ಬಾಕಿ ಬಿಲ್ ಪಾವತಿಸದಿದ್ದರೆ ಸೆಪ್ಟೆಂಬರ್ 2 ರಿಂದ ಕಾಮಗಾರಿ ಬಂದ್; ಬಿಬಿಎಂಪಿ ಗುತ್ತಿಗೆದಾರರ ಸಂಘದ ಮುಷ್ಕರ ಘೋಷಣೆ
Bengaluru News; ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 2 ರಿಂದ ಕಾಮಗಾರಿ ಬಂದ್ ಮಾಡುವುದಾಗಿ ಬಿಬಿಎಂಪಿ ಗುತ್ತಿಗೆದಾರರ ಸಂಘದ ಮುಷ್ಕರ ಘೋಷಣೆಯಾಗಿದೆ. ಬಾಕಿ ಬಿಲ್ ಪಾವತಿಸಬೇಕು ಎಂಬುದು ಸಂಘದ ಆಗ್ರಹ. ಇದರ ವಿವರ ಇಲ್ಲಿದೆ.
ಬೆಂಗಳೂರು: ಗುತ್ತಿಗೆದಾರರ ಬಾಕಿ ಬಿಲ್ ಪಾವತಿಸುವಂತೆ ಒತ್ತಾಯಿಸಿ ಸೋಮವಾರ (ಸೆಪ್ಟೆಂಬರ್ 2) ದಿಂದ ಎಲ್ಲ ಕಾಮಗಾರಿಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆ ವ್ಯಕ್ತಪಡಿಸುವುದಾಗಿ ಬಿಬಿಎಂಪಿ ಗುತ್ತಿಗೆದಾರರ ಸಂಘ ಹೇಳಿದೆ.
ಗುತ್ತಿಗೆದಾರರಿಗೆ ಪಾವತಿಸಿರುವ ಬಿಲ್‌ಗಳಲ್ಲಿ ಬಾಕಿ ಉಳಿದ ಶೇಕಡ 25ರಷ್ಟು ಮೊತ್ತವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೂಡಲೇ ಬಿಡುಗಡೆ ಮಾಡಬೇಕು ಎಂದು ಬಿಬಿಎಂಪಿ ಗುತ್ತಿಗೆದಾರರ ಸಂಘ ಆಗ್ರಹಿಸಿದೆ. ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಶುಕ್ರವಾರ ಇದೇ ವಿಚಾರವಾಗಿ ಸಭೆ ಸೇರಿದ್ದು, ಅಲ್ಲಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಬಿಬಿಎಂಪಿ ಗುತ್ತಿಗೆದಾರರ ಸಂಘ ಸ್ಪಷ್ಟಪಡಿಸಿದೆ.
ಮನವಿಗೆ ಸ್ಪಂದಿಸದ ನಗರಾಭಿವೃದ್ಧಿ ಸಚಿವರು ಮತ್ತು ಬಿಬಿಎಂಪಿ; ಸಂಘದ ಆರೋಪ
ಕಾಮಗಾರಿ ಸ್ಥಗಿತ ಘೋಷಿಸಿರುವ ಬಿಬಿಎಂಪಿ ಗುತ್ತಿಗೆದಾರರ ಸಂಘ, ಬಾಕಿ ಬಿಲ್ ಬಿಡುಗಡೆ ಮಾಡುವಂತೆ ನಗರಾಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಮನವಿ ಮಾಡಲಾಗಿದೆ. ಆದರೆ ಅವರು ಅದಕ್ಕೆ ಸ್ಪಂದಿಸಿಲ್ಲ ಎಂದು ಆರೋಪಿಸಿದೆ.
ಈ ಕುರಿತು ಮಾತನಾಡಿರುವ ಸಂಘದ ಅಧ್ಯಕ್ಷ ಜಿಎಂ ನಂದಕುಮಾರ್, "2021ರ ಏಪ್ರಿಲ್‌ನಿಂದ ಪಾವತಿಸಲಾಗಿರುವ ಬಿಲ್‌ಗಳಲ್ಲಿ ಶೇ 25 ಹಣವನ್ನು ಬಾಕಿ ಉಳಿಸಿಕೊಳ್ಳಲಾಗಿದೆ. ಈ ಬಾಕಿ ಮೊತ್ತವನ್ನು ಬಿಡುಗಡೆ ಮಾಡುವಂತೆ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಹಲವು ಬಾರಿ ಮನವಿ ಮಾಡಿಕೊಳ್ಳಲಾಗಿತ್ತು. ಬಾಕಿ ಬಿಡುಗಡೆ ಮಾಡುವ ಆಶ್ವಾಸನೆಯನ್ನು ಅವರು ನೀಡಿದ್ದರೂ, ಅದು ಈಡೇರಿಲ್ಲ. ಆದ್ದರಿಂದ ಅನಿವಾರ್ಯವಾಗಿ ಬಿಬಿಎಂಪಿ ವ್ಯಾಪ್ತಿಯ ಕಾಮಗಾರಿಗಳನ್ನು ಸ್ಥಗಿತಗೊಳಿಸಬೇಕು ಎಂದು ಸಭೆಯಲ್ಲಿ ತೀರ್ಮಾನಿಸ ಬೇಕಾಯಿತು ಎಂದು ತಿಳಿಸಿದ್ದಾಗಿ ಪ್ರಜಾವಾಣಿ ವರದಿ ಮಾಡಿದೆ.
'ಬೃಹತ್ ರಸ್ತೆಗಳು, ಕೆರೆಗಳು, ರಸ್ತೆ- ಮೂಲಸೌಕರ್ಯ ವಿಭಾಗ, ವಾರ್ಡ್ ಮಟ್ಟದ ಕಾಮಗಾರಿಗಳು, ನಿರ್ವಹಣಾ ಕಾಮಗಾರಿಗಳು, ಬೃಹತ್ ನೀರುಗಾಲುವೆ, ವೈಟ್‌ಟಾಪಿಂಗ್, ಎಲೆಕ್ಟಿಕಲ್ ವಿಭಾಗ ಸೇರಿ ಚಾಲನೆಯಲ್ಲಿರುವ ಎಲ್ಲ ರೀತಿಯ ಕಾಮಗಾರಿಗಳನ್ನು ಸೆಪ್ಟೆಂಬರ್ 2ರಿಂದ ಸ್ಥಗಿತಗೊಳಿಸಲು 500ಕ್ಕೂ ಹೆಚ್ಚು ಗುತ್ತಿಗೆದಾರರು ಒಮ್ಮತದ ತೀರ್ಮಾನ ಮಾಡಿಕೊಂಡಿರುವುದಾಗಿ ನಂದ ಕುಮಾರ್ ಹೇಳಿದ್ದಾಗಿ ವರದಿ ವಿವರಿಸಿದೆ.
ಪ್ರತಿಭಟನೆ ಇದು ಮೊದಲಲ್ಲ, ಕಳೆದ ತಿಂಗಳೂ ಮಾಡಿದ್ದರು
ಕಳೆದ ಎರಡು ವರ್ಷದ ಅವಧಿಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಗುತ್ತಿಗೆದಾರರ ಸಂಘವು ಬಿಲ್ ಕ್ಲಿಯರೆನ್ಸ್ ವಿಳಂಬ ಖಂಡಿಸಿ ಇದು ಮೂರನೇ ಸಲ ಪ್ರತಿಭಟನೆಗೆ ಮುಂದಾಗಿರುವುದು. ಕಳೆದ ತಿಂಗಳು ಅಂದರೆ ಜುಲೈ ಆರಂಭದಲ್ಲಿ ಕೂಡ ಮುಷ್ಕರ ನಡೆಸಿ ಗಮನಸೆಳೆದಿತ್ತು.
"ಬಿಬಿಎಂಪಿ ಖಾತೆಯಲ್ಲಿ ಹಣವಿದ್ದರೂ ಅಧಿಕಾರಿಗಳು ಪಾವತಿಗಳನ್ನು ತಡೆಹಿಡಿಯುತ್ತಿದ್ದಾರೆ. ಅಧಿಕಾರಶಾಹಿ ಪ್ರಕ್ರಿಯೆಗಳ ಹೆಚ್ಚಳವು ಬಿಲ್ ಕ್ಲಿಯರೆನ್ಸ್‌ಗಳನ್ನು ನಿಧಾನಗೊಳಿಸಿದೆ. ಜೇಷ್ಠತೆಯ ಮಾನದಂಡವನ್ನು ಬಿಟ್ಟು ಬಿಬಿಎಂಪಿಯು ವಿವೇಚನೆಯ ಪಾವತಿಗಾಗಿಯೇ ರಾಜ್ಯದ ಶೇಕಡ 25 ಅನುದಾನ ಕಾಯ್ದಿರಿಸಲಾಗಿದೆ ಎಂದು ಸಂಘ ಆರೋಪಿಸಿದ್ದಾಗಿ ಡೆಕ್ಕನ್ ಹೆರಾಲ್ಡ್ ಕಳೆದ ತಿಂಗಳು ವರದಿ ಮಾಡಿತ್ತು.
ಆದರರೆ, ಬಿಬಿಎಂಪಿ ಅಧಿಕಾರಿಗಳು ಬಿಬಿಎಂಪಿ ಗುತ್ತಿಗೆದಾರರ ಸಂಘದ ಆರೋಪಗಳನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ತಾಂತ್ರಿಕ ವಿಜಿಲೆನ್ಸ್ ಸೆಲ್‌ನ ಕಮಿಷನರ್ ನಿಗಾದಲ್ಲಿ ಕೆಲಸದ ಗುಣಮಟ್ಟವನ್ನು ಹೆಚ್ಚಿಸಲು ಗುಣಮಟ್ಟ ನಿಯಂತ್ರಣ ಕೋಶವನ್ನು ಪರಿಚಯಿಸಲಾಗಿದೆ. ಪಾವತಿಗಳಲ್ಲಿ ಯಾವುದೇ ಉದ್ದೇಶಪೂರ್ವಕ ವಿಳಂಬವಾಗಿಲ್ಲ. ಕೆಲಸ ಪೂರ್ಣಗೊಳಿಸುವಿಕೆ ಮತ್ತು ಪಾವತಿಗಳ ನಡುವಿನ 24-ತಿಂಗಳ ಅಂತರವು ಪ್ರಮಾಣಿತ ಅಭ್ಯಾಸವಾಗಿದೆ. ಈ ಕಾಮಗಾರಿಗಳನ್ನು ಗುತ್ತಿಗೆದಾರರಿಗೆ ನೀಡುವ ಮೊದಲೇ ಇದರ ವಿವರ ಅವರಿಗೆ ಗೊತ್ತೇ ಇದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾಗಿ ವರದಿ ವಿವರಿಸಿದೆ.