ಕನ್ನಡ ಸುದ್ದಿ  /  Karnataka  /  Bengaluru News Bbmp New Tax System Doubtful To Implement From April Lokh Sabha Election And Water Crisis Is Reason Mrt

Bengaluru News: ಬಿಬಿಎಂಪಿ ಹೊಸ ತೆರಿಗೆ ಪದ್ಧತಿ ಏಪ್ರಿಲ್‌ನಿಂದ ಜಾರಿ ಅನುಮಾನ; ಲೋಕಸಭೆ ಚುನಾವಣೆ, ನೀರಿನ ಬಿಕ್ಕಟ್ಟು ಕಾರಣ ಎಂದ ಅಧಿಕಾರಿಗಳು

ಬಿಬಿಎಂಪಿ ಹೊಸ ತೆರಿಗೆ ಪದ್ಧತಿ ಏಪ್ರಿಲ್‌ನಿಂದ ಜಾರಿಯಾಗುವುದಿಲ್ಲ. ಬದಲಾಗಿ 2025-26 ರಿಂದ ಅನುಷ್ಠಾನಗೊಳ್ಳಲಿದೆ ಎಂಬ ಹೊಸ ಮಾಹಿತಿ ಲಭ್ಯವಾಗಿದೆ. ಲೋಕಸಭಾ ಚುನಾವಣೆ ಮತ್ತು ನೀರಿನ ಬಿಕ್ಕಟ್ಟಿನ ಕಾರಣದಿಂದ ಹೊಸ ತೆರಿಗೆ ಪದ್ಧತಿ ಅನುಷ್ಠಾನವನ್ನು ಮುಂದಕ್ಕೆ ಹಾಕಲಾಗಿದೆ ಎಂದು ಹೇಳಲಾಗುತ್ತದೆ. (ವರದಿ: ಎಚ್. ಮಾರುತಿ)

ಬಿಬಿಎಂಪಿ ಹೊಸ ತೆರಿಗೆ ಪದ್ಧತಿ ಏಪ್ರಿಲ್‌ನಿಂದ ಜಾರಿ ಅನುಮಾನ
ಬಿಬಿಎಂಪಿ ಹೊಸ ತೆರಿಗೆ ಪದ್ಧತಿ ಏಪ್ರಿಲ್‌ನಿಂದ ಜಾರಿ ಅನುಮಾನ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ಆಸ್ತಿಗಳಿಗೆ ಮಾರ್ಗಸೂಚಿ ದರದ ಆಧಾರದಲ್ಲಿ ತೆರಿಗೆ ವಿಧಿಸುವ ಹೊಸ ಪದ್ಧತಿ ಏಪ್ರಿಲ್‌ನಿಂದ ಜಾರಿಯಾಗುವುದಿಲ್ಲ. ಬದಲಾಗಿ 2025-26 ರಿಂದ ಅನುಷ್ಠಾನಗೊಳ್ಳಲಿದೆ ಎಂಬ ಹೊಸ ಮಾಹಿತಿ ಲಭ್ಯವಾಗಿದೆ.

ಹೊಸ ಪದ್ಧತಿಯಂತೆ ಆಸ್ತಿಗಳ ತೆರಿಗೆ ಸರಾಸರಿ ಶೇ. 6.5 ರಷ್ಟು ಹೆಚ್ಚಾಗಲಿದೆ. ಆದರೆ ಕೆಲವೇ ದಿನಗಳಲ್ಲಿ ಎದುರಾಗುವ ಲೋಕಸಭಾ ಚುನಾವಣೆ ಮತ್ತು ನೀರಿನ ಬಿಕ್ಕಟ್ಟಿನಿಂದ ನಾಗರಿಕರು ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಆಸ್ತಿಗಳ ತೆರಿಗೆ ಹೆಚ್ಚಿಸಿದರೆ ಬೆಂಗಳೂರಿನ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಲಿದೆ. ಈ ಆಕ್ರೋಶ ಚುನಾವಣೆಯಲ್ಲಿ ಪಕ್ಷದ ಮೇಲೆ ಪರಿಣಾಮ ಬೀರಬಹುದು ಎಂದು ಮುಂದೂಡಲಾಗಿದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

ಹೊಸ ಸಾಫ್ಟ್‌ವೇರ್ ಸಿದ್ಧವಾಗಿಲ್ಲ

ಹೊಸ ಪದ್ಧತಿ ಅಳವಡಿಕೆಗೆ ಹೊಸ ಸಾಫ್ಟ್‌ವೇರ್ ಅವಶ್ಯಕತೆ ಇದ್ದು ಇನ್ನೂ ಸಿದ್ಧವಾಗಿಲ್ಲ. ಹೊಸ ತೆರಿಗೆ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳಲು ಸಾರ್ವಜನಿಕರಿಗೆ ಕಾಲಾವಕಾಶ ಬೇಕಿದೆ ಮತ್ತು ಇದರ ಅನುಕೂಲಗಳನ್ನು ಕುರಿತು ಅರಿವು ಮೂಡಿಸಬೇಕಿದ್ದು, ಕಾಲಾವಕಾಶ ಬೇಕಿದೆ ಎಂದು ಪಾಲಿಕೆಯ ಅಧಿಕಾರಿಯೊಬ್ಬರು ಹೇಳುತ್ತಾರೆ.

ಹೊಸ ಪದ್ಧತಿಯ ಸ್ಥೂಲ ಪರಿಚಯ

2008ರಲ್ಲಿ ಯುನಿಟ್‌ ವಿಸ್ತೀರ್ಣ ಮೌಲ್ಯ (ಯುಎವಿ) ಆಸ್ತಿ ತೆರಿಗೆ ಪದ್ಧತಿಯನ್ನು ಜಾರಿಗೆ ತರಲಾಗಿತ್ತು. ಸದ್ಯ ಈ ಪದ್ಧತಿಯಲ್ಲಿ 18 ವಿವಿಧ ವರ್ಗಗಳಲ್ಲಿ ಇಡೀ ನಗರವನ್ನು ಆರು ವಲಯಗಳಾಗಿ ವಿಂಗಡಿಸಿ ಆಸ್ತಿ ತೆರಿಗೆ ವಿಧಿಸಲಾಗುತ್ತಿದೆ. ನಾಗರಿಕರಿಗೆ ಸ್ವಯಂ ಘೋಷಣೆ ಸಲ್ಲಿಸಲೂ ಗೊಂದಲವಾಗಿದೆ. ಹೀಗಾಗಿ ಹೊಸ ಆಸ್ತಿ ತೆರಿಗೆ ಪದ್ಧತಿಯಲ್ಲಿ ಆರು ವರ್ಗಗಳಲ್ಲಿ ಮಾತ್ರ ಆಸ್ತಿಗಳನ್ನು ವರ್ಗೀಕರಿಸಿ, ತೆರಿಗೆ ವ್ಯವಸ್ಥೆಯನ್ನು ಸರಳೀಕರಿಸಲಾಗಿದೆ.

ವಸತಿ (ಸ್ವಂತ ಮತ್ತು ಬಾಡಿಗೆ), ವಾಣಿಜ್ಯ, ಕೈಗಾರಿಕೆ, ಸ್ಟಾರ್‌ ಹೋಟೆಲ್‌, ವಿನಾಯಿತಿ ಕಟ್ಟಡಗಳು, ಸಂಪೂರ್ಣ ಖಾಲಿ ನಿವೇಶನಗಳು ಎಂಬ ಆರು ವರ್ಗಗಳಲ್ಲಿ ನಿವೇಶನ ವಿಸ್ತೀರ್ಣ, ಕಟ್ಟಡ ಪ್ರದೇಶ, ಸ್ವತ್ತಿನ ಬಳಕೆ, ಸ್ವತ್ತಿಗೆ ಅನ್ವಯವಾಗುವ ಪ್ರಸ್ತುತ ಮಾರ್ಗಸೂಚಿ ದರವನ್ನು ಆಧರಿಸಿ ಆಸ್ತಿ ತೆರಿಗೆ ಲೆಕ್ಕಹಾಕಲಾಗುತ್ತದೆ. ನಾಗರಿಕರು ಮಾರ್ಗಸೂಚಿ ದರ ನಮೂದಿಸಬಹುದು. ಒಂದು ವೇಳೆ ಕಡಿಮೆ ಕ್ಲೇಮ್‌ ಮಾಡಿದ್ದರೆ ಆನ್‌ಲೈನ್‌ ಮೂಲಕ 3 ತಿಂಗಳೊಳಗೆ ಬಿಬಿಎಂಪಿ ಸರಿಪಡಿಸುತ್ತದೆ. ಈ ಅವಧಿಯಲ್ಲಿ ನಿರ್ಧಾರವಾಗದಿದ್ದರೆ ನಾಗರಿಕರ ಕ್ಲೇಮ್‌ ಸ್ವೀಕರಿಸಿ ಪರಿಗಣಿಸಲಾಗುತ್ತದೆ. ಇದು ಹೊಸ ಪದ್ಧತಿಯ ಸ್ಥೂಲ ಪರಿಚಯ.

ಆಸ್ತಿ ತೆರಿಗೆಯನ್ನು 2016ರಲ್ಲಿ ಪರಿಷ್ಕರಿಸಲಾಗಿದ್ದು, ಆಗ ವಸತಿ ಆಸ್ತಿಗಳಿಗೆ ಶೇ. 20 ಹಾಗೂ ವಸತಿಯೇತರ ಆಸ್ತಿಗಳಿಗೆ ಶೇ 25ರಷ್ಟು ಹೆಚ್ಚಿಸಲಾಗಿತ್ತು. ಇದೀಗ ಹೊಸ ಪದ್ದತಿ ಪ್ರಕಾರ ಆಸ್ತಿ ತೆರಿಗೆ ಹೆಚ್ಚಳದ ಸರಾಸರಿ ಶೇ 6.5ರಷ್ಟಿದ್ದು, ಎಂಟು ವರ್ಷಗಳಿಗೆ ಹೋಲಿಸಿದರೆ ವಾರ್ಷಿಕ ಶೇ 1ಕ್ಕಿಂತ ಕಡಿಮೆ ಹೆಚ್ಚಳವಾಗಿದೆ.

ಹೊಸ ಆಸ್ತಿ ತೆರಿಗೆ ವ್ಯವಸ್ಥೆಯಿಂದ ತೆರಿಗೆ ಹೊರೆಯನ್ನು ಹೆಚ್ಚಿಸುವುದಿಲ್ಲ. ಬದಲಾಗಿ ವಿಧಾನವನ್ನು ಸರಳಗೊಳಿಸುವ ಉದ್ದೇಶ ಹೊಂದಿದೆ. ಪ್ರತಿ ಆಸ್ತಿಗೆ ತೆರಿಗೆಯ ಗರಿಷ್ಠ ಹೆಚ್ಚಳವನ್ನು ಶೇ 10ಕ್ಕೆ ಮಿತಿಗೊಳಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸ್ಪಷ್ಟಪಡಿಸಿದ್ದಾರೆ

ಹೊಸ ಆಸ್ತಿ ತೆರಿಗೆ ಯಾವ ವರ್ಷದಿಂದ ಜಾರಿಯಾಗುತ್ತದೆ ಎಂಬ ಮಾಹಿತಿಯನ್ನು ಉಪ ಮುಖ್ಯಮಂತ್ರಿಗಳು ನೀಡಿಲ್ಲ. ಬಿಬಿಎಂಪಿ ಅಧಿಕಾರಿಗಳಿಗೂ ಈ ಬಗ್ಗೆ ಸ್ಪಷ್ಟತೆ ಇಲ್ಲ. ಹೊಸ ಆಸ್ತಿ ತೆರಿಗೆ ಪದ್ಧತಿ ಕುರಿತು ಫೆಬ್ರವರಿ 20ರಂದು ಕರಡು ಅಧಿಸೂಚನೆ ಪ್ರಕಟಗೊಂಡಿತ್ತು. ನಾಗರಿಕರ ಆಕ್ಷೇಪಣೆಗೆ 15 ದಿನಗಳ ಅವಕಾಶ ನೀಡಲಾಗಿತ್ತು. ಈ ದಿನದವರೆಗೂ ಅಂತಿಮ ಅಧಿಸೂಚನೆ ಹೊರಬಿದ್ದಿಲ್ಲ. ಈ ಹಿನ್ನೆಲೆಯಲ್ಲಿ 2024ರ ಏಪ್ರಿಲ್‌ನಿಂದ ಹೊಸ ಪದ್ಧತಿ ಜಾರಿಯಾಗುವುದಿಲ್ಲ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

IPL_Entry_Point