Bengaluru News: ಬೇಸಿಗೆಯಲ್ಲಿ ಉದ್ಯಾನವನಗಳಿಗೂ ನೀರುಣಿಸಲು ಬಿಬಿಎಂಪಿ ತೀರ್ಮಾನ; ಪಾರ್ಕ್‌ಗಳಿಗೆ ಇಂಗುಗುಂಡಿಗಳೇ ಆಧಾರ ಎಂದ ತಜ್ಞರು
BBMP: ಬೆಂಗಳೂರಿನಲ್ಲಿರುವ ಉದ್ಯಾನವನಗಳಿಗೆ ನೀರುಣಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಿರ್ಧರಿಸಿದೆ. ಆದರೆ ಇದಕ್ಕೆ ತಜ್ಞರು ಪರ್ಯಾಯ ಮಾರ್ಗವನ್ನೂ ಸೂಚಿಸಿದ್ದಾರೆ.
ಬೆಂಗಳೂರು: ಕಳೆದ ಒಂದೂವರೆ ತಿಂಗಳಿನಿಂದ ಬೆಂಗಳೂರಿನಲ್ಲಿ ನೀರಿಗೆ ಹಾಹಾಕಾರ ಉಂಟಾಗಿದೆ. ಒಂದು ಟ್ಯಾಂಕರ್ ನೀರಿನ ಬೆಲೆ ಒಂದೇ ತಿಂಗಳಲ್ಲಿ 500 ರೂಪಾಯಿಗಳಿಂದ 2000 ರೂಪಾಯಿ ದಾಟಿದೆ. ದುಡ್ಡು ಕೊಟ್ಟರೂ ನೀರು ದುರ್ಲಭವಾಗಿದೆ. ಮನುಷ್ಯರಷ್ಟೇ ಪ್ರಾಣಿಗಳು ಮತ್ತು ಗಿಡ ಮರಗಳು ನೀರನ್ನು ಅವಲಂಬಿಸಿವೆ. ಸರ್ಕಾರ, ಪಾಲಿಕೆ, ಸಂಘ ಸಂಸ್ಥೆಗಳು ಗಂಭೀರವಾಗಿ ಗಮನ ಹರಿಸಲಿಲ್ಲ ಒಂದು ಶುಭ ಮುನ್ಸೂಚನೆ ಎಂದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತನ್ನ ವ್ಯಾಪ್ತಿಯ ಉದ್ಯಾನವನಗಳ ಗಿಡ ಮರಗಳಿಗೆ ನೀರುಣಿಸಲು ಮುಂದಾಗಿದೆ. ಒಂದು ಕಡೆ ಜಲಾಶಯಗಳಲ್ಲಿ ನೀರಿಲ್ಲ, ಮತ್ತೊಂದು ಕಡೆ ಮುಂಗಾರು ಕೈ ಕೊಟ್ಟಿದ್ದು ಸಮಸ್ಯೆಯಾಗಿದೆ. ಪಾಲಿಕೆಯ ತೋಟಗಾರಿಕಾ ವಿಭಾಗ ಉದ್ಯಾನವಗಳಿಗೆ ನೀರಿನ ಸೌಲಭ್ಯ ಒದಗಿಸಲು ಯೋಜನೆಯೊಂದನ್ನು ರೂಪಿಸುತ್ತಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಅಂದಾಜು 1000 ಪಾರ್ಕ್‌ಗಳಿವೆ. ಈ ಎಲ್ಲ ಪಾರ್ಕ್‌ಗಳಿಗೆ ಮೇ ತಿಂಗಳವರೆಗೆ ಅಗತ್ಯ ಇರುವಷ್ಟು ನೀರುಣಿಸಲು ಮುಂದಾಗಿದೆ. ಈ ಸಂಬಂಧ ನಡೆದ ಸಭೆಯಲ್ಲಿ ತೋಟಗಾರಿಕಾ ವಿಭಾಗದ ಅಧಿಕಾರಿಗಳು ಭಾಗವಹಿಸಿದ್ದರು. ಪಾರ್ಕ್‌ಗಳಲ್ಲಿ ಇರುವ ಬೋರ್‌ವೆಲ್‌ಗಳ ನೀರನ್ನು ರೀ ಚಾರ್ಜ್ ಮಾಡಲು ವಲಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜೊತೆಗೆ 6000 ಲೀಟರ್ ಸಾಮರ್ಥ್ಯದ ಟ್ಯಾಂಕರ್‌ಗಳನ್ನು ದಿನದ ಆಧಾರದಲ್ಲಿ ಬಾಡಿಗೆ ಪಡೆಯಲು ತೀರ್ಮಾನಿಸಲಾಗಿದೆ ಎಂದು ಬಿಬಿಎಂಪಿ ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಎಂ ಆರ್ ಚಂದ್ರಶೇಖರ್ ತಿಳಿಸಿದ್ದಾರೆ.
ಜೊತೆಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಸಂಸ್ಕರಿತ ನೀರನ್ನು ಖರೀದಿಸಲು ತೀರ್ಮಾನಿಸಿದೆ. ಅಂತರ್ಜಲ ಮಟ್ಟ ಬಹುತೇಕ ಕುಸಿದಿರುವುದರಿಂದ 110 ಪಾರ್ಕ್ ಗಳಲ್ಲಿ 1000 ಇಂಗು ಗುಂಡಿಗಳನ್ನು ತೆಗೆಯಲು ಉದ್ದೇಶಿಸಿದೆ. ಮುಂದಿನ ಬೇಸಿಗೆ ವೇಳೆಗೆ ಮುಂಬರುವ ಮುಂಗಾರಿನಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಗಳಿದ್ದು, ಈ ಇಂಗು ಗುಂಡಿಗಳಲ್ಲಿ ಅಗತ್ಯ ಇರುವಷ್ಟು ನೀರು ಸಂಗ್ರಹವಾಗುವ ಮತ್ತು ಅಂತರ್ಜಲ ಮಟ್ಟ ಹೆಚ್ಚುವ ನಿರೀಕ್ಷೆ ಇದೆ.
ವರ್ಕೌಟ್ ಆಗುತ್ತಿರುವ ಇಂಡು ಗುಂಡಿಗಳು
ಕಳೆದ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಸುಮಾರು 2 ಲಕ್ಷ ಇಂಗು ಗುಂಡಿಗಳನ್ನು ಕೊರೆದಿದ್ದು ಉತ್ತಮ ಫಲಿತಾಂಶ ಕಂಡು ಬಂದಿದೆ. ಲಾಲ್ ಬಾಗ್ ವೊಂದರಲ್ಲಿ 300 ಇಂಗು ಗುಂಡಿಗಳನ್ನು ತೆಗೆದಿದ್ದು, ಇಲ್ಲಿ ಅಂತರ್ಜಲ ಮಟ್ಟ 10 ಅಡಿಗಳಷ್ಟು ಹೆಚ್ಚಳವಾಗಿದೆ. ಇಂಗು ಗುಂಡಿಗಳಿಂದ ಅಂತರ್ಜಲ ಮಟ್ಟ ಹೆಚ್ಚುವುದರ ಜೊತೆಗೆ ಪ್ರವಾಹವನ್ನು ನಿಯಂತ್ರಿಸಲು ಸಹಾಯಕವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.
ಯುನೈಟೆಡ್ ವೇ ಆಫ್ ಬೆಂಗಳೂರು ಎಂಬ ಸರ್ಕಾರೇತರ ಸಂಸ್ಥೆ ಅಂದಾಜು 4000 ಇಂಗು ಗುಂಡಿಗಳನ್ನು ಕೊರೆದಿದೆ. ಒಂದು ಇಂಗು ಗುಂಡಿಗೆ ಸುಮಾರು 40 ಸಾವಿರ ರೂಪಾಯಿ ವೆಚ್ಚವಾಗುತ್ತದೆ. ಒಂದು ಇಂಗು ಗುಂಡಿಯಿಂದ ವಾರ್ಷಿಕ 1.24 ಲಕ್ಷ ಲೀಟರ್ ನೀರನ್ನು ಪಡೆಯಬಹುದಾಗಿದೆ. ಸಾರ್ವಜನಿಕರೂ ಉದ್ಯಾನವನಗಳಲ್ಲಿ ಇರುವ ಸಸ್ಯಗಳನ್ನು ಉಳಿಸಬೇಕು ಎಂದು ಮೊರೆ ಇಡುತ್ತಿದ್ದಾರೆ. ನಾವು ಪ್ರತಿನಿತ್ಯ ಇಲ್ಲಿ ವಾಯು ವಿಹಾರ ನಡೆಸಲು ಬರುತ್ತೇವೆ. ವರ್ಷವಿಡೀ ಗಿಡಮರಗಳು ನಳ ನಳಿಸುತ್ತಿರುತ್ತವೆ. ಈಗ ಒಣಗುತ್ತಿರುವುದನ್ನು ನೋಡಲು ಹಿಂಸೆಯಾಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.