Bengaluru News: ನವೆಂಬರ್‌ನಲ್ಲಿ ಬಿಬಿಎಂಪಿ ಚುನಾವಣೆ ಸಾಧ್ಯತೆ; ಸಿದ್ದತೆ ಆರಂಭಿಸಿದ ಕಾಂಗ್ರೆಸ್‌ ಸರ್ಕಾರ
ಕನ್ನಡ ಸುದ್ದಿ  /  ಕರ್ನಾಟಕ  /  Bengaluru News: ನವೆಂಬರ್‌ನಲ್ಲಿ ಬಿಬಿಎಂಪಿ ಚುನಾವಣೆ ಸಾಧ್ಯತೆ; ಸಿದ್ದತೆ ಆರಂಭಿಸಿದ ಕಾಂಗ್ರೆಸ್‌ ಸರ್ಕಾರ

Bengaluru News: ನವೆಂಬರ್‌ನಲ್ಲಿ ಬಿಬಿಎಂಪಿ ಚುನಾವಣೆ ಸಾಧ್ಯತೆ; ಸಿದ್ದತೆ ಆರಂಭಿಸಿದ ಕಾಂಗ್ರೆಸ್‌ ಸರ್ಕಾರ

ಕೋವಿಡ್‌ ಸನ್ನಿವೇಶ ಹಾಗೂ ಬಿಬಿಎಂಪಿ ವ್ಯಾಪ್ತಿಯ ವಾರ್ಡ್‌ಗಳ ಮರು ಹಂಚಿಕೆ ಬಾಕಿ ಇರುವ ಕಾರಣದಿಂದ ಹಿಂದಿನ ಬಿಜೆಪಿ ಸರ್ಕಾರ ಚುನಾವಣೆ ಮುಂದೂಡಿತ್ತು. ತಿಂಗಳ ಹಿಂದೆಯಷ್ಟೇ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ಸರ್ಕಾರ ಆದಷ್ಟು ಬೇಗನೇ ಬಿಬಿಪಿಎಂಗೆ ಚುನಾವಣೆ ನಡೆಸುವ ಇರಾದೆ ಹೊಂದಿದೆ. ಇದಕ್ಕಾಗಿ ಬಿಬಿಪಿಎಂ ಪುನರ್ರಚನೆ ಸಮಿತಿಯನ್ನೂ ನೇಮಿಸಲಾಗಿದೆ

ಬೆಂಗಳೂರು ಬೃಹತ್‌ ಮಹಾನಗರ ಪಾಲಿಕೆಗೆ ನವೆಂಬರ್‌ನಲ್ಲಿ ಚುನಾವಣೆ ನಡೆಸುವುದಾಗಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಬೆಂಗಳೂರು ಬೃಹತ್‌ ಮಹಾನಗರ ಪಾಲಿಕೆಗೆ ನವೆಂಬರ್‌ನಲ್ಲಿ ಚುನಾವಣೆ ನಡೆಸುವುದಾಗಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ ಈ ವರ್ಷದ ನವೆಂಬರ್‌ ಹೊತ್ತಿಗೆ ಚುನಾವಣೆ ನಡೆಯುವ ಸಾಧ್ಯತೆಯಿದೆ.

2015 ರಲ್ಲಿ ಬಿಬಿಎಂಪಿಗೆ ಚುನಾವಣೆ ನಡೆದು 2020ರ ಸೆಪ್ಟಂಬರ್‌ನಲ್ಲಿ ಅವಧಿ ಮುಗಿದರೂ ಮೂರು ವರ್ಷದಿಂದ ಚುನಾಯಿತ ಪ್ರತಿನಿಧಿಗಳೇ ಬೃಹತ್‌ ಸಂಸ್ಥೆಗೆ ಇಲ್ಲ. ಕೋವಿಡ್‌ ಸನ್ನಿವೇಶ ಹಾಗೂ ಬಿಬಿಎಂಪಿ ವ್ಯಾಪ್ತಿಯ ವಾರ್ಡ್‌ಗಳ ಮರು ಹಂಚಿಕೆ, ಹಿಂದುಳಿದವರಿಗೆ ಮೀಸಲಾತಿ, ವ್ಯಾಪ್ತಿ ವಿಸ್ತರಣೆ ಬಾಕಿ ಇರುವ ಕಾರಣದಿಂದ ಹಿಂದಿನ ಬಿಜೆಪಿ ಸರ್ಕಾರ ಚುನಾವಣೆ ಮುಂದೂಡಿತ್ತು.

ತಿಂಗಳ ಹಿಂದೆಯಷ್ಟೇ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ಸರ್ಕಾರ ಆದಷ್ಟು ಬೇಗನೇ ಬಿಬಿಪಿಎಂಗೆ ಚುನಾವಣೆ ನಡೆಸುವ ಇರಾದೆ ಹೊಂದಿದೆ. ಇದಕ್ಕಾಗಿ ಬಿಬಿಪಿಎಂ ಪುನರ್ರಚನೆ ಸಮಿತಿಯನ್ನೂ ನೇಮಿಸಲಾಗಿದೆ. ಸಚಿವ ರಾಮಲಿಂಗಾರೆಡ್ಡಿ ಅವರ ನೇತೃತ್ವದಲ್ಲಿ ಬಿಬಿಎಂ ಚುನಾವಣೆ ಪೂರ್ವ ತಯಾರಿ ಸಮಿತಿಯನ್ನೂ ರಚಿಸಲಾಗಿದೆ.

ಬೆಂಗಳೂರಿನಲ್ಲಿ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ಬಿಬಿಎಂಪಿ ಚುನಾವಣೆ ಮೂರು ವರ್ಷ ವಿಳಂಬವಾಗಿದೆ. ಎಲ್ಲರೂ ಬೇಗನೇ ಚುನಾವಣೆ ಆಗಲಿ ಎಂದು ಬಯಸುತ್ತಿದ್ದಾರೆ. ನಮ್ಮ ಸರ್ಕಾರವೂ ಇದಕ್ಕೆ ಸಿದ್ದತೆ ಮಾಡಿಕೊಳ್ಳುತ್ತಿದೆ. ಈಗಾಗಲೇ ವಾರ್ಡ್‌ಗಳ ಸಂಖ್ಯೆಯನ್ನು 198ರಿಂದ 243 ಕ್ಕೆ ಏರಿಸಿ ಬಿಬಿಎಂಪಿಗೆ ಹೊಸ ಕಾಯಿದೆ ಜಾರಿಗೊಳಿಸಲಾಗಿದೆ. ವಾರ್ಡ್‌ ಏರಿಕೆ ಪ್ರಕ್ರಿಯೆಯಲ್ಲಿ ವ್ಯತ್ಯಾಸಗಳಾಗಿರುವ ದೂರುಗಳಿದ್ದು, ಇದನ್ನು ಸರಿಪಡಿಸುವ ಕುರಿತು ಚರ್ಚೆ ಮಾಡಲಾಗಿದೆ. ಮಳೆಗಾಲ ಮುಗಿದ ತಕ್ಷಣವೇ ನವೆಂಬರ್‌ ಹೊತ್ತಿಗೆ ಚುನಾವಣೆಯಾಗಬಹುದು ಎಂದು ಸುಳಿವು ನೀಡಿದರು.

ಈಗಷ್ಟೇ ಮುಗಿದಿರುವ ವಿಧಾನಸಭೆ ಚುನಾವಣೆಯಲ್ಲಿ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ16 ಸ್ಥಾನ ಪಡೆದರೆ, ಕಾಂಗ್ರೆಸ್‌ 12 ಸ್ಥಾನ ಪಡೆದುಕೊಂಡಿವೆ. ಬಿಬಿಎಂಪಿಯಲ್ಲಿ ತನ್ನ ಹಿಡಿತ ಸಾಧಿಸಿ ಮುಂದಿನ ಲೋಕಸಭೆ ಚುನಾವಣೆಗೂ ವಿಸ್ತರಿಸುವುದು ಎರಡೂ ಪಕ್ಷಗಳ ಉದ್ದೇಶ. ಅದರಲ್ಲೂ ಆಡಳಿತಾರೂಢ ಕಾಂಗ್ರೆಸ್‌ ಹೆಚ್ಚಿನ ಆಸಕ್ತಿ ಹೊಂದಿದೆ.

ಬೆಂಗಳೂರು ನಗರ ಉಸ್ತುವಾರಿ ಹೊಂದಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ತಮ್ಮ ಹಿಡಿತ ಗಟ್ಟಿಗೊಳಿಸಿಕೊಳ್ಳಲು ಬಿಬಿಪಿಎಂ ಚುನಾವಣೆಯನ್ನೇ ಪ್ರಮುಖವಾಗಿಸಿಕೊಂಡಿದ್ದಾರೆ. ಈ ನಿಟ್ಟಿನಲ್ಲಿಯೇ ಪೂರ್ವಭಾವಿ ಸಭೆಗಳನ್ನು ನಡೆಸಿ ಟಾಸ್ಕ್‌ ಫೋರ್ಸ್‌ ಕೂಡ ರಚಿಸಿದ್ದಾರೆ.

ಬಿಬಿಎಂಪಿಯನ್ನು ಮೂರು ಭಾಗಗಳಾಗಿ ಮರು ವಿಂಗಡಣೆ ಮಾಡುವ ಉದ್ದೇಶವೂ ಕಾಂಗ್ರೆಸ್‌ ಸರ್ಕಾರಕ್ಕೆ ಇದ್ದು, ಇದಕ್ಕೂ ಮಾಜಿ ಮುಖ್ಯ ಕಾರ್ಯದರ್ಶಿ ಬಿ.ಎಸ್‌.ಪಾಟೀಲ್‌ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಈ ಸಮಿತಿಯೂ ವರದಿ ನೀಡಬೇಕಾಗಿದೆ. ಜತೆಗೆ ಚುನಾವಣೆ ತಯಾರಿಗೆ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಸಮಿತಿಯೂ ರಚನೆಯಾಗಿದೆ.

ಬಿಬವಿಎಂಪಿ ಚುನಾವಣೆಗೆ ಕಾಂಗ್ರೆಸ್‌ನಲ್ಲಿ ಉತ್ಸಾಹ ಕಂಡು ಬಂದಿದ್ದರೂ ಬಿಜೆಪಿಯಲ್ಲಿ ಅಷ್ಟಾಗಿ ಸಿದ್ದತೆ ನಡೆದಿಲ್ಲ. ಆದರೂ ಆಂತರಿಕವಾಗಿ ತಯಾರಿ ಮಾಡಿಕೊಳ್ಳಲಾಗುತ್ತಿದೆ.

ಬಿಬಿಎಂಪಿಗೆ ಚುನಾವಣೆ ನಡೆಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಪ್ರಯತ್ನ ಆರಂಭಿಸುವುದನ್ನು ನಾವು ಸ್ವಾಗತಿಸುತ್ತೇವೆ. ಯಾವುದೇ ಸಂದರ್ಭದಲ್ಲಿ ಚುನಾವಣೆ ಆದರೂ ಎದುರಿಸಲು ಸಿದ್ದರಿದ್ದೇವೆ. ರಾಜ್ಯದಲ್ಲಿ ನಮಗೆ ಕೆಲ ಕಾರಣದಿಂದ ಹಿನ್ನಡೆಯಾಗಿದ್ದರೂ ಬೆಂಗಳೂರಿನಲ್ಲಿ ಬಿಜೆಪಿ ತನ್ನದೇ ಆದ ಹಿಡಿತ ಹೊಂದಿದೆ ಎನ್ನುವುದು ಶಾಸಕ ಹಾಗೂ ಮಾಜಿ ಡಿಸಿಎಂ ಡಾ.ಸಿ.ಎನ್‌.ಅಶ್ವಥ್‌ ನಾರಾಯಣ್‌ ವಿವರಣೆ.

ಬಿಬಿಎಂಪಿ ಚುನಾವಣೆಗೆ ತತ್‌ಕ್ಷಣವೇ ಚುನಾವಣೆ ನಡೆಸಲು ಸಾಧ್ಯವಿಲ್ಲ. ಏಕೆಂದರೆ ವಾರ್ಡ್‌ಗಳ ಮರು ಹಂಚಿಕೆ ಹಳೆಯ ಜನಸಂಖ್ಯೆ ವರದಿ ಆಧರಿಸಿ ಮಾಡಲಾಗಿದೆ. ಅಲ್ಲದೇ ಹೊಸ ಬಿಬಿಎಂಪಿ ಕಾಯಿದೆ ಪ್ರಕಾರ ವೈಜ್ಞಾನಿಕವಾಗಿ ವಾರ್ಡ್‌ಗಳ ರಚನೆಯಾಗುವುದು ಬಾಕಿಯಿದೆ. ಈ ಪ್ರಕ್ರಿಯೆ ಚುನಾವಣೆ ಆಯೋಗದಂತಹ ಜವಾಬ್ದಾರಿಯುತ ಸಂಸ್ಥೆಯಿಂದಲೇ ಆಗಬೇಕಾಗಿದೆ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಸಂದೀಪ್‌ ಅನಿರುದ್ದನ್‌.

ಬೆಂಗಳೂರಿಗೆ ಒಂದೇ ಬಿಬಿಎಂಪಿಯಿಂದ ಆಡಳಿತ ನೀಡಲು ಆಗದು. ಅಷ್ಟರ ಮಟ್ಟಿಗೆ ಬೆಂಗಳೂರು ಬೆಳೆದಿದೆ. ಮುಂದಿನ ದಶಕಗಳನ್ನು ಗಮನದಲ್ಲಿಟ್ಟುಕೊಂಡು ಆಡಳಿತ ಸುಧಾರಣೆ ಯೋಜನೆ ರೂಪುಗೊಳ್ಳಬೇಕಾಗಿದೆ. ಇದಕ್ಕಾಗಿಯೇ ಬಿಬಿಎಂಪಿ ಪುನರ್‌ವಿಂಗಡಣಾ ಸಮಿತಿಯೂ ವಿವಿಧ ಕ್ಷೇತ್ರದವರ ಅಭಿಪ್ರಾಯ ಪಡೆದು ವರದಿ ಸಲ್ಲಿಸಲಿದೆ ಎಂದು ಸಮಿತಿ ಸದಸ್ಯರಾಗಿರುವ ರವಿಚಂದರ್‌ ಹೇಳುತ್ತಾರೆ.

Whats_app_banner