಗ್ಯೂ ಕೇಸ್, ಹೆಚ್ಚಿನ ಕಾಳಜಿ ವಹಿಸಲು ಜನರಿಗೆ ಬಿಬಿಎಂಪಿ ಮನವಿ ಮಾಡಿದೆ. ಬಿಬಿಎಂಪಿ ಅಧಿಕಾರಿಗಳ ತಂಡ ಮನೆ ಮನೆಗೆ ಭೇಟಿ ನೀಡಿ, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಜನಜಾಗೃತಿ ಮೂಡಿಸುತ್ತಿದೆ.

ಬೆಂಗಳೂರು: ಕರ್ನಾಟಕದಾದ್ಯಂತ ಡೆಂಗ್ಯೂ ಪ್ರಕರಣಗಳು ಗಂಭೀರ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಒಂದು ಸಾವು ಸಂಭವಿಸಿದೆ. ಡೆಂಗ್ಯೂ ಪಾಸಿಟಿವ್ ಪ್ರಕರಣಗಳು 2000ದ ಗಡಿ ದಾಟುವ ಸನಿಹದಲ್ಲಿದೆ. ಹೀಗಾಗಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಮನೆಯ ಮಟ್ಟದಲ್ಲೂ ತೆಗೆದುಕೊಳ್ಳುವಂತೆ ಬಿಬಿಎಂಪಿ ಜನರನ್ನು ಕೇಳಿಕೊಂಡಿದೆ.
ಪ್ರತಿ ವರ್ಷ ಜೂನ್ ನಿಂದ ಆಗಸ್ಟ್ ಅಥವಾ ಸೆಪ್ಟೆಂಬರ್ ವರೆಗೆ ಡೆಂಗ್ಯೂ ಪ್ರಕರಣಗಳು ವರದಿಯಾಗುತ್ತವೆ. ಇದು ಸೆಪ್ಟೆಂಬರ್‌ನಲ್ಲಿ ಉತ್ತುಂಗಕ್ಕೇರಿತು. ಆದರೆ, ಈ ಬಾರಿ ಡೆಂಗ್ಯೂ ಪ್ರಕರಣಗಳು ಜೂನ್ ತಿಂಗಳಲ್ಲೇ ಉತ್ತುಂಗಕ್ಕೇರಿತು. ಕಳೆದ ವರ್ಷ, ಜೂನ್‌ನಲ್ಲಿ ಕೇವಲ 750 ಪ್ರಕರಣಗಳು ಇದ್ದವು. ಆದರೆ, ಈ ವರ್ಷ ಪ್ರಕರಣಗಳು ದ್ವಿಗುಣಗೊಂಡಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.
ಬೆಂಗಳೂರಿನಲ್ಲಿ ಡೆಂಗ್ಯೂ ಪಾಸಿಟಿವ್ ಪ್ರಕರಣಗಳು 2,000 ಗಡಿಯನ್ನು ಮೀರುವ ಸಮೀಪದಲ್ಲಿದೆ. ಡೆಂಗ್ಯೂ ಕಾರಣ ಒಂದು ಸಾವು ಕೂಡ ಸಂಭವಿಸಿದೆ. ಡೆಂಗ್ಯೂ ಪೀಡಿತರಲ್ಲಿ 20,000 ಕ್ಕಿಂತ ಕಡಿಮೆ ಪ್ಲೇಟ್‌ಲೆಟ್ ಎಣಿಕೆ ಹೊಂದಿರುವ ರೋಗಿಗಳಿಗೆ ರಕ್ತ ವರ್ಗಾವಣೆಯ ಅಗತ್ಯವಿದೆ ಎಂದು ತುಷಾರ್ ಗಿರಿನಾಥ್ ವಿವರಿಸಿದ್ದಾಗಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಬಿಬಿಎಂಪಿ ತಂಡದಿಂದ ಮನೆ ಮನೆಗೆ ಭೇಟಿ, ಜಾಗೃತಿ ಅಭಿಯಾನ
ಬಿಬಿಎಂಪಿ ಅಧಿಕಾರಿಗಳ ತಂಡ ಮನೆ-ಮನೆ ಭೇಟಿ ನೀಡಿ ಈಡೀಸ್, ಈಜಿಪ್ಟೈ ಎಂಬ ಸೊಳ್ಳೆಗಳಿಂದ ಡೆಂಗ್ಯೂ ರೋಗ ಹರಡುತ್ತದೆ. ಆದ್ದರಿಂದ ನೀರಿನ ಸಂಪ್, ಡ್ರಮ್, ಕೊಳಾಯಿ ಬಳಿ, ಹೂವಿನ ಕುಂಡ ಸೇರಿದಂತೆ ಇನ್ನಿತರೆ ಕಡೆ ಪರಿಶೀಲಿಸಿ ವಾರಕ್ಕೊಮ್ಮೆ ಎಲ್ಲಾ ಕಡೆ ನೀರನ್ನು ಹೊರ ಹಾಕಿ ಒಣಗಿಸಿ ಮತ್ತೆ ಶುದ್ಧ ನೀರು ಸಂಗ್ರಹಿಸಿ. ವಾರಕ್ಕಿಂತ ಹೆಚ್ಚು ದಿನ ಒಂದೇ ನೀರು ಸಂಗ್ರಹವಾಗಿದ್ದರೆ ಲಾರ್ವಾ ಉತ್ಪತ್ತಿಯಾಗಿ ಸೊಳ್ಳೆಗಳು ಹೆಚ್ಚಾಗುತ್ತವೆ. ಈ ನಿಟ್ಟಿನಲ್ಲಿ ವಾರಕ್ಕೊಮ್ಮೆ ತಪ್ಪದೆ ಹಳೆ ನೀರು ತೆಗೆದು ಹೊಸ ನೀರು ತುಂಬಿಸಿಕೊಳ್ಳಲು ನಾಗರಿಕರಲ್ಲಿ ಅಧಿಕಾರಿಗಳು ಮನವಿ ಮಾಡಿದರು.
“ರೋಗಲಕ್ಷಣ ಹೊಂದಿರುವ ರೋಗಿಗಳ ಪೈಕಿ ಸಕಾರಾತ್ಮಕ ಪ್ರಕರಣಗಳನ್ನು ಪರಿಶೀಲಿಸಲು ನಾವು ಬೆಂಗಳೂರಿನಾದ್ಯಂತ 6,000 ಪರೀಕ್ಷಾ ಕಿಟ್‌ಗಳನ್ನು ಹೊಂದಿದ್ದೇವೆ. ಪ್ರಚಾರ, ಕರಪತ್ರಗಳು ಪ್ರತಿ ಮನೆಗೂ ತಲುಪಿ ಜಾಗೃತಿ ಮೂಡಿಸಲಾಗುತ್ತಿದೆ. ಬಸ್ ನಿಲ್ದಾಣಗಳಲ್ಲೂ ಜಾಗೃತಿ ಜಾಹಿರಾತು ಹಾಕುತ್ತೇವೆ’ ಎಂದು ಗಿರಿನಾಥ್ ತಿಳಿಸಿದರು.
ಹೆಚ್ಚಿನವರು ಖಾಸಗಿ ಆಸ್ಪತ್ರೆಗೆ ದಾಖಲು
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಬರುವ ರೋಗಿಗಳಿಗೆ ಹೋಲಿಸಿದರೆ ಶೇ 95ರಷ್ಟು ಪ್ರಕರಣಗಳು ಖಾಸಗಿ ಆಸ್ಪತ್ರೆಗಳಿಂದ ವರದಿಯಾಗುತ್ತಿದ್ದು, ಬಿಬಿಎಂಪಿ ಆರೋಗ್ಯಾಧಿಕಾರಿಗಳೊಂದಿಗೆ ತಮ್ಮ ವರದಿಯನ್ನು ಹಂಚಿಕೊಳ್ಳುವಂತೆ ಎಲ್ಲ ಖಾಸಗಿ ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದೆ.
ಆಯಾ ವಲಯ ವ್ಯಾಪ್ತಿಯಲ್ಲಿ ಆರೋಗ್ಯ ಪರಿವೀಕ್ಷರು, ಆಶಾ ಕಾರ್ಯಕರ್ತೆಯರು, ಎ.ಎನ್.ಎಂಗಳು ಹಾಗೂ ಲಿಂಕ್ ವರ್ಕರ್‌ಗಳು ಸೇರಿ 1000 ಮನೆಗಳಿಗೊಂದು ಬ್ಲಾಕ್ ಅನ್ನು ರಚಿಸಿಕೊಳ್ಳಬೇಕು. ನಂತರ ಲಾರ್ವಾ ಇರುವ ತಾಣಗಳನ್ನು ಗುರುತಿಸುವುದು, ನಾಗರೀಕರಲ್ಲಿ ಅರಿವು ಮೂಡಿಸುವುದು ಹಾಗೂ ಯಾರಿಗಾದರು ಜ್ವರ ಬಂದಿದ್ದಲ್ಲಿ ಅಂತಹವರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತೆರಳಿ ಪರೀಕ್ಷೆ ಮಾಡಿಸಕೊಳ್ಳಲು ತಿಳಿಸುವುದು ಸೇರಿದಂತೆ ಸಮಗ್ರವಾಗಿ ಮನೆ-ಮನೆ ಸಮೀಕ್ಷೆ ನಡೆಸಿ ವರದಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತುಷಾರ್ ಗಿರಿನಾಥ್ ತಿಳಿಸಿದರು.
ನಗರದಲ್ಲಿ 2024 ಜನವರಿಯಿಂದ ಜೂನ್ ವರೆಗೆ 1230 ಪ್ರಕರಣಗಳು ಕಂಡುಬಂದಿದ್ದು, ವಲಯವಾರು ಮೈಕ್ರೋ ಪ್ಲಾನ್ ಮಾಡಿಕೊಂಡು ಡೆಂಘೀ ಹರಡುವಿಕೆಯನ್ನು ನಿಯಂತ್ರಿಸಲು ಸೂಚನೆ ನೀಡಲಾಗಿದೆ. ನಗರದಲ್ಲಿ ಮಳೆ ಬಿಟ್ಟು ಬಿಟ್ಟು ಬರುತ್ತಿರುವ ಹಿನ್ನೆಲೆಯಲ್ಲಿ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಜಾಗೃತಿ ಚಟುವಟಿಕೆಗಳನ್ನು ಹೆಚ್ಚಾಗಿ ನಡೆಸಲಾಗುತ್ತಿದೆ. ಇದನ್ನು ಸರ್ಕಾರದ ಮಟ್ಟದಲ್ಲೂ ಮಾಡಲಾಗುತ್ತಿದ್ದು, ಪಾಲಿಕೆಯಿಂದಲೂ ಆಯಾ ವಲಯಗಳಲ್ಲಿ ಹಲವಾರು ಚಟುವಟಿಕೆಗಳ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.
